Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ‘ಜುಗಾರಿ ಕ್ರಾಸ್’ ಮತ್ತು ರಾಕ್ಷಸ ಪ್ರಪಂಚ

‘ಜುಗಾರಿ ಕ್ರಾಸ್’ ಮತ್ತು ರಾಕ್ಷಸ ಪ್ರಪಂಚ

ಇಂದು ತೇಜಸ್ವಿ ಜನ್ಮದಿನ

ವಾರ್ತಾಭಾರತಿವಾರ್ತಾಭಾರತಿ8 Sept 2023 10:47 AM IST
share
‘ಜುಗಾರಿ ಕ್ರಾಸ್’ ಮತ್ತು ರಾಕ್ಷಸ ಪ್ರಪಂಚ
ಇಂದು ಕನ್ನಡದ ಹಿರಿಯ ಲೇಖಕ, ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನ. ಅವರ ಪ್ರಸಿದ್ಧ ಕಾದಂಬರಿ ‘ಜುಗಾರಿ ಕ್ರಾಸ್’ ಬಗ್ಗೆ ನಾಡಿನ ಮತ್ತೊಬ್ಬ ಹಿರಿಯ ಲೇಖಕ, ಚಿಂತಕ ಪಿ. ಲಂಕೇಶ್ರವರು ಎಪ್ರಿಲ್ 5, 1995ರಂದು ಬರೆದ ಟಿಪ್ಪಣಿಯನ್ನು ತೇಜಸ್ವಿ ಜನ್ಮದಿನದ ಹಿನ್ನ್ನೆಲೆಯಲ್ಲಿ ಇಲ್ಲಿ ನೀಡಲಾಗಿದೆ.


ದಿನಕಳೆದಂತೆ ಈ ದೇಶದ ರಾಜಕೀಯ ಹದಗೆಡುತ್ತಿರುವುದು ಮಾತ್ರ ನಿಜ. ಕಾಂಗ್ರೆಸ್ ಪಕ್ಷವನ್ನೇ ನೋಡಿ (ಈ ಬಗ್ಗೆ ಒಂದು ಪ್ರತ್ಯೇಕ ಟೀಕೆ-ಟಿಪ್ಪಣಿ ಬರೆಯಬೇಕೆಂದಿದ್ದೇನೆ). ಅದರ ಹುಟ್ಟು, ಬೆಳವಣಿಗೆ ಮತ್ತು ಅವನತಿಯನ್ನು ಅವಲೋಕಿಸಿದರೇ ಈ ದೇಶಕ್ಕಾಗಿರುವುದು ತಿಳಿಯುತ್ತದೆ. ಕಾಂಗ್ರೆಸ್ ಪಕ್ಷವನ್ನೊಳಗೊಂಡ ಯಾವುದೇ ಮುಖ್ಯ ರಾಜಕೀಯ ಪಕ್ಷದಲ್ಲಿಯೂ ಇವತ್ತು ಯಾವ ಗುಂಪೂ ವ್ಯಕ್ತಿಯ ಚಾರಿತ್ರ್ಯ, ಆಡಳಿತದ ಪರಿಶುದ್ಧತೆ, ನೈತಿಕ ಮಾರ್ಗೋಪಾಯಗಳ ಬಗ್ಗೆ ಮಾತಾಡುತ್ತಿಲ್ಲ. ಪಕ್ಷಗಳ ಪ್ರಣಾಳಿಕೆಗಳಲ್ಲಿ ಕೂಡ ಕಾರ್ಯಸಾಧ್ಯವಾದ ಉದ್ದೇಶಗಳು ಮತ್ತು ಮೈಗೂಡಿಸಿಕೊಳ್ಳಬೇಕಾದ ಆದರ್ಶಗಳ ಬಗ್ಗೆ ಮಾತುಗಳಿಲ್ಲ. ಇದಕ್ಕೆ ಸರಿಯಾಗಿ ಅಂತರ್ರಾಷ್ಟ್ರೀಯ ಉದ್ಯಮಿಗಳು ಮತ್ತು ದಲ್ಲಾಳಿಗಳು