ಮಹಿಳೆಯರ ಅಸಭ್ಯ ಚಿತ್ರಗಳನ್ನು ರಚಿಸುತ್ತಿದೆ Grok AI; ಏನ್ ನಡೀತಿದೆ?

ಸಾಂದರ್ಭಿಕ ಚಿತ್ರ | Photo Credit : freepik
ಸಾಮಾಜಿಕ ಮಾಧ್ಯಮ X ನಲ್ಲಿ ‘ಬಿಕಿನಿ ಟ್ರೆಂಡ್’ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಳಕೆದಾರರು X ವೇದಿಕೆಯ AI ಚಾಟ್ಬಾಟ್ Grok ಅನ್ನು ದುರುಪಯೋಗಪಡಿಸಿಕೊಂಡು ಮಹಿಳೆಯರು ಮತ್ತು ಮಕ್ಕಳ ಫೋಟೋಗಳನ್ನು ಅಶ್ಲೀಲ ಚಿತ್ರಗಳಾಗಿ, ಬಿಕಿನಿ ಧರಿಸಿರುವ ಫೋಟೋಗಳಾಗಿಯೂ ಮಾರ್ಫ್ ಮಾಡುತ್ತಿದ್ದಾರೆ. ಈ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಆಕ್ರೋಶದ ಜೊತೆಗೆ AI ಬಗ್ಗೆ ಗಂಭೀರ ಕಳವಳವನ್ನೂ ಉಂಟು ಮಾಡಿದೆ.
ಈ ಟ್ರೆಂಡ್ ಕೆಲವು ದಿನಗಳ ಹಿಂದೆ ಆರಂಭವಾಗಿದ್ದರೂ, ಹೊಸ ವರ್ಷದ ಮುನ್ನಾದಿನದಂದು ತುಸು ಹೆಚ್ಚಾಗಿ ಟ್ರೆಂಡ್ ಆಗಿತ್ತು. ಮಹಿಳೆಯರು ಮತ್ತು ಮಕ್ಕಳ ಚಿತ್ರಗಳನ್ನು ಡಿಜಿಟಲ್ ರೂಪದಲ್ಲಿ ಅಶ್ಲೀಲ ರೀತಿಯಲ್ಲಿ ಚಿತ್ರಿಸಲು ಬಳಕೆದಾರರು Grok ಗೆ ನೇರ ಸೂಚನೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಸಮ್ಮತಿಯಿಲ್ಲದೆ ಹಲವಾರು ಮಹಿಳೆಯರ ಚಿತ್ರಗಳನ್ನು ಅಶ್ಲೀಲವಾಗಿ ರೂಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗಿದೆ. ದೇಶಾದ್ಯಂತ ಮಹಿಳಾ ಹಕ್ಕುಗಳ ಕಾರ್ಯಕರ್ತರು ಹಾಗೂ ಬಳಕೆದಾರರು, ಇಂತಹ ದುರುಪಯೋಗಕ್ಕೆ ಅವಕಾಶ ನೀಡುತ್ತಿರುವ Grok AI ವೈಶಿಷ್ಟ್ಯವನ್ನು ತಕ್ಷಣವೇ ಸರಿಪಡಿಸಬೇಕೆಂದು Elon Musk ಅವರ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಸದ್ಯ X ವೇದಿಕೆ Grok ನ ಈ ಮೀಡಿಯಾ ಫೀಚರ್ ಅನ್ನು ಮರೆಮಾಡಿದ್ದರೂ, ದುರುಪಯೋಗ ನಿಂತಿಲ್ಲ.
ಈ ಟ್ರೆಂಡ್ ಇದೀಗ X ನಲ್ಲಿ ಭಾರತೀಯ ಬಳಕೆದಾರರನ್ನೂ ತಲುಪಿದೆ. ಇದು ಕೇವಲ ಆನ್ಲೈನ್ ಟ್ರೋಲಿಂಗ್ ಅಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಸೈಬರ್ ಸುರಕ್ಷತಾ ತಜ್ಞರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಪ್ರಕಾರ, ಮಹಿಳೆಯರು ಮತ್ತು ಮಕ್ಕಳ ಚಿತ್ರಗಳನ್ನು AI ಬಳಸಿ ಮಾರ್ಫಿಂಗ್ ಮಾಡುವುದು ಒಂದು ರೀತಿಯ ಲೈಂಗಿಕ ಹಿಂಸೆಯಾಗಿದೆ. ಇಂತಹ ಕೃತ್ಯಗಳು ಮಹಿಳೆಯರ ಘನತೆ ಮತ್ತು ಒಪ್ಪಿಗೆಯನ್ನು ಉಲ್ಲಂಘಿಸುತ್ತವೆ. ಈ ಚಿತ್ರಗಳ ದುರುಪಯೋಗವು ಸಂತ್ರಸ್ತರಿಗೆ ತೀವ್ರ ಮಾನಸಿಕ ಆಘಾತವನ್ನು ಉಂಟುಮಾಡುವ ಸಾಧ್ಯತೆ ಇದೆ.
