ವಿಜಯಪುರ: ಪತ್ನಿಯನ್ನು ಹತ್ಯೆಗೈದು ಬಾವಿಗೆಸೆದ ಪತಿ; ಆರೋಪಿ ಪರಾರಿ

ವಿಜಯಪುರ: ಹೆಂಡತಿಯನ್ನು ಹತ್ಯೆಗೈದು ಬಾವಿಗೆ ಎಸೆದು ವ್ಯಕ್ತಿಒಬ್ಬ ಪರಾರಿಯಾದ ಘಟನೆ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗಣಿಹಾರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ನೀಲಮ್ಮ ಆನಗೊಂಡ(46) ಮೃತ ಮಹಿಳೆ. ಆಕೆಯ ಪತಿ ಪರಮಾನಂದ ಎಂಬಾತ ಹರಿತವಾದ ಆಯುಧದಿಂದ ಇರಿದು ಹತ್ಯೆಗೈದಿದ್ದಾನೆ ಎಂದು ತಿಳಿದು ಬಂದಿದೆ.
ಜಮೀನಿನಲ್ಲಿ ಮೆಕ್ಕೆಜೋಳಕ್ಕೆ ಹಂದಿಗಳ ಹಾವಳಿ ತಡೆಯಲು ಪಟಾಕಿ ಸಿಡಿಸಲು ಹೋದಾಗ ಪತಿ ಬೆನ್ನಟ್ಟಿ ಬಂದು ಕೊಂದಿದ್ದಾನೆ.
ಮಂಗಳವಾರ ರಾತ್ರಿ ಎಲ್ಲರೂ ಮಲಗಿದ್ದಾಗ ನೀಲಮ್ಮ, ಜಮೀನಿನಲ್ಲಿನ ಮೆಕ್ಕೆಜೋಳಕ್ಕೆ ಹಂದಿಗಳ ಹಾವಳಿ ಇರುವುದರಿಂದ ಪಟಾಕಿ ಸಿಡಿಸಲು ಹೋದ ಸಂದರ್ಭದಲ್ಲಿ ಅವಳ ಬೆನ್ನತ್ತಿ ಹೋದ ಗಂಡ ಪರಮಾನಂದ ಅವಳನ್ನು ಕತ್ತರಿಸಿ ಬಾವಿಗೆ ಎಸೆದಿದ್ದಾನೆ ಎನ್ನಲಾಗಿದೆ.
ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರುದಿನ ಬೆಳಿಗ್ಗೆ ಮಗ ತಾಯಿಯನ್ನು ಹುಡುಕುತ್ತಾ ಹೋದಾಗ ಬಾವಿಯೊಂದರ ಬಳಿ ರಕ್ತದ ಕಲೆಗಳನ್ನು ಕಂಡು ಬಾವಿಯಲ್ಲಿ ಹುಡುಕಿದಾಗ ದೇಹದ ಅರ್ಧ ಭಾಗ ಸಿಕ್ಕಿದೆ. ದೇಹದ ಇನ್ನರ್ಧ ಭಾಗದ ಹುಡುಕಾಟ ನಡೆದಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





