ಆಳುವವರ ಅಖಾಡದಲ್ಲಿನ ಕೀಚಕ

- ರೇಣುಕಾ ನಿಡಗುಂದಿ
ರಾಜಕೀಯದ ಅಮಲು ಮನುಷ್ಯತ್ವವನ್ನೂ ನಾಶಗೊಳಿಸುತ್ತದೆ ಎನ್ನಲು ಈ ಬ್ರಿಜ್ ಭೂಷಣನ ಕ್ರೌರ್ಯವೇ ಸಾಕು. ಅಪ್ಪನ ಸ್ವಾರ್ಥ ಬೇಜವಾಬ್ದಾರಿಯನ್ನು ಕಾಗದಕ್ಕಿಳಿಸಿದ ಶಕ್ತಿ ಸಿಂಗ್ನಿಗೆ ಬದುಕೇ ನಿಷ್ಪ್ರಯೋಜಕವಾಗಿ ಕಂಡಿದ್ದರಲ್ಲಿ ಅಚ್ಚರಿಯಿಲ್ಲ. ಆರು ತಿಂಗಳಿಂದ ಪ್ರತಿಭಟನೆ ನಡೆಸಿದ ಮಹಿಳೆಯರ ಕಣ್ಣೀರು, ಒಡಲಾಳದ ನೋವಿಗೆ ಕಿವುಡ ಕುರುಡರಾದವರಿಂದ ಏನನ್ನು ನಿರೀಕ್ಷಿಸಲಾದೀತು? ಬಹುಶಃ ಶಕ್ತಿ ಸಿಂಗ್ ಬದುಕಿದ್ದರೆ ಮಹಿಳಾ ಪಟುಗಳ ಬೆಂಬಲಕ್ಕಾಗಿ ಧ್ವನಿ ಎತ್ತುತ್ತಿದ್ದನೋ ಏನೋ? ಅವರ ನೋವು ಅರ್ಥವಾಗುತ್ತಿತ್ತೋ ಏನೋ?
ಹತ್ತೊಂಭತ್ತು ವರ್ಷಗಳ ಹಿಂದೆ ಲಕ್ನೋದ ಬಾಬೂ ಬನಾರಸಿ ದಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಖ್ಯಾತ ವ್ಯಕ್ತಿಯ ಹರೆಯದ ಮಗ ಆತ್ಮಹತ್ಯೆ ಮಾಡಿಕೊಂಡ. ತನ್ನ ಆತ್ಮಹತ್ಯೆಗೆ ತನ್ನ ತಂದೆಯೇ ಜವಾಬ್ದಾರರೆಂದು ಸೂಸೈಡ್ ನೋಟನ್ನೂ ಬರೆದಿದ್ದ ಆತ. ಆ ಸೂಸೈಡ್ ನೋಟ್ನಲ್ಲಿ ಮಗ ಬರೆದದ್ದೇನು ಗೊತ್ತಾ? ‘‘ನೀವು ಒಬ್ಬ ಒಳ್ಳೆಯ ತಂದೆಯಾಗಲಿಲ್ಲ. ತಾವು ನನ್ನ ತಂಗಿ ತಮ್ಮಂದಿರ ಬಗ್ಗೆ ಯಾವ ಕಾಳಜಿಯನ್ನೂ ವಹಿಸಲಿಲ್ಲ. ಸದಾ ನಿಮ್ಮ ಸ್ವಾರ್ಥಸಾಧನೆಗೆ ಪ್ರಾಮುಖ್ಯತೆ ಕೊಟ್ಟಿರಿ. ಈಗ ತಂಗಿಯೂ ದೊಡ್ಡವಳಾಗುತ್ತಿದ್ದಾಳೆ. ನಮಗೆ ನಮ್ಮ ಭವಿಷ್ಯ ಅಂಧಕಾರದಲ್ಲಿ ಮುಳುಗಿಹೋಗುತ್ತಿದೆ ಎನಿಸುತ್ತದೆ. ಆದ್ದರಿಂದ ಇನ್ನು ಬದುಕಿ ಪ್ರಯೋಜನವಿಲ್ಲ. ಬದುಕಿಗೆ ಯಾವ ಉದ್ದೇಶವೂ ಇಲ್ಲವೆನಿಸಿದೆ.’’
