Vijaypura | ನವವಿವಾಹಿತನ ಭೀಕರ ಕೊಲೆ: ಪತ್ನಿ ನಾಪತ್ತೆ

ಗಣೇಶ ಬಸಪ್ಪ
ವಿಜಯಪುರ: ಆರು ತಿಂಗಳ ಹಿಂದೆ ವಿವಾಹವಾಗಿದ್ದ ಯುವಕನನ್ನು ಮನೆಯ ಬೆಡ್ ರೂಮ್ನಲ್ಲೇ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಮುದ್ದೇಬಿಹಾಳ ತಾಲೂಕಿನ ರೂಢಗಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ರೂಢಗಿ ಗ್ರಾಮದ ಗಣೇಶ ಬಸಪ್ಪ ಅಂಬಿಗೇರ(27) ಎಂದು ಗುರುತಿಸಲಾಗಿದೆ. ಇವರು ಮುದ್ದೇಬಿಹಾಳದ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು.
ಪತ್ನಿಯ ಮೇಲೆ ಶಂಕೆ
ಮೃತನ ಸಹೋದರ ಸುರೇಶ ಮನಗೂಳಿ ನೀಡಿರುವ ದೂರಿನ ಪ್ರಕಾರ, ಗಣೇಶನಿಗೆ ಮುದ್ದೇಬಿಹಾಳದ ಪೂಜಾ ಅಲಿಯಾಸ್ ಅಕ್ಷತಾ ಎಂಬಾಕೆಯ ಜೊತೆ ಆರು ತಿಂಗಳ ಹಿಂದೆ ವಿವಾಹವಾಗಿತ್ತು. ಆದರೆ, ಮದುವೆಯಾದಾಗಿನಿಂದಲೂ ಪತ್ನಿ ಪೂಜಾ ಬೇರೊಬ್ಬರ ಜೊತೆ ಸದಾ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಈ ಕುರಿತು ಗಣೇಶ ಪ್ರಶ್ನಿಸಿದಾಗಲೆಲ್ಲಾ ಆಕೆ ಗಂಡನಿಗೆ ಬೆದರಿಕೆ ಹಾಕುತ್ತಿದ್ದಳು ಎಂದು ಆರೋಪಿಸಲಾಗಿದೆ.
ಅ.20ರ ರಾತ್ರಿ 11:30ರಿಂದ ಅ.21ರ ಬೆಳಗ್ಗೆ 6ರ ನಡುವಿನ ಅವಧಿಯಲ್ಲಿ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಈ ಮಧ್ಯೆ ಗಣೇಶರ ಪತ್ನಿ ಪೂಜಾ ಮನೆಯಿಂದ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ತನಿಖೆ ಚುರುಕು
ಪೂಜಾಳ ಅನೈತಿಕ ಸಂಬಂಧಕ್ಕೆ ಗಣೇಶ ಅಡ್ಡಿಯಾಗಿದ್ದರಿಂದ, ಆಕೆಯ ಪ್ರಿಯಕರನ ಜೊತೆ ಸೇರಿ ಈ ಹತ್ಯೆ ಮಾಡಲಾಗಿದೆ ಎಂದು ಕುಟುಂಬಸ್ಥರು ಪೊಲೀಸ್ ದೂರಿನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.
ಮುದ್ದೇಬಿಹಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿ ಪತ್ನಿ ಪೂಜಾ ಅಲಿಯಾಸ್ ಅಕ್ಷತಾಳ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.






