Vijayapura | ಕಳವು, ವಂಚನೆ ಪ್ರಕರಣ: 14 ಮಂದಿಯ ಬಂಧನ; 1.17 ಕೋಟಿ ರೂ. ಮೌಲ್ಯದ ಸೊತ್ತು ವಶ

ವಿಜಯಪುರ: ವಿಜಯಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾದ 48 ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 14 ಜನ ಅಂತರ ರಾಜ್ಯ ಹಾಗೂ ಅಂತರ ಜಿಲ್ಲಾ ಆರೋಪಿತಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ ಅಂದಾಜು 65 ಲಕ್ಷ ರೂ. ಮೌಲ್ಯದ 426.2 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು 20 ಲಕ್ಷ ರೂ. ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ಹಾಗೂ 39 ಮೋಟಾರ್ ಬೈಕ್‌ಗಳನ್ನು ಜಪ್ತಿ ಮಾಡಲಾಗಿದ್ದು, ಒಟ್ಟು 1,17,00,000 ರೂ. ಮೌಲ್ಯದ ವಸ್ತಗಳನ್ನು ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 48 ಪ್ರಕರಣ ಬೇಧಿಸುವಲ್ಲಿ ಇಲಾಖೆಯ ಸಿಬ್ಬಂದಿ ಪ್ರಯತ್ನ ಅನನ್ಯ, ಕಳೆದ ಕೆಲವು ದಿನಗಳಿಂದ ಸರಿಸುಮಾರು 2 ಕೋಟಿ ರೂ.ಗಳಷ್ಟು ಮೌಲ್ಯದ ನಗದು ಹಾಗೂ ಬಂಗಾರವನ್ನು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮರಳಿ ನೀಡುವಲ್ಲಿ ಇಲಾಖೆ ಯಶಸ್ವಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಎಸ್‌ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಟಿ.ಎಸ್. ಸುಲ್ಫಿ ಮುಂತಾದವರು ಇದ್ದರು.
ಮೋಟರ್ ಬೈಕ್ ಕಳ್ಳತನ: ಮೂವರ ಬಂಧನ
ನಾಗಠಾಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ವಿವಿಧ ಬೈಕ್ ಕಳ್ಳತನದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಸಿದ್ರಾಮ ಅರಕೇರಿ(25), ಮಂಜುನಾಥ ಉಕ್ಕಲಿ(29), ಆಕಾಶ ಮಠಪತಿ(20) ಎಂದು ಗುರುತಿಸಲಾಗಿದೆ. ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಮೋಟಾರ್ ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳಿಂದ 7 ಲಕ್ಷ ರೂ. ಮೌಲ್ಯದ ಒಟ್ಟು 20 ಮೋಟಾರ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಶೇಷ ಪೊಲೀಸ್ ತನಿಖಾ ತಂಡ ಅಲಿಯಾಬಾದ್ ಬಳಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಮೂವರು ವ್ಯಕ್ತಿಗಳು ಸಂಶಯಾಸ್ಪದವಾಗಿ ತಿರುಗಾಡುತ್ತಿರುವುದನ್ನು ನೋಡಿ ಅವರನ್ನು ವಿಚಾರಿಸಿದಾಗ ಸತ್ಯಾಂಶ ಹೊರಬಂದಿದೆ ಎಂದು ಅವರು ತಿಳಿಸಿದ್ದಾರೆ.
ಬಸ್‌ನಲ್ಲಿ ಚಿನ್ನ ಕಳ್ಳತನ ಪ್ರಕರಣ : ಐವರ ಬಂಧನ
ಕಳೆದ 2025 ರ ಮೇ 30 ರಂದು ವಿಜಯಪುರ-ತಾಳಿಕೋಟೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬಳಿ ಇದ್ದ 65 ಗ್ರಾಂ ಚಿನ್ನಾಭರಣವನ್ನು ಮನಗೂಳಿ ಬಳಿ ಕಳ್ಳತನ ಮಾಡಿದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಐದು ಆರೋಪಿಗಳನ್ನು ಬಂಧಿಸಿದ್ದಾರೆ. ಅರಕೇರಿ ಗ್ರಾಮದ ಪ್ರಕಾಶ ವೆಂಕಟೇಶ ಭೋಯ್ರ್(33), ಅಂಕುಶ ಸಾಹೇಬರಾವ್ ಜಾಧವ(40), ಗೋವರ್ಧನ ವಿಠ್ಠಲ ಪವಾರ(48), ರಜನಿ ಶಿವು ಭೋವಿ(38), ಮಂಜು ಪ್ರಶಾಂತ ಭೋಯ್ರ (30), ಶಿವು ರಾಜಣ್ಣ ಬೋವಿ(42) ಬಂಧಿತ ಆರೋಪಿಗಳು.
ಆರೋಪಿತರ ಪತ್ತೆಗಾಗಿ ರಚನೆ ಮಾಡಲಾಗಿದ್ದ ವಿಶೇಷ ತನಿಖಾ ತಂಡ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಮುಳವಾಡ ಕ್ರಾಸ್‌ನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಕಾರನ್ನು ನಿಲ್ಲಿಸಲು ಸೂಚಿಸಿದಾಗ, ಕಾರು ನಿಲ್ಲಿಸದೆ ಆರೋಪಿತರು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಕಾರನ್ನು ಹಿಂಬಾಲಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ನಡೆಸಿದಾಗ ಸತ್ಯಾಂಶ ಬಹಿರಂಗವಾಗಿದೆ ಎಂದು ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಬಂಗಾರದ ನಾಣ್ಯ ಹೆಸರಲ್ಲಿ ವಂಚನೆ : ನಾಲ್ವರ ಬಂಧನ
ನಿಧಿ ಇದೆ ಎಂದು ನಂಬಿಸಿ ಲಕ್ಷಾಂತರ ರೂ. ಹಣ ಪಡೆದಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷದ ಮೇ.8 ರಂದು ಈ ಪ್ರಕರಣ ದಾಖಲಾಗಿದ್ದು, ನಕಲಿ ಬಂಗಾರ ನಾಣ್ಯಗಳನ್ನು ಅಸಲಿ ಎಂದು ಯಾಮಾರಿಸಿ ದೂರುದಾರರಿಂದ 26 ಲಕ್ಷ ರೂ. ಹಣ ಪಡೆದುಕೊಂಡು ಮೋಸ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ವಿಜಯನಗರದ ಹಣಮಂತ ಯಾನೆ ಸಂತೋಷ ಲಾಲ ಮಾನಪ್ಪ ಯಾನೆ ಲಕ್ಷ್ಮಣ ಕೊರಚರ(28), ರಾಜಾ ಗೋವಿಂದ ಯಾನೆ ವೆಂಕಟೇಶ ಕಾವಾಡಿ(26), ಹರೀಶ ಚೌಡಪ್ಪ ಕೊರಚರ(30), ಚೀರಂಜೀವಿ ದುರ್ಗಪ್ಪ ಕೊರಚರ (27) ಎಂದು ಗುರುತಿಸಲಾಗಿದೆ. ಈ ಆರೋಪಿಗಳು ಮೋಸ ಮಾಡಿ ತೆಗೆದುಕೊಂಡು ಹೋದ 20 ಲಕ್ಷ ನಗದು ಹಣವನ್ನು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದರು.