►ಕೇಂದ್ರ ಸರ್ಕಾರಕ್ಕೆ ಪ್ರಿಯಾಂಕಾ ಪತ್ರ
ಅಸಭ್ಯ ಮತ್ತು ಅಶ್ಲೀಲ ರೀತಿಯಲ್ಲಿ ಮಹಿಳೆಯರ ಫೋಟೋಗಳನ್ನು ಸೃಷ್ಟಿಸಲು ಪುರುಷರು Grok AI ಬಳಸುತ್ತಿದ್ದಾರೆ. ಮಹಿಳೆಯರ ಫೋಟೋಗಳನ್ನು ಅಪ್ ಲೋಡ್ ಮಾಡಿ, ಅವರನ್ನು ತುಂಡುಡುಗೆಯಲ್ಲೋ ಅಥವಾ ಅಶ್ಲೀಲ ಸ್ಥಿತಿಯಲ್ಲೋ ತೋರಿಸುವಂತೆ AI ಬಾಟ್ಗೆ ಪ್ರಾಂಪ್ಟ್ ನೀಡಲಾಗುತ್ತಿದೆ. ಇದಕ್ಕಾಗಿ ನಕಲಿ ಖಾತೆಗಳನ್ನು ಸೃಷ್ಟಿಸಲಾಗುತ್ತಿದೆ. ಇದು ಸಾಮಾಜಿಕ ಮಾಧ್ಯಮದ ಹೊಸ ಟ್ರೆಂಡ್ ಆಗಿದೆ ಎಂದು X ಪ್ಲಾಟ್ಫಾರ್ಮ್ನ AI ಚಾಟ್ಬಾಟ್ Grok ದುರ್ಬಳಕೆ ಕುರಿತು ರಾಜ್ಯಸಭಾ ಸಂಸದೆ ಹಾಗೂ ಶಿವಸೇನಾ ಪಕ್ಷದ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.
“ಇದು ಖಂಡಿತವಾಗಿಯೂ ಒಪ್ಪಬಹುದಾದ ವಿಷಯವಲ್ಲ. ಇದು AI ಕಾರ್ಯದ ಸಂಪೂರ್ಣ ದುರುಪಯೋಗವಾಗಿದೆ. Grok ಇಂತಹ ಪ್ರಾಂಪ್ಟ್ ಗಳನ್ನು ಸ್ವೀಕರಿಸುತ್ತಿರುವುದೇ ಗಂಭೀರ ಸಂಗತಿ. ಇದು ಮಹಿಳೆಯರ ಗೌಪ್ಯತಾ ಹಕ್ಕಿನ ಉಲ್ಲಂಘನೆಯಾಗಿದೆ. ಅವರ ಚಿತ್ರಗಳ ಅನಧಿಕೃತ ಬಳಕೆ ಅನೈತಿಕ ಮಾತ್ರವಲ್ಲ, ಅಪರಾಧವೂ ಆಗಿದೆ. ಈ ವಿಷಯವನ್ನು X ಜತೆಗೆ ಚರ್ಚಿಸಿ, ಡಿಜಿಟಲ್ ಪ್ಲಾಟ್ಫಾರ್ಮ್ ಗಳನ್ನು ಮಹಿಳೆಯರಿಗೆ ಸುರಕ್ಷಿತವಾಗಿಸಲು AI ಅಪ್ಲಿಕೇಶನ್ ಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳು ಅಳವಡಿಸಲಾಗಿದೆ ಎಂಬುದನ್ನು ಖಚಿತಪಡಿಸಬೇಕು. ಸೃಜನಶೀಲತೆ ಮತ್ತು ನಾವೀನ್ಯತೆಯ ಹೆಸರಿನಲ್ಲಿ ಮಹಿಳೆಯರ ಘನತೆಯನ್ನು ಸಾರ್ವಜನಿಕ ಹಾಗೂ ಡಿಜಿಟಲ್ ಮಟ್ಟದಲ್ಲಿ ಉಲ್ಲಂಘಿಸುವಾಗ ಭಾರತ ಮೂಕ ಪ್ರೇಕ್ಷಕನಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇತರ ಪ್ರಮುಖ ತಂತ್ರಜ್ಞಾನ ವೇದಿಕೆಗಳಲ್ಲಿಯೂ ಇದೇ ರೀತಿಯ ಮಾದರಿಗಳು ಕಾಣಿಸುತ್ತಿದ್ದು, ಅವು ಅನಿಯಂತ್ರಿತವಾಗಿವೆ. ಮಹಿಳೆಯರು ಇಂತಹ ದುರುಪಯೋಗಕ್ಕೆ ಒಳಗಾಗದಂತೆ ಈ ಸಮಸ್ಯೆಯನ್ನು ಆದ್ಯತೆಯಾಗಿ ಪರಿಗಣಿಸಬೇಕು” ಎಂದು ಪ್ರಿಯಾಂಕಾ ಚತುರ್ವೇದಿ ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.
