16 ವರ್ಷಗಳಲ್ಲಿ ಆರೆಸ್ಸೆಸ್ ಸೋದರ ಸಂಸ್ಥೆಗಳಿಗೆ 121 ಎಕರೆ ಜಮೀನು ಮಂಜೂರು

ಬೆಂಗಳೂರು: ಹಿಂದಿನ 16 ವರ್ಷಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್ ಮತ್ತು ಸಂಘ ಪರಿವಾರದ ಸಂಸ್ಥೆಯಾಗಿರುವ ಜನಸೇವಾ ವಿಶ್ವಸ್ತ ಮಂಡಳಿ, ಜನಸೇವಾ ಟ್ರಸ್ಟ್‌ಗೆ ಸರಕಾರವು ಗೋಮಾಳ ಸೇರಿದಂತೆ ಇನ್ನಿತರ ಸ್ವರೂಪದಲ್ಲಿದ್ದ ಒಟ್ಟು 121 ಎಕರೆ ಜಮೀನುನನ್ನು ಮಂಜೂರು ಮಾಡಿದೆ.
ಇದಲ್ಲದೆ ಕಾಂಗ್ರೆಸ್ ಭವನ ಟ್ರಸ್ಟ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ವಿವೇಕಾನಂದ ವಿದ್ಯಾವರ್ಧಕ ಸಂಘ, ಆದಮಾರು ಮಠ ವಿದ್ಯಾಸಂಸ್ಥೆ, ಕೃಷ್ಣ ಸೇವಾಶ್ರಮ ಟ್ರಸ್ಟ್, ಆದಿಚುಂಚನಗಿರಿ, ಹಿಂದುಳಿದ ವರ್ಗದ ವಿವಿಧ ಸಮುದಾಯಗಳ ಸಂಘ, ಸಂಸ್ಥೆ, ಚಾರಿಟಬಲ್ ಟ್ರಸ್ಟ್, ವಿಶ್ವವಿದ್ಯಾನಿಲಯ, ಮಾತಾ ಅಮೃತಾನಂದಮಯಿ, ಸಂಸ್ಕೃತ ವಿಶ್ವವಿದ್ಯಾನಿಲಯ, ಕುವೆಂಪು ವಿಶ್ವವಿದ್ಯಾನಿಲಯ, ಸರಕಾರಿ ನೌಕರರ ಸಮುದಾಯ ಭವನ, ಅಂಬೇಡ್ಕರ್ ಸೇವಾ ಸಂಘ, ರಾಜ್ಯ ಸರಕಾರಿ ನೌಕರರ ಸಂಘ, ಬಾಪೂಜಿ ವಿದ್ಯಾಸಂಸ್ಥೆ ಸೇರಿದಂತೆ ಇನ್ನಿತರ ಶೈಕ್ಷಣಿಕ ಮತ್ತು ಧಾರ್ಮಿಕ ಉದ್ದೇಶದ ಸಂಘ ಸಂಸ್ಥೆಗಳಿಗೆ ಒಟ್ಟಾರೆ 1,945 ಎಕರೆ 31 ಗುಂಟೆ ವಿಸ್ತೀರ್ಣದ ಜಮೀನುಗಳನ್ನು 16 ವರ್ಷಗಳಲ್ಲಿ (2010-2026) ಸರಕಾರವು ಮಂಜೂರು ಮಾಡಿದೆ.
ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಅವರು ಸದನಕ್ಕೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಇದೆ. ಬೆಂಗಳೂರು ಪೂರ್ವ, ಉತ್ತರ, ಯಲಹಂಕ, ದಕ್ಷಿಣ ಆನೇಕಲ್, ಹಾರೋಹಳ್ಳಿ, ಮಾಗಡಿ, ಕನಕಪುರ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ವ್ಯಾಪ್ತಿಯಲ್ಲಿ ವಿವಿಧ ಶೈಕ್ಷಣಿಕ ಮತ್ತು ಧಾರ್ಮಿಕ ಸಂಘ ಸಂಸ್ಥೆಗಳಿಗೆ 498 ಎಕರೆಗೂ ಮೀರಿ ಅಧಿಕ ವಿಸ್ತೀರ್ಣದ ಜಮೀನುಗಳನ್ನು ಸರಕಾರವು ಮಂಜೂರು ಮಾಡಿದೆ.
