ಸಿಎಸ್ಆರ್ ನಿಧಿಗಳ ವೆಚ್ಚ ನಿಯಂತ್ರಿಸಲು ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಶಾಸನಬದ್ಧ ಅಧಿಕಾರ ಇಲ್ಲ

ಬೆಂಗಳೂರು : ಕೈಗಾರಿಕೆ ಮತ್ತು ಕಾರ್ಪೋರೇಟ್ ಕಂಪೆನಿಗಳ ಸಿಎಸ್ಆರ್ ನಿಧಿಗಳ ವೆಚ್ಚದ ಬಗ್ಗೆ ನಿಯಂತ್ರಿಸಲು ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಶಾಸನಬದ್ಧ ಅಧಿಕಾರವೇ ಇಲ್ಲ.
ಹೀಗೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರು ವಿಧಾನ ಪರಿಷತ್ನಲ್ಲಿ ಉತ್ತರಿಸಿರುವುದು ಇದೀಗ ಬಹಿರಂಗವಾಗಿದೆ.
ರಾಜ್ಯದಲ್ಲಿ ಲಭ್ಯವಿರುವ 10 ಸಾವಿರ ಕೋಟಿ ರೂ.ಸಿಎಸ್ಆರ್ ನಿಧಿಯ ಪ್ರತಿಯೊಂದು ಪೈಸೆಯು ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗವಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗಷ್ಟೇ ತಾಕೀತು ಮಾಡಿದ್ದರು. ಅಲ್ಲದೇ ಗ್ರಾಮೀಣ ಸರಕಾರಿ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ಸರಕಾರವು ಸಿಎಸ್ಆರ್ ಹೊಸ ನೀತಿಯನ್ನು ಜಾರಿಗೊಳಿಸಿದೆ ಎಂದು ಖುದ್ದು ಮುಖ್ಯಮಂತ್ರಿಯವರು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಬೃಹತ್ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ವಿಧಾನ ಪರಿಷತ್ನಲ್ಲಿ ನೀಡಿದ್ದ ಉತ್ತರವು ಮುನ್ನೆಲೆಗೆ ಬಂದಿದೆ.
ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕೆಗಳು ಮತ್ತು ಕಾರ್ಪೋರೇಟ್ ಕಂಪೆನಿಗಳು ತಮ್ಮ ಲಾಭಾಂಶದಲ್ಲಿ ಸಿಎಸ್ಆರ್ ನಿಧಿಯನ್ನು ರಾಜ್ಯದ ಮೂಲಭೂತ ಸೌಕರ್ಯಗಳಿಗೆ ಮಾತ್ರ ವಿನಿಯೋಗಿಸುವ ನಿಟ್ಟಿನಲ್ಲಿ ಕಾನೂನು ನಿಯಮಾವಳಿ ರಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ನಿಯಮ 330ರ ಅಡಿಯಲ್ಲಿ ಸೂಚನೆ ಮಂಡಿಸಿದ್ದರು.
ಈ ಸೂಚನೆಗೆ ಉತ್ತರಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ‘ಕಂಪೆನಿಗಳ ಸಿಎಸ್ಆರ್ ನಿಧಿಗಳ ವೆಚ್ಚದ ಬಗ್ಗೆ ನಿಯಂತ್ರಿಸಲು ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಶಾಸನಬದ್ಧ ಅಧಿಕಾರ ಇರುವುದಿಲ್ಲ,’ ಎಂದು ಉತ್ತರಿಸಿದ್ದಾರೆ.
ಅಲ್ಲದೇ ಭಾರತ ಸರಕಾರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯವು ಸಿಎಸ್ಆರ್ ಜಾರಿಗೆ ಸಂಬಂಧಿಸಿದಂತೆ ನಿಯಂತ್ರಣಾತ್ಮಕ ಪಾತ್ರ ಹೊಂದಿದೆ. ಕಂಪೆನಿಗಳು ಸಿಎಸ್ಆರ್ ಪಾಲನೆ ಬಗ್ಗೆ ವರದಿಯನ್ನು ಎಂಸಿಎ 221 ಪೋರ್ಟಲ್ನಲ್ಲಿ ಸಲ್ಲಿಸಬೇಕು. ಇದನ್ನು ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯವು ಮೇಲ್ವಿಚಾರಣೆ ಮಾಡುತ್ತದೆ ಎಂದು ಉತ್ತರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಭಾರತದಲ್ಲಿ ಕಳೆದ 5 ಹಣಕಾಸು ವರ್ಷಗಳಲ್ಲಿ (2020-21 ರಿಂದ 2024-25) ಒಟ್ಟು 1,60,000 ಕೋಟಿ ರೂ.ಗೂ ಹೆಚ್ಚು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯನ್ನು ಕಂಪೆನಿಗಳು ವ್ಯಯಿಸಿವೆ. ಭಾರತ ಸರಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಮತ್ತು ವಿವಿಧ ಸಿಎಸ್ಆರ್ ವರದಿಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಸಿಎಸ್ಆರ್ ನಿಧಿ ಸಂಗ್ರಹಣೆ ಮತ್ತು ಖರ್ಚು ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ ಎಂದು ಗೊತ್ತಾಗಿದೆ.
