Vijayapura | 9.43 ಕೋಟಿ ರೂ. ಮೌಲ್ಯದ ಸೊತ್ತು ಸಂತ್ರಸ್ತರಿಗೆ ಹಸ್ತಾಂತರ

ವಿಜಯಪುರ 2: ಕಳವು ಪ್ರಕರಣ ಹಾಗೂ ಸೈಬರ್ ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ ಚಿನ್ನ, ಬೆಳ್ಳಿ, ಕಾರು ಸೇರಿದಂತೆ ಒಟ್ಟು 9.43 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸುವ ಮೂಲಕ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಹೊಸ ದಾಖಲೆ ಬರೆದಿದೆ.
ನ್ಯಾಯಾಲಯದ ಆದೇಶದಂತೆ ಸೋಮವಾರ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ವಿಶೇಷ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ್ ಸೊತ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು.
2026ರ ಫೆಬ್ರವರಿಯಿಂದ ನ. 1ರವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಸುಮಾರು 115 ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಒಟ್ಟು 5,23,66,285 ರೂ. ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಲಾಗಿತ್ತು. ಇದರಲ್ಲಿ 1,35,99,250 ರೂ. ನಗದು, 39,99,001 ಮೌಲ್ಯದ 1.794 ಕೆಜಿ ಚಿನ್ನಾಭರಣ, 21.08 ಲಕ್ಷ ರೂ. ಮೌಲ್ಯದ ಬೆಳ್ಳಿ, 21.12 ಲಕ್ಷ ರೂ. ಮೌಲ್ಯದ 46 ದ್ವಿಚಕ್ರ ವಾಹನಗಳು, 1.26 ಕೋಟಿ ರೂ. ಮೌಲ್ಯದ 4 ಕಾರುಗಳು ಹಾಗೂ ರೈತರಿಗೆ ಸೇರಿದ 3.35 ಲಕ್ಷ ರೂ. ಮೌಲ್ಯದ ಪಂಪ್‌ಸೆಟ್ ಸೇರಿದಂತೆ ಹಲವು ವಸ್ತುಗಳು ಸೇರಿದ್ದು, ಇವೆಲ್ಲವನ್ನೂ ವಾರಸುದಾರರಿಗೆ ನೀಡಲಾಯಿತು.
ಇನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಯುಪಿಐ, ಕ್ಯೂಆರ್ ಕೋಡ್, ಡಿಜಿಟಲ್ ಅರೆಸ್ಟ್, ನಕಲಿ ಹೂಡಿಕೆ, ಷೇರು ಮಾರುಕಟ್ಟೆ ಹಾಗೂ ಆನ್‌ಲೈನ್ ಟಾಸ್ಕ್ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಭಾರೀ ಯಶಸ್ಸು ಗಳಿಸಿದ್ದಾರೆ. ಒಟ್ಟು 20 ಸೈಬರ್ ವಂಚನೆ ಪ್ರಕರಣಗಳಲ್ಲಿ ಆರೋಪಿಗಳಿಂದ ಜಪ್ತಿ ಮಾಡಿದ್ದ 4.19 ಕೋಟಿ ರೂ. ನಗದು ಹಣವನ್ನು ಪತ್ತೆಹಚ್ಚಿ, ನೇರವಾಗಿ ದೂರುದಾರರಿಗೆ ಮರುಪಾವತಿಸಲಾಗಿದೆ.
ಬೃಹತ್ ಪ್ರಮಾಣದಲ್ಲಿ ಕಳ್ಳತನವಾದ ಆಸ್ತಿ ಹಾಗೂ ಸೈಬರ್ ವಂಚನೆಯ ಹಣವನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸಿದ ಪೊಲೀಸರ ಕಾರ್ಯಕ್ಕೆ ಸಂತ್ರಸ್ತರು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.