ಈ ಪೈಕಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್ ಮತ್ತು ಜನಸೇವಾ ಟ್ರಸ್ಟ್, ಜನಸೇವಾ ವಿಶ್ವಸ್ಥ ಮಂಡಳಿಯು ಸಿಂಹಪಾಲು ಪಡೆದಿದೆ. 16 ವರ್ಷಗಳಲ್ಲಿ ಸಂಘಪರಿವಾರಕ್ಕೆ ಸೇರಿರುವ ಸಂಸ್ಥೆಗಳಿಗೆ ಒಟ್ಟಾರೆ 121.43 ಎಕರೆ ಜಮೀನುಗಳನ್ನು ಸರಕಾರವು ಮಂಜೂರು ಮಾಡಿರುವುದು ಉತ್ತರದಿಂದ ತಿಳಿದು ಬಂದಿದೆ.
ರಾಷ್ಟ್ರೋತ್ಥಾನ, ಜನಸೇವಾ ವಿಶ್ವಸ್ಥ ಮಂಡಳಿ ಮತ್ತು ಜನಸೇವಾ ಟ್ರಸ್ಟ್‌ಗೆ ಯಲಹಂಕ ವಿಧಾನಸಭೆ ಕ್ಷೇತ್ರಕ್ಕೆ ಸೇರಿರುವ ಹುರುಳಿಚಿಕ್ಕನಹಳ್ಳಿ ಸರ್ವೇ ನಂಬರ್ 69ರಲ್ಲಿ 9 ಎಕರೆ 32 ಗುಂಟೆ, ಬೆಂಗಳೂರು ದಕ್ಷಿಣ ತಾಲೂಕಿನ ಚನ್ನೇನಹಳ್ಳಿ ಗ್ರಾಮದಲ್ಲಿ 6 ಎಕರೆ , ಕುರುಬರಹಳ್ಳಿಯಲ್ಲಿ 35 ಎಕರೆ 33 ಗುಂಟೆ, ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ಕೆಳಗಿನ ನಾಯ್ಕರಾಂಡಹಳ್ಳಿಯಲ್ಲಿ 6 ಎಕರೆ 20 ಗುಂಟೆ, 36 ಎಕರೆ, ಮೇಲಿನಜೋಗನಹಳ್ಳಿಯಲ್ಲಿ 7 ಎಕರೆ 20 ಗುಂಟೆ ವಿಸ್ತೀರ್ಣದ ಜಮೀನುಗಳು ಮಂಜೂರಾಗಿರುವುದು ಗೊತ್ತಾಗಿದೆ.
ಅದೇ ರೀತಿ ಮೈಸೂರಿನ ಬೆಳವಾಡಿಯಲ್ಲಿ 9 ಎಕರೆ 38 ಎಕರೆ, ಚಾಮರಾಜನಗರದ ಯಡಪುರದಲ್ಲಿ 5 ಎಕರೆ, ಕಲಬುರಗಿಯ ಶರಣಸಿರಸಗಿಯಲ್ಲಿ 7 ಎಕರೆ ವಿಸ್ತೀರ್ಣದ ಜಮೀನುಗಳನ್ನು ರಾಷ್ಟ್ರೋತ್ಥಾನ ಪರಿಷತ್ ಹೆಸರಿಗೆ ಜಮೀನು ಮಂಜೂರಾಗಿರುವುದು ತಿಳಿದು ಬಂದಿದೆ.
ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ 8.34 ಎಕರೆ, ಬೆಂಗಳೂರು ದಕ್ಷಿಣ ತಾಲೂಕಿನ ಕಂಬಿಪುರದಲ್ಲಿ 35 ಎಕರೆ, ನೆಲಮಂಗಲದ ಹಂಚಿಪುರದಲ್ಲಿ 12ಎಕರೆ, ಹಾಸನದ ಚನ್ನರಾಯಪಟ್ಟಣದಲ್ಲಿ 22 ಎಕರೆ 36 ಗುಂಟೆ ಸೇರಿ ಒಟ್ಟಾರೆ 77 ಎಕರೆ ಜಮೀನನ್ನು ಸರಕಾರವು ಮಂಜೂರು ಮಾಡಿದೆ.
