ಮೋದಿ ಆಡಳಿತದ 11ನೇ ವರ್ಷ: ಭಾರತದ ಪರಿವರ್ತನೆಯಲ್ಲಿ ಮೈಲುಗಲ್ಲು

ಪ್ರಧಾನಿ ನರೇಂದ್ರ ಮೋದಿ (PTI)
ಸರಕು ಮತ್ತು ಸೇವೆಗಳನ್ನು ಸಮಾಜದ ಅಂಚಿನಲ್ಲಿರುವವರಿಗೆ ಹಾಗೂ ಸೌಲಭ್ಯವಂಚಿತರಿಗೆ ತಲುಪಿಸುವ ರೀತಿಯ ಮೂಲಕ ಪ್ರಜಾಪ್ರಭುತ್ವಗಳನ್ನು ಅತ್ಯುತ್ತಮ ಮಟ್ಟದಲ್ಲಿ ವಿಮರ್ಶೆಗೆ ಒಳಪಡಿಸಬಹುದು. ಭಾರತದಲ್ಲಿ, ಆ ಪರೀಕ್ಷೆ ನಿಖರವಾಗಿದೆ. ಯಾವುದೇ ಘೋಷಣೆಯು ಎಂದಿಗೂ ಬಹುಕಾಲ ಉಳಿಯುವುದಿಲ್ಲ, ಪರಿಣಾಮವಿಲ್ಲದೆ ಯಾವುದೇ ಹಕ್ಕು ಉಳಿಯುವುದಿಲ್ಲ. ನಿಜವಾದ ಪರಿವರ್ತನೆ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು, ಏಕೆಂದರೆ ನಮ್ಮ ಪ್ರಜಾಪ್ರಭುತ್ವದಲ್ಲಿ ಮತ ಚಲಾಯಿಸುವುದು ‘ಅಂತ್ಯೋದಯ’ವೇ. ಅದಕ್ಕಾಗಿಯೇ, ಮೋದಿ 3.0 ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ದಿಲ್ಲಿ, ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿನ ಅದ್ಭುತ ಜನಾದೇಶಗಳನ್ನು ಕೇವಲ ರಾಜಕೀಯ ಮೈಲುಗಲ್ಲುಗಳಾಗಿ ಪರಿಗಣಿಸಬೇಕಿಲ್ಲ. ಈ ಜನಾದೇಶಗಳು ಇಂದಿನ ಭಾರತದಲ್ಲಿ ಜನರಿಗೆ ಸೇವೆ ತಲುಪಿಸುವುದರಿಂದ ಮಾತ್ರ ಅವರ ವಿಶ್ವಾಸ ಗಳಿಸಲು ಸಾಧ್ಯವೇ ಹೊರತು, ಬರೀ ವಾಕ್ಚಾತುರ್ಯದಿಂದಲ್ಲ ಎಂಬುದನ್ನು ಪುನರುಚ್ಚರಿಸುತ್ತವೆ.
‘ಅಂತ್ಯೋದಯದ ಮೂಲಕ ಸರ್ವೋದಯ’ ತತ್ವದಲ್ಲಿ ನೆಲೆಯೂರಿರುವ ಸರಕಾರದ ಕಾರ್ಯಕ್ರಮಗಳು ದೇಶದ ಅಭಿವೃದ್ಧಿಯಲ್ಲಿ ಯಾವುದೇ ಭಾರತೀಯರು ಹಿಂದೆ ಬೀಳದಂತೆ ಕಾಯ್ದುಕೊಳ್ಳುತ್ತವೆ. 25 ಕೋಟಿಗೂ ಹೆಚ್ಚು ಜನರನ್ನು ಬಹು ಆಯಾಮದ ಬಡತನದಿಂದ ಮೇಲೆತ್ತಲಾಗಿದೆ. ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’(ಪಿಎಂ-ಕಿಸಾನ್) ಅಡಿಯಲ್ಲಿ 11 ಕೋಟಿಗೂ ಹೆಚ್ಚು ರೈತರಿಗೆ 3.68 ಲಕ್ಷ ಕೋಟಿ ರೂ. ವಿತರಿಸಲಾಗಿದೆ. ‘ಲಕ್ಷಾಧಿಪತಿ ದೀದಿ’ ಉಪಕ್ರಮವು ಒಂದು ಕೋಟಿಗೂ ಹೆಚ್ಚು ಗ್ರಾಮೀಣ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ.ಗಿಂತ ಹೆಚ್ಚಿನ ಆದಾಯವನ್ನು ಸಾಧಿಸಲು ಅವಕಾಶ ಒದಗಿಸಿದೆ. ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ ಅಡಿಯಲ್ಲಿ ಸುಮಾರು 3 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿದೆ.
