ಧರ್ಮಸ್ಥಳ ದೂರು | ಸುಜಾತಾ ಭಟ್ ಹೇಳಿರುವ ಅನನ್ಯಾ ಭಟ್ ನಾಪತ್ತೆ ಕಥೆ ಫೇಕ್!

ಮಂಗಳೂರು: ಧರ್ಮಸ್ಥಳದಲ್ಲಿ ಅನನ್ಯ ಭಟ್ ಎಂಬ ವೈದ್ಯಕೀಯ ವಿದ್ಯಾರ್ಥಿನಿ ಕಾಣೆಯಾಗಿದ್ದಾರೆ ಎನ್ನಲಾದ ಪ್ರಕರಣವು ಸುಳ್ಳು ಎಂದು, ದೂರುದಾರೆ ಸುಜಾತ ಭಟ್ ಅವರು Insight Rush ಎಂಬ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಪ್ಪು ಒಪ್ಪಿಕೊಂಡಿದ್ದಾರೆ. ನನಗೆ ಅನನ್ಯಾ ಭಟ್ ಎಂಬ ಮಗಳೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಸಂಜೆ Insight Rush ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾದ ವಿಡಿಯೋ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದು ಕ್ಷಮೆ ಕೇಳಿದ್ದಾರೆ.
ನನಗೆ ಕೆಲವು ವ್ಯಕ್ತಿಗಳು ಈ ರೀತಿ ಹೇಳುವಂತೆ ಒತ್ತಡ ಹೇರಿದ್ದರಿಂದ ಈ ಸುಳ್ಳು ಕಥೆಯನ್ನು ನಾನು ಹೆಣೆದಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅವರು ಯಾರು ಎಂದು ಕೇಳಿದಾಗ ಗಿರೀಶ್ ಮಟ್ಟಣ್ಣವರ್ ಮತ್ತು ಜಯಂತ್ ಟಿ ಎಂದು ಹೆಸರು ಹೇಳಿದ್ದಾರೆ.
ನನಗೆ ಈ ಕುರಿತು ಯಾರೂ ಹಣದ ಆಮಿಷ ಒಡ್ಡಿಲ್ಲ. ಕೇವಲ ಒಂದು ಬಾರಿಯಷ್ಟೇ ಅವರನ್ನು ಭೇಟಿಯಾಗಿದ್ದೇನೆ. ಮಗಳ ಕಥೆ ಹೇಳಿ ಎಂದು ಹೇಳಿಕೊಟ್ಟರು. ನನ್ನ ತಲೆಗೆ ತುರುಕಿದರು. ಅದರಂತೆ ಹೇಳಿದ್ದೇನೆ. ಆದರೆ ಈ ಮಟ್ಟಕ್ಕೆ ಹೋಗುತ್ತದೆ, ಇಷ್ಟೊಂದು ತೇಜೋವಧೆ ಆಗುತ್ತದೆ ಎಂದು ಯಾವತ್ತೂ ಭಾವಿಸಿರಲಿಲ್ಲ ಎಂದು ಸುಜಾತಾ ಭಟ್ ಅವರು ಹೇಳಿದ್ದಾರೆ.
ನಾನು ಲಿವಿಂಗ್ ಟುಗೆದರ್ನಲ್ಲಿ ಇದ್ದದ್ದು ನಿಜ. ಆದರೆ ಆ ವ್ಯಕ್ತಿಯನ್ನು ನಾನೇ ದುಡಿದು ಸಾಕಿದ್ದೇನೆ. ಯಾರ ಮುಂದೆ ಕೈಚಾಚಿದವಳು ಅಲ್ಲ. ಅಜ್ಜನ ಆಸ್ತಿಯನ್ನು ದಾನವಾಗಿ ದೇವಸ್ಥಾನಕ್ಕೆ ಕೊಡುವಾಗ ಮೊಮ್ಮಗಳಾದ ನನ್ನ ಸಹಿ ತೆಗೆದುಕೊಳ್ಳಬೇಕಿತ್ತು. ನನಗೆ ಹಕ್ಕಿದೆ. ಆದರೆ ಹಾಗೆ ಮಾಡದೆ ದಾನವಾಗಿ ನಮ್ಮ ತಾತನ ಜಮೀನನ್ನು ಧರ್ಮಸ್ಥಳಕ್ಕೆ ಬರೆದುಕೊಟ್ಟರು. ನನ್ನನ್ನು ಸತ್ತಂತೆ ಪರಿಗಣಿಸಿದರು. ಅದು ನನಗೆ ತುಂಬಾ ನೋವು ಕೊಟ್ಟಿತು. ಹಾಗಾಗಿ ಅವರು ಹೇಳಿದಂತೆ ಮಾಡಿದ್ದೇನೆ. ನಾನು ತೋರಿಸಿರುವ ಫೋಟೋ ಎಲ್ಲವೂ ಫೇಕ್. ನಾನು ಧರ್ಮಸ್ಥಳ ಕ್ಷೇತ್ರ ಅಥವಾ ಅಲ್ಲಿನ ಯಾವುದೇ ವ್ಯಕ್ತಿ ವಿರುದ್ಧ ದೂರು ಕೊಟ್ಟಿಲ್ಲ, ಧರ್ಮಸ್ಥಳ ಗ್ರಾಮದಲ್ಲಿ ಎಂದು ದೂರು ಕೊಟ್ಟಿದ್ದೆ ಎಂದು ಅವರು ಹೇಳಿದ್ದಾರೆ.