ಮುಕ್ತ ಆರ್ಥಿಕತೆಯ ಹೆಸರಲ್ಲಿ ದರೋಡೆಯನ್ನೂ ಕಿಸೆಗಳ್ಳತನವನ್ನೂ ಆರ್ಥಿಕ ಕ್ರಮವಾಗಿ ಸಮರ್ಥಿಸಿಕೊಳ್ಳುವುದು ಕಂಡುಬರುತ್ತಿದೆ. ಕಮ್ಯುನಿಸಂ ಸರಕಾರೀಕರಣವಾಗಿ ಮಣ್ಣುಮುಕ್ಕಿರುವಾಗ ಹಣ ಮಾಡಬಲ್ಲವನೇ ಉದ್ಯಮಲೋಕದ ಪ್ರತಿಭಾವಂತನಾಗಿ ಕಾಣುತ್ತಿದ್ದಾನೆ. ಈ ಸಂದರ್ಭದಲ್ಲಿ ನಾನು ನಮ್ಮಲ್ಲೀಗ ಬಂದಿರುವ ಒಂದು ಕಾದಂಬರಿಯತ್ತ ನಿಮ್ಮ ಗಮನ ಸೆಳೆಯಲು ಪ್ರಯತ್ನಿಸುತ್ತೇನೆ. ‘ಜುಗಾರಿ ಕ್ರಾಸ್’ ಎಂಬ ತೇಜಸ್ವಿಯವರ ಕಾದಂಬರಿಯನ್ನು ತರುಣ ವಿಮರ್ಶಕರೊಬ್ಬರು ನಮ್ಮಲ್ಲೇ ವಿಮರ್ಶಿಸಿದ್ದಾರೆ. ಅನಂತಮೂರ್ತಿಯವರ ‘ಭವ’ ಕಾದಂಬರಿಯನ್ನು ಕುರಿತು ನಾನಾಗಲೇ ಬರೆದಿದ್ದೇನೆ. ‘ಭವ’ ಕಾದಂಬರಿ ಮನುಷ್ಯನ ಹುಟ್ಟು ಮತ್ತು ಆಚರಣೆಯ ಬಗ್ಗೆ ಚಿಂತಿಸಿದ ಕೃತಿ. ಇಲ್ಲಿ ವಂಶದ ಬಗ್ಗೆ ಆಸಕ್ತಿಯುಳ್ಳವರೊಬ್ಬರು ಪ್ರೇಮ ಮತ್ತು ಕಾಮದ ವಿವಿಧ ಅಭಿವ್ಯಕ್ತಿಯನ್ನು ನೀಡಲು ಯತ್ನಿಸಿದ್ದಾರೆ. ತನ್ನ ಮೂಲವನ್ನು ಹುಡುಕಿ ಹೊರಟವನೂ ತನ್ನ ಮಕ್ಕಳ ಜನ್ಮದಾತರನ್ನು ಕಾಣಲು ಯತ್ನಿಸುವವನೂ ಸಮಾನವಾಗಿಯೇ ಓದುಗರ ತಾತ್ಸಾರಕ್ಕೆ ಒಳಗಾಗುತ್ತಾನೆ: ಯಾಕೆಂದರೆ ಈ ಬಗೆಯ ದೈಹಿಕ, ಮಾನಸಿಕ ವ್ಯಾಪಾರಗಳನ್ನು ಕಾಣಲು ಬೇಕಾದ ಕುತೂಹಲವಾಗಲಿ, ಶೋಧನೆಯ ವಿವರಗಳನ್ನು ನೀಡುವ ಸಾಮರ್ಥ್ಯವಾಗಲಿ ಇಲ್ಲಿ ಕಂಡುಬರುವುದಿಲ್ಲ. ‘ಭವ’ ಕಾದಂಬರಿಯ ದೌರ್ಬಲ್ಯಕ್ಕೆ ಬೇರೆ ಬೇರೆಯವರು ಏನು ವಿವರಣೆ ಕೊಡುತ್ತಾರೆಂಬುದೇ ನನಗಿನ್ನೂ ಗೊತ್ತಾಗಿಲ್ಲ. ಆದ್ದರಿಂದ ಈ ಕಾದಂಬರಿ ಓದಿದಾಗ ನನಗಾದ ಅತೃಪ್ತಿಯನ್ನು ಸರಿಯಾಗಿ ಹೇಳಿದ್ದೇನೆಂಬ ಬಗ್ಗೆಯೇ ನನಗೆ ಅನುಮಾನವಿದೆ.