‘ಜಲ ಜೀವನ್ ಮಿಷನ್’ 15.44ಕ್ಕೂ ಹೆಚ್ಚು ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಿದೆ. 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ನಾಗರಿಕರಿಗೆ ವಾರ್ಷಿಕ 5 ಲಕ್ಷ ರೂ.ಗಳ ಉಚಿತ ಆರೋಗ್ಯ ರಕ್ಷಣೆಯನ್ನು ನೀಡಲು ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ಯನ್ನು (ಎಬಿ ಪಿಎಂ-ಜೆಎವೈ) ವಿಸ್ತರಿಸಲಾಗಿದೆ. ಇದು ಸರಿಸುಮಾರು 6 ಕೋಟಿ ಹಿರಿಯ ನಾಗರಿಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದು ಅವರಿಗೆ ಸಮಗ್ರ ಆರೋಗ್ಯ ಸೇವೆ ಲಭ್ಯತೆ ಮತ್ತು ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ. ಅಲ್ಲದೆ, ಈ ಯೋಜನೆಯನ್ನು ಮುಂಚೂಣಿ ಸಮುದಾಯ ಆರೋಗ್ಯ ಕಾರ್ಯಕರ್ತರಿಗೂ ವಿಸ್ತರಿಸಲಾಗಿದೆ. ಈ ಭಾರೀ ಸಂಖ್ಯೆಗಳು ಕೇವಲ ಅಂಕಿ ಅಂಶಗಳಲ್ಲ, ಬದಲಿಗೆ ಲಕ್ಷಾಂತರ ಭಾರತೀಯ ಕುಟುಂಬಗಳಲ್ಲಿನ ಪರಿವರ್ತನೆಯ ಕಥಾನಕಗಳು.
ಭಯೋತ್ಪಾದಕರ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆ ನೀತಿಗೆ ಪ್ರಧಾನಮಂತ್ರಿಯವರ ಬದ್ಧತೆಯನ್ನು ಪಹಲ್ಗಾಮ್ ದಾಳಿಗೆ ನೀಡಿದ ತ್ವರಿತ ಪ್ರತಿಕ್ರಿಯೆಯಲ್ಲಿ ನಾವು ಸ್ಪಷ್ಟವಾಗಿ ಕಾಣಬಹುದಾಗಿದೆ. ಅಲ್ಲಿ ಭಯೋತ್ಪಾದಕರು ಮುಗ್ಧ ಪ್ರವಾಸಿಗರನ್ನು ಗುರಿಯಾಗಿಸಿಕೊಂಡಿದ್ದರು. ರಾಷ್ಟ್ರವು ಪ್ರಾಣಹಾನಿಗೆ ತೀವ್ರ ಶೋಕ ವ್ಯಕ್ತಪಡಿಸಿತು. ಆದರೆ ಒಗ್ಗಟ್ಟಾಗಿ ನಿಂತಿತು. ‘ಆಪರೇಷನ್ ಸಿಂಧೂರ’ ಅನ್ನು ನಿಖರವಾಗಿ ಮತ್ತು ಚಾಣಾಕ್ಷತೆಯಿಂದ ಕಾರ್ಯಗತಗೊಳಿಸಲಾಯಿತು. ಭಯೋತ್ಪಾದನೆಯನ್ನು ಎದುರಿಸುವ ಮತ್ತು ತನ್ನ ನಾಗರಿಕರನ್ನು ರಕ್ಷಿಸುವ ಸಂಕಲ್ಪವನ್ನು ಭಾರತ ಪುನರುಚ್ಚರಿಸಿತು. ಪ್ರಧಾನಿ ಮೋದಿಯವರ ಬಲವಾದ ಮತ್ತು ನಿರ್ಣಾಯಕ ನಾಯಕತ್ವದ ಬೆಂಬಲದೊಂದಿಗೆ ಭಾರತೀಯ ರಕ್ಷಣಾ ಪಡೆಗಳ ತಾಂತ್ರಿಕ ಮತ್ತು ಕಾರ್ಯತಂತ್ರದ ಶ್ರೇಷ್ಠತೆಗೆ ಜಗತ್ತು ಸಾಕ್ಷಿಯಾಯಿತು.
