ವಿಜಯಪುರ: ಕೊಲೆ ಆರೋಪಿಯ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು

ವಿಜಯಪುರ: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪೊಲೀಸರು ಕಾಲಿಗೆ ಗುಂಡಿಕ್ಕಿ ಬಂಧಿಸಿದ ಘಟನೆ ನಗರದ ಹೊರ ಭಾಗದಲ್ಲಿ ಅಥಣಿ ರಸ್ತೆಯ ಬಳಿ ಇಂದು ಬೆಳಗ್ಗೆ ನಡೆದಿದೆ.
ಸುರೇಶ ರಾಠೋಡ್ ಬಂಧಿತ ಆರೋಪಿಯಾಗಿದ್ದಾನೆ.
ಕಳೆದ ಜನವರಿ 28ರಂದು ತಿಕೋಟಾ ತಾಲೂಕಿನ ಅರಕೇರಿಯಲ್ಲಿ ನಡೆದ ಸತೀಶ ರಾಠೋಡ್ ಎಂಬವರ ಕೊಲೆ ಪ್ರಕರಣದಲ್ಲಿ ಸುರೇಶ ರಾಠೋಡ್ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದನು. ಈತ ನಗರದ ಹೊರ ಭಾಗದಲ್ಲಿ ಅಥಣಿ ರಸ್ತೆಯ ಬಳಿ ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಪಡೆದ ವಿಜಯಪುರ ಗ್ರಾಮೀಣ ಪೊಲೀಸರು ಇಂದು ಮುಂಜಾನೆ ಆತನನ್ನು ಸೆರೆಹಿಡಿಯಲು ಮುಂದಾಗಿದ್ದರು. ಈ ವೇಳೆ ಆತ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಪೊಲೀಸರು ಆತ್ಮರಕ್ಷಣೆಗಾಗಿ ಸುರೇಶ ರಾಠೋಡ್ ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಆರೋಪಿಯ ದಾಳಿಯಿಂದ ಗಾಯಗೊಂಡಿರುವ ಪಿಎಸೈ ವಿನೋದ ದೊಡ್ಡಮನಿ ಹಾಗೂ ಓರ್ವ ಪೊಲೀಸ್ ಕಾನ್ಸಸ್ಟೇಬಲ್ ರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೂಟೌಟ್ ನಿಂದ ಗಾಯಗೊಂಡಿರುವ ಸುರೇಶ ರಾಠೋಡ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸತೀಶ ರಾಠೋಡ್ ರನ್ನು ಜನವರಿ 28ರಂದು ತಿಕೋಟಾ ತಾಲೂಕಿನ ಅರಕೇರಿ ಎಲ್.ಟಿ.1ರ ಮಾನವರದೊಡ್ಡಿ ಬಳಿ ಗುಂಡು ಹಾರಿಸಿ, ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ರಮೇಶ ಚೌಹಾಣ್ ಎಂಬಾತ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈ ಕೊಲೆಗೆ ಮದ್ಯಪ್ರದೇಶದಿಂದ ಕಂಟ್ರೀ ಪಿಸ್ತೂಲ್ ಪೂರೈಕೆ ಮಾಡಿರುವ ಆರೋಪಿಯಾಗಿದ್ದಾನೆ ಸುರೇಶ ರಾಠೋಡ್ ಎಂದು ಎಸ್ಪಿ ತಿಳಿಸಿದ್ದಾರೆ.
ಎಎಸ್ಪಿ ರಾಮನಗೌಡ ಹಟ್ಟಿ ಹಾಗೂ ಇತರ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ಗಾಯಾಳು ಪೊಲೀಸರ ಯೋಗಕ್ಷೇಮ ವಿಚಾರಿಸಿದರು. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸುರೇಶ ರಾಠೋಡ್ ಸ್ಥಿತಿ ಬಗ್ಗೆ ಮಾಹಿತಿ ಪಡೆದರು.