ತೇಜಸ್ವಿಯವರ ‘ಜುಗಾರಿ ಕ್ರಾಸ್’ ಇನ್ನೊಂದು ರೀತಿಯಲ್ಲಿ ಇಷ್ಟೇ ಅತೃಪ್ತಿ ನೀಡುವ ಕಾದಂಬರಿ, ಅನಂತಮೂರ್ತಿಯವರ ಕತೆ, ಕಾದಂಬರಿಗಳನ್ನು ಓದಿದವರಿಗೆ ‘ಭವ’ ಕಾದಂಬರಿ ತನ್ನ ಜೀವರಹಿತ ಸ್ಥಿತಿಯಿಂದ ನೀಡುವ ಶಾಕ್, ಇಲ್ಲಿ ತೇಜಸ್ವಿಯವರ ಕತೆ, ಕಾದಂಬರಿಗಳನ್ನು ಓದಿದವರಿಗೆ ಆಗುವುದಿಲ್ಲ. ಇದಕ್ಕೆ ಕಾರಣ ತೇಜಸ್ವಿ ತಮ್ಮ ಎಂದಿನ ಕಾಳಜಿಗಳ ಹತ್ತಿರವೇ ಇದ್ದು ತಮ್ಮ ದಿಗ್ಭ್ರಮೆಗಳನ್ನು ನೀಡಲು ಯತ್ನಿಸಿದ್ದಾರೆ. ಅವರೇ ತಮ್ಮ ‘ಮುನ್ನುಡಿ’ಯಲ್ಲಿ ಹೇಳುವಂತೆ, ‘‘ಕಾಡುಗಳು ಇವತ್ತು ಬಾಗಿಲು ತೆರೆದಿಟ್ಟ ಖಜಾನೆಗಳಾಗಿವೆ. ಈ ಕಾಡುಗಳ ಒಂದೊಂದೇ ಮರ ಎರಡು ಮೂರು ಲಕ್ಷ ರೂ. ಬೆಲೆ ಬಾಳುತ್ತದೆ. ಕಲ್ಲು ಕಳ್ಳರಿಗೆ, ಮರಗಳ್ಳರಿಗೆ, ಗಂಧ ಚಕ್ಕೆ ಕಳ್ಳ ಸಾಗಣೆ ಮಾಡುವ ಖದೀಮರಿಗೆ ಕಣ್ಣು ಹರಿಸಿದಲ್ಲೆಲ್ಲಾ ಹಣ ರಾಶಿ ಬಿದ್ದಿರುವಂತೆ ಕಾಣುತ್ತದೆ. ದುಡ್ಡು ಈ ರೀತಿ ಕೋಡಿ ಬಿದ್ದಿರುವಲ್ಲೆಲ್ಲಾ ಏನೇನು ರೂಪುಗೊಳ್ಳುತ್ತದೆಯೋ ಅದೆಲ್ಲ ಸಹ್ಯಾದ್ರಿಯ ಕಾಡಿನೊಳಗೆ ಶುರುವಾಗಿದೆ. ಕಾಡು ಕಾಳದಂಧೆಗಳ ತವರುಮನೆಯಾಗುತ್ತಿದೆ. ಕಾಡಿನಿಂದ ಉತ್ಪತ್ತಿಯಾಗುತ್ತಿರುವ ಕಾಳಧನ ನಮ್ಮ ದೇಶದ ಅತ್ಯುನ್ನತ ರಾಜಕೀಯವನ್ನು ಸಹ ನಿಯಂತ್ರಿಸುತ್ತಿದೆ. ಇಲ್ಲಿ ಕಟ್ಟುವ ಅಣೆಕಟ್ಟುಗಳಾಗಲಿ, ಮುಳುಗಡೆಯಾಗುವ ಕಾಡುಗಳಾಗಲಿ, ಕಲ್ಲು, ಅದಿರುಗಳನ್ನು ತೆಗೆಯುವುದಾಗಲಿ ಜನಗಳಿಗಿಂತ ಹೆಚ್ಚಾಗಿ ರಾಜಕಾರಣಿಗಳಿಗೂ ರಾಜಕೀಯಕ್ಕೂ ಅಗತ್ಯವಾಗತೊಡಗಿದೆ. ಕಾಳವ್ಯವಹಾರಗಳ ವಿಷವೃತ್ತ ಈ ಮಟ್ಟ ತಲುಪಿದ ಮೇಲೆ ಕಾನೂನು ಮತ್ತು ನ್ಯಾಯಾಲಯಗಳು ಇದನ್ನು ಪ್ರತಿರೋಧಿಸಲಾರವು. ಜನಸಮಷ್ಟಿಯ ದೃಢನಿಶ್ಚಯ ಒಂದೇ ರಕ್ಷೆ...

