Vijayapura | ರಸ್ತೆ ಅಪಘಾತವೆಂದು ಬಿಂಬಿಸಿ ಪತಿಯ ಹತ್ಯೆ : ಪತ್ನಿ ಸೇರಿ ಮೂವರ ಬಂಧನ

ವಿಜಯಪುರ: ನಗರದಲ್ಲಿ ಆರಂಭದಲ್ಲಿ ರಸ್ತೆ ಅಪಘಾತವೆಂದು ದಾಖಲಾಗಿದ್ದ ಪ್ರಕರಣವೊಂದು ಪೊಲೀಸರ ತನಿಖೆಯಿಂದ ಪೂರ್ವಯೋಜಿತ ಕೊಲೆ ಎಂಬ ಶಂಕೆ ಬಲಪಡಿಸಿದೆ. ಪತಿಯ ಹತ್ಯೆಗೆ ಪತ್ನಿಯೇ ಸಂಚು ರೂಪಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.4ರಂದು ರಾಜಶೇಖರ ಬಿರಾದಾರ ಅವರು ಜುಮನಾಳ ರಿಂಗ್‌ರೋಡ್ ಬಳಿ ವಾಕಿಂಗ್‌ಗೆ ತೆರಳಿದ್ದ ಸಂದರ್ಭದಲ್ಲಿ ವಾಹನ ಢಿಕ್ಕಿಯಾಗಿ ಮೃತಪಟ್ಟಿದ್ದರು. ಈ ಕುರಿತು ರಸ್ತೆ ಅಪಘಾತದ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಇದೊಂದು ಸಾಮಾನ್ಯ ಅಪಘಾತವೆಂದು ಭಾವಿಸಲಾಗಿತ್ತು. ಆದರೆ, ಘಟನೆಯ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಾಗ ಹಲವು ಅಂಶಗಳು ಬೆಳಕಿಗೆ ಬಂದಿದ್ದು, ಇದು ಪೂರ್ವಯೋಜಿತ ಕೊಲೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ ರಾವುತಪ್ಪ ಕಲ್ಲೂರ (25), ಅಶ್ವಿನಿ ರಾಜಶೇಖರ ಬಿರಾದಾರ (30), ಸಚಿನ್ ಪರಶುರಾಮ ಬಡಳ್ಳಿ (24) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪರಿಚಯದಿಂದ ಕೊಲೆಯ ಸಂಚಿನವರೆಗೆ :
ರಾಜಶೇಖರ ಮತ್ತು ಅಶ್ವಿನಿ ಅವರಿಗೆ ಸುಮಾರು 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಆರು ವರ್ಷದ ಅವಳಿ ಗಂಡು ಮಕ್ಕಳಿದ್ದಾರೆ. ಏಳು ತಿಂಗಳ ಹಿಂದೆ ರಾಜಶೇಖರ ಹೊಸ ಮನೆ ನಿರ್ಮಿಸಿದ್ದರು. ಮನೆಯ ಪೇಂಟಿಂಗ್ ಕೆಲಸವನ್ನು ಮದೀನಾ ನಗರದ ಪೇಂಟರ್ ಆನಂದ ಕಲ್ಲೂರನಿಗೆ ವಹಿಸಿದ್ದರು. ಈ ಸಂದರ್ಭದಲ್ಲಿ ಅಶ್ವಿನಿ ಮತ್ತು ಆನಂದನ ನಡುವೆ ಪರಿಚಯ ಬೆಳೆದು ಸ್ನೇಹವಾಗಿ ಮಾರ್ಪಟ್ಟಿತ್ತು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಪತಿಯಿಂದ ದೂರವಾಗಲು ಬಯಸಿದ್ದ ಅಶ್ವಿನಿ, ರಾಜಶೇಖರ ಅವರನ್ನು ಹತ್ಯೆ ಮಾಡಲು ಆನಂದನೊಂದಿಗೆ ಸೇರಿ ಸಂಚು ರೂಪಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಅ.4ರ ಮುಂಜಾನೆ ರಾಜಶೇಖರ ವಾಕಿಂಗ್‌ಗೆ ತೆರಳಿದ ಸಮಯವನ್ನು ಅಶ್ವಿನಿ ಮೊಬೈಲ್ ಮೂಲಕ ಆನಂದನಿಗೆ ತಿಳಿಸಿದ್ದಳು ಎನ್ನಲಾಗಿದೆ.
ನಂಬರ್ ಪ್ಲೇಟ್ ಇಲ್ಲದ ಸ್ಕಾರ್ಪಿಯೋ ವಾಹನ ಬಳಕೆ :
ಪೊಲೀಸರ ಪ್ರಕಾರ, ಯೋಜನೆಯಂತೆ ಆನಂದ ತನ್ನ ಬೈಕ್‌ನಲ್ಲಿ ರಾಜಶೇಖರ ಅವರನ್ನು ಹಿಂಬಾಲಿಸಿ, ಅವರ ಚಲನವಲನದ ಕುರಿತು ಸಚಿನ್ ಹಾಗೂ ಬಾಲಕನಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಸಚಿನ್ ಮತ್ತು ಬಾಲಕ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ಬಂದು, ಜುಮನಾಳ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಜಶೇಖರ ಅವರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದಾರೆ. ಈ ಮೂಲಕ ಅವರನ್ನು ಹತ್ಯೆಗೈದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ ಸಾಮಾನ್ಯ ರಸ್ತೆ ಅಪಘಾತದಂತೆ ಕಂಡಿದ್ದ ಪ್ರಕರಣದಲ್ಲಿ ಪೊಲೀಸರಿಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ನಡೆಸಿದ ತನಿಖೆ ಹಾಗೂ ವಿಚಾರಣೆಯಿಂದ ಘಟನೆಗೆ ಸಂಬಂಧಿಸಿದ ಹಲವು ಅಂಶಗಳು ಬಹಿರಂಗವಾಗಿವೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.