ದೃಢವಾದ ರಾಜಕೀಯ ಇಚ್ಛಾಶಕ್ತಿಯು ಸ್ವಾವಲಂಬನೆಯಲ್ಲಿ ಕಾರ್ಯತಂತ್ರದ ಹೂಡಿಕೆಯೊಂದಿಗೆ ಹೊಂದಿಕೆಯಾಗುತ್ತದೆ. ಬಹುಶಃ, ರಕ್ಷಣಾ ಸಾಮರ್ಥ್ಯವನ್ನು ದೇಶೀಯಗೊಳಿಸುವತ್ತ ಹಲವು ವರ್ಷಗಳಿಂದ ಹರಿಸಿದ ಸ್ಥಿರ ಗಮನದಿಂದ ‘ಆಪರೇಷನ್ ಸಿಂಧೂರ’ ಸಮಯದಲ್ಲಿ ಭಾರತದ ತ್ವರಿತ ಪ್ರತಿಕ್ರಿಯೆ ಸಾಧ್ಯವಾಯಿತು. 2014ರ ನಂತರ, ಭಾರತದ ರಕ್ಷಣಾ ಉತ್ಪಾದನೆಯನ್ನು ವೇಗವಾಗಿ ಆಧುನೀಕರಿಸಲಾಗಿದೆ,
ರಫ್ತು ಗಣನೀಯವಾಗಿ ಹೆಚ್ಚಾಗಿದೆ. ಈ ರೂಪಾಂತರ ಆಕಸ್ಮಿಕವಲ್ಲ. ‘ಆತ್ಮನಿರ್ಭರ ಭಾರತ್ ಮಿಷನ್’ ಅಡಿಯಲ್ಲಿ, ರಕ್ಷಣಾ ಸ್ವಾಧೀನ ಕಾರ್ಯವಿಧಾನ (ಡಿಎಪಿ), ರಕ್ಷಣಾ ಉತ್ಪಾದನೆ ಮತ್ತು ರಫ್ತು ಉತ್ತೇಜನ ನೀತಿ (ಡಿಪಿಇಪಿಪಿ) ಮತ್ತು ಕೆಲವು ಕ್ಷೇತ್ರಗಳಿಗೆ ವಿದೇಶಿ ನೇರ ಹೂಡಿಕೆಯನ್ನು (ಎಫ್ಡಿಐ) ಶೇ.100ರಷ್ಟು ಮುಕ್ತಗೊಳಿಸುವಂತಹ ಪ್ರಮುಖ ಸುಧಾರಣೆಗಳು ದೇಶೀಯ ಸಂಸ್ಥೆಗಳಿಗೆ ಅಭಿವೃದ್ಧಿ ಹೊಂದಲು ಅನುವು ಮಾಡಿಕೊಟ್ಟಿದೆ.