‘‘ಇದೆಲ್ಲ ಈ ಕಥಾಭಿತ್ತಿಯ ಹಿನ್ನೆಲೆಯಷ್ಟೆ. ಒಂದು ಕಲಾಕೃತಿ ಓದುಗರ ಮನದಲ್ಲಿ ಅನುರಣಿಸುವ ನೂರಾರು ಅಂಶಗಳಲ್ಲಿ ಇದು ಒಂದಲ್ಲದೆ ಈ ಹಿನ್ನೆಲೆಗೆ ಕಲಾಕೃತಿಯೊಳಗೆ ಮತ್ತಾವ ಹೆಚ್ಚಿನ ಪ್ರಾಧಾನ್ಯತೆಯೂ ಇಲ್ಲ.’’

ಹೀಗೆ ತೇಜಸ್ವಿಯವರು ‘ಜುಗಾರಿ ಕ್ರಾಸ್’ ಕತೆಗೆ ಮುನ್ನುಡಿಯಾಗಿ ಬರೆದಿದ್ದಾರೆ. ಇಲ್ಲಿ ನಡೆಯುವ ಕತೆ ಕೂಡ ಸರಳವಾಗಿದ್ದು ಘಟನಾವಳಿಗಳು ಮತ್ತು ವ್ಯಕ್ತಿಗಳು ತೇಜಸ್ವಿಯವರ ಕೃತಿಗಳಲ್ಲಿ ಆಗಲೇ ಒಂದಲ್ಲ ಒಂದು ರೂಪದಲ್ಲಿ ಬಂದಿವೆ. ಸುರೇಶ ‘ಚಿದಂಬರ ರಹಸ್ಯ’ದಲ್ಲಿ ಬರುವ ಹಾಸ್ಯಪ್ರಜ್ಞೆ ಯುಳ್ಳ, ಈ ದೇಶದ ರಾಜಕೀಯ, ಸಾಮಾಜಿಕ ವಲಯಗಳ ಬಗ್ಗೆ ರೋಸಿಹೋಗಿ ಕ್ರಾಂತಿಯ ಕನಸು ಕಾಣುತ್ತಲೇ ಇಲ್ಲಿಯ ಅಗ್ನಿಭಕ್ಷಕರ ಹಾಸ್ಯಾಸ್ಪದ ಕ್ರಮಗಳು ಮತ್ತು ಪುರೋಗಾಮಿಗಳ ದ್ವಂದ್ವಗಳ ಬಗ್ಗೆ ಹತಾಶೆಯನ್ನನುಭವಿಸುತ್ತಲೇ ಅವರ ಸ್ನೇಹದಿಂದಾಗಿಯೋ, ಪರಿಚಯದಿಂದಾಗಿಯೋ ಅವರ ಲೋಕದಲ್ಲಿ ಉಡುಗಿಹೋಗಬಲ್ಲ ಮನುಷ್ಯ. ಸುರೇಶ್ನಂಥವರಿಗೆ ದೆವ್ವ ಭೂತಗಳ ಬಗ್ಗೆ ಕುತೂಹಲ ಮತ್ತು ಉಗ್ರಗಾಮಿಗಳ ಬಗ್ಗೆ ಭಯ ಇರುತ್ತದೆ; ಇದು ‘ಚಿದಂಬರ ರಹಸ್ಯ’ದಲ್ಲಿ ಮೈದೋರಿದ ವಸ್ತು, ಇಲ್ಲಿ ಕೂಡ ಅದು ಒಂದು ರೀತಿಯಲ್ಲಿ ಮುಂದುವರಿದಿದೆ. ಆತ ಅದೆಂತೋ ಅಲೆದಾಡುತ್ತಾ ಜುಗಾರಿ ಕ್ರಾಸ್ಗೆ ಬಂದು ದೊಡ್ಡ ಎಸ್ಟೇಟೊಂದರ ಡೈರೆಕ್ಟರ್ ಮಗಳಾದ ಗೌರಿಯನ್ನು ವರಿಸುತ್ತಾನೆ. ಈತ ಮದುವೆಯಾಗುವುದು, ಏಲಕ್ಕಿ ಬೆಳೆದು