Vijayapura | ಜಮೀನು ವಿವಾದ; ಗುಂಡಿನ ದಾಳಿ ನಡೆಸಿ 6 ಮಂದಿಯ ಭೀಕರ ಹತ್ಯೆ

ಸಾಂದರ್ಭಿಕ ಚಿತ್ರ | AI
ವಿಜಯಪುರ : ಹಳೇ ಜಮೀನು ವಿವಾದದ ಹಿನ್ನೆಲೆಯಲ್ಲಿ 6 ಜನರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಶುಕ್ರವಾರ ನಡೆದಿರುವುದು ವರದಿಯಾಗಿದೆ.
ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಹೊರವಲಯದ ಜಮೀನಿನಲ್ಲಿ ಚಂದ್ರಶೇಖರ ನಿರಾಳೆ, ದುಂಡಪ್ಪ ನಿರಾಳೆ, ಶಿವಪುತ್ರ ನಿರಾಳೆ, ರಾಹುಲ ನಿರಾಳೆ, ಸಮರ್ಥ ನಿರಾಳೆ ಹಾಗೂ ಶಬೀರ್ ಅತ್ತಾರ ಸೇರಿದಂತೆ ಒಟ್ಟು 6 ಜನರ ಹತ್ಯೆಯಾಗಿದೆ.
ಗೊಳಗಿ ಕುಟುಂಬದ ಸಂಬಂಧಿಯಿಂದ ವಿರೋಧದ ಮಧ್ಯೆ ನಿರಾಳೆ ಕುಟುಂಬದವರು ಜಮೀನು ಖರೀದಿ ಮಾಡಿದ್ದರು. ಹಲವಾರು ಬಾರಿ ಸಣ್ಣ ಪುಟ್ಟ ಗಲಾಟೆ ನಡೆಯುತ್ತಿತ್ತು, ಇವತ್ತು ಜಮೀನಿನಲ್ಲಿ ಕೃಷಿ ಚಟುವಟಿಕೆಗಾಗಿ ಸ್ವಚ್ಛಗೊಳಿಸಲು ನಿರಾಳೆ ಕುಟುಂಬದವರು ಬಂದಿದ್ದರು. ಈ ವೇಳೆ ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆದಿದೆ ಎನ್ನಲಾಗಿದೆ. ನಿರಾಳೆ ಕುಟುಂಬದ ಐದು ಜನ ಹಾಗೂ ಕೂಲಿ ಕೆಲಸಕ್ಕೆ ಬಂದಿದ್ದ ಶಬ್ಬೀರ್ ಅತ್ತಾರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಅಷ್ಟೇ ಅಲ್ಲದೆ, ಗನ್ನಿಂದ ಫೈರಿಂಗ್ ಮಾಡುವ ಮೂಲಕ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಗೋವಿಂದಪುರ ಗ್ರಾಮಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ.