ಹೀಗೆ ಬರೆದ 22ರ ಆ ಯುವಕ 2004ರ ಜೂನ್ 17 ರಂದು ಗೊಂಡಾ ಜಿಲ್ಲೆಯ ತನ್ನ ಮನೆಯಲ್ಲಿ ತನ್ನ ತಂದೆಯ ಪಿಸ್ತ್ತೂಲ್ನಿಂದಲೇ ಗುಂಡುಹಾರಿಸಿಕೊಂಡು ಈ ಲೋಕಕ್ಕೆ ವಿದಾಯ ಹೇಳಿದ್ದ. ಆ ನತದೃಷ್ಟ ಯುವಕ ಬೇರಾರೂ ಅಲ್ಲ ಮಹಿಳಾ ಕುಸ್ತಿಪಟುಗಳ ಆರೋಪಿ ಬ್ರಿಜ್ ಭೂಷಣ ಶರಣ್ ಸಿಂಗ್ನ ಪುತ್ರ ಶಕ್ತಿ ಶರಣ್ ಸಿಂಗ್. ಗುಂಡು ಹಾರಿದ ಸದ್ದು ಕೇಳಿ ತಂದೆ ಹೋಗಿ ನೋಡುತ್ತಾನೆ. ಮಗ ಬಾರದ ಲೋಕಕ್ಕೆ ತೆರಳಿದ್ದ. ಆಗ ಬ್ರಿಜ್ ಭೂಷಣ ಶರಣ್ ಬಲರಾಮ್ಪುರದ ಸಂಸದನಾಗಿದ್ದ.
1988ರಲ್ಲಿ ಆಗಷ್ಟೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದ ಬ್ರಿಜ್ ಭೂಷಣ್ ಅಲ್ಲಿಂದ ಆರುಬಾರಿ ಸಂಸದನಾಗಿದ್ದಾನೆ. ಬಾಬರಿ ಮಸೀದಿ ವಿಧ್ವಂಸಕ್ಕೆ ಸಂಬಂಧಿಸಿ ಬಂಧಿಸಲಾಗಿದ್ದ 40 ಜನ ಆರೋಪಿಗಳಲ್ಲಿ ಬ್ರಿಜ್ ಭೂಷಣನೂ ಇದ್ದ. ಆ ಅಪರಾಧಿಗಳಲ್ಲಿ ಲಾಲ್ಕೃಷ್ಣ ಅಡ್ವಾಣಿ. ಮುರಲಿ ಮನೋಹರ್ ಜೋಶಿ, ರಾಮ್ ವಿಲಾಸ್ ವೇದಾಂತಿ, ವಿನಯ್ ಕಟಿಯಾರ್, ಉಮಾ ಭಾರತಿ ಮುಂತಾದ ಜನನಾಯಕರುಗಳು ಆರೋಪಿಗಳ ಪಟ್ಟಿಯಲ್ಲಿದ್ದರು. ಈ ಕೇಸಿನ ಬಗ್ಗೆ 2020 ಸೆಪ್ಟಂಬರ್ 30ರಂದು ಸ್ಪೆಷಲ್ ಸಿಬಿಐ ಕೋರ್ಟ್ ಎಲ್ಲಾ ಆರೋಪಿಗಳನ್ನು ಅರೋಪಮುಕ್ತಗೊಳಿಸಿ ತನ್ನ ತೀರ್ಪು ನೀಡಿತ್ತು. ಬ್ರಿಜ್ ಭೂಷಣ್ನ ಇನ್ನಿಬ್ಬರು ಮಕ್ಕಳಾದ ಪ್ರತೀಕ್ ಭೂಷಣ್ ಸಿಂಗ್ ಗೋಂಡಾ ಸದರ್ನ ವಿಧಾಯಕನಾಗಿದ್ದಾನೆ ಹಾಗೂ ಕರಣ್ ಭೂಷಣ್ ಸಿಂಗ್ 2018ರಲ್ಲಿ ಉತ್ತರಪ್ರದೇಶದ ಕುಸ್ತಿ ಸಂಘದ ವರಿಷ್ಠ ಉಪಾಧ್ಯಕ್ಷನಾಗಿ ನೇಮಕಗೊಂಡಿದ್ದ.
ಬ್ರಿಜ್ ಭೂಷಣ್ ಸಿಂಗ್ 1996ರಲ್ಲಿ ಟಾಡಾ ಅಡಿಯಲ್ಲಿ ಬಂಧಿತನಾಗಿ ತಿಹಾರ್ ಜೈಲಿನಲ್ಲಿದ್ದಾಗ ಅವನ ಪತ್ನಿ ಕೇತಕಿ ಸಿಂಗ್ ಗೋಂಡಾದಿಂದ ಲೋಕಸಭೆಯ ಚುನಾವಣೆಯನ್ನು ಗೆದ್ದಿದ್ದರು.
