LIC ಮಾರಾಟಕ್ಕಿಟ್ಟ ಕೇಂದ್ರ ಸರಕಾರ!

PC | PTI
LICಯಲ್ಲಿ ಕೇಂದ್ರ ಸರ್ಕಾರ ತನ್ನ 2.5 ರಿಂದ 3% ರಷ್ಟು ಪಾಲನ್ನು ಮಾರಾಟ ಮಾಡಲು ಯೋಜಿಸುತ್ತಿದೆ. ವರದಿಯ ಪ್ರಕಾರ, ಈ ಮಾರಾಟ ಆಫರ್ ಫಾರ್ ಸೇಲ್ (ಒಎಫ್ಎಸ್) ಮೂಲಕ ನಡೆಯಲಿದೆ.
ಒಎಫ್ಎಸ್ ಎಂದರೆ, ಒಂದು ಕಂಪೆನಿಯ ಅಸ್ತಿತ್ವದಲ್ಲಿರುವ ಷೇರುದಾರರು ತಮ್ಮ ಪಾಲನ್ನು ಷೇರು ಮಾರುಕಟ್ಟೆಯ ಮೂಲಕ ಮಾರಾಟ ಮಾಡುವ ವಿಧಾನ. ಸರ್ಕಾರ LICಯಲ್ಲಿ 96.5% ಪಾಲನ್ನು ಹೊಂದಿದೆ. ಈಗ ಸರ್ಕಾರ ತನ್ನ ಪಾಲಿನ ಒಂದು ಭಾಗವನ್ನು ಮಾರಾಟ ಮಾಡಲು ಯೋಜಿಸುತ್ತಿದೆ.
ಅಂದಾಜಿನ ಪ್ರಕಾರ, ಸರ್ಕಾರ ಈ ಮೊದಲ ಹಂತದ ಹಿಂಪಡೆಯುವಿಕೆಯಿಂದ 14,000 ದಿಂದ 17,000 ಕೋಟಿಗಳನ್ನು ಸಂಗ್ರಹಿಸಬಹುದು. ಸರ್ಕಾರ LICಯ ತನ್ನ ಪಾಲನ್ನು ಈ ವರ್ಷದ ಕೊನೆಯಲ್ಲಿ ಅಥವಾ 2026 ರ ಆರಂಭದಲ್ಲಿ ಮಾರಾಟ ಮಾಡಲಿದೆ.
ಆದರೆ ಸರ್ಕಾರ ಇದನ್ನು ಮಾಡುತ್ತಿರುವುದು ಇದೇ ಮೊದಲಲ್ಲ.
2022 ರ ಆರಂಭದಲ್ಲಿಯೂ, ಸರ್ಕಾರ LICಯ ಪಾಲನ್ನು ಮಾರಾಟ ಮಾಡಿತ್ತು. ಆಗ ಅದು ಆರಂಭಿಕ ಸಾರ್ವಜನಿಕ ಕೊಡುಗೆ, ಅಂದರೆ ಐಪಿಒ ವಿಧಾನವನ್ನು ಆಯ್ಕೆ ಮಾಡಿತ್ತು. ಆಗ 3.5% ರಷ್ಟು ಪಾಲನ್ನು ಮಾರಾಟ ಮಾಡಲಾಗಿತ್ತು. ಆ ಮಾರಾಟದ ಮೂಲಕ 21,000 ಕೋಟಿಗಳನ್ನು ಸಂಗ್ರಹಿಸಲಾಯಿತು.
LIC ಷೇರುಗಳನ್ನು ಖರೀದಿಸುವವರ ಪಟ್ಟಿಯಲ್ಲಿ ಸಾಮಾನ್ಯ ಜನರು ಅಂದರೆ ಚಿಲ್ಲರೆ ಹೂಡಿಕೆದಾರರು ಮಾತ್ರವಲ್ಲದೆ ಮ್ಯೂಚುವಲ್ ಫಂಡ್ಗಳು, ಪಿಂಚಣಿ ನಿಧಿಗಳು, ವಿದೇಶಿ ಪೋರ್ಟ್ಫೋಲಿಯೋ ಹೂಡಿಕೆದಾರರಂತಹ ಸಾಂಸ್ಥಿಕ ಹೂಡಿಕೆದಾರರೂ ಸೇರಿದ್ದಾರೆ.
ಸರ್ಕಾರ LICಯಲ್ಲಿನ ತನ್ನ ಪಾಲನ್ನು ಏಕೆ ಮಾರಾಟ ಮಾಡಲು ಮುಂದಾಗಿ ಎಂಬುದು ಈಗ ಪ್ರಶ್ನೆ.
