ವಿಜಯಪುರಕ್ಕೂ ತಟ್ಟಿದ ಸಾರಿಗೆ ಬಸ್ ಮುಷ್ಕರದ ಬಿಸಿ : ಪ್ರಯಾಣಿಕರ ಪರದಾಟ

ವಿಜಯಪುರ : ವೇತನ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯದ ಸಾರಿಗೆ ನಿಗಮಗಳ ನೌಕರರು ಮಂಗಳವಾರದಿಂದ ಮುಷ್ಕರ ಆರಂಭಿಸಿದ್ದು, ಮುಷ್ಕರದ ಪ್ರಥಮ ದಿನವೇ ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಬೇರೆ ಊರಿಗೆ ಪ್ರಯಾಣಿಸಲು ಪ್ರಯಾಣಿಕರು ಪ್ರಯಾಸ ಅನುಭವಿಸುವಂತಾಯಿತು.
ವಿಜಯಪುರ ನಗರದಲ್ಲಿ ಮುಷ್ಕರ ಹಿನ್ನೆಲೆಯಲ್ಲಿ ಬಹುತೇಕ ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ, ಹೀಗಾಗಿ ದೊಡ್ಡ ಸಂಖ್ಯೆಯ ಬಸ್‌ಗಳು ಕೇಂದ್ರ ಬಸ್ ನಿಲ್ದಾಣದಲ್ಲಿ ಕಂಡು ಬಂದವು. ಆದರೆ ಕೆಲವು ಚಾಲಕರು ಎಂದಿನಂತೆ ಕರ್ತವ್ಯ ನಿರ್ವಹಿಸಿದರು.
ಕೇಂದ್ರ ಬಸ್ ನಿಲ್ದಾಣ, ಸ್ಯಾಟ್ ಲೈಟ್ ಬಸ್ ನಿಲ್ದಾಣ ಸೇರಿ ಬಹುತೇಕ ಬಸ್ ನಿಲ್ದಾಣಗಳು ಬಸ್ ಸಂಚಾರವಿಲ್ಲದೆ ಸ್ತಬ್ಧಗೊಂಡಿವೆ. ದಿನನಿತ್ಯದ ಕೆಲಸ ಕಾರ್ಯಗಳಿಗೆ ಸಾರಿಗೆ ಬಸ್ ಗಳನ್ನೇ ಅವಲಂಬಿಸಿರುವ ಸಾರ್ವಜನಿಕರು, ವಿವಿಧ ನೌಕರರು ಪರದಾಡುವಂತಾಗಿದೆ. ಅಲ್ಲದೇ, ಸಾರಿಗೆ ಮುಷ್ಕರದ ಮಾಹಿತಿ ತಿಳಿಯದೆ, ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಸಹಜವಾಗಿ ತೊಂದರೆ ಎದುರಿಸಿದರು.
ಖಾಸಗಿ ವಾಹನಗಳ ದರ್ಬಾರು :
ಕೇಂದ್ರ ಬಸ್ ನಿಲ್ದಾಣದಲ್ಲಿ ಖಾಸಗಿ ಸಾರಿಗೆ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿತವಾಗಿರುತ್ತದೆ, ಆದರೆ ಮುಷ್ಕರ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ಖಾಸಗಿ ಟೆಂಪೋ, ಕ್ರೂಸರ್‌ಗಳು ರಾಜಾರೋಷವಾಗಿ ಬಸ್ ನಿಲ್ದಾಣದಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಂಡು ಪ್ರಯಾಣ ಬೆಳೆಸಿದ ದೃಶ್ಯ ಕಂಡು ಬಂದಿತು. ಪ್ರಯಾಣಿಕರು ಸಹ ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋಗುವಂತಾಯಿತು.
ಶಾಲಾ ಕಾಲೇಜುಗಳು ಎಂದಿನಂತೆ :
ಶಾಲಾ ಕಾಲೇಜುಗಳು ಎಂದಿನಂತೆ ಆರಂಭವಾಗಿದ್ದು, ಮಕ್ಕಳನ್ನು ಪೋಷಕರೇ ಶಾಲೆಗಳಿಗೆ ತಂದು ಬಿಡುವುದು ಸಾಮಾನ್ಯವಾಗಿತ್ತು. ಅಲ್ಲದೇ, ಕೆಲವು ಕಡೆಗಳಲ್ಲಿ ವಿದ್ಯಾರ್ಥಿಗಳು ಆಟೋಗಳ ಮೂಲಕ ಹಾಗೂ ಕಾಲ್ನಡಿಗೆ ಮೂಲಕ ಶಾಲೆಗೆ ಆಗಮಿಸುವ ದೃಶ್ಯಗಳು ಕಂಡುಬಂದವು.
ತಮ್ಮ ಬೇಡಿಕೆಗಳ ಈಡೇರಿಕೆಗೆ ಸಾರಿಗೆ ನೌಕರರು ಕರ್ತವ್ಯಕ್ಕೆ ಗೈರಾಗಿ ದೂರ ಉಳಿದಿದ್ದಾರೆ. ರಸ್ತೆಗಿಳಿದು ಯಾವುದೇ ಜಾಥಾ, ಪ್ರತಿಭಟನೆಯನ್ನೂ ನಡೆಸಲ್ಲ. ಯಾವುದೇ ರೀತಿಯ ಅಹಿತಕರ ಘಟನೆಗೂ ಆಸ್ಪದ ನೀಡದೆ, ಸ್ವಯಂ ಪ್ರೇರಿತವಾಗಿ ಕರ್ತವ್ಯದಿಂದ ದೂರ ಉಳಿಯಲಿದ್ದೇವೆ ಹೊರತು ಯಾವ ರೀತಿಯಲ್ಲಿಯೂ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುವುದಿಲ್ಲ. ಕರ್ತವ್ಯದಿಂದ ದೂರ ಉಳಿದು ನಮ್ಮ ಬೇಡಿಕೆ ಈಡೇರಿಕೆಗೆ ಹಕ್ಕೊತ್ತಾಯ ಮಂಡಿಸಲಿದ್ದೇವೆ ಎಂದು ಸಾರಿಗೆ ಇಲಾಖೆಯ ವಿವಿಧ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.