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿ ತನ್ನದೇನು ತಪ್ಪಿಲ್ಲವೆಂದೇ ಎದೆಯುಬ್ಬಿಸಿಕೊಂಡು ನಡೆಯುವ, ಸಾರ್ವಜನಿಕ ಲಜ್ಜೆ, ಮಾನ ಮರ್ಯಾದೆ, ಪಾಪಪ್ರಜ್ಞೆಯಂತಹ ಯಾವ ಸಂವೇದನೆಯಿಲ್ಲದ ಆರೋಪಿ ಬ್ರಿಜ್ ಭೂಷಣ್ ಶರಣ್ನ ಮಗ ತಂದೆಯ ಬೇಜವಾಬ್ದಾರಿಯುತ ನಡೆ, ಸ್ವಾರ್ಥಕ್ಕೆ ರೋಸಿಹೋಗಿ ತನ್ನ ಬದುಕನ್ನೇ ಕೊನೆಗೊಳಿಸಿದ್ದನ್ನು ಜೂನ್ ತಿಂಗಳಿನಲ್ಲಿ ಪುನಃ ಕೆಲವು ಹಿಂದಿ ಪತ್ರಿಕೆಗಳು ನೆನಪಿಸಿಕೊಂಡಿವೆ. ಆಳುವ ಪ್ರಭುತ್ವವೂ ಆರೋಪಿಯ ಬಗ್ಗೆ ಯಾವ ಟೀಕೆ ಟಿಪ್ಪಣಿಯನ್ನು ಮಾಡದೆ ನೂತನ ಸಂಸತ್ತಿನ ಉದ್ಘಾಟನೆಗೂ ಆಮಂತ್ರಿಸಿ ಇಡೀ ದೇಶಕ್ಕೆ ‘‘ಪ್ರಭುತ್ವದ ಮೌನ’’ವೆಂದರೆ ಅದು ಯಾವ ನೈತಿಕ ಪ್ರಜ್ಞೆಯಿಲ್ಲದೆ ಹೊಣೆಗಾರಿಕೆಯೂ ಇಲ್ಲದೆ ಸೀದಾ ಅಪರಾಧಿಗಳಿಗೆ ಬೆಂಬಲಿಸುವ ‘‘ಬಂಧುತ್ವ- ಭಾಗಿತ್ವದ’’ ಸಂಕೇತವನ್ನು ನೀಡಿದೆ. ಹಾಗಿರುವಲ್ಲಿ ದೇಶದ ಕೋರ್ಟ್ಗಳ ಪಾಡೇನು? ದಾಖಲಿಸಲಾಗಿದೆ ಎನ್ನುವ ಆ ಚಾರ್ಜ್ಶೀಟಿನ ಹಣೆಬರಹವೇನು ಎನ್ನುವುದನ್ನು ಕಾದು ನೋಡಬೇಕಷ್ಟೇ
ಈಗಾಗಲೇ ಗೃಹ ಮಂತ್ರಿಯ ಅಧಿಕಾರದ ವಲಯಕ್ಕೊಳಪಟ್ಟ ದಿಲ್ಲಿ ಪೊಲೀಸರು ಪೊಕ್ಸೊ ಕೇಸನ್ನು ಒರೆಸಿಹಾಕಿ ಆರೋಪಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಅದೆಷ್ಟು ಬಲಶಾಲಿ ಇದ್ದಾನು ಈ ಬ್ರಿಜ್ ಭೂಷಣ್ ಶರಣ್? ಅವನ ದುಷ್ಟತನದ ಪರಾಕಾಷ್ಠೆ ಯಾವ ರೀತಿಯದ್ದಿದ್ದೀತು? ನಾವು ನೋಡುತ್ತಿದ್ದೇವೆ.