ಇದಕ್ಕೆ ಮೂರು ಪ್ರಮುಖ ಕಾರಣಗಳಿವೆ.
ಮೊದಲನೆಯದು, ಷೇರು ಮಾರುಕಟ್ಟೆಯನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆಯಾದ ಸೆಬಿ ಸಾರ್ವಜನಿಕ ಪಾಲನ್ನು 3.5 ರಿಂದ 10% ಕ್ಕೆ ಹೆಚ್ಚಿಸಲು LICಗೆ ನಿರ್ದೇಶನ ನೀಡಿದೆ. LIC ಈ ಗುರಿಯನ್ನು 16 ಮೇ 2027 ರೊಳಗೆ ಸಾಧಿಸಬೇಕಿದೆ.
ಎರಡನೆಯದಾಗಿ, ಸೆಬಿ ನಿಯಮಗಳ ಪ್ರಕಾರ ಯಾವುದೇ ಪ್ರವರ್ತಕ ತನ್ನ ಪಟ್ಟಿಮಾಡಿದ ಕಂಪೆನಿಯಲ್ಲಿ 75% ಕ್ಕಿಂತ ಹೆಚ್ಚು ಪಾಲನ್ನು ಹೊಂದಲು ಸಾಧ್ಯವಿಲ್ಲ ಮತ್ತು ಸರ್ಕಾರ LIC ಯ ಪ್ರವರ್ತಕವಾಗಿದೆ.
ಮೂರನೆಯ ಕಾರಣ, ಕೇಂದ್ರ ಸರ್ಕಾರ ಈ ವರ್ಷದ ಬಜೆಟ್ನಲ್ಲಿ ತನ್ನ ಒಡೆತನದ ಕಂಪೆನಿಗಳಿಂದ 47,000 ಕೋಟಿಗಳ ಷೇರು ಮಾರಾಟ ಗುರಿ ನಿಗದಿಪಡಿಸಿದೆ. ಇದಕ್ಕಾಗಿ ಸರ್ಕಾರ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಕಡಿಮೆ ಮಾಡಲು ನಿರ್ಧರಿಸಿದೆ.
ಈ ಸುದ್ದಿ ಬರುತ್ತಿದ್ದಂತೆ LIC ಷೇರುಗಳಲ್ಲಿ ಕುಸಿತ ಕಂಡುಬಂದಿದೆ. LIC ಷೇರುಗಳಲ್ಲಿ 3% ರಷ್ಟು ಕುಸಿತವಾಗಿದೆ.
►ಇದರಿಂದ ಏನು ಪರಿಣಾಮವಾಗಬಹುದು?
ತಜ್ಞರ ಪ್ರಕಾರ, ಈ ಮಾರಾಟ ನಡೆದಲ್ಲಿ ದೊಡ್ಡ ಹೂಡಿಕೆದಾರರು ಮತ್ತು ದೊಡ್ಡ ಸಂಸ್ಥೆಗಳ ಹೂಡಿಕೆದಾರರು ಇದರಲ್ಲಿ ತೊಡಗಿಸಿಕೊಳ್ಳುತ್ತಾರೆ. ಚಿಲ್ಲರೆ ಹೂಡಿಕೆದಾರರಿಗೆ ಇದರಲ್ಲಿ ಯಾವುದೇ ಲಾಭವಿರುವುದಿಲ್ಲ.
LICಯ ಪಾಲು ಮಾರಾಟದ ಸುದ್ದಿ ಬಂದಾಗ, LIC ಕೂಡ ಬ್ಯಾಂಕಿನಲ್ಲಿ ತನ್ನ ಪಾಲನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರ ಮತ್ತು ಎಲ್ಯಸಿ ಒಟ್ಟಾಗಿ ಐಡಿಬಿಐ ಬ್ಯಾಂಕಿನಲ್ಲಿರುವ ತಮ್ಮ ಸರಿಸುಮಾರು 60.72% ಪಾಲನ್ನು ಮಾರಾಟ ಮಾಡಲು ತಯಾರಿ ನಡೆಸುತ್ತಿವೆ. ಸರ್ಕಾರ ಬ್ಯಾಂಕಿನಲ್ಲಿ ಸರಿಸುಮಾರು 30% ಪಾಲನ್ನು ಹೊಂದಿದೆ ಮತ್ತು LIC ಕೂಡ 30% ಪಾಲನ್ನು ಹೊಂದಿದೆ ಎಂದು ಹೇಳಲಾಗಿದೆ.







