ಬಸನಗೌಡ ಪಾಟೀಲ ಯತ್ನಾಳ್ ಗೆ ಬೆದರಿಕೆ; ಸೂಕ್ತ ಕ್ರಮಕ್ಕೆ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಒತ್ತಾಯ

ವಿಜಯಪುರ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಕುರಿತ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಬೆದರಿಕೆ ಆಡಿಯೋ ಹರಿಬಿಟ್ಟ ಆರೋಪಿ ಬಗ್ಗೆ ಪೊಲೀಸರು ತನಿಖೆ ಕೈಗೊಂಡು, ಸೂಕ್ತ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವಕ್ಫ್ ಕಾಯ್ದೆ ವಿರುದ್ಧ ಹೋರಾಟ ರೂಪಿಸಲು ಎ.15ರಂದು ಸಭೆ ಕರೆಯಲಾಗಿದೆ. ಈ ಕುರಿತು ಅಲ್ಪಸಂಖ್ಯಾತರು, ದಲಿತರನ್ನು ಒಳಗೊಂಡ ಸಮಿತಿ ಇದೆ. ಈ ಸಭೆ ನಂತರ ಹೋರಾಟದ ದಿನಾಂಕ ಅಂತಿಮಗೊಳಿಸಲಾಗುತ್ತದೆ. ಆದರೆ, ಶಾಸಕ ಯತ್ನಾಳ್ ಅವರಿಗೆ ಬೆದರಿಕೆ ಹಾಕಲಾದ ಆಡಿಯೋಗೂ ಮತ್ತು ನಮ್ಮ ಸಮಾಜ ಹಾಗೂ ಹೋರಾಟಕ್ಕೂ ಯಾವುದೇ ಸಂಬಂಧ ಇಲ್ಲ. ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ದಿನಾಂಕವನ್ನು ಅಧಿಕೃತವಾಗಿ ನಾವೇ ಹೇಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ವಾಟ್ಸ್ಆ್ಯಪ್‌ನಲ್ಲಿ ಆಡಿಯೋ ಹರಿಬಿಟ್ಟ ಆರೋಪಿ ಬಗ್ಗೆ ಪೊಲೀಸರು ತನಿಖೆ ಮಾಡಬೇಕು. ಆಡಿಯೋ ಮಾಡುವ ಕಿಡಿಗೇಡಿಗಳು ಬಿಜೆಪಿಯೊಳಗೂ ಇದ್ದಾರೆ. ಈ ಕೃತ್ಯವನ್ನು ಬಿಜೆಪಿಯವರು ಅಥವಾ ಯತ್ನಾಳ್ ಬೆಂಬಲಿಗರೂ ಮಾಡಿರಬಹುದು. ಇದು ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವೂ ಆಗಿರಬಹುದು. ಹೀಗಾಗಿ ಆಡಿಯೋ ಬಿಟ್ಟ ಕಿಡಿಗೇಡಿಯನ್ನು ಪೊಲೀಸರು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.
ಶಾಸಕ ಯತ್ನಾಳ್ ಕೂಡಾ ಸಮುದಾಯದ ಅವಹೇಳನಕಾರಿ ಹೇಳಿಕೆ ನೀಡುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ ಗಳನ್ನು ಹಾಕುತ್ತಾರೆ. ಹೀಗಾಗಿ ಈ ಬಗ್ಗೆಯೂ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಅಲ್ಲದೇ, ಶಾಸಕ ಯತ್ನಾಳ್ ಅವರನ್ನು ಬಂಧಿಸಬೇಕು ಎಂದು ಮುಶ್ರೀಫ್ ಆಗ್ರಹಿಸಿದರು.
ಮುಖಂಡ ಎಂ.ಸಿ.ಮುಲ್ಲಾ ಮಾತನಾಡಿ, ಬಿಜೆಪಿಯಿಂದ ಯತ್ನಾಳ್ ಅವರನ್ನು ಹೊರಹಾಕಲಾಗಿದೆ. ಆದರೆ, ಮತ್ತೆ ಪಕ್ಷಕ್ಕೆ ತೆಗೆದುಕೊಳ್ಳಬೇಕು ಎಂದು ಸಿಂಪತಿ ಗಿಟ್ಟಿಸಿಕೊಳ್ಳಲು ಈ ವದಂತಿ ಹರಿಬಿಡಲಾಗುತ್ತದೆ. ಇದರಲ್ಲಿ ಯತ್ನಾಳ್ ಹಿಂಬಾಲಕರದ್ದೇ ಕೈವಾಡ ಇದೆ. ಆದ್ದರಿಂದ ಆಡಿಯೋ ಬಗ್ಗೆ ತನಿಖೆ ನಡೆಸಬೇಕು. ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದರು.
ಮತ್ತೊಬ್ಬ ಮುಖಂಡ ಟಾಪಲ್ ಇಂಜಿನಿಯರ್ ಮಾತನಾಡಿ, ವಿಜಯಪುರದಲ್ಲಿ ಗಲಭೆ ಮಾಡಿಸಬೇಕು ಎಂದು ಯತ್ನಾಳ್ ಹುನ್ನಾರ ಮಾಡುತ್ತಿದ್ದಾರೆ. ಆದರೆ, ಅವರ ಯಾವುದೇ ಕುತಂತ್ರ ಈಡೇರಲ್ಲ. ಆಡಿಯೋ ಕುರಿತು ತನಿಖೆ ಮಾಡಬೇಕು. ಅದೇ ರೀತಿಯಾಗಿ ಯತ್ನಾಳ್ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.