ಕಹಿ ಸತ್ಯ ಹೇಳಿದಕ್ಕೆ ಅಮೇರಿಕ ಮಾಜಿ ಅಧ್ಯಕ್ಷರ ವಿರುದ್ಧವೇ ವಾಗ್ದಾಳಿ
ಪ್ರಶ್ನೆ ಕೇಳುವ ಪತ್ರಕರ್ತರು ಅಂದ್ರೆ ಬಿಜೆಪಿಗೆ ಆಗೋದೇ ಇಲ್ಲ!

ಅಮೇರಿಕ ಭೇಟಿಯಲ್ಲಿ ಪ್ರಧಾನಿ ಮೋದಿಯವರು ಎದುರಿಸಿರುವ ಮುಜುಗರದಿಂದ ಬಿಜೆಪಿ ಮುಖಂಡರು ಭಾರೀ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಮೇರಿಕಾದಲ್ಲಿ ಅಲ್ಲಿನ ಅಧ್ಯಕ್ಷ ಜೋ ಬೈಡೆನ್ ಜೊತೆ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಅವರಿಗೆ ಕೇಳಿದ ಪ್ರಶ್ನೆ ಬಿಜೆಪಿ ಹಾಗು ಸ್ವತಃ ನರೇಂದ್ರ ಮೋದಿಯವರು ಈವರೆಗೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನೀಡುತ್ತಾ ಬಂದಿರುವ ಹೇಳಿಕೆಗಳ ಹಿಂದಿನ ಪೊಳ್ಳುತನವನ್ನು ಹಾಗು ಆ ಪಕ್ಷದ ದ್ವಂದ್ವವನ್ನು ಸಂಪೂರ್ಣ ಬಯಲು ಮಾಡಿ ಬಿಟ್ಟಿದೆ.
ಅಲ್ಪಸಂಖ್ಯಾತರು ಹಾಗೂ ಸಾಂವಿಧಾನಿಕ ಮೌಲ್ಯಗಳ ಕುರಿತು ಜಾಗತಿಕ ವೇದಿಕೆಗಳಲ್ಲಿ ನೀಡುವ ರೆಡಿಮೇಡ್ ಹೇಳಿಕೆಗಳಿಗೂ ಭಾರತದಲ್ಲಿರುವ ಪರಿಸ್ಥಿತಿಗೂ ಅಜಗಜಾಂತರವಿದೆ ಎಂಬುದು ಮೊನ್ನೆ ಜಗಜ್ಜಾಹೀರಾಗಿಬಿಟ್ಟಿದೆ.
ಅಲ್ಲಿ ಮೋದಿಯವರು " ನಾವು ಯಾರನ್ನೂ ಧರ್ಮ, ಜಾತಿ, ಲಿಂಗದ ಆಧಾರದಲ್ಲಿ ಬೇಧ ಭಾವ ಮಾಡೋದಿಲ್ಲ" ಅಂತ ಹೇಳುತ್ತಿರುವಾಗಲೇ ಇಲ್ಲಿ ಅವರಿಗೇ ಸೆಡ್ಡು ಹೊಡೆದಿದ್ದಾರೆ ಅವರದೇ ಪಕ್ಷದ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ. ಅಮೇರಿಕಾದ ಮಾಜಿ ಅಧ್ಯಕ್ಷ, ಮೋದಿಜಿ ಅವರ ಆಪ್ತ ಮಿತ್ರ ಬರಾಕ್ ಒಬಾಮ ಹೆಸರು ಬಳಸಿಕೊಂಡೇ ತನ್ನೊಳಗಿನ ಮುಸ್ಲಿಂ ದ್ವೇಷವನ್ನು ಯಾವುದೇ ಮುಲಾಜಿಲ್ಲದೆ ಹೊರಹಾಕಿದ್ದಾರೆ ಹಿಮಂತ್ ಬಿಸ್ವಾ ಶರ್ಮಾ.
