Vijayapura | ರಾಮಮಂದಿರ ಹುಂಡಿ ಕಳ್ಳತನ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ವಿಜಯಪುರ : ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸಣ್ಣಪುಟ್ಟ ಪ್ರಕರಣಗಳಲ್ಲಿಯೂ ಬುಲ್ಡೋಜರ್ ಕಾರ್ಯಾಚರಣೆ ನಡೆಸುವ ಬಿಜೆಪಿ ಸರ್ಕಾರ, ರಾಮಮಂದಿರ ಹುಂಡಿ ಕಳ್ಳತನ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಅದೇ ರೀತಿಯ ಕಠಿಣ ಕ್ರಮ ಕೈಗೊಳ್ಳಲು ಏಕೆ ಹಿಂಜರಿಯುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಪ್ರಶ್ನಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಶದ ಎಲ್ಲ ವರ್ಗದ ಜನರು ದೇಣಿಗೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಸಾರ್ವಜನಿಕರ ತೆರಿಗೆ ಹಣವೂ ಬಳಕೆಯಾಗಿದೆ. ಹೀಗಾಗಿ ರಾಮಮಂದಿರವು ಇಡೀ ದೇಶದ ಜನರ ಆಸ್ತಿಯಾಗಿದ್ದು, ಯಾವುದೇ ಒಂದು ವರ್ಗಕ್ಕೆ ಮಾತ್ರ ಸೀಮಿತವಲ್ಲ ಎಂದು ಹೇಳಿದರು.
ಧರ್ಮ ಮತ್ತು ದೇವರ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ, ರಾಮಮಂದಿರದ ಹಣ ದುರುಪಯೋಗ ಮತ್ತು ಕಳ್ಳತನದ ಆರೋಪಗಳ ಬಗ್ಗೆ ಮೌನ ವಹಿಸುವ ಮೂಲಕ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಕಳವಾಗಿರುವ ಹಣವನ್ನು ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.
ಕಳೆದ 20–25 ವರ್ಷಗಳಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಸಂಗ್ರಹಿಸಲಾದ ಕೋಟ್ಯಂತರ ರೂಪಾಯಿ ದೇಣಿಗೆ, ಚಿನ್ನ, ಬೆಳ್ಳಿ ಹಾಗೂ ಇತರೆ ಕೊಡುಗೆಗಳ ಸಂಪೂರ್ಣ ಲೆಕ್ಕವನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ರಾಮಮಂದಿರ ಟ್ರಸ್ಟ್‌ನ ಅಧ್ಯಕ್ಷ ನೃತ್ಯಗೋಪಾಲ್ ದಾಸ್ ಹಾಗೂ ಕಾರ್ಯದರ್ಶಿ ಚಂಪತ್ ರಾಯ್ ವಿರುದ್ಧ ಎಫ್‌ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ರಾಮಮಂದಿರದಲ್ಲಿ ಪೂಜೆ ಆರಂಭಿಸಲು ಮೊದಲ ಅನುಮತಿ ನೀಡಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಎಂದು ಹೇಳಿದ ಅವರು, ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು.
ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿಗೆ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದ್ದರೆ, ಅದೇ ಮಾದರಿಯನ್ನು ಹಿಂದೂ ದೇವಸ್ಥಾನಗಳು ಹಾಗೂ ಟ್ರಸ್ಟ್‌ಗಳಿಗೂ ಅನ್ವಯಿಸಿ, ಪಾರದರ್ಶಕತೆ ಮತ್ತು ಮೇಲ್ವಿಚಾರಣೆ ಹೆಚ್ಚಿಸುವ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ರಾಮಮಂದಿರಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಫಯಾಜ್ ಕಲಾದಗಿ ಉಪಸ್ಥಿತರಿದ್ದರು.