ಏಳು ಮಹಿಳಾ ಕುಸ್ತಿಪಟುಗಳ ಆರೋಪದ ಮೇಲೆ ಎರಡು ಎಫ್ಐಆರ್ ದಾಖಲಾಗಿವೆ. ಅದರಲ್ಲೊಂದು ಪೊಕ್ಸೊ ಆ್ಯಕ್ಟ್ ಅಡಿ ಎಫ್ಐಆರ್ ದಾಖಲಾಗಿತ್ತು. ಸುಪ್ರೀಂ ಕೋರ್ಟಿನ ಮಧ್ಯಸ್ತಿಕೆ ಹಾಗೂ ದೇಶಾದ್ಯಂತ ಮಹಿಳೆಯರ ಆಂದೋಲನಕ್ಕೆ ಬೆಂಬಲವಾಗಿ ನಿಂತ ಅನೇಕ ಸಾರ್ವಜನಿಕ ಅರ್ಜಿ ಆಕ್ರೋಶದ ಒತ್ತಡದಿಂದ ಕೊನೆಗೂ ಸರಕಾರ ಮಣಿಯಬೇಕಾಯಿತು. ಜೂನ್ ಹದಿನೈದರಂದು ಆರೋಪಿಯ ಮೇಲೆ ಚಾರ್ಜ್ಶೀಟ್ ದಾಖಲಿಸಲಾಗುವುದು ಎಂದು ಅನುರಾಗ್ ಠಾಕೂರ್ ಭರವಸೆ ನೀಡಿ ಮಹಿಳಾಕುಸ್ತಿಪಟುಗಳು ತಾತ್ಕಾಲಿಕ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದರೂ ಬ್ರಿಜ್ ಭೂಷಣ್ನನ್ನು ಬಂಧಿಸುವವರೆಗೂ ಈ ಹೋರಾಟ ನಿಲ್ಲದು ಎಂದಿದ್ಡಾರೆ. ಸದ್ಯ ಕೇಸರಗಂಜ್ನ ಭಾರತೀಯ ಜನತಾ ಪಕ್ಷದ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ 2024ರ ಚುನಾವಣೆಯ ಕಣಕ್ಕಿಳಿಯುತ್ತೇನೆಂದು ರಾಜಾರೋಷವಾಗಿ ಹೇಳಿಕೊಂಡು ಓಡಾಡುತ್ತಿದ್ದಾನೆ.
ಒಬ್ಬ ಆರೋಪಿಯನ್ನು ಬಂಧಿಸಲು ಆಗದ ಸರಕಾರ ಬ್ರಿಜ್ ಭೂಷಣ್ನಿಗೆ ಹೆದರುತ್ತಿದೆಯೇ? 2024ರ ಚುನಾವಣೆಯನ್ನು ಗೆಲ್ಲಿಸುವ ಕುದುರೆಯಾಗಿ ಆರೋಪಿಯನ್ನು ಕಾಪಾಡುತ್ತಿದೆಯೇ ಸರಕಾರ? ಯಾವುದಕ್ಕೂ ಮೌನವನ್ನೇ ಹೊದ್ದಿರುವ ಪ್ರಧಾನಿಗಳಿಗೆ ‘‘ನಾರಿ ಸಮ್ಮಾನ’’ ಮತ್ತು ‘‘ಬೇಟಿ ಬಚಾವೋ ಬೇಟಿ ಪಢಾವೋ’’ ಭಾಷಣದ ಸರಕು ಮಾತ್ರವೇ? ಅಮೆರಿಕ ಪ್ರವಾಸದಲ್ಲಿ ಪ್ರಶ್ನೆ ಕೇಳಿದ (ತಪ್ಪಿಗೆ?) (ಅಥವಾ ಮುಸ್ಲಿಮಳಾದ ತಪ್ಪಿಗೋ?) ಸಬ್ರಿನಾ ಸಿದ್ದೀಕಿಯೆಂಬ ಮಹಿಳಾ ಪತ್ರಕರ್ತೆಯನ್ನು ಟ್ರೋಲ್ ಮಾಡುತ್ತಿರುವ ಟ್ರೋಲ್ ಗ್ಯಾಂಗ್ನ ಲಗಾಮಿರುವುದು ಯಾರ ಬಳಿ? ಬಿಲ್ಕಿಸ್ ಬಾನುವಿನ ಆರೋಪಿಗಳನ್ನು ಮಾಲೆ ಹಾಕಿ ಸ್ವಾಗತಿಸುವ, ಪ್ರಶ್ನಿಸಿದವರನ್ನು ಜೈಲಿಗೆ ದಬ್ಬುವ, ದಲಿತ ಮಹಿಳೆಯರ ಮೇಲಿನ ಬಲಾತ್ಕಾರಗಳಿಗೂ ಮೌನವಹಿಸುವ ನಮ್ಮ ಮಹಾನ್ ದೇಶದ ಸರಕಾರ ಈ ದೇಶದ ಮಹಿಳೆಯರನ್ನು, ಬೇಟಿಯರನ್ನು ಹೇಗೆ ನಡೆಸಿಕೊಳ್ಳುತ್ತಿದೆಯೆಂದು ವಿಶ್ವವೇ ಗಮನಿಸುತ್ತಿದೆ. ಇದಕ್ಕೆ ನೂರಾರು ಉದಾಹರಣೆಗಳನ್ನು ಕೊಡಬಹುದು. ಈ ದೇಶದ ಆಳುವವರ ಬಳಿ ಉತ್ತರವಿದೆಯೇ? ಕೇಂದ್ರದಲ್ಲಿನ ಮಹಿಳಾ ಸಚಿವೆಯರು, ಸಂಸದರು ಕೂಡ ಪ್ರತಿಭಟನಾನಿರತ ಮಹಿಳೆಯರನ್ನು ಕುರಿತು ಒಂದು ಮಾತನ್ನೂ ಆಡಿಲ್ಲ. ಅವರ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆಯೂ ತಮ್ಮ ಅಸಹನೆ ಅಸಮ್ಮತಿ ತೋರಿಲ್ಲ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಆದಿವಾಸಿಗಳ ಸಂಕೇತ ಮೂರ್ತಿಯಾಗಿಸಿದ್ದರಿಂದ ಅವರು ಕೂಡ ಬಾಯಿತೆರೆಯದೆ ಮೌನವಹಿಸಿದ್ದಾರೆ.