►Grok AI ನಲ್ಲಿ ಮಹಿಳೆಯರ ಅಶ್ಲೀಲ ಚಿತ್ರ
ಎಲಾನ್ ಮಸ್ಕ್ ಒಡೆತನದ X ಪ್ಲಾಟ್ಫಾರ್ಮ್ ನ Grok AI ಗೆ ಪ್ರಾಂಪ್ಟ್ ನೀಡಿ ಮಹಿಳೆಯರ ಚಿತ್ರಗಳನ್ನು ಅಶ್ಲೀಲವಾಗಿ ಬಿಂಬಿಸುವ ಕಾರ್ಯವನ್ನು ಕೆಲವು ಖಾತೆಗಳು ಮಾಡುತ್ತಿವೆ ಎಂದು ಅದೇ ವೇದಿಕೆಯಲ್ಲಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. AI ಚಾಟ್ಬಾಟ್ ನೀಡಿದ ಪ್ರಾಂಪ್ಟ್ಗಳಿಗೆ ಅನುಗುಣವಾಗಿ ಅಶ್ಲೀಲ ಚಿತ್ರಗಳನ್ನು ಸೃಷ್ಟಿಸಲಾಗುತ್ತಿದ್ದು, ಮಹಿಳೆಯರ ಫೋಟೋಗಳ ದುರುಪಯೋಗ ನಡೆಯುತ್ತಿದೆ ಎಂದು ಹಲವರು ದನಿಯೆತ್ತಿದ್ದಾರೆ.
►Grok ನಲ್ಲಿ ಏನ್ ನಡೀತಿದೆ?
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ನಲ್ಲಿ ನೀವು ಫೋಟೋವೊಂದನ್ನು ಹಂಚಿಕೊಂಡಿದ್ದೀರಿ ಎಂದು ಊಹಿಸಿಕೊಳ್ಳಿ. ನಿಮ್ಮದು ಪಬ್ಲಿಕ್ ಪೋಸ್ಟ್ ಆಗಿದ್ದರೆ, ಅದನ್ನು ಯಾರಾದರೂ ಸೇವ್ ಮಾಡಿಕೊಂಡು AI ಚಾಟ್ಬಾಟ್ಗೆ ಅಪ್ಲೋಡ್ ಮಾಡಿ ನಿಮ್ಮ ಫೋಟೋದಲ್ಲಿನ ಬಟ್ಟೆಯನ್ನು ಬದಲಾಯಿಸಬಹುದು ಅಥವಾ ಬಟ್ಟೆಯೇ ಇಲ್ಲದಂತೆ ಮಾಡಬಹುದು. Grok AI ನಲ್ಲಿ ಈ ರೀತಿಯ ದುರುಪಯೋಗ ನಡೆಯುತ್ತಿದೆ ಎಂದು ಹಲವಾರು ಮಹಿಳೆಯರು ದೂರಿದ್ದಾರೆ. “Hey Grok, put this woman in a bikini” ಅಥವಾ “remove her shirt” ಎಂಬಂತಹ ಪ್ರಾಂಪ್ಟ್ಗಳನ್ನು Grok ಏಕೆ ಸ್ವೀಕರಿಸುತ್ತಿದೆ ಎಂದು ಮಹಿಳೆಯರು ಪ್ರಶ್ನಿಸಿದ್ದಾರೆ. ಪಬ್ಲಿಕ್ ಪ್ಲಾಟ್ಫಾರ್ಮ್ಗಳಲ್ಲಿ ಹಂಚಿಕೊಳ್ಳಲಾಗಿರುವ ಫೋಟೋಗಳು ಈ ರೀತಿಯಾಗಿ ದುರ್ಬಳಕೆಯಾಗುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಎಲಾನ್ ಮಸ್ಕ್ ಜನರಿಗಾಗಿ ಉತ್ಪನ್ನಗಳನ್ನು ನಿರ್ಮಿಸುವ ಬಗ್ಗೆ ಮಾತನಾಡುತ್ತಾರೆ. ಆದರೆ Grok AI ಸ್ವತಂತ್ರವಾಗಿದ್ದು, ಯಾವುದೇ ಮಿತಿಗಳಿಲ್ಲದಂತೆ ವರ್ತಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಸಮಸ್ಯೆ ಆಯ್ದ ಪ್ರದೇಶಗಳಿಗೆ ಅಥವಾ ಜನರಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಪಂಚದಾದ್ಯಂತ X ಬಳಕೆದಾರರು ತಮ್ಮ ಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ದೂರು ನೀಡಿದ್ದಾರೆ. AI ಸೃಷ್ಟಿಸಿದ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ಗೌಪ್ಯತೆಯ ಉಲ್ಲಂಘನೆ ಮಾತ್ರವಲ್ಲ, ಮಾನಸಿಕವಾಗಿ ಸಂತ್ರಸ್ತರ ಮೇಲೆ ಭಾರೀ ಪರಿಣಾಮ ಬೀರುತ್ತದೆ.