2020-21ರಲ್ಲಿ 26,210.95 ಕೋಟಿ ರೂ., 2021-22ರಲ್ಲಿ 27,141.45 ಕೋಟಿ ರೂ., 2022-23ರಲ್ಲಿ 30,932.08 ಕೋಟಿ ರೂ., 2023-24ರಲ್ಲಿ 34,908.75 ಕೋಟಿರೂ., 2024-25ರಲ್ಲಿ 40,794 ಕೋಟಿ ರೂ.(ದಾಖಲೆ ವೆಚ್ಚ) ಒಟ್ಟು 1,59,987 ಕೋಟಿ ರೂ.ನಷ್ಟು ಸಂಗ್ರಹವಾಗಿತ್ತು.
ಭಾರತದಲ್ಲಿ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಅಡಿಯಲ್ಲಿ ಸಂಗ್ರಹವಾಗಿರುವ ಮತ್ತು ಖರ್ಚು ಮಾಡಲಾದ ಒಟ್ಟು ನಿಧಿಯ ಮೊತ್ತವು ಇತ್ತೀಚಿನ ವರ್ಷಗಳಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಇತ್ತೀಚಿನ ವರದಿಗಳ ಪ್ರಕಾರ, 2024-25ರ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಸಿಎಸ್ಆರ್ ವೆಚ್ಚವು 40,794 ಕೋಟಿ ರೂ.ಗಳಿಗೆ ತಲುಪಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (1,309 ಕೋಟಿ ರೂ.) ಅತಿ ಹೆಚ್ಚು ಸಿಎಸ್ಆರ್ ವೆಚ್ಚ ಮಾಡಿದ ಕಂಪೆನಿಯಾಗಿದೆ. ನಂತರದ ಸ್ಥಾನಗಳಲ್ಲಿ ಎಚ್ಡಿಎಫ್ಸಿ ಬ್ಯಾಂಕ್ (1,039 ಕೋಟಿ ರೂ.) ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಇವೆ. ಸಂಗ್ರಹವಾದ ನಿಧಿಯಲ್ಲಿ ಶೇ.98 ರಷ್ಟು ಭಾಗವನ್ನು (39,851 ಕೋಟಿ ರೂ.) ಕಂಪೆನಿಗಳು ನೇರವಾಗಿ ಸಾಮಾಜಿಕ ಯೋಜನೆಗಳಿಗೆ ಬಳಸಿದ್ದು, ಕೇವಲ ಶೇ.2ರಷ್ಟು ಹಣವನ್ನು ಮಾತ್ರ ಸರಕಾರಿ ನಿಧಿಗಳಿಗೆ ವರ್ಗಾಯಿಸಿವೆ ಎಂದು ಗೊತ್ತಾಗಿದೆ.
ಭಾರತದಲ್ಲೇ ಅತಿ ಹೆಚ್ಚು ಸಿಎಸ್ಆರ್ ನಿಧಿ ಪಡೆದ ರಾಜ್ಯವಾಗಿ ಮಹಾರಾಷ್ಟ್ರ (8,631 ಕೋಟಿ ರೂ.) ಮೊದಲ ಸ್ಥಾನದಲ್ಲಿದೆ. ಗುಜರಾತ್, ಕರ್ನಾಟಕ (ಸುಮಾರು 2,254 ಕೋಟಿ ರೂ.ಗೂ ಹೆಚ್ಚು), ದಿಲ್ಲಿ ಮತ್ತು ತಮಿಳುನಾಡು ನಂತರದ ಸ್ಥಾನಗಳಲ್ಲಿವೆ. (ಕರ್ನಾಟಕದಲ್ಲಿ ಪ್ರಸ್ತುತ ಸುಮಾರು 10,000 ಕೋಟಿ ರೂ.ಯಷ್ಟು ಒಟ್ಟು ಸಿಎಸ್ಆರ್ ನಿಧಿ ಲಭ್ಯತೆಯಿದ್ದು, ಇದನ್ನು ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿಗೆ ಬಳಸಲು ರಾಜ್ಯ ಸರಕಾರ ಆದ್ಯತೆ ನೀಡುತ್ತಿದೆ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಆರೋಗ್ಯ ರಕ್ಷಣೆ ಮತ್ತು ನೈರ್ಮಲ್ಯೀಕರಣ ಯೋಜನೆಗಳಿಗೆ ಬಳಸಲಾಗುತ್ತಿದೆ. ಸಿಎಸ್ಆರ್ ನಿಧಿಯ ಹೆಚ್ಚಿನ ಪಾಲು ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದಂತಹ ಕೈಗಾರಿಕಾ ಪ್ರಗತಿ ಹೊಂದಿದ ರಾಜ್ಯಗಳಿಗೆ ಲಭಿಸುತ್ತಿದೆ.






