Vijayapura | ಸಕ್ಕರೆ ಕಾರ್ಖಾನೆಗೆ ವಂಚನೆ: 8 ಆರೋಪಿಗಳ ಬಂಧನ, 11.32 ಕೋಟಿ ರೂ. ಜಪ್ತಿ

ವಿಜಯಪುರ : ನಂದಿ ಸಕ್ಕರೆ ಕಾರ್ಖಾನೆಗೆ 12.33 ಕೋಟಿ ರೂ. ವಂಚಿಸಿದ ಅಂತರ್ ಜಿಲ್ಲಾ ಜಾಲವನ್ನು ಭೇದಿಸಿರುವ ಪೊಲೀಸರು, 8 ಜನ ಆರೋಪಿಗಳನ್ನು ಬಂಧಿಸಿ 11.32 ಕೋಟಿ ರೂ. ನಗದನ್ನು ಜಪ್ತಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಸಮುದಾಯದ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾನಗರದ 'ನಂದಿ ಸಕ್ಕರೆ ಕಾರ್ಖಾನೆ'ಯಲ್ಲಿ ಕಳೆದ 6 ವರ್ಷಗಳಿಂದ ರೈತರ ಹೆಸರಿನಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಜಾಲವನ್ನು ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣದ ಪ್ರಮುಖ ಸೂತ್ರಧಾರಿ ಸೇರಿದಂತೆ ಒಟ್ಟು 8 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 11.32 ಕೋಟಿ ರೂ. ನಗದು ಹಾಗೂ ಬ್ಯಾಂಕ್ ಖಾತೆಯ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಹಿನ್ನೆಲೆ:
ಕಳೆದ ಜೂನ್ 12 ರಂದು ನಂದಿ ಸಕ್ಕರೆ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಅಶೋಕ ತಿಪ್ಪರೆಡ್ಡಿ ಅವರು ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ವಂಚನೆ ಕುರಿತು ದೂರು ದಾಖಲಿಸಿದ್ದರು. ಕಾರ್ಖಾನೆಯ ಕಬ್ಬು ತೂಕ ವಿಭಾಗದಲ್ಲಿ ಕೆಲಸ ಮಾಡುವ ಧರೆಪ್ಪ ನಾವಿ ಮತ್ತು ಇತರರು ಸೇರಿಕೊಂಡು, 2020-21 ರಿಂದ 2025-26 ರವರೆಗಿನ 6 ವರ್ಷಗಳ ಅವಧಿಯಲ್ಲಿ ಬೇರೆ ಬೇರೆ ರೈತರ ಹೆಸರಿನಲ್ಲಿ ಬೋಗಸ್ ಬಿಲ್ಲಿನ ರಸೀದಿ ತಯಾರಿಸಿ, ಸುಮಾರು 1.87 ಕೋಟಿ ರೂ. ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ವಿಶೇಷ ತನಿಖಾ ತಂಡವು ತೀವ್ರ ತನಿಖೆ ಕೈಗೊಂಡು ಮೊದಲ ಆರೋಪಿ ಧರೆಪ್ಪ ನಾವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಗರಣದ ಕೋಟ್ಯಾಂತರ ರೂಪಾಯಿ ವಂಚನೆ ಬೆಳಕಿಗೆ ಬಂದಿದೆ ಎಂದರು.
ಈ ಬಂಧಿತ ಆರೋಪಿಗಳು ಈ ಹಿಂದೆ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ವಿವಿಧ ಸಕ್ಕರೆ ಕಾರ್ಖಾನೆಗಳಲ್ಲೂ ಇದೇ ರೀತಿ ವಂಚನೆ ಎಸಗಿದ್ದರು. ಆರೋಪಿ ಭೀರಪ್ಪ ಗಾಡದಾರ ಎಂಬಾತ ಕಾರ್ಖಾನೆಯ ತೂಕ ಮಾಪನ ಕೇಂದ್ರದಲ್ಲಿ ಕೆಲಸಕ್ಕೆ ಸೇರಿಕೊಂಡು, ಅಲ್ಲಿದ್ದ ಫೀಲ್ಡ್ ಆಫೀಸರ್ ಹಾಗೂ ಟೋಕನ್ ಆಪರೇಟರ್‌ಗಳನ್ನು ನಂಬಿಸಿ ಬೋಗಸ್ ಟೋಕನ್‌ಗಳನ್ನು ಜನರೇಟ್ ಮಾಡುತ್ತಿದ್ದ. ಕಾರ್ಖಾನೆಗೆ ಬರುವ ಕಬ್ಬಿನ ಟ್ರ್ಯಾಕ್ಟರ್‌ಗಳ ತೂಕಕ್ಕೆ ಈ ಬೋಗಸ್ ಟೋಕನ್ ಲಿಂಕ್ ಮಾಡಿ, ಹಣವನ್ನು ತಮಗೆ ಬೇಕಾದವರ ಖಾತೆಗಳಿಗೆ ವರ್ಗಾಯಿಸುತ್ತಿದ್ದರು. ಕಳೆದ 6 ವರ್ಷಗಳ ಅವಧಿಯಲ್ಲಿ ಸುಮಾರು 34,490.699 ಮೆಟ್ರಿಕ್ ಟನ್ ಕಬ್ಬಿನ ಹೆಸರಿನಲ್ಲಿ ಬೋಗಸ್ ಬಿಲ್ ಸೃಷ್ಟಿಸಿ, ಒಟ್ಟು 12.33 ಕೋಟಿ ರೂ. ಹಣವನ್ನು ಒಟ್ಟು 91 ವಿಭಿನ್ನ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ವಂಚಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದರು.
ಧರೆಪ್ಪ ದುಂಡಪ್ಪ ನಾವಿ (ಬಿದರಿ, ಜಮಖಂಡಿ), ಭೀರಪ್ಪ ಬಸಪ್ಪ ಗಾಡದಾರ (ಯರಗಟ್ಟಿ), ಯಲ್ಲಪ್ಪ ಬಸಪ್ಪ ಗಾಡದರ (ಯರಗಟ್ಟಿ), ಪ್ರಕಾಶ ಸಿದ್ದಲಿಂಗ್ ಗಡ್ಡಿ (ಆಲಕನೂರ, ರಾಯಭಾಗ), ಪರಮಾನಂದ ಪುಂಡಲೀಕ ಗಡ್ಡಿ (ಆಲಕನೂರ, ರಾಯಭಾಗ), ಮಹಾದೇವ ಸಿದ್ದಲಿಂಗ್ ಕಾಂಬಳೆ @ ಸಿಂಗೆ (ಆಲಕನೂರ, ರಾಯಭಾಗ) ಬಾಳಪ್ಪ ಪಾಂಡು ಚೋಪಡೆ (ಆಲಕನೂರ, ರಾಯಭಾಗ), ಪ್ರಭಾಕರ ಮಧುಕರ ಸಿಂಗೆ (ಉಗಾರ, ರಾಯಭಾಗ) ರನ್ನು ಬಂಧಿಸಲಾಗಿದೆ ಎಂದರು.