ಅಮೇರಿಕ ಅಧ್ಯಕ್ಷರಾಗಿ ಒಬಾಮ ಭಾರತಕ್ಕೆ ಭೇಟಿ ನೀಡಿದ್ದಾಗ ಪ್ರಧಾನಿ ಮೋದಿ ಅವರಿಗೆ ಅದೆಷ್ಟು ಆಪ್ತರಾಗಿದ್ದರು ಅಂದರೆ ಪ್ರೆಸಿಡೆಂಟ್ ಒಬಾಮ ಎಂದು ಕರೆಯುವ ಬದಲು ಎಲ್ಲ ಶಿಷ್ಟಾಚಾರಗಳನ್ನು ಬದಿಗೊತ್ತಿ " ಬರಾಕ್ ", " ಬರಾಕ್ " ಎಂದೇ ಕರೆದು ಎಲ್ಲರ ಹುಬ್ಬೇರಿಸಿದ್ದರು. ಅಮೆರಿಕ ಅಧ್ಯಕ್ಷರು ಪ್ರಧಾನಿ ಮೋದಿಜಿ ಅವರಿಗೆ ಅಷ್ಟು ಕ್ಲೋಸ್ ಫ್ರೆಂಡು , ಹಾಗಾಗಿ ಅವರು ' ಹೋಗೋ ಬಾರೋ' ಅನ್ನೋ ಶೈಲಿಯಲ್ಲಿ " ಬರಾಕ್ " ಅಂತ ಕರೆಯುತ್ತಾರೆ ಎಂದು ಇಲ್ಲಿ ಮೋದಿ ಅಭಿಮಾನಿಗಳು ಆವಾಗ ಹೇಳಿದ್ದೇ ಹೇಳಿದ್ದು.
ಅದು ಒಬಾಮ ಅಮೇರಿಕ ಅಧ್ಯಕ್ಷರಾಗಿದ್ದ ಕಾಲ. ಈಗವರು ಮಾಜಿ ಅಧ್ಯಕ್ಷ. ಅವರಿಗೆ ಈಗ ಶಿಷ್ಟಾಚಾರದ ನಿರ್ಬಂಧಗಳಿಲ್ಲ. ಹಾಗಾಗಿ ಅವರು ಮೋದಿಜಿ ಅಮೇರಿಕ ಭೇಟಿ ಸಂದರ್ಭದಲ್ಲೇ ಸಿಎನ್ಎನ್ ಗೆ ನೀಡಿದ ಸಂದರ್ಶನದಲ್ಲಿ "ನಾನೀಗ ಮೋದಿಯವರೊಂದಿಗೆ ಮಾತುಕತೆ ನಡೆಸಿದ್ದರೆ, ನೀವು ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕು " ಎಂದು ಹೇಳುತ್ತಿದ್ದೆ ಎಂದಿದ್ದಾರೆ. "ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ಮೋದಿ ಭೇಟಿ ವೇಳೆ ಪ್ರಸ್ತಾಪಿಸುವಂತೆ" ಅವರು ಅಮೆರಿಕ ಅಧ್ಯಕ್ಷ ಬೈಡನ್ ಅವರಿಗೆ ಸಲಹೆಯನ್ನೂ ನೀಡಿದ್ದಾರೆ.
ಮೋದಿಜಿ ಅವರ ಆಪ್ತ ಮಿತ್ರ "ಬರಾಕ್" ಈಗ ಹೀಗೆ ಹೇಳಿದ್ದು ಬಿಜೆಪಿಗರ ಕಣ್ಣು ಕೆಂಪಗಾಗಿಸಿದೆ. ಒಂದೇ ಹೇಳಿಕೆಗೆ ಒಬಾಮ ಅವರಿಗೆ ಪರಕೀಯನಾಗಿಬಿಟ್ಟಿದ್ದಾರೆ. ಈಗ ಬಿಜೆಪಿ ಹಾಗು ಮೋದಿಜಿ ಕಟ್ಟಾ ಬೆಂಬಲಿಗರ ಪಾಲಿಗೆ ಒಬಾಮ ದೇಶದ್ರೋಹಿ ಪಡೆಯ ಭಾಗವಾಗಿಬಿಟ್ಟಿದ್ದಾರೆ. ಹಾಗಾಗಿಯೇ ಈವರೆಗೆ "ಮೋದಿಜಿಯ ಪ್ರೀತಿಯ ಬರಾಕ್" ಈಗ ಇದ್ದಕ್ಕಿದ್ದಂತೆ "ಹುಸೇನ್ ಒಬಾಮ" ಆಗಿಬಿಟ್ಟಿದ್ದಾರೆ. ಬರಾಕ್ ಒಬಾಮ ಹೆಸರಿನ ನಡುವೆ ಇರೋ ಹುಸೇನ್ ಸಡನ್ನಾಗಿ ಬಿಜೆಪಿಗರಿಗೆ ನೆನಪಾಗಿದೆ. ಈವರೆಗೆ ಆ ಹುಸೇನ್ ಅವರಿಗೆ ಬೇಕಾಗಿರಲಿಲ್ಲ. ಈಗ ಮೋದಿಜಿ ಕಾರ್ಯವೈಖರಿ ಬಗ್ಗೆ ಟೀಕೆಯ ಧಾಟಿಯಲ್ಲಿ ಮಾತಾಡಿದ್ದೇ " ಹುಸೇನ್ ಸಾಹೇಬರು" ಬಿಜೆಪಿಗೆ ನೆನಪಾಗಿದ್ದಾರೆ. ಅಂದರೆ ಒಬಾಮರೊಳಗಿರುವ " ಹುಸೇನರೇ " ಈ ಹೇಳಿಕೆ ಕೊಟ್ಟಿದ್ದಾರೆ ಅಂತ ಬಿಂಬಿಸೋ ಪ್ರಯತ್ನ ಬಿಜೆಪಿ ಹಾಗು ಅದರ ಬೆಂಬಲಿಗರದ್ದು.