ಡ್ರೋನ್ಗಳು ಮತ್ತು ಪರಿಕರಗಳಿಗಾಗಿ ವಿಶೇಷವಾದ ಎರಡು ಉತ್ಪಾದನೆ ಆಧರಿತ ಪ್ರೋತ್ಸಾಹಧನ (ಪಿಎಲ್ಐ) ಯೋಜನೆಗಳನ್ನು ಪರಿಚಯಿಸಿರುವುದು ಮುಂದಿನ ಪೀಳಿಗೆಯ ನಾವೀನ್ಯತೆಯನ್ನು ಮತ್ತಷ್ಟು ವೇಗವರ್ಧಿಸಿದೆ. ಇಂದು, ಭಾರತ ವಿನ್ಯಾಸದ ಕ್ಷಿಪಣಿ ವ್ಯವಸ್ಥೆಗಳು, ಶಸ್ತ್ರಸಜ್ಜಿತ ವಾಹನಗಳು ಮತ್ತು ನೌಕಾ ವೇದಿಕೆಗಳನ್ನು ನಮ್ಮ ಪಡೆಗಳಲ್ಲಿ ನಿಯೋಜಿಸುವುದು ಮಾತ್ರವಲ್ಲದೆ, 80ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇದು ವಿಶ್ವಾಸಾರ್ಹ ರಕ್ಷಣಾ ಪಾಲುದಾರರಲ್ಲಿ ಜಾಗತಿಕ ನಂಬಿಕೆ ಮುಖ್ಯವಾಗಿರುವ ಸಮಯದಲ್ಲಿ ಪ್ರಾದೇಶಿಕ ಭದ್ರತಾ ಪೂರೈಕೆದಾರನಾಗಿ ಭಾರತದ ಚಿತ್ರಣವನ್ನು ಬಲಪಡಿಸುತ್ತದೆ.
ಉತ್ಪಾದನೆಯು ಈ ದೃಷ್ಟಿಕೋನದ ಕೇಂದ್ರಬಿಂದುವಾಗಿದೆ. ಪ್ರಮುಖ ಹೂಡಿಕೆಗಳು ಮತ್ತು ಸರಕಾರದ ಪ್ರೋತ್ಸಾಹದಿಂದ ಭಾರತವು ಅರೆವಾಹಕ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿದೆ. ಟಾಟಾ ಇಲೆಕ್ಟ್ರಾನಿಕ್ಸ್ ಅಸ್ಸಾಮಿನಲ್ಲಿ 27,000 ಕೋಟಿ ರೂ.ಗಳ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಪರೀಕ್ಷಾ ಘಟಕವನ್ನು ನಿರ್ಮಿಸುತ್ತಿದೆ. ಇದು 2025ರ ಮಧ್ಯದ ವೇಳೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಮತ್ತು ಸುಮಾರು 27,000 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಏತನ್ಮಧ್ಯೆ, ‘ಎಚ್ಸಿಎಲ್’ ಮತ್ತು ಫಾಕ್ಸ್ಕಾನ್ ನಡುವಿನ 3,706 ಕೋಟಿ ರೂ.ಗಳ ಜಂಟಿ ಉದ್ಯಮವು ಉತ್ತರ ಪ್ರದೇಶದ ಜೇವರ್ನ್ನಲ್ಲಿ ಅರೆವಾಹಕ ಘಟಕವನ್ನು ಸ್ಥಾಪಿಸಲು ಸಜ್ಜಾಗಿದೆ. ಇದು ಡಿಸ್ಪ್ಲೇ ಡ್ರೈವರ್ ಚಿಪ್ಗಳ ಉತ್ಪಾದನೆಯತ್ತ ಗಮನ ಕೇಂದ್ರೀಕರಿಸುತ್ತದೆ, ಇದರ ಉತ್ಪಾದನೆಯು 2027 ರಿಂದ ಪ್ರಾರಂಭವಾಗಲಿದೆ.
ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ. 100 ಕ್ಕೂ ಹೆಚ್ಚು ‘ಯೂನಿಕಾರ್ನ್’ಗಳು ಹಾಗೂ ಎಐ, ಬಯೋಟೆಕ್ ಮತ್ತು ಅರೆವಾಹಕಗಳ ಮೇಲೆ ಗಮನ ಕೇಂದ್ರೀಕರಿಸಿದ 3,600ಕ್ಕೂ ಹೆಚ್ಚು ಡೀಪ್-ಟೆಕ್ ಉದ್ಯಮಗಳು ಸೇರಿದಂತೆ 1.57 ಲಕ್ಷಕ್ಕೂ ಹೆಚ್ಚು ಮಾನ್ಯತೆ ಪಡೆದ ನವೋದ್ಯಮಗಳನ್ನು ಭಾರತ ಹೊಂದಿದೆ. ನಮ್ಮ ಬಾಹ್ಯಾಕಾಶ ಕ್ಷೇತ್ರವೊಂದರಲ್ಲೇ 200ಕ್ಕೂ ಹೆಚ್ಚು ನವೋದ್ಯಮಗಳು ಹುಟ್ಟಿಕೊಂಡಿವೆ. ಇದು ಆತ್ಮವಿಶ್ವಾಸದ ನಾವೀನ್ಯತೆ ಆರ್ಥಿಕತೆಯ ಉದಯವನ್ನು ಸೂಚಿಸುತ್ತದೆ. ನವೋದ್ಯಮ ಪರಿಸರ ವ್ಯವಸ್ಥೆಯು ಈಗಾಗಲೇ 17.2ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಿದೆ ಮತ್ತು ಹೊಸ ತಲೆಮಾರಿನ ಸಮಸ್ಯೆಗಳನ್ನು ಪರಿಹರಿಸುವವರು ಮತ್ತು ಉದ್ಯಮಿಗಳನ್ನು ಹುಟ್ಟುಹಾಕಿದೆ.
ಏತನ್ಮಧ್ಯೆ, ಭಾರತವು ಸದ್ದಿಲ್ಲದೆ ವಿಶ್ವದ ಅತ್ಯಂತ ಸಂಪರ್ಕಿತ ಪ್ರಜಾಪ್ರಭುತ್ವವಾಗಿ ಹೊರಹೊಮ್ಮಿದೆ. 80 ಕೋಟಿಗೂ ಹೆಚ್ಚು ಇಂಟರ್ನೆಟ್ ಬಳಕೆದಾರರು ಮತ್ತು 136 ಕೋಟಿ ಆಧಾರ್ ನೋಂದಣಿಗಳೊಂದಿಗೆ, ಭಾರತವು ವಿಶ್ವದ ಅತಿದೊಡ್ಡ ಡಿಜಿಟಲ್ ಗುರುತಿನ ಕಾರ್ಯಕ್ರಮವನ್ನು ಹೊಂದಿದೆ. ನಾವು ಈಗ ಜಾಗತಿಕ ಡಿಜಿಟಲ್ ಪಾವತಿಗಳಲ್ಲಿ ಶೇ. 46ರಷ್ಟು ಪಾಲು ಹೊಂದಿದ್ದೇವೆ, ಇದು ಹಣಕಾಸು ವಹಿವಾಟುಗಳನ್ನು ಪ್ರಜಾಪ್ರಭುತ್ವಗೊಳಿಸಿದ ‘ಯುಪಿಐ’ನಂತಹ ವೇದಿಕೆಗಳಿಂದ ಬೆಂಬಲಿತವಾಗಿದೆ. ಈ ವ್ಯವಸ್ಥೆಗಳು ನಾಗರಿಕರನ್ನು ಸಬಲೀಕರಣಗೊಳಿಸುವುದಲ್ಲದೆ, ಆಡಳಿತವನ್ನು ಚುರುಕಾಗಿ, ವೇಗವಾಗಿ ಮತ್ತು ಹೆಚ್ಚು ಪಾರದರ್ಶಕವಾಗಿಸಿವೆ.
