ಮಾನ್ಸೂನ್ ಅಧಿವೇಶನ : ಕಾನೂನು ಸಂಸದೀಯ ವ್ಯವಹಾರಗಳ ಸಚಿವಾಲಯದಿಂದ ಸಚಿವ ಸಂಪುಟಕ್ಕೆ ಪ್ರಸ್ತಾವ

Photo: PTI
ಬೆಂಗಳೂರು : ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ನ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿರುವ ಅಧಿವೇಶನವನ್ನೇ ವಿಸ್ತರಿಸಬೇಕೇ ಅಥವಾ ಮಾನ್ಸೂನ್ ಅಧಿವೇಶನಕ್ಕೆ ದಿನಾಂಕ, ಸ್ಥಳ ನಿಗದಿಗೊಳಿಸಬೇಕೇ ಎಂಬ ಕುರಿತು ಕಾನೂನು ಸಂಸದೀಯ ವ್ಯವಹಾರಗಳ ಸಚಿವಾಲಯವು ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಿದೆ.
ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಮೊದಲ ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿದೆ. ಆದರೆ ಕಾನೂನು ಸಂಸದೀಯ ವ್ಯವಹಾರಗಳ ಖಾತೆಗೆ ಇನ್ನೂ ಯಾರನ್ನೂ ಸಚಿವರಾನ್ನಾಗಿ ನೇಮಿಸಿಲ್ಲ. ಅಲ್ಲದೇ ಎರಡನೇ ಹಂತದ ಸಚಿವರ ಪಟ್ಟಿಯೂ ಸಹ ಇದುವರೆಗೂ ಅಖೈರುಗೊಂಡಿಲ್ಲ. ಇದರ ಮಧ್ಯೆ ಮಾನ್ಸೂನ್ ಅಧಿವೇಶನ ನಡೆಸಬೇಕೇ ಅಥವಾ ಅನಿರ್ದಿಷ್ಟವಧಿಗೆ ಮುಂದೂಡಲ್ಪಟ್ಟಿರುವ ಅಧಿವೇಶನವನ್ನು ವಿಸ್ತರಿಸುವುದೇ ಅಥವಾ ಅದನ್ನು ಮುಕ್ತಾಯಗೊಳಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಬೇಕೇ ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವಾಲಯವು ಸಚಿವ ಸಂಪುಟದ ಮಾರ್ಗದರ್ಶನ ಕೋರಿದೆ.
ಈ ಸಂಬಂಧ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವವನ್ನು ಮಂಡಿಸಿದೆ. ಇದರ ಪ್ರತಿಯು "the-file.in"ಗೆ ಲಭ್ಯವಾಗಿದೆ.
ಪ್ರಸ್ತಾವ 1ರಲ್ಲೇನಿದೆ?: ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ನ ಅಧಿವೇಶನಗಳನ್ನು ಕರೆಯಲು 2026ರ ಜನವರಿ 14ರಂದು ಅಧಿಸೂಚನೆ ಹೊರಡಿಸಲಾಗಿತ್ತು. (DPAL 01 SAMVYAVI 2026) ಈ ಅಧಿಸೂಚನೆಯ ಮೂಲಕ 2026ರ ಜನವರಿ 22 ರಂದು ಬೆಂಗಳೂರಿನಲ್ಲಿ ಸಭೆ ಸೇರಲು ಕರೆಯಲಾಗಿತ್ತು. 20206ರ ಜನವರಿ 22ರಂದು ಆರಂಭವಾದ ಕರ್ನಾಟಕದ ಹದಿನಾರನೇ ವಿಧಾನಸಭೆಯ ಒಂಬತ್ತನೇ ಅಧಿವೇಶನವು 2026ರ ಫೆ.4ರವರೆಗೆ ನಡೆದಿತ್ತು. ಆ ನಂತರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.
ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದ ಕರ್ನಾಟಕದ ಹದಿನಾರನೇ ವಿಧಾನಸಭೆಯ ಒಂಬತ್ತನೇ ಅಧಿವೇಶನ ಮತ್ತು ಕರ್ನಾಟಕ ವಿಧಾನ ಪರಿಷತ್ನ 158ನೇ ಅಧಿವೇಶನವು 2026ರ ಮಾರ್ಚ್ 6ರಂದು ಸೇರಿತ್ತು. ನಂತರ ಈ ಅಧಿವೇಶನವು 2026ರ ಮಾರ್ಚ್ 26ರಂದು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.
ಆದ್ದರಿಂದ ಕರ್ನಾಟಕ ವಿಧಾನಸಭೆ ಹಾಗೂ ಕರ್ನಾಟಕ ವಿಧಾನ ಪರಿಷತ್ನ ಅಧಿವೇಶನಗಳನ್ನು ಮುಕ್ತಾಯಗೊಳಿಸಲು (Prorogue) ಮಾನ್ಯ ರಾಜ್ಯಪಾಲರಿಗೆ ಶಿಫಾರಸು ಮಾಡುವ ಕುರಿತು ಸಚಿವ ಸಂಪುಟದ ಆದೇಶವನ್ನು ಕೋರುತ್ತೇವೆ, ಎಂದು ಇಲಾಖೆಯು ಪ್ರಸ್ತಾವದಲ್ಲಿ ಕೋರಿರುವುದು ತಿಳಿದು ಬಂದಿದೆ.
ಅಲ್ಲದೇ ಈ ಸಂಬಂಧ ಪ್ರಸ್ತಾವ- 2ನ್ನೂ ಮಂಡಿಸಿದೆ. ಕರ್ನಾಟಕ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮಳೆಗಾಲದ ಅಧಿವೇಶನದ ದಿನಾಂಕ, ಸಮಯ, ಸ್ಥಳ ಹಾಗೂ ಅವಧಿಯನ್ನು ನಿಗದಿಪಡಿಸಬೇಕಿದೆ. ಅದನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಿಗೆ ಹಾಗೂ ಕರ್ನಾಟಕ ವಿಧಾನ ಪರಿಷತ್ನ ಸಭಾಪತಿಗೆ ಪತ್ರದ ಮೂಲಕ ತಿಳಿಸುವುದು ಈ ಪ್ರಸ್ತಾವದ ಉದ್ದೇಶವಾಗಿದೆ ಎಂದು ತಿಳಿಸಿದೆ.