ರವಿವಾರ ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ "ಬರಾಕ್ ಒಬಾಮ ನಮಗ್ಯಾಕೆ ಬುದ್ಧಿವಾದ ಹೇಳ್ತಾ ಇದ್ದಾರೆ ? ಅವರ ಅಧಿಕಾರಾವಧಿಯಲ್ಲಿ ಆರು ಮುಸ್ಲಿಂ ದೇಶಗಳ ಮೇಲೆ ಅಮೇರಿಕ ಬಾಂಬ್ ದಾಳಿ ಮಾಡಿಲ್ಲವೇ ?" ಎಂದು ಕೇಳಿದ್ದಾರೆ. "ಪ್ರಧಾನಿ ಮೋದಿಗೆ ಅತ್ಯುನ್ನತ ನಾಗರೀಕ ಪುರಸ್ಕಾರ ನೀಡಿದ 13 ದೇಶಗಳಲ್ಲಿ 6 ದೇಶಗಳು ಮುಸ್ಲಿಂ ದೇಶಗಳು. ಅದೇಗೆ ಅವು ಆ ಪ್ರಶಸ್ತಿ ಕೊಟ್ಟವು ? " ಎಂದೂ ಹುಸೇನ್ ಒಬಾಮ ಸಾಹೇಬರನ್ನು ಪ್ರಶ್ನಿಸಿದ್ದಾರೆ ನಿರ್ಮಲಾ ಸೀತಾರಾಮನ್.
"ರೂಪಾಯಿ ಕುಸಿಯುತ್ತಿಲ್ಲ, ಡಾಲರ್ ಗಟ್ಟಿಯಾಗುತ್ತಿದೆ ಅಷ್ಟೇ " ಎಂದು ಹೇಳಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇವರೇ. ಅಂದರೆ " ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ಯಾಕೆ ಆಗ್ತಾ ಇದೆ " ಅಂತ ಕೇಳಿದ್ರೆ " ನಾವು ಆ ಬಗ್ಗೆ ಕ್ರಮ ಕೈಗೊಳ್ತೀವಿ, ಅದನ್ನು ಸರಿ ಮಾಡ್ತೀವಿ " ಎಂದು ಇವರು ಹೇಳಲ್ಲ. ಇವರ ಉತ್ತರ " ನಿಮ್ಮ ಅವಧಿಯಲ್ಲೂ ಅಲ್ಪಸಂಖ್ಯಾತರ ಮೇಲೆ ದಾಳಿ ಆಗಿದೆಯಲ್ವಾ... ನೀವ್ಯಾಕೆ ನಮಗೆ ಹೇಳಲು ಬರುತ್ತೀರಿ ?" ಎಂದು.
ಒಬಾಮ ಹೇಳಿಕೆಯಿಂದ ತೀವ್ರ ನೊಂದಿದ್ದ ಬಿಜೆಪಿ ಬೆಂಬಲಿಗರು ಅದರ ಬೆನ್ನಿಗೇ ಬೈಡೆನ್ ಜೊತೆಗಿನ ಪತ್ರಿಕಾ ಗೋಷ್ಠಿಯಲ್ಲಿ ಮೋದಿಜಿಗೆ ಕೇಳಲಾದ ಪ್ರಶ್ನೆ ಹಾಗು ಅದಕ್ಕೆ ಮೋದಿಜಿ ಕೊಟ್ಟ ಉತ್ತರದಿಂದ ಹೌಹಾರಿದ್ದಾರೆ. ಆ ಪ್ರಶ್ನೆ ಕೇಳಿದ್ದು ವಾಲ್ ಸ್ಟ್ರೀಟ್ ಜರ್ನಲ್ ನ ಪತ್ರಕರ್ತೆ ಅಮೇರಿಕಾದ ಸಬ್ರಿನಾ ಸಿದ್ದೀಕಿ.