ಈಗಾಗಲೇ ಸಲ್ಲಿಸಲಾದ ಚಾರ್ಜ್ಶೀಟ್ ಬಹಳ ದೀರ್ಘವಾಗಿದೆ ಎಂದ ದೆಹಲಿ ನ್ಯಾಯಾಲಯಕ್ಕೆ ಹೊಸ ಚಾರ್ಜ್ಶೀಟ್ ಸಲ್ಲಿಕೆಯಾಗಿತ್ತು. ಜುಲೈ 1ರಂದು ಹೊಸ ಚಾರ್ಜ್ಶೀಟನ್ನು ಪರಿಗಣಿಸಲಾಗುವುದು ಎಂದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಹರ್ಜೀತ್ ಸಿಂಗ್ ಜಸ್ಪಾಲ್ ಅವರು ಸಂಕ್ಷಿಪ್ತ ವಿಚಾರಣೆಯ ನಂತರ ವಿಷಯವನ್ನು ಮುಂದೂಡಿದ್ದಾರೆ. ಸಂತ್ರಸ್ತೆಯರ ದೂರಿನ ಆಧಾರದ ಮೇಲೆಯೇ ಬಂಧಿಸಬೇಕಾದ ಆರೋಪಿಯನ್ನು ಇಡೀ ಒಂದು ವ್ಯವಸ್ಥೆ ಒಂದಾಗಿ ನಾನಾ ನೆಪಗಳನ್ನೊಡ್ಡಿ ರಕ್ಷಿಸುತ್ತಿರುವುದನ್ನು ನೋಡಿದರೆ ಜುಗುಪ್ಸೆಯಾಗುತ್ತಿದೆ.
ರಾಜಕೀಯದ ಅಮಲು ಮನುಷ್ಯತ್ವವನ್ನೂ ನಾಶಗೊಳಿಸುತ್ತದೆ ಎನ್ನಲು ಈ ಬ್ರಿಜ್ ಭೂಷಣನ ಕ್ರೌರ್ಯವೇ ಸಾಕು. ಅಪ್ಪನ ಸ್ವಾರ್ಥ ಬೇಜವಾಬ್ದಾರಿಯನ್ನು ಕಾಗದಕ್ಕಿಳಿಸಿದ ಶಕ್ತಿ ಸಿಂಗ್ನಿಗೆ ಬದುಕೇ ನಿಷ್ಪ್ರಯೋಜಕವಾಗಿ ಕಂಡಿದ್ದರಲ್ಲಿ ಅಚ್ಚರಿಯಿಲ್ಲ. ಆರು ತಿಂಗಳಿಂದ ಪ್ರತಿಭಟನೆ ನಡೆಸಿದ ಮಹಿಳೆಯರ ಕಣ್ಣೀರು, ಒಡಲಾಳದ ನೋವಿಗೆ ಕಿವುಡ ಕುರುಡರಾದವರಿಂದ ಏನನ್ನು ನಿರೀಕ್ಷಿಸಲಾದೀತು? ಬಹುಶಃ ಶಕ್ತಿ ಸಿಂಗ್ ಬದುಕಿದ್ದರೆ ಮಹಿಳಾ ಪಟುಗಳ ಬೆಂಬಲಕ್ಕಾಗಿ ದನಿ ಎತ್ತುತ್ತಿದ್ದನೋ ಏನೋ? ಅವರ ನೋವು ಅರ್ಥವಾಗುತ್ತಿತ್ತೋ ಏನೋ?
(ಆಧಾರ ವಿವಿಧ ಮೂಲಗಳು)







