Vijayapura | ದೇವರಹಿಪ್ಪರಗಿ : ನಿದ್ರಿಸುತ್ತಿದ್ದ ಯುವಕನ ಕತ್ತು ಕುಯ್ದು ಕೊಲೆ

ವಿಜಯಪುರ: ಮನೆಯ ಹೊರಾಂಗಣದಲ್ಲಿ ಮಲಗಿ ನಿದ್ರಿಸುತ್ತಿದ್ದ ಯುವಕನೊಬ್ಬನನ್ನು ದುಷ್ಕರ್ಮಿಗಳು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಜಾಲವಾದ ಗ್ರಾಮದ ಇಸ್ಮಾಯೀಲ್ ಭಾಗವಾನ್ (25) ಕೊಲೆಯಾದವರು. ಇಸ್ಮಾಯೀಲ್ ಕಳೆದ ರಾತ್ರಿ ಊಟ ಮುಗಿಸಿ ವೇಳೆ ಎಂದಿನಂತೆ ಮನೆಯ ಮುಂದೆ ಕಟೆಯ ಮೇಲೆ ಮಲಗಿದ್ದರು. ಸಮಯ ಸಾಧಿಸಿ ಬಂದ ದುಷ್ಕರ್ಮಿಗಳು ಅವರ ಕತ್ತು ಕೊಯ್ದು ಪರಾರಿಯಾಗಿದ್ದಾರೆ. ನಿದ್ರೆಯಲ್ಲಿದ್ದಾಗ ಏಕಾಏಕಿ ಈ ಕೃತ್ಯ ನಡೆದಿದ್ದರಿಂದ ಇಸ್ಮಾಯೀಲ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮಾಹಿತಿ ತಿಳಿದ ಕೂಡಲೇ ದೇವರಹಿಪ್ಪರಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳದಲ್ಲಿ ಮಹಜರು ನಡೆಸಿರುವ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ದೇವರಹಿಪ್ಪರಗಿ ಠಾಣಾ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.