"ನಿಮ್ಮ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡಿದೆ, ಟೀಕಾಕಾರರ ಬಾಯಿ ಮುಚ್ಚಿಸಲಾಗಿದೆ ಎಂದು ಅನೇಕ ಮಾನವ ಹಕ್ಕುಗಳ ಗುಂಪುಗಳು ದೂರುತ್ತವೆ. ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳನ್ನು ಸುಧಾರಿಸಲು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ನೀವು ಮತ್ತು ನಿಮ್ಮ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದ್ದೀರಿ?" ಎಂದು ಕೇಳಿದ್ದರು ಸಬ್ರೀನಾ ಸಿದ್ದಿಕಿ.
ಈ ಪ್ರಶ್ನೆಗೆ ತೀವ್ರ ಮುಜುಗರಗೊಂಡ ಪ್ರಧಾನಿ ಮೋದಿಜಿ ಯಾವುದೇ ನೇರ ಉತ್ತರ ನೀಡದೆ "ಭಾರತ ಪ್ರಜಾಪ್ರಭುತ್ವ ದೇಶವಾಗಿದೆ. ಪ್ರಜಾಪ್ರಭುತ್ವ ನಮ್ಮ ಸ್ಪೂರ್ತಿಯಾಗಿದೆ. ಅದು ನಮ್ಮ ನರನಾಡಿಗಳಲ್ಲೇ ಇದೆ. ನಮ್ಮ ಸಂವಿಧಾನ ಹಾಗು ನಮ್ಮ ಸರಕಾರದಲ್ಲಿ ಯಾವುದೇ ಧರ್ಮ, ಜಾತಿ, ಲಿಂಗ ಹಾಗು ವರ್ಗಗಳ ಬೇಧ ಮಾಡೋದಿಲ್ಲ. ಅಲ್ಲಿ ಬೇಧಭಾವದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಭಾರತದ ಪ್ರಜಾಪ್ರಭುತ್ವದಲ್ಲಿ ಧರ್ಮ, ಜಾತಿ, ವಯಸ್ಸು, ಭೂಭಾಗ - ಇವುಗಳ ಆಧಾರದಲ್ಲಿ ಯಾವುದೇ ಬೇಧಭಾವ ಮಾಡೋದಿಲ್ಲ" ಎಂದು ಹೇಳಿ ಜಾರಿಕೊಂಡಿದ್ದರು.
ಇಲ್ಲಿ ಇರೋ ಬಹುತೇಕ ಎಲ್ಲ ನ್ಯೂಸ್ ಚಾನಲ್ ಗಳು, ಮೋದಿಜಿ ಅಮೇರಿಕ ಭೇಟಿಯನ್ನು ನ ಭೂತೋ ನ ಭವಿಷ್ಯತಿ ಎಂಬಂತೆ ಬಿಂಬಿಸುತ್ತಿವೆ. ಹಿಂದೆ ಯಾವ ಪ್ರಧಾನಿಗೂ ಸಿಗದ ಅದ್ಭುತ ಸ್ವಾಗತ ಪ್ರಧಾನಿ ಮೋದಿಗೆ ಸಿಕ್ಕಿದೆ ಎಂದು ಬಣ್ಣಿಸುತ್ತಿವೆ. ಅದನ್ನು ಪ್ರಧಾನಿ ಮೋದಿ ಭೇಟಿ ಎಂದು ಹೇಳದೆ "ಅಮೆರಿಕಕ್ಕೆ ಬಾಸ್ ಭೇಟಿ " ಎಂದೇ ಯಾವುದೇ ನಾಚಿಕೆ, ಹಿಂಜರಿಕೆ ಇಲ್ಲದೆ ನೇರವಾಗಿ ಹೇಳುತ್ತಿವೆ. ಕೆಲವು ಚಾನಲ್ ಗಳಂತೂ ಅಮೇರಿಕವೇ ಬಹಳ ಕೆಟ್ಟ ಪರಿಸ್ಥಿತಿಯಲ್ಲಿದೆ, ಅದಕ್ಕೆ ಮೋದಿಯಂತಹ ನಾಯಕತ್ವ ಬೇಕು ಎಂದು ಹೇಳಿ ಬೆಚ್ಚಿ ಬೀಳಿಸಿವೆ. ಅಲ್ಲಿನ ಸಂಸತ್ತಿನಲ್ಲಿ ತಾನು ಮಾಡಿದ ಭಾಷಣದ ಪ್ರತಿಗೆ ಮೋದಿ ಸಹಿ ಹಾಕಿದ್ದನ್ನು ಮೋದಿ ಬಳಿ ಸಂಸದರು ಆಟೋಗ್ರಾಫ್ ಕೇಳಿದ್ರು ಅಂತ ಪ್ರತ್ಯೇಕವಾಗಿ ವರದಿ ಮಾಡಿವೆ. ಅದೇ ರೀತಿ ಆಟೋಗ್ರಾಫ್ ಈ ಹಿಂದೆ ಮನಮೋಹನ್ ಸಿಂಗ್ ಅವರೂ ಕೊಟ್ಟಿದ್ರು. ಅದನ್ನು ಯಾವ ಚಾನಲ್ ಕೂಡ ಹೇಳಲಿಲ್ಲ. ಈ ಚಾನಲ್ ಗಳು ಹೇಳಿದ್ದನ್ನೇ ಬಿಜೆಪಿ ಐಟಿ ಸೆಲ್ ಇಡೀ ದೇಶಕ್ಕೆ ತಲುಪಿಸುತ್ತಿತ್ತು.
ಹೀಗಿರುವಾಗ, ಸಬ್ರೀನಾ ಕೇಳಿದ ಪ್ರಶ್ನೆ ಈ ಐಟಿ ಸೆಲ್ ಪಡೆಗೆ ಅಜೀರ್ಣವಾಗಿದೆ. ಈಗ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಸಹಿತ ಎಲ್ಲ ಬಿಜೆಪಿ ಹಾಗು ಮೋದಿ ಭಟ್ಟಂಗಿಗಳು ಸಬ್ರೀನಾ ಅವರ ಬೆನ್ನು ಬಿದ್ದಿದ್ದಾರೆ. ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ತೇಜೋವಧೆ ಮಾಡಲು ಪ್ರಯತ್ನಿಸಿದ್ದಾರೆ. ಆಕೆ ಪಾಕಿಸ್ತಾನಿ, ಆಕೆ ಇಸ್ಲಾಮಿಸ್ಟ್ - ಹಾಗಾಗಿ ಬೇಕೆಂದೇ ದುರುದ್ದೇಶದಿಂದ ಇಂತಹ ಪ್ರಶ್ನೆ ಕೇಳಿದ್ದಾಳೆ. ಆದರೆ ಆಕೆಗೆ ಮೋದಿಜಿ ನೀಡಿದ ಉತ್ತರದಿಂದ ಸಂಪೂರ್ಣ ತಣ್ಣಗಾಗಿದ್ದಾಳೆ ಎಂದು ಟ್ವೀಟ್ ದಾಳಿ ಶುರು ಮಾಡಿದ್ದಾರೆ. ಇದು ಟೂಲ್ ಕಿಟ್ ಗ್ಯಾಂಗ್ ಗೆ ಮೋದಿ ತಿರುಗೇಟು ಎಂದೂ ಹೇಳಿದ್ದಾರೆ.
ಈ ದಾಳಿ ಕಂಡು ವಿಚಲಿತರಾದ ಸಬ್ರೀನಾ ಸಿದ್ದೀಕಿ ಈ ಹಿಂದೆ 2011 ರಲ್ಲಿ ಹಾಗು 2015 ರಲ್ಲಿ ತಾನು ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ತೊಟ್ಟುಕೊಂಡು ಟೀಮ್ ಇಂಡಿಯಾವನ್ನು ಬೆಂಬಲಿಸಿದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ತಾನು ಹೇಗೆ ಯಾವಾಗಲು ಭಾರತ ತಂಡವನ್ನೇ ಬೆಂಬಲಿಸಿ ಅದು ಗೆದ್ದಾಗಲೆಲ್ಲ ತನ್ನ ತಂದೆ ಜೊತೆ ಸಂಭ್ರಮಿಸುತ್ತಿದ್ದೆ ಎಂದು ನೆನಪಿಸಿದ್ದಾರೆ.