ವಿಶೇಷವೆಂದರೇ ಮಂಡ್ಯದ ಎಚ್.ಮಲ್ಲಿಗೆರೆ, ಮಾದೇಪುರ, ಜವರನಹಳ್ಳಿ, ಚುಂಚನಹಳ್ಳಿ, ನಾಗಮಂಗಲದ ಬ್ಯಾಲದಕೆರೆಯಲ್ಲಿ ಒಟ್ಟಾರೆ 102 ಎಕರೆ 34 ಗುಂಟೆ ಜಮೀನನ್ನು ಶೈಕ್ಷಣಿಕ ಉದ್ದೇಶ ಮತ್ತು ಆಸ್ಪತ್ರೆ ಉದ್ದೇಶಕ್ಕೆ ಮಂಜೂರಾಗಿದೆ ಎಂದು ಉತ್ತರದಲ್ಲಿ ಮಾಹಿತಿ ಇದೆ. ಆದರೆ ಈ ಜಮೀನುಗಳನ್ನು ಯಾವ ಶೈಕ್ಷಣಿಕ ಸಂಸ್ಥೆಗಳಿಗೆ ಮಂಜೂರಾಗಿದೆ ಎಂಬ ಹೆಸರುಗಳನ್ನು ಒದಗಿಸಿಲ್ಲ.
ಮೈಸೂರಿನ ಜೆಎಸ್‌ಎಸ್ ವಿದ್ಯಾಪೀಠಕ್ಕೆ ವಿಜಯಪುರ ಜಿಲ್ಲೆಯ ಭೂತನಾಳ ಗ್ರಾಮದಲ್ಲಿ 21 ಎಕರೆ 8 ಗುಂಟೆ ವಿಸ್ತೀರ್ಣದ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕೆ ಮಂಜೂರು ಮಾಡಿತ್ತು. ಆದರೆ ಈ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದೆ. ಹೈಕೋರ್ಟ್‌ನಲ್ಲಿ ಈ ಕುರಿತು ರಿಟ್ ಅರ್ಜಿ ಸಲ್ಲಿಕೆಯಾಗಿದೆ.
ಕಾಗಿನೆಲೆ ಮಹಾಸಂಸ್ಥಾನ, ಕನಕಗುರುಪೀಠ, ಕುಂಚಿಟಿಗ ಮಹಾಸಭಾ, ಮಹರ್ಷಿ ವಾಲ್ಮೀಕಿ ಗುರುಪೀಠ, ನಾರಾಯಣಗುರು ಮಹಾಸಂಸ್ಥಾನ, ಮಾಚಿದೇವ ಮಹಾಸಂಸ್ಥಾನ, ಮೇದರ ಕೇತೇಶ್ವರ ಗುರುಪೀಠ, ಕುರುಬರ ಸಂಘ, ಆದಿಜಾಂಬವ ಮಹಾಸಂಸ್ಥಾನ, ಬಲಿಜ, ಕುಂಚಿಟಿಗರ ಸಂಘ, ಸಿದ್ದಗಂಗಾ ಮಠ ಟ್ರಸ್ಟ್, ವಾಲ್ಮೀಕಿ ನಾಯಕ ಸಭೆ, ಸಿದ್ದಗಂಗಾ ಮಠ, ಆರ್ಯ ಈಡಿಗರ ಸಂಘ, ಕರ್ನಾಟಕ ಪ್ರದೇಶ ಕುರುಬರ ಸಂಘ, ದೈವಜ್ಞ ಬ್ರಾಹ್ಮಣ ಸಂಘ, ಕನಕ ಸೇವಾ ಸಂಸ್ಥೆ, ಶಾರದಾ ಪೀಠ, ಕ್ಷತ್ರಿಯ ಮರಾಠ ಯುವ ವೇದಿಕೆ, ಬೋವಿ ಸಮಾಜ, ಜಿಲ್ಲಾ ಕೊಠಾರಿ ಸಂಘ, ಕೊಠಾರಿ ಸೇವಾ ಸಂಘ, ಮಡಿವಾಳ, ದೀನಬಂಧು ಟ್ರಸ್ಟ್, ಆದಮಾರು ಮಠ ವಿದ್ಯಾಸಂಸ್ಥೆ ಸೇರಿದಂತೆ ಹಲವು ಸಂಘ ಸಂಸ್ಥೆಗಳಿಗೂ ಸರಕಾರಿ ಜಮೀನು ಮಂಜೂರಾಗಿರುವುದು ತಿಳಿದು ಬಂದಿದೆ.






