Vijayapura | ಸೇತುವೆ ಮೇಲಿಂದ ಕೃಷ್ಣಾ ನದಿಗೆ ಉರುಳಿದ ಟಿಪ್ಪರ್: ಚಾಲಕ ನಾಪತ್ತೆ, ಮತ್ತೊಬ್ಬನ ರಕ್ಷಣೆ

ವಿಜಯಪುರ : ವಿಜಯಪುರ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52ರ ಕೊಲ್ಹಾರ ಸೇತುವೆ ಮೇಲೆ ಬುಧವಾರ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರಿಗೆ ಢಿಕ್ಕಿ ಹೊಡೆದ ಟಿಪ್ಪರ್ ನಿಯಂತ್ರಣ ತಪ್ಪಿ ಕೃಷ್ಣಾ ನದಿಗೆ ಉರುಳಿದ್ದು, ಚಾಲಕ ನದಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್‌ನಿಂದ ಕೊಲ್ಹಾರದತ್ತ ಬರುತ್ತಿದ್ದ ಟಿಪ್ಪರ್, ಮುಂಭಾಗದಲ್ಲಿದ್ದ ಕಾರನ್ನು ಓವರ್‌ಟೇಕ್ ಮಾಡಲು ಯತ್ನಿಸಿದೆ. ಈ ವೇಳೆ ಕಾರಿಗೆ ಜೋರಾಗಿ ಢಿಕ್ಕಿ ಹೊಡೆದ ಟಿಪ್ಪರ್, ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆ ಮುರಿದುಕೊಂಡು ಕೃಷ್ಣಾ ನದಿಗೆ ಬಿದ್ದಿದೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಟಿಪ್ಪರ್ ನದಿಯಲ್ಲಿ ಮುಳುಗಡೆಯಾಗಿತ್ತು. ಆದರೆ ಟಿಪ್ಪರ್‌ನಲ್ಲಿದ್ದ ಬೀದರ್ ಜಿಲ್ಲೆಯ ಯರಣಗಿ ಗ್ರಾಮದ ನಿವಾಸಿ ಸಂಜು ಮೂಲಗೆ (28) ಎಂಬುವವರು ಮುಳುಗುತ್ತಿದ್ದ ಟಿಪ್ಪರ್ ಮೇಲೇರಿ ಕುಳಿತು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ತಕ್ಷಣವೇ ತೆಪ್ಪದ ಮೂಲಕ ನದಿಗೆ ಇಳಿದು, ಯುವಕನನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಲಕನಿಗಾಗಿ ತೀವ್ರ ಹುಡುಕಾಟ: ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ
ಟಿಪ್ಪರ್ ಚಾಲಕ, ಬಾಗಲಕೋಟೆ ಜಿಲ್ಲೆಯ ಬೆಣ್ಣೂರ ಗ್ರಾಮದ ಸಂತೋಷ ಕೋಟಿ ಅವರು ವಾಹನದೊಳಗೆ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಇದುವರೆಗೆ ಅವರು ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಶೋಧ ಕಾರ್ಯ ನಡೆಸಿದರು. ಆದರೆ ರಾತ್ರಿಯಾಗಿದ್ದರಿಂದ ಸದ್ಯಕ್ಕೆ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಗುರುವಾರ ಬೆಳಿಗ್ಗೆ ಕ್ರೇನ್ ಯಂತ್ರದ ಸಹಾಯದೊಂದಿಗೆ ನದಿಯಿಂದ ಟಿಪ್ಪರ್ ಅನ್ನು ಹೊರತೆಗೆದು, ಮುಂದಿನ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಕೊಲ್ಹಾರ ಸೇತುವೆ ಮೇಲೆ ಕೆಲಕಾಲ ಭಾರಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಬೀಳಗಿ ಮತ್ತು ಕೊಲ್ಹಾರ ಪೊಲೀಸರು ಜಂಟಿಯಾಗಿ ರಸ್ತೆಯಲ್ಲಿದ್ದ ಅಪಘಾತಕ್ಕೀಡಾದ ಕಾರನ್ನು ತೆರವುಗೊಳಿಸಿ, ವಾಹನ ಸಂಚಾರವನ್ನು ಸುಗಮಗೊಳಿಸಿದರು.
ಈ ಘಟನೆಯು ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.