ಅಂದ ಹಾಗೆ ಅಮೇರಿಕಾದಲ್ಲೇ ಹುಟ್ಟಿ, ಅಲ್ಲಿ ಪತ್ರಕರ್ತೆಯಾಗಿರುವ ಈ ಸಬ್ರೀನಾ ಭಾರತದ ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ ಸ್ಥಾಪಕ, ಆಧುನಿಕ ಶಿಕ್ಷಣದ ಹರಿಕಾರ ಸರ್ ಸಯ್ಯದ್ ಅಹ್ಮದ್ ಖಾನ್ ಅವರ ಮರಿ ಮೊಮ್ಮಗಳು. ಈಕೆಯ ತಂದೆ ಹುಟ್ಟಿದ್ದು ಭಾರತದಲ್ಲೇ. ತಾಯಿ ಪಾಕಿಸ್ತಾನದವರು.
ಬಿಜೆಪಿಯವರಿಗೆ ಸುಧೀರ್ ಚೌಧರಿ, ಅರ್ನಬ್ ಗೋಸ್ವಾಮಿ, ನಾವಿಕ ಕುಮಾರ್, ಅಮಿಶ್ ದೇವ್ಗನ್, ಅಮನ್ ಚೋಪ್ರಾ, ಅಂಜನಾ ಓಂ ಕಶ್ಯಪ್, ರಾಹುಲ್ ಕವಲ್ ಇಂತಹ ಭಟ್ಟಂಗಿ ಆಂಕರ್ ಗಳೇ ಪತ್ರಕರ್ತರು. ನಿಜವಾಗಿ ವರದಿಗಾರರ ಕೆಲಸ ಮಾಡುತ್ತಿರುವ ವರದಿಗಾರರು, ಪತ್ರಕರ್ತರು ಇವರಿಗೆ ಪತ್ರಕರ್ತರೇ ಅಲ್ಲ. ಮೋದಿಜಿಯನ್ನು ಹಿಂಬಾಲಿಸಿಕೊಂಡು ಅಮೆರಿಕಕ್ಕೆ ಹೋಗಿದ್ದ ಟೈಮ್ಸ್ ನೌ ನವಭಾರತ್ ಚಾನಲ್ ನ ಸುಶಾಂತ್ ಸಿಂಗ್ ಎಂಬ ಭಟ್ಟಂಗಿ ಆಂಕರ್ ಅಂತೂ ಅಮೇರಿಕಾದ ಸೂಪರ್ ಮಾರ್ಕೆಟ್ ಗಳಿಗೆ ಹೋಗಿ ಅಲ್ಲಿನ ಮಾವಿನ ಹಣ್ಣು ಅದೆಷ್ಟು ದುಬಾರಿ ? ಇಷ್ಟು ದುಬಾರಿ ಬೆಲೆ ತೆರುವುದಕ್ಕಿಂತ ಇವರಿಗೆ ಭಾರತಕ್ಕೆ ಬರಬಹುದಲ್ವಾ ಅಂತ ಕೇಳಿ ಅಲ್ಲಿನ ಜನರಿಂದ ನಗೆಪಾಟಲಿಗೆ ಈಡಾಗಿದ್ದಾನೆ.
ಒಬ್ಬ ಪತ್ರಕರ್ತೆ ಮುಸ್ಲಿಂ ಆಗಿದ್ದರೆ ಆಕೆ ತನ್ನ ವೃತ್ತಿಯ ಭಾಗವಾಗಿ ಕೇಳುವ ಹಾಗು ಕೇಳಲೇಬೇಕಾದ ಪ್ರಶ್ನೆಗೆ ಧರ್ಮದ ಬಣ್ಣ ಹಚ್ಚುತ್ತಾರೆ ಹಿರಿಯ ಬಿಜೆಪಿ ನಾಯಕರು ಹಾಗು ಅವರ ಬೆಂಬಲಿಗರು. ಬಿಜೆಪಿ ಐಟಿ ಸೆಲ್ ಮುಖ್ಯಸ್ಥರೇ ಇದರ ನೇತೃತ್ವ ವಹಿಸಿಕೊಳ್ಳುತ್ತಾರೆ. ಕೊನೆಗೆ ಆಕೆ ತಾನು ಭಾರತ ವಿರೋಧಿಯಲ್ಲ ಎಂದು ಹೇಳಿಕೆ ಕೊಡುವ, ಫೋಟೋ ಹಂಚಿಕೊಳ್ಳುವ ಪರಿಸ್ಥಿತಿ ನಿರ್ಮಿಸುತ್ತಾರೆ. ಆದರೆ ಮೋದಿಜಿ ಮಾತ್ರ ಫಾರಿನ್ ಗೆ ಹೋಗಿ " ನಾವು ಭಾರತದಲ್ಲಿ ಯಾರನ್ನೂ ಧರ್ಮ, ಜಾತಿ ಆಧಾರದಲ್ಲಿ ಬೇಧ ಭಾವ ಮಾಡೋದಿಲ್ಲ" ಅಂತ ಹೇಳಿಕೆ ಕೊಡ್ತಾರೆ.
