ಸುದೀರ್ಘ ಕಾಲದಿಂದ ಅವಕಾಶ ವಂಚಿತರಾಗಿರುವ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು : ಯಶವಂತರಾಯಗೌಡ ಪಾಟೀಲ್

ವಿಜಯಪುರ : ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಸೂತ್ರದನ್ವಯ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ ನ್ಯಾಯ ಒದಗಿಸಿರುವ ಮಾದರಿಯಲ್ಲೇ, ಸುದೀರ್ಘ ಕಾಲದಿಂದ ಅವಕಾಶ ವಂಚಿತರಾಗಿರುವ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು ಎಂದು ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಗೂ ಮುನ್ನ, ಅಂದರೆ 2023ರ ಫೆಬ್ರವರಿ 23ರಂದು ಜಿಲ್ಲೆಯ ಹಿರಿಯ ಶಾಸಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್, ಚುನಾವಣಾ ಸಮಿತಿ ಚೇರ್ಮನ್ ಎಂ.ಬಿ. ಪಾಟೀಲ್ ಹಾಗೂ ಶಾಸಕ ಶಿವಾನಂದ ಪಾಟೀಲ್ ಭಾಗವಹಿಸಿದ್ದರು. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಟ್ಟಾಗಿ ಶ್ರಮಿಸುವಂತೆ ಅಂದು ಸೂಚಿಸಲಾಗಿತ್ತು. ಅಲ್ಲದೆ, ಜಿಲ್ಲೆಯ ಇಬ್ಬರಿಗೆ ಈಗಾಗಲೇ ಸಚಿವ ಸ್ಥಾನ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ನಿಮಗೂ ಸಚಿವ ಸ್ಥಾನ ನೀಡಲಾಗುವುದು ಎಂದು ತಮಗೆ ಸ್ಪಷ್ಟ ಮಾತು ಕೊಡಲಾಗಿತ್ತು ಎಂದರು.
2013ರ ಸಿದ್ದರಾಮಯ್ಯ ಸರಕಾರದ ಮೊದಲನೇ ಅವಧಿಯಲ್ಲಿ ಕಾಂಗ್ರೆಸ್ ಅತ್ಯುತ್ತಮ ಆಡಳಿತ ನೀಡಿದೆ. ಮುಂದೆ ಮೈತ್ರಿ ಸರಕಾರದಲ್ಲಿ ಮಂತ್ರಿ ಸ್ಥಾನ ಪಡೆಯುವ ಆಸೆ ನನಗೂ ಇತ್ತು, ಬದಲಾದ ಸನ್ನಿವೇಶದಲ್ಲಿ 2023ರ ಚುನಾವಣೆಯ ನಂತರ ಸಚಿವರಾಗಬೇಕಿತ್ತು. ಆದರೆ ನಮ್ಮ ಮೂವರ ನಡುವೆ ಒಪ್ಪಂದ ಆದ ಹಿನ್ನೆಲೆ ಅವರಿಬ್ಬರನ್ನು ನಾನು ಬೆಂಬಲಿಸಿ ಅವರನ್ನು ಸಚಿವರನ್ನಾಗಿ ಮಾಡಿದೆ. ಆ ಒಪ್ಪಂದಂತೆ ಡಿಕೆಶಿ ಸಂಪುಟದಲ್ಲಿ ಮೊದಲ ಹಂತದಲ್ಲೇ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಈಗ ಸಂಪುಟ ವಿಸ್ತರಣೆಯಲ್ಲಿ ನನಗೆ ಅವಕಾಶ ಕಲ್ಪಿಸಬೇಕು ಎಂದರು.
ಅಧಿಕಾರ ಹಂಚಿಕೆಯ ಒಡಂಬಡಿಕೆಯಿಂದಲೇ ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ಸಿಕ್ಕಿದೆ. ಅದೇ ರೀತಿ ನಮಗೂ ಮಾತು ಕೊಡಲಾಗಿತ್ತು. ಅದರಂತೆ ಮೊದಲ ಹಂತದ ಸಚಿವ ಸಂಪುಟದಲ್ಲೇ ನನಗೆ ಅವಕಾಶ ಸಿಗಬೇಕಿತ್ತು. ಜೂನ್ 18ರಂದು ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆ ಮುಗಿದ ನಂತರ ಎರಡನೇ ಹಂತದ ಸಚಿವ ಸಂಪುಟ ರಚನೆಯಾಗಲಿದ್ದು, ಪಕ್ಷ ಅಧಿಕಾರಕ್ಕೆ ಬರುವ ಮುನ್ನ ವರಿಷ್ಠರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ಅಚಲ ವಿಶ್ವಾಸ ನನಗಿದೆ ಎಂದರು.
ಕಳೆದ 80 ವರ್ಷಗಳಿಂದ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಇದರಿಂದ ಕ್ಷೇತ್ರದ ಜನತೆ ಬೇಸತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ ಮತದಾರರು ಸಹ ಕ್ಷೇತ್ರಕ್ಕೆ ಯಾಕೆ ಸಚಿವ ಸ್ಥಾನ ಸಿಗುತ್ತಿಲ್ಲ ಎಂದು ಚರ್ಚಿಸುತ್ತಿದ್ದಾರೆ. ಆದ್ದರಿಂದ ಹೈಕಮಾಂಡ್ ತಮಗೆ ಸಚಿವ ಸ್ಥಾನ ನೀಡುವ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿ ಹೊಸ ನಾಯಕತ್ವವನ್ನು ಸೃಷ್ಟಿ ಮಾಡಬೇಕು ಎಂದರು.






