VIJAYAPURA | ರೋಗಿ ಮೃತ್ಯು: ತಾಳಿಕೋಟೆ ಸರಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಆರೋಪ

ವಿಜಯಪುರ: ಸರಕಾರಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರು ಕರ್ತವ್ಯದಲ್ಲಿಲ್ಲದ ಕಾರಣ ರೋಗಿಯೊಬ್ಬರು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಸೂಫಿ ಅಬ್ದುಲ್ ಬೇಪಾರಿ ಮೃತ ರೋಗಿ. ಇವರು ತಾಳಿಕೋಟೆ ಸರಕಾರಿ ಆಸ್ಪತ್ರೆಯಲ್ಲಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಕಾರಣ ಮೃತಪಟ್ಟಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಮುಂಜಾವ ಸೂಫಿ ಅಬ್ದುಲ್ ಬೇಪಾರಿಗೆ ತೀವ್ರ ಕೆಮ್ಮು, ನೆಗಡಿ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ತಾಳಿಕೋಟೆಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಯಾವುದೇ ವೈದ್ಯರು ಕರ್ತವ್ಯಕ್ಕೆ ಹಾಜರಾಗಿಲ್ಲ. ತುಂಬಾ ಹೊತ್ತಾದರೂ ವೈದ್ಯರು ಆಗಮಿಸದ ಕಾರಣ ಆಸ್ಪತ್ರೆಯ ಸ್ಟಾಫ್ ನರ್ಸ್ ನವರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು, ಆದರೆ ರಸ್ತೆ ಮಾರ್ಗದಲ್ಲಿ ಸೂಫಿ ಅಬ್ದುಲ್ ಬೇಪಾರಿ ಮೃತಪಟ್ಟಿದ್ದಾರೆ ಎಂದು ಮೃತರ ಕುಟುಂಬಸ್ಥರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಮೃತ ಸೂಫಿಯ ಪತ್ನಿ, ನಮಗೆ ಚಿಕ್ಕ ಮಕ್ಕಳಿದ್ದು, ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೆವು. ನನ್ನ ಪತಿಗೆ ಬೆಳಗ್ಗೆ 4ಕ್ಕೆ ಇದ್ದಕ್ಕಿದ್ದಂತೆ ನೆಗಡಿ, ಕೆಮ್ಮು, ಎದೆ ಭಾಗದಲ್ಲಿ ಉರಿ ಕಾಣಿಸಿಕೊಂಡು ಅಸ್ವಸ್ಥರಾದಾಗ ಅವರನ್ನು ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದೇನೆ. ಆಸ್ಪತ್ರೆಯ ಒಳಗೆ ಹೋಗಿ ನೋಡಿದಾಗ ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯರು ಇರಲಿಲ್ಲ. ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ನನ್ನ ಪತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರತಿಭಟನೆ
ಆಕ್ರೋಶಗೊಂಡ ಕುಟುಂಬಸ್ಥರು ಮತ್ತು ಸಾರ್ವಜನಿಕರು ಆಸ್ಪತ್ರೆ ಎದುರು ದಿಢೀರ್ ಪ್ರತಿಭಟನೆ ನಡೆಸಿದರು. ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ರೋಗಿ ಸಾವಿಗೆ ಆಸ್ಪತ್ರೆಯ ವೈದ್ಯಾಧಿಕಾರಿಯ ನಿರ್ಲಕ್ಷ್ಯ ಕಾರಣ. ಸಂಬಂಧಪಟ್ಟ ವೈದ್ಯರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ್ ಡಾ ವಿನಯಾ ಹೂಗಾರ ಆಸ್ಪತ್ರೆಗೆ ಧಾವಿಸಿ ಮೃತನ ಕುಟುಂಬಸ್ಥರು ಮತ್ತು ಸಾರ್ವಜನಿಕರ ಮನವೊಲಿಸುವ ಪ್ರಯತ್ನ ನಡೆಸಿದರು.
ಘಟನೆಯ ಬಗ್ಗೆ ಪರಿಶೀಲಿಸಿ ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಹಶೀಲ್ದಾರ್ ಹೇಳಿದರು ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.
ಪಿಎಸ್ಸೈ ಜ್ಯೋತಿ ಖೋತ ಸ್ಥಳಕ್ಕ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.
ರೋಗಿಗೆ ಹೃದಯಾಘಾತವಾಗಿದ್ದು, ಅವರಿಗೆ ಸೂಕ್ತ ಸಮಯದಲ್ಲಿ ಕಾಳಜಿ ವಹಿಸಿ ಚಿಕಿತ್ಸೆ ನೀಡಿದ್ದರೆ ಅಥವಾ ಬೇರೆ ಆಸ್ಪತ್ರೆಗೆ ಸಕಾಲದಲ್ಲಿ ಕಳುಹಿಸಿಕೊಟ್ಟಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತೆಂದು ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಸತೀಶ ತಿವಾರಿ, ಡಾ ಶ್ರೀಶೈಲ ಹುಕ್ಕೇರಿ, ಮುಹಿನುದ್ದೀನ ಬೇಪಾರಿ, ಶಫೀಕ್ ಇನಾಂದಾರ,ಶಬ್ಬೀರ್ ಬೇಪಾರಿ, ಮೆಹಬೂಬ್ ಚೋರ್ಗಸ್ತಿ, ಸದ್ದಾಂ ಬೇಪಾರಿ, ನಿಸಾರ ಬೇಪಾರಿ, ಮಂಜೂರ ಬೇಪಾರಿ, ಹುಸೇನ್ ಜಮಾದಾರ, ಮುರ್ತಝ ಮೇತ್ರಿ, ರಫೀಕ್ ಬೇಪಾರಿ, ನದೀಂ ಕಡು, ಸದ್ದಾಂ ಬಾಗವಾನ, ಸದ್ದಾಂ ಮನಗೂಳಿ, ಗೋಪಾಲ ಕಟ್ಟಿಮನಿ, ಬಸ್ಸು ಕಟ್ಟಿಮನಿ, ಹುಸೇನ್ ಹಡಗಿನಾಳ, ಖಾಜಾಮೀನ ಬಾಗವಾನ, ಜಾಫರ್ ಬೇಪಾರಿ ಮುಂತಾದವರು ಇದ್ದರು.