ಹೇಗಿದೆ ಈ ತಮಾಷೆ ?
ಸಬ್ರೀನಾ ಕೇಳಿದ ಪ್ರಶ್ನೆ ಎಷ್ಟು ಸೂಕ್ತವಾಗಿದೆ, ಎಷ್ಟು ಸಕಾಲಿಕವಾಗಿದೆ ಎಂದು ಮೋದಿಜಿ ಅವರ ಪಕ್ಷದ ನಾಯಕರು ಹಾಗು ಬೆಂಬಲಿಗರೇ ಮತ್ತೆ ಮತ್ತೆ ಸಾಬೀತು ಮಾಡುತ್ತಲೇ ಇದ್ದಾರೆ. ಕೇಳಿದ ಪ್ರಶ್ನೆಗೆ ಮೋದಿಜಿ ಆಗಲಿ, ಅವರ ಪಕ್ಷದ ನಾಯಕರಾಗಲಿ, ವಕ್ತಾರರಾಗಲಿ, ಐಟಿ ಸೆಲ್ ನವರಾಗಲಿ, ಬೆಂಬಲಿಗರಾಗಲಿ ಉತ್ತರಿಸೋದೇ ಇಲ್ಲ. ಏಕೆಂದರೆ ಅವರ ಬಳಿ ಆ ಪ್ರಶ್ನೆಗೆ ಉತ್ತರವೇ ಇಲ್ಲ.
ಅದಕ್ಕೆ ಅವರ ಬಳಿ ಇರೋದು ಒಂದೇ ಉತ್ತರ, ಪ್ರಶ್ನೆ ಕೇಳಿದವರನ್ನೇ ಅವಹೇಳನ ಮಾಡೋದು, ಅವರ ಧರ್ಮ, ಅವರ ಕುಟುಂಬ, ಅವರ ವೈಯಕ್ತಿಕ ಹಿನ್ನೆಲೆಗಳನ್ನು ಜಾಲಾಡಿ ಅವರ ತೇಜೋವಧೆ ಮಾಡೋದು, ಅವರಿಗೆ ಕಿರುಕುಳ ಕೊಡೋದು. ಒಬಾಮ ಇರಲಿ ಅಥವಾ ಸಬ್ರೀನಾ ಇರಲಿ - ಅವರೇನು ಕೇಳಿದ್ದಾರೆ ಎಂಬುದೇ ಮುಖ್ಯವಾಗಬೇಕಿತ್ತೇ ಹೊರತು ಅವರು ಯಾರು , ಅವರ ತಂದೆ ತಾಯಿ ಯಾರು ಎಂಬುದಲ್ಲ.
ಆದರೆ ಮೋದಿಜಿ ಹಾಗು ಅವರ ಬೆಂಬಲಿಗರದ್ದು ಒಂದೇ ಒಂದು ಕಂಡೀಷನ್. "ನಮ್ಮನ್ನು ಪ್ರಶ್ನಿಸಬೇಡಿ. ಅಷ್ಟೇ". ಪ್ರಶ್ನಿಸಿದರೆ ಈ ಟ್ರೋಲ್ ಪಡೆ ಅಮೇರಿಕಾದ ಮಾಜಿ ಅಧ್ಯಕ್ಷರನ್ನೇ ಟೂಲ್ ಕಿಟ್ ನ ಭಾಗ ಎಂದು ಜರೆಯಲೂ ಹಿಂಜರಿಯುವುದಿಲ್ಲ.