ಅನೇಕರು Grok ಅನ್ನು ಪ್ರಶ್ನಿಸಿದ್ದು, ಇಂತಹ ಅಶ್ಲೀಲ ವಿನಂತಿಗಳಿಗೆ ಅದು ಏಕೆ ಪ್ರತಿಕ್ರಿಯಿಸುತ್ತಿದೆ ಎಂದು ಕೇಳಿದ್ದಾರೆ. ಆದರೆ AI ಮಾದರಿಯು ಸ್ವಯಂ-ರಚಿತ ಉತ್ತರಗಳನ್ನು ನೀಡುತ್ತಿದ್ದು, ಹೆಚ್ಚಿನ ಸಹಾಯಕ್ಕಾಗಿ ಬೆಂಬಲ ತಂಡವನ್ನು ಸಂಪರ್ಕಿಸಲು ಸೂಚಿಸಿದೆ.
X ಪ್ಲಾಟ್ಫಾರ್ಮ್ನ ಮುಖ್ಯಸ್ಥರು ಈ ಆರೋಪಗಳಿಗೆ ಇನ್ನೂ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ. Grok AI ಸಂಬಂಧಿತ ಸಮಸ್ಯೆಗಳನ್ನು ಸರಿಪಡಿಸುವ ಬಗ್ಗೆ ಬಳಕೆದಾರರಿಗೆ ಯಾವುದೇ ಭರವಸೆ ನೀಡಲಾಗಿಲ್ಲ.
ಟ್ವಿಟರ್ಗಿಂತ ಹೆಚ್ಚಿನದನ್ನು ಮೀರಿದ ವೇದಿಕೆಯಾಗಿ X ಅನ್ನು ಮಸ್ಕ್ ರೂಪಿಸಿರುವುದು ನಿಜ. ಅದೇ ವೇಳೆ Grok AI, AI ಕ್ಷೇತ್ರದಲ್ಲಿ ChatGPT ಮತ್ತು Gemini ಜೊತೆಗೆ ಸ್ಪರ್ಧಿಸುತ್ತಿದೆ. ಆದರೆ ಇಂತಹ ದುರುಪಯೋಗಗಳು ತಂತ್ರಜ್ಞಾನ ಮೇಲಿನ ಜನರ ನಂಬಿಕೆಯನ್ನು ಕುಂದಿಸುತ್ತಿವೆ.
►ಕಾನೂನು ಕ್ರಮ ತೆಗೆದುಕೊಳ್ಳಬಹುದೇ?