2024-25ರ ಕೇಂದ್ರ ಬಜೆಟ್ ನಮ್ಮ ಸರಕಾರದ ನಿರ್ಣಾಯಕತೆಯನ್ನು ಸಾಕಾರಗೊಳಿಸಿದೆ. ಒಟ್ಟು ವೆಚ್ಚವನ್ನು 44.6 ಲಕ್ಷ ಕೋಟಿ ರೂ.ಗೆ ನಿಗದಿಪಡಿಸಲಾಗಿದ್ದು, ಬಂಡವಾಳ ವೆಚ್ಚವನ್ನು ಅಭೂತಪೂರ್ವವಾಗಿ 10 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ತೆರಿಗೆ ವಿನಾಯಿತಿಗಳನ್ನು ವಿಸ್ತರಿಸಲಾಗಿದೆ, ಮಧ್ಯಮ ವರ್ಗದ ರಿಯಾಯಿತಿಗಳನ್ನು ದ್ವಿಗುಣಗೊಳಿಸಲಾಗಿದೆ ಮತ್ತು ನವೋದ್ಯಮಗಳ ದೀರ್ಘಕಾಲದ ಕಳವಳವಾಗಿದ್ದ ‘ಏಂಜೆಲ್ ತೆರಿಗೆ’ಯನ್ನು ರದ್ದುಪಡಿಸಲಾಗಿದೆ. ಈ ಸುಧಾರಣೆಗಳು ಬಳಕೆಯನ್ನು ಕ್ರೋಡೀಕರಿಸುತ್ತವೆ, ಉದ್ಯಮಶೀಲತೆಗೆ ವೇಗ ನೀಡುತ್ತವೆ ಮತ್ತು ಭಾರತದ ದೀರ್ಘಕಾಲೀನ ಬೆಳವಣಿಗೆಯ ಪಥವನ್ನು ಬಲಪಡಿಸುತ್ತದೆ.
ಮೋದಿ 3.0 ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ರಸ್ತೆಗಳು, ಕಾರ್ಖಾನೆಗಳು ಮತ್ತು ಸೌರ ಫಲಕಗಳು ಕೇವಲ ಪ್ರಗತಿಯ ಸಂಕೇತಗಳಾಗಿ ಉಳಿದಿಲ್ಲ, ಅವು ಆಕಾಂಕ್ಷೆಯ ಅಡಿಪಾಯಗಳಾಗಿವೆ. ಆರ್ಥಿಕ, ಸಾಮಾಜಿಕ ಮತ್ತು ಕಾರ್ಯತಂತ್ರದ ಪ್ರತಿಯೊಂದು ಕ್ಷೇತ್ರದಲ್ಲೂ ಇದನ್ನು ಕಾಣಬಹುದು. ಭಾರತವು ರಾಷ್ಟ್ರೀಯ ನವೀಕರಣದ ಹೊಸ ಅಧ್ಯಾಯವನ್ನು ಬರೆಯುತ್ತಿದೆ. ಜನಾದೇಶ ಸ್ಪಷ್ಟವಾಗಿದೆ. ದೂರದೃಷ್ಟಿ ಹಾಗೇ ಇದೆ ಮತ್ತು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ನಿರ್ಣಾಯಕ ದಶಕವು ಉತ್ತಮವಾಗಿ ಮುನ್ನಡೆಯುತ್ತಿದೆ. ಇತಿಹಾಸವು ಈ ಅವಧಿಯನ್ನು ಕೇವಲ ಕ್ಷಿಪ್ರ ಬೆಳವಣಿಗೆಯ ಹಂತವಾಗಿ ದಾಖಲಿಸುವುದಿಲ್ಲ. ಬದಲಿಗೆ, ಭಾರತವು ವಿಶ್ವಾಸಗಳಿಸಿದ, ರೂಪಾಂತರಗೊಂಡ ಮತ್ತು ಮುನ್ನಡೆದ ಕ್ಷಣವೆಂದು ದಾಖಲಿಸುತ್ತದೆ.