ಅದರ ಬೆಲೆಯ ಏರಿಳಿತದಲ್ಲಿ ನುಚ್ಚುನೂರಾಗುವುದು, ಅಂತರ್ರಾಷ್ಟ್ರೀಯ ಮಾರ್ಕೆಟ್ ಮೂಡ್ಗೆ ಸರಿಯಾಗಿ ಏಲಕ್ಕಿ ಬೆಲೆ ಗಗನಕ್ಕೇರಿ ಅದರ ವ್ಯಾಪಾರದ ನೆಪದಲ್ಲಿಯೇ ಜುಗಾರಿ ಕ್ರಾಸ್ಗೆ ದಾಳಿ ಇಡುವ ಜೀವನ್ ಲಾಲ್ ಮತ್ತು ಅವನ ಗ್ಯಾಂಗ್, ಚೆಕ್ಗಳನ್ನು ಕ್ಯಾಶ್ ಮಾಡಿಕೊಡುವ ಶೇಷಪ್ಪ-ಇವರೆಲ್ಲರ ನೆರಳುಗಳಂತಿರುವ ಕಳ್ಳಸಾಗಣೆಯವರು, ದಲ್ಲಾಳಿಗಳು, ರೌಡಿಗಳು, ಕೊಲೆಗಡುಕರು ಇವರು ಲೇಖಕರ ಮನಸ್ಸಿನಲ್ಲಿ ನಿಗೂಢ ಅಪಾಯಕರ ಲೋಕವೊಂದನ್ನು ಸೃಷ್ಟಿಸುತ್ತಾರೆ. ಇದೆಲ್ಲದರ ಮಧ್ಯೆ ಜೂಜುಕೋರನಾದ ರಾಜಪ್ಪ ತನ್ನ ವಿದ್ಯಾಭ್ಯಾಸಕ್ಕೆ ವಿರುದ್ಧವಾದ ಕೆಲಸವೊಂದನ್ನು ಹಿಡಿದು ‘ವಿಶ್ವೇಶ್ವರ ಸೆಕ್ಯೂರಿಟೀಸ್’ ಎಂಬ ಪ್ರೈವೇಟ್ ಡಿಟೆಕ್ಟಿವ್ ಏಜನ್ಸಿಯೊಂದನ್ನು ತೆರೆದುಕೊಂಡು ದುಡ್ಡಿನ ಆಸೆಗೆ ಕೈಗೆ ಸಿಕ್ಕ ಹಳಗನ್ನಡದ ಗುರುರಾಜ ಕವಿಯ ಕಗ್ಗದಂಥ ಕಾವ್ಯದ ಪ್ರತಿ ಹಿಡಿದು ಓಡಾಡುತ್ತಿದ್ದಾನೆ ಇದು ‘ದ್ವಿಸಂಧಾನ’-ಅಂದರೆ ಎರಡರ್ಥಗಳ ಕಾವ್ಯ! ಕಾಡು, ಏಲಕ್ಕಿ, ಕಳ್ಳದಂಧೆಯೊಳಕ್ಕೆ ಹಳಗನ್ನಡ ಕಾವ್ಯ ಕೂಡ ಸೇರಿಕೊಂಡು ಜೀವನ್ಲಾಲ್ ಎಂಬುವವನ ಗ್ಯಾಂಗ್ ಜುಗಾರಿ ಕ್ರಾಸ್ನ ಹತ್ತಿರದ ಗುಡ್ಡದಲ್ಲಿನ ರತ್ನಕ್ಕಾಗಿ ಹುಡುಕುತ್ತಿರುವ ಅನುಮಾನ ಶುರುವಾಗುತ್ತದೆ. ಏಲಕ್ಕಿಯಿಂದ ಬಂದ ಹಣ ಕಳ್ಳಹಣದೊಂದಿಗೆ ಮಿಶ್ರಣಗೊಂಡು ಸುರೇಶ್ ಮತ್ತು ಗೌರಿ ಈ ಜೀವನ್ಲಾಲ್ ಹಗರಣದಲ್ಲಿ ಸೇರಿಹೋದ ಭಯ ಅವರನ್ನು ಆವರಿಸುತ್ತದೆ.

