Vijayapura | ಕಬ್ಬಿಗೆ 5,500 ರೂ. ದರ ನಿಗದಿ, ಭೀಮಾ ನದಿಗೆ ನೀರು ಹರಿಸುವಂತೆ ರೈತರ ಧರಣಿ

ಚಡಚಣ : ಪ್ರತಿ ಟನ್ ಕಬ್ಬಿಗೆ 5,500 ರೂ. ದರ ನಿಗದಿಪಡಿಸಬೇಕು, ಭೀಮಾ ನದಿಗೆ ನೀರು ಹರಿಸಬೇಕು ಹಾಗೂ ಬರದಿಂದ ಸಂಕಷ್ಟಕ್ಕೀಡಾಗಿರುವ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ರೈತರು ಝಳಕಿ ಕ್ರಾಸ್‌ನಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ರೈತೋದಯ ಹಸಿರುಸೇನೆಯ ರಾಜ್ಯ ಉಪಾಧ್ಯಕ್ಷ ನಾಗನಾಥಗೌಡ ಬಿರಾದಾರ ಮಾತನಾಡಿ, ಪ್ರಸಕ್ತ ವರ್ಷ ರಸಗೊಬ್ಬರ ಸೇರಿದಂತೆ ಕೃಷಿಗೆ ಅಗತ್ಯವಾದ ವಿವಿಧ ಪರಿಕರಗಳ ಬೆಲೆ ಗಗನಕ್ಕೇರಿದೆ. ಕೃಷಿ ವೆಚ್ಚ ನಿರಂತರವಾಗಿ ಹೆಚ್ಚುತ್ತಿದ್ದರೂ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ಆದ್ದರಿಂದ ಪ್ರಸಕ್ತ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಗೆ 5,500 ರೂ. ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಭೀಮಾ ನದಿಗೆ ನೀರು ಹರಿಸಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನದಿಗೆ ಕೇವಲ 5,000 ಕ್ಯೂಸೆಕ್ ನೀರು ಹರಿಸಲಾಗಿದ್ದು, ಅದು ಪಂಢರಪುರದವರೆಗೆ ತಲುಪಿದೆ. ಆದರೆ ಕರ್ನಾಟಕದ ಧೂಳಖೇಡ ಭಾಗದ ಜನರಿಗೆ ನೀರು ನಿರೀಕ್ಷಿತ ಪ್ರಮಾಣದಲ್ಲಿ ನೀರು ದೊರೆಯುತ್ತಿಲ್ಲ. ಆದ್ದರಿಂದ ಗಡಿ ಭಾಗದ ಗ್ರಾಮಗಳಿಗೆ ನೀರು ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಬಿ.ಡಿ. ಪಾಟೀಲ ಮಾತನಾಡಿ, ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಮತ್ತು ಕುಡಿಯುವ ನೀರು ಒದಗಿಸಬೇಕು. ಅಗತ್ಯವಿದ್ದಲ್ಲಿ ಗೋಶಾಲೆಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರು ಝಳಕಿ ಕ್ರಾಸ್‌ನಲ್ಲಿ ಶಿರಾಡೋಣ-ಲಿಂಗಸೂರ ರಾಜ್ಯ ಹೆದ್ದಾರಿಯನ್ನು ಸುಮಾರು ಎರಡು ಗಂಟೆಗಳ ಕಾಲ ತಡೆದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ವಿಜಯಪುರ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರಿಗೆ ಮನವಿ ಸಲ್ಲಿಸಲಾಯಿತು.
ರೈತ ಮುಖಂಡರಾದ ಸಿದ್ದಣ್ಣಗೌಡ ಬಿರಾದಾರ, ಅಭಿನವ ದೇವಾನಂದ ಚವ್ಹಾಣ, ರೇವಣಸಿದ್ದ ಮೇಲಿನಮನಿ, ಅಶೋಕ ಕಾಪಸೆ, ರವಿ ನಾವಿ, ಸುಭಾಷ ಚಟ್ಟರಕಿ, ರಮೇಶ ಕೋಟಿ, ಸಿದ್ದಣ್ಣ ಬಿರಾದಾರ, ರುದ್ರೇಶ ಖೈನೂರ, ಪ್ರವೀಣ ಬಿರಾದಾರ, ಹುಸೇನಸಾಬ ಮುಲ್ಲಾ, ಸದಾಶಿವ ಬಿರಾದಾರ,ಕಲ್ಲಪ್ಪ ಗುಮತೆ, ರವಿರಾಜ ಭೈರಗೊಂಡ, ಹಣಮಂತ ರೇವತಗಾಂವ ಪಾಲ್ಗೊಂಡಿದ್ದರು.