ಇದು ಕೀಟಲೆ ಅಲ್ಲ, ಇದು AI-enabled ಲೈಂಗಿಕ ದೌರ್ಜನ್ಯ. ಸಂತ್ರಸ್ತರಿಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಅಡಿಯಲ್ಲಿ ಪರಿಹಾರಗಳಿವೆ. ವಿಶೇಷವಾಗಿ ಸೆಕ್ಷನ್ 66E (ಗೌಪ್ಯತೆಯ ಉಲ್ಲಂಘನೆ) ಮತ್ತು 67/67A (ಅಶ್ಲೀಲ ಅಥವಾ ಲೈಂಗಿಕ ವಿಷಯ ಪ್ರಕಟಣೆ/ರವಾನೆ) ಅನ್ವಯವಾಗುತ್ತವೆ. ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ 77 (voyeurism) ಹಾಗೂ ಮಹಿಳೆಯರ ಘನತೆಯ ಮೇಲೆ ದಾಳಿ ಸಂಬಂಧಿತ ವಿಧಿಗಳ ಅಡಿಯಲ್ಲಿ ಇಂತಹ ವಿಷಯಗಳ ರಚನೆ ಮತ್ತು ಪ್ರಸಾರ ಅಪರಾಧವಾಗಿದೆ. ಸಂತ್ರಸ್ತರು ಅಪ್ರಾಪ್ತರಾಗಿದ್ದರೆ, POCSO ಕಾಯ್ದೆಯಡಿ ಪ್ರಕರಣ ದಾಖಲಾಗುತ್ತದೆ. ಸೆಕ್ಷನ್ 11, 12, 13 ಮತ್ತು 14 AI ಸೃಷ್ಟಿಸಿದ ಅಶ್ಲೀಲ ಚಿತ್ರಗಳನ್ನು ಲೈಂಗಿಕ ಶೋಷಣೆಯಾಗಿ ಪರಿಗಣಿಸುತ್ತವೆ ಎಂದು ಸೈಬರ್-ಕಾನೂನು ತಜ್ಞ ಅಡ್ವಕೇಟ್ ಪ್ರಶಾಂತ್ ಮಾಲಿ ಹೇಳಿದ್ದಾರೆ ಎಂದು CNBC-TV18 ವರದಿ ಉಲ್ಲೇಖಿಸಿದೆ.
Grok ನಲ್ಲಿ ಆಕ್ಷೇಪಾರ್ಹ ಫೋಟೋಗಳನ್ನು ಸೃಷ್ಟಿಸುವ ಟ್ರೆಂಡ್ ಕುರಿತು ಸುಪ್ರೀಂ ಕೋರ್ಟ್ ವಕೀಲನೆಂದು ಗುರುತಿಸಿಕೊಂಡಿರುವ X ಬಳಕೆದಾರ ಶುಭಮ್ ಗುಪ್ತಾ, ಇಂತಹ ಕೃತ್ಯಗಳನ್ನು ನಿರ್ಲಕ್ಷಿಸಬಾರದು ಎಂದು ಹೇಳಿದ್ದಾರೆ. ಈ ರೀತಿಯ ಫೋಟೋಗಳನ್ನು ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು X ಪೋಸ್ಟ್ಗಳಲ್ಲಿ ವಿವರಿಸಿದ್ದಾರೆ.
ಸಂತ್ರಸ್ತರು ಪ್ರಾಂಪ್ಟ್ ರಚಿಸಿದ ವ್ಯಕ್ತಿಯ ಪೂರ್ಣ ಗುರುತನ್ನು ತಿಳಿದುಕೊಳ್ಳಬೇಕಾಗಿಲ್ಲ. ಪ್ರಾಂಪ್ಟ್ ನೀಡಿದ ವ್ಯಕ್ತಿಯ ಸ್ಕ್ರೀನ್ಶಾಟ್ ಮತ್ತು ಪ್ರೊಫೈಲ್ ಲಿಂಕ್ ಸಾಕು. ಆಕ್ಷೇಪಾರ್ಹ ಪೋಸ್ಟ್ಗಳ ಸ್ಕ್ರೀನ್ಶಾಟ್ಗಳು ಮತ್ತು ಲಿಂಕ್ಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66E ಮತ್ತು 67A ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 77 ಮತ್ತು 336(4) ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಬಹುದು. ಸ್ಥಳೀಯ ಪೊಲೀಸ್ ಠಾಣೆ ಅಥವಾ ನ್ಯಾಯವ್ಯಾಪ್ತಿಯ ಸೈಬರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಎಂದು ಗುಪ್ತಾ ತಿಳಿಸಿದ್ದಾರೆ.
► ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯೆ
ಸಾಮಾಜಿಕ ಮಾಧ್ಯಮ ನಿಯಂತ್ರಣಕ್ಕಾಗಿ ಸಂಸದೀಯ ಸಮಿತಿಯು ಬಲಿಷ್ಠ ಕಾನೂನನ್ನು ಶಿಫಾರಸು ಮಾಡಿದೆ. ಅದನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು CNBC-TV18 ಜತೆಗೆ ಮಾತನಾಡಿದ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. Grok AI ಕುರಿತು ಪ್ರತಿಕ್ರಿಯಿಸಿದ ಅವರು, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಈ ಸಮಸ್ಯೆಯನ್ನು ಗಮನಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.