ಈ ಕಾದಂಬರಿಯ ಕಷ್ಟ ಏನೆಂದರೆ ಇದು ಕಾರ್ಯಕಾರಣ ಮಟ್ಟದಲ್ಲಿ ಓದುಗರನ್ನು ನಂಬಿಸಲೆತ್ನಿಸಿದರೂ ಹಲವಾರು ಪ್ರಶ್ನೆಗಳು ಉಳಿಯುತ್ತವೆ. ಗೌರಿಯ ಅಸಹಾಯಕತೆ ಕೃತಕವಾಗಿ ಕಾಣುವುದು ಹೀಗೆ: ಸುರೇಶ್ ಮತ್ತು ಗೌರಿಯ ಒಡನಾಟದಲ್ಲಿ ಪ್ರೀತಿ ಅಥವಾ ಆತಂಕದ ತೀವ್ರತೆ ಇಲ್ಲವಾಗುತ್ತದೆ. ಹಾಗೆಯೇ ಜೀವನ್ ಲಾಲ್, ಶೇಷಪ್ಪ ಮುಂತಾದವರ ಬಗ್ಗೆ ಓದುತ್ತಾ ಹೋದಂತೆ ಲೇಖಕರು ಇದೂ ನನಗೆ ಗೊತ್ತು ಎಂದು ಅಂತರ್ರಾಷ್ಟ್ರೀಯ ಕಳ್ಳರ ಜಾಲ ವರ್ಣಿಸುತ್ತಿದ್ದಾರೆ ಎನ್ನಿಸುತ್ತದೆಯೇ ಹೊರತು ಇಡೀ ದುರಂತವನ್ನು ಒಂದು ಗೊತ್ತಾದ ವ್ಯಕ್ತಿಗಳ ಪರಿಸ್ಥಿತಿಯ ಮೂಲಕ ಮಂಡಿಸುವ ಕ್ರಿಯಾಶೀಲತೆ ಕಾಣುವುದಿಲ್ಲ. ಇಲ್ಲಿಯ ಪತ್ತೇದಾರಿ ಕತೆಯ ಹಂದರವನ್ನು ಕುರಿತು ಒತ್ತುಕೊಟ್ಟು ನಾನು ಹೇಳಬೇಕಾಗಿಲ್ಲ.

‘ಜುಗಾರಿ ಕ್ರಾಸ್’ ಕಾದಂಬರಿಯ ಮಾತುಗಾರಿಕೆ, ಜಾಣ ವರ್ಣನೆಗಳು, ಅಲ್ಲಲ್ಲಿ ಮಾತ್ರ ಬರುವ ತಮಾಷೆ ಮಾತುಗಳು ಇವೆಲ್ಲಕ್ಕಿಂತ ಮುಖ್ಯವಾಗಿ ಲೇಖಕರ ಗಮನ ಪ್ರಕೃತಿ ಮತ್ತು ಸಹಜಜೀವಿಗಳನ್ನು ನುಂಗಿಹಾಕುತ್ತಿರುವ ರಾಕ್ಷಸತ್ವ (evil)ದ ಮೇಲೆ ಇದೆ. ಇದರ ಬೃಹತ್ ರೂಪ ಇಲ್ಲಿ ಕಾಣಿಸಿಕೊಳ್ಳುತ್ತದೆ; ಆದರೆ ಈ ರಾಕ್ಷಸತ್ವದ ವಿನಾಶಕಾರಿ ಶಕ್ತಿ ಪರಿಣಾಮಕಾರಿಯಾಗಿ ಮೂಡುವುದಿಲ್ಲ. ಇದಕ್ಕೆ ನನಗೆ ಕೂಡಲೇ ತೋರುವ ಕಾರಣಗಳನ್ನು ಇಲ್ಲಿ ಕಾಣಿಸಬಹುದು. ಈಗಾಗಲೇ ಸೂಚಿಸಿದಂತೆ ಇಲ್ಲಿಯ ಸುರೇಶ್ ಮತ್ತು ಗೌರಿ ಇವರಿಗೆ ಹಣ ಕಳೆದುಕೊಳ್ಳುವ, ಪ್ರಾಣ ಬಿಡಬೇಕಾಗುವ ಭಯ ಕಾಡುತ್ತಿದೆ. ಅವರು ಸಮಾಜದಲ್ಲಿ ಸ್ಥಾಪಿತರಾಗಿರುವ ರೀತಿಯಲ್ಲಿ ಆ ಭಯಕ್ಕೆ ಕೂಡ ಮೇಲಾಗಿ ಅವರ ಪಾತ್ರಗಳ ಸೃಷ್ಟಿ ಕೂಡ ವಿಶಿಷ್ಟ ರೀತಿಯಲ್ಲಿ ಇಲ್ಲ. ಹೆಗ್ಗಡತಿಯ ದುರಂತ ಅಥವ ಚೋಮನ ಸ್ಥಿತಿಯನ್ನು ಅಭ್ಯಸಿಸಿದವರಿಗೆ ಇದನ್ನು ವಿವರಿಸಬೇಕಾದ್ದಿಲ್ಲ. ತೇಜಸ್ವಿಯವರದೇ ಕತೆಯಾದ ‘ಅವನತಿ’ ಕತೆಯಲ್ಲಿನ ಸೂರಾಚಾರಿ ಮತ್ತು ಗೌರಿ ಮುಟ್ಟುವ ದುರಂತಮಯ ಅಧೋಗತಿಯ ಸೂಕ್ಷ್ಮಗಳನ್ನು ಕಂಡವರಿಗೆ ನಾನು ಹೇಳುತ್ತಿರುವುದು ಅರ್ಥವಾಗುತ್ತದೆ. ‘ಜುಗಾರಿ ಕ್ರಾಸ್’ನಲ್ಲಿ ಮೇದಾರರ ಉದ್ಯೋಗ ಪ್ಲಾಸ್ಟಿಕ್ ಆಗಮನದಿಂದ ನಾಶವಾದದ್ದು ಕೂಡ ತುಕ್ಕು ಹಿಡಿದ ಸರಕಿನಂತಿದೆ: ಹೆದ್ದಾರಿಯ ಮಗ್ಗುಲಲ್ಲಿ ರಂಜದ ಹೂವು ಹಿಡಿದು ನಿಲ್ಲುವ ಮೂಕಿಯಾದ ಹುಡುಗಿಯ ಸ್ಥಿತಿ ಕೂಡ ತನ್ನೆಲ್ಲ ಅಸಹಾಯಕತೆಯೊಂದಿಗೆ ಬರುವುದಿಲ್ಲ. ಇವೆಲ್ಲವೂ ಮಾತುಗಳ ಮಧ್ಯೆ ಹೂತುಹೋದಂತಿವೆ. ಇಲ್ಲಿ ಲೇಖಕರೇ ‘ಜುಗಾರಿ ಕ್ರಾಸ್’ನ ವಸ್ತು ಕುರಿತು ಹೇಳಿರುವುದರಿಂದ ಮತ್ತು ಕಾದಂಬರಿಯ ಲಕ್ಷ್ಯವೇ ಈ evil ನಲ್ಲಿ ಕೇಂದ್ರೀಕೃತವಾಗಿರುವುದರಿಂದ ಇದನ್ನು ವಿವರಿಸಬೇಕಾಗಿದೆ. ಇಲ್ಲಿ ವರ್ಣಿತವಾಗಿರುವುದೆಲ್ಲ ಇವತ್ತು ನಮ್ಮ ಕಣ್ಣೆದುರೇ ಆಗುತ್ತಿರುವ ಸಂಗತಿಗಳಾಗಿದ್ದರೂ ಸಾಹಿತ್ಯಕೃತಿಯಲ್ಲಿ ಅವೆಲ್ಲ ಅವತರಿಸುವ ಬಗ್ಗೆ ಪರಿಶೀಲಿಸಬೇಕಾಗುತ್ತದೆ. ‘ಅನ್ನ ಕರೇನಿನಾ’ ಕೃತಿಯ ವಸ್ತು ಕೂಡ ದ್ರೋಹ ಮತ್ತು ವ್ಯಭಿಚಾರ. ಇದು ಅನ್ನ ಕರೇನಿನಾಳ ವ್ಯಭಿಚಾರವಾಗಿದ್ದರೂ ಅವಳನ್ನು