Vijayapura | ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಖಂಡನೀಯ: ಮಾಜಿ ಶಾಸಕ ಪ್ರೊ.ರಾಜು ಆಲಗೂರ
ರವಿ ಹಂಜ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ವಿಜಯಪುರ: ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರ ತತ್ವಾದರ್ಶ ಹಾಗೂ ಶ್ರೇಷ್ಠ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಿರುವ ರವಿ ಹಂಜ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಮೆರಿಕದ ಪೌರತ್ವ ಹೊಂದಿರುವ ಅವರ ವಿರುದ್ಧ ಕ್ರಮ ಜರುಗಿಸಲು ರಾಜತಾಂತ್ರಿಕ ಮಟ್ಟದಲ್ಲಿ ಸಮಾಲೋಚನೆ ನಡೆಸಿ, ಅಮೆರಿಕದ ರಾಯಭಾರ ಕಚೇರಿ ಮೂಲಕ ಸಮನ್ವಯ ಸಾಧಿಸಬೇಕು ಎಂದು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರವಿ ಹಂಜ್ ಅವರ ಬಂಧನ ಹಾಗೂ ಕಾನೂನು ಕ್ರಮಕ್ಕೆ ಎದುರಾಗಿರುವ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ‘ಬಸವ ಮಂಟಪ’ ಪುಸ್ತಕದಲ್ಲಿ ಕಪೋಲಕಲ್ಪಿತ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿದೆ. ಈ ಹಿಂದೆ ಕೂಡ ಸಂಘ ಪರಿವಾರದ ನೇತೃತ್ವದಲ್ಲಿ ಬಸವ ತತ್ವಗಳಿಗೆ ವಿರುದ್ಧವಾದ ಗ್ರಂಥಗಳನ್ನು ಹೊರತರುವ ಪ್ರಯತ್ನ ನಡೆದಿದ್ದು, ಇಂತಹ ಕೃತ್ಯಗಳ ಹಿಂದೆ ಸಂಘ ಪರಿವಾರದ ಷಡ್ಯಂತ್ರವಿದೆ ಎಂದು ಆರೋಪಿಸಿದರು.
ಬಸವಣ್ಣನವರು ಸಮಾನತೆ, ಮಾನವೀಯತೆ ಮತ್ತು ಪ್ರಜಾಪ್ರಭುತ್ವದ ಪ್ರಬಲ ಪ್ರತಿಪಾದಕರಾಗಿದ್ದರು. ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಸಕಲ ಸಮಾಜಗಳಿಗೂ ಸ್ಫೂರ್ತಿ ಹಾಗೂ ಆದರ್ಶವಾಗಿರುವ ಮಹಾನ್ ವ್ಯಕ್ತಿತ್ವ ಅವರದ್ದು. ಹೀಗಾಗಿ ಪುಸ್ತಕದ ಲೇಖಕರ ಜೊತೆಗೆ ಪ್ರಕಾಶಕರ ಮೇಲೆಯೂ ಕಾನೂನು ಕ್ರಮ ಜರುಗಿಸಬೇಕು. ಬಸವಣ್ಣನವರ ಘನತೆಗೆ ಧಕ್ಕೆ ತರುವ ಪ್ರಯತ್ನವನ್ನು ಎಲ್ಲರೂ ಒಗ್ಗಟ್ಟಿನಿಂದ ಖಂಡಿಸಬೇಕು ಎಂದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ವಿಮರ್ಶೆಯ ಹೆಸರಿನಲ್ಲಿ ದುರುದ್ದೇಶಪೂರ್ವಕವಾಗಿ ಮಹಾನ್ ವ್ಯಕ್ತಿಗಳ ವಿರುದ್ಧ ಆಪಾದನೆ ಮಾಡುವುದು ಖಂಡನೀಯ. ಸಮಾನತೆಗಾಗಿ ಶ್ರಮಿಸಿದ ಬಸವಣ್ಣನವರಿಗೆ ಅವರ ಕಾಲದಲ್ಲಿಯೂ ವಿರೋಧವಿತ್ತು. ಅಂತಹ ಸಮಾನತೆಯ ವಿರೋಧಿ ಶಕ್ತಿಗಳು ಇಂದಿಗೂ ಸಕ್ರಿಯವಾಗಿದ್ದು, ಬಸವ ಚಿಂತನೆಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿವೆ ಎಂದು ಆರೋಪಿಸಿದರು.
ಮಹಾತ್ಮ ಜ್ಯೋತಿಬಾ ಫುಲೆ, ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರು ಸಮಾನತೆಗಾಗಿ ಹೋರಾಡಿದ್ದಾರೆ. ಆದರೆ ಇಂದು ಅವರ ವಿಚಾರಧಾರೆಗಳನ್ನೇ ಪ್ರಶ್ನಿಸುವ ಹಾಗೂ ಸಂವಿಧಾನದಲ್ಲಿ ದೋಷ ಹುಡುಕುವ ಪ್ರಯತ್ನಗಳು ನಡೆಯುತ್ತಿವೆ. ಮೂಢನಂಬಿಕೆ ಮತ್ತು ಸಾಮಾಜಿಕ ಅನ್ಯಾಯಗಳ ವಿರುದ್ಧ ಹೋರಾಡಿದ ಎಂ.ಎಂ. ಕಲಬುರಗಿ, ಗೌರಿ ಲಂಕೇಶ್ ಸೇರಿದಂತೆ ವಿಚಾರವಾದಿಗಳು ಹತ್ಯೆಗೀಡಾಗಿದ್ದಾರೆ. ಇಂತಹ ಘಟನೆಗಳು ಸಮಾನತೆಯ ವಿಚಾರಧಾರೆಗಳನ್ನು ಹತ್ತಿಕ್ಕುವ ಮನುವಾದಿ ಚಿಂತನೆಗಳ ಪರಿಣಾಮವಾಗಿವೆ ಎಂದು ಹೇಳಿದರು.
ಬಸವಣ್ಣನವರು ಜನಿಸಿದ ವಿಜಯಪುರ ಜಿಲ್ಲೆಯಿಂದಲೇ ಅವರ ವಿಚಾರಧಾರೆಗಳಿಗೆ ಅಪಮಾನ ಮಾಡುವವರ ವಿರುದ್ಧ ಪ್ರಬಲ ಸಂದೇಶ ರವಾನೆಯಾಗಬೇಕು ಎಂದು ತಿಳಿಸಿದರು.
ವಿಡಿಎ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವಸಂತ ಹೋನಮೋಡೆ ಹಾಗೂ ಪಾಲಿಕೆ ಸದಸ್ಯ ದಿನೇಶ ಹಳ್ಳಿ ಉಪಸ್ಥಿತರಿದ್ದರು.