ಮೀರಿದ ಶಕ್ತಿಯಾಗಿ ಬರುತ್ತದೆ: ಅವಳ ಪರಿಸರದಲ್ಲಿ ಕೂಡ ಈ evil ನ ಬೀಜಗಳಿವೆ. ಅವಳ ಪಾತ್ರದಲ್ಲಿ ಈ ಪ್ರಕೃತಿಯ ದುಷ್ಟಶಕ್ತಿ ಸಹಜಧೂರ್ತತನವಾಗಿ ಮೂಡುತ್ತದೆ. ಕಾಮುನ ‘ಔಟ್ಸೈಡರ್’ ಕಾದಂಬರಿಯ ಕೆಡಕು ಕೇವಲ ಒಂದು ವಾತಾವರಣದ ಜಡತ್ವವಾಗಿ ಮೂಡದೆ ಒಬ್ಬ ವ್ಯಕ್ತಿ ಇತರರ ಬಗ್ಗೆ ವರ್ತಿಸುವ ವಿವರವಾಗಿ ಮೂಡಿಬರುತ್ತದೆ. ಇದನ್ನೆಲ್ಲ ಚಿಂತಿಸುವಾಗ ನನಗೆ ಇದ್ದಕ್ಕಿದ್ದಂತೆ ನಾನೇ ಈ ‘evil’ ಕುರಿತು ಬರೆದಂತಿದೆಯಲ್ಲ ಎಂದು ಕುತೂಹಲಗೊಂಡು ನೋಡಿದೆ. ನನ್ನ ಮೂರನೆಯ ಚಿಕ್ಕ ಕಾದಂಬರಿಯ ವಸ್ತು ಇದೇ. ಆ ನನ್ನ ಕೃತಿಯಲ್ಲಿ ಏನಾಗಿದೆಯೋ ನನಗೆ ಗೊತ್ತಾಗುತ್ತಿಲ್ಲ.

‘ಜುಗಾರಿ ಕ್ರಾಸ್’ನಲ್ಲಿ ಕಾದಂಬರಿಯೊಂದರ ಎಲ್ಲ ಪರಿಕರಗಳಿದ್ದರೂ ಅತೃಪ್ತಿಯನ್ನುಂಟು ಮಾಡುವುದಕ್ಕೆ ಕಾರಣವೇನು ಎಂದು ಕೇಳಿಕೊಂಡು ಹುಡುಕಾಡಿದಾಗ ಮೇಲಿನ ಅಂಶಗಳನ್ನು ಹೇಳಬೇಕೆನ್ನಿಸಿ ಬರೆಯುತ್ತಿದ್ದೇನೆ. ‘ಭವ’ ಒಂದು ದಿಕ್ಕಿನಲ್ಲಿ, ‘ಜುಗಾರಿ ಕ್ರಾಸ್’ ಇನ್ನೊಂದು ದಿಕ್ಕಿನಲ್ಲಿ ಕೆಲಸ ಮಾಡುವ ಕೃತಿಗಳು. ಇವೆರಡಕ್ಕೂ ಸಮಾನವಾದ ಸರಕುಗಳು ಕಡಿಮೆ. ಒಂದು ರೀತಿಯಲ್ಲಿ ಮಹತ್ವಾಕಾಂಕ್ಷೆಯ, ಪರಿಸರಕ್ಕೆ ಸ್ಪಂದಿಸಿ ಬರೆದಂತಿರುವ ಈ ಕೃತಿಗಳು ನಮ್ಮಲ್ಲಿ ಉಂಟು ಮಾಡುವ ಭಾವನೆಗಳನ್ನು ಹೇಳಿಬಿಡುವುದು ಸಮಕಾಲೀನ ಕೃತಿರಚನೆಯ ದೃಷ್ಟಿಯಿಂದ ಒಳ್ಳೆಯದೆಂದು ನನಗನ್ನಿಸಿದೆ. ಅದಕ್ಕೇ ಈ ಟಿಪ್ಪಣಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X