ಕಾರ್ಮಿಕ ಇಲಾಖೆಯ ವಿವಿಧ ಮಂಡಳಿಗಳಲ್ಲಿ 1.72 ಕೋಟಿ ಕಾರ್ಮಿಕರ ನೋಂದಣಿ

ಸಾಂದರ್ಭಿಕ ಚಿತ್ರ (AI)
ಬೆಂಗಳೂರು : ಕಾರ್ಮಿಕ ಇಲಾಖೆಯಡಿ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಾದ್ಯಾಂತ ಸುಮಾರು 1,72,74,870 ಮಂದಿ ಕಾರ್ಮಿಕರು ಈ ಮಂಡಳಿಗಳಲ್ಲಿ ನೋಂದಣಿಯಾಗಿದ್ದಾರೆ.
ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಪ್ರಸ್ತುತ 25.13 ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದು, ಅವರಲ್ಲಿ 15,92,653 ಪುರುಷರು, 8,86,680 ಮಹಿಳೆಯರು ಹಾಗೂ 2,412 ಮಂದಿ ತೃತೀಯ ಲಿಂಗಿಗಳಿದ್ದಾರೆ. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ವಿವಿಧ ಯೋಜನೆಗಳಡಿ 1,46,93,125 ಮಂದಿ ಕಾರ್ಮಿಕರು ನೋಂದಣಿಯಾಗಿದ್ದಾರೆ. ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರನ್ನು ನೋಂದಾಯಿಸುವ ವ್ಯವಸ್ಥೆ ಇರುವುದಿಲ್ಲ. ಆದರೆ 55,44,609 ಸಂಘಟಿತ ಕಾರ್ಮಿಕರು ವಂತಿಕೆಯನ್ನು ಪಾವತಿಸಿದ್ದಾರೆ.
ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳು: ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿ 60 ವರ್ಷಗಳನ್ನು ಪೂರೈಸಿದ ಫಲಾನುಭವಿಗೆ ಮಾಸಿಕ 3 ಸಾವಿರ ರೂ., ಮೃತ ಪಿಂಚಣಿದಾರರ ಪತಿ/ಪತ್ನಿಗೆ ಮಾಸಿಕ 1,500 ರೂ., ನೋಂದಾಯಿತ ಫಲಾನುಭವಿಯು ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ/ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ 2 ಸಾವಿರ ರೂ. ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ 2 ಲಕ್ಷ ರೂ.ವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
ಸೌಲಭ್ಯ ಶ್ರಮ ಸಾಮರ್ಥ್ಯ ಯೋಜನೆಯಡಿ ತರಬೇತಿ ಹಾಗೂ ಟೂಲ್ಕಿಟ್ ಖರೀದಿಗೆ 20 ಸಾವಿರ ರೂ.ವರೆಗೆ, ವಸತಿ ಸೌಲಭ್ಯಕ್ಕಾಗಿ ಕಾರ್ಮಿಕ ಗೃಹಭಾಗ್ಯ ಯೋಜನೆಯಡಿ 2 ಲಕ್ಷ ರೂ.ವರೆಗೆ, ಹೆರಿಗೆ ಸೌಲಭ್ಯಕ್ಕಾಗಿ ತಾಯಿ ಲಕ್ಷ್ಮೀ ಬಾಂಡ್ ಯೋಜನೆಯಡಿ ಮಹಿಳಾ ಫಲಾನುಭವಿಯ ಮೊದಲ ಎರಡು ಮಗುವಿನ ಜನನಕ್ಕೆ 50 ಸಾವಿರ ರೂ., ಅಂತ್ಯಕ್ರಿಯೆ ವೆಚ್ಚಕ್ಕಾಗಿ 4 ಸಾವಿರ ರೂ. ಹಾಗೂ ಅನುಗ್ರಹ ರಾಶಿ 1,46,000 ರೂ. ಸಹಾಯಧನ ನೀಡಲಾಗುತ್ತದೆ. ಗೃಹಲಕ್ಷ್ಮಿ ಬಾಂಡ್ ಯೋಜನೆಯಡಿ ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ 60 ಸಾವಿರ ರೂ. ಸಹಾಯಧನವನ್ನು ನೀಡಲಾಗುತ್ತದೆ. ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವಶಿಕ್ಷಣ ಮತ್ತು ಪೌಷ್ಠಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ತಾಯಿ ಮಗು ಸಹಾಯಹಸ್ತ ಯೋಜನೆಯಡಿ ವಾರ್ಷಿಕ 6 ಸಾವಿರ ರೂ.ಸಹಾಯಧನವನ್ನು ನೀಡಲಾಗುತ್ತದೆ. ಕನ್ನಡಕ, ಶ್ರವಣಯಂತ್ರ, ಕೃತಕ ಕೈಕಾಲು ಮತ್ತು ಗಾಲಿ ಕುರ್ಚಿ ಮರುಪಾವತಿ ಸೌಲಭ್ಯ ಯೋಜನೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರ್ಮಿಕ ಚಿಕಿತ್ಸಾ ಭಾಗ್ಯ ಯೋಜನೆ
ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಚಿಕಿತ್ಸಾ ಭಾಗ್ಯ ಯೋಜನೆಯಡಿ ಶಸ್ತ್ರಚಿಕಿತ್ಸೆಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ , ಪಾರ್ಶ್ವವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಅಸ್ತಮಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿತ ಚಿಕಿತ್ಸೆ, ಮೂತ್ರಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಇಎನ್ಟಿ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ವ್ಯಾಸ್ಕುಲರ್ ಶಸ್ತ್ರಚಿಕಿತ್ಸೆ, ಅನ್ನನಾಳದ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ, ಕರುಳಿನ ಶಸ್ತ್ರಚಿಕಿತ್ಸೆ, ಸ್ತನ ಸಂಬಂಧಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಹರ್ನಿಯ ಶಸ್ತ್ರಚಿಕಿತ್ಸೆ, ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ, ಮೂಳೆಮುರಿತ/ ಡಿಸ್ಲೊಕೇಶನ್ ಚಿಕಿತ್ಸೆ, ಇತರ ಔದ್ಯೋಗಿಕ ಖಾಯಿಲೆಗಳ ಚಿಕಿತ್ಸೆಗಳಿಗೆ 2 ಲಕ್ಷ ರೂ.ವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
19 ವರ್ಷಗಳಲ್ಲಿ ಫಲಾನುಭವಿಗಳಿಗೆ 9 ಸಾವಿರ ಕೋಟಿ ರೂ.ಗೂ ಅಧಿಕ ಪಾವತಿ
2007ರಿಂದ ಇಲ್ಲಿಯವರೆಗೆ ಶೈಕ್ಷಣಿಕ ಸಹಾಯಧನದಡಿ 27,18,585 ಅರ್ಜಿಗಳಿಗೆ 2,083,01,88,679 ರೂ., ಮದುವೆ ಧನಸಹಾಯದಡಿ 2,58,791 ಅರ್ಜಿಗಳಿಗೆ 1,248,81,93,234 ರೂ., ಅಂತ್ಯ ಸಂಸ್ಕಾರದಡಿ 49,789 ಅರ್ಜಿಗಳಿಗೆ 2,45,54,57,359 ರೂ., ಟೂಲ್ ಕಿಟ್ ಯೋಜನೆಯಡಿ 6,33,746 ಅರ್ಜಿಗಳಿಗೆ, 3,63,77,44,865 ರೂ., ಬಿಎಂಟಿಸಿ ಬಸ್ ಪಾಸ್ ಯೋಜನೆಯಡಿ 3,59,446 ಅರ್ಜಿಗಳಿಗೆ 2,24,10,17,100 ರೂ., ಕೆಎಸ್ಸಾರ್ಟಿಸಿ ಬಸ್ ಪಾಸ್ ಯೋಜನೆಯಡಿ 2 ಲಕ್ಷ ಅರ್ಜಿಗಳಿಗೆ 85,19,73,000 ರೂ., ವಸತಿ ಸೌಲಭ್ಯದ 27,256 ಅರ್ಜಿಗಳಿಗೆ 5,22,75,00,000 ರೂ., ಇಮ್ಯೂನಿಟಿ ಕಿಟ್ನ 9,50,000 ಅರ್ಜಿಗಳಿಗೆ 2,54,03,65,116 ರೂ., ಪ್ರಿವೆಂಟಿವ್ ಹೆಲ್ತ್ಕೇರ್ ಯೋಜನೆಯಡಿ 28,34,269 ಅರ್ಜಿಗಳಿಗೆ 10,09,56,55,514 ರೂ., ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆಯಡಿ 14,49,664 ಅರ್ಜಿಗಳಿಗೆ 1,54,60,90,486 ರೂ., ತಾತ್ಕಾಲಿಕ ವಸತಿ ಸಮುಚ್ಚಯ ಯೋಜನೆಯಡಿ 5,500 ಅರ್ಜಿಗಳಿಗೆ 2,53,24,18,378 ರೂ., ಕೋವಿಡ್ ನಗದು ಪರಿಹಾರದಡಿ 36,10,373 ಅರ್ಜಿಗಳಿಗೆ 1,725,72,65,098 ರೂ., ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ವಿತರಣೆಗೆ 34 ಕೋಟಿ ರೂ. ಮತ್ತು ಲ್ಯಾಪ್ ಟಾಪ್ ವಿತರಣೆಗೆ 50 ಕೋಟಿ ರೂ. ಪಾವತಿಯಾಗಿದೆ. ಹೀಗೆ 2007ರಿಂದ ಇಲ್ಲಿಯವರೆಗೆ ಒಟ್ಟು 33 ಯೋಜನೆಗಳಡಿ 1,41,76,248 ಅರ್ಜಿಗಳಿಗೆ 9,183,66,02,767 ರೂ. ಪಾವತಿಯಾಗಿದೆ.
ಕಟ್ಟಡ ಕಾರ್ಮಿಕ ಕಾರ್ಡ್ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾರ್ಡ್ ಪಡೆಯಲು ಕಾರ್ಮಿಕರು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರ ವಯಸ್ಸು 18 ರಿಂದ 60 ವರ್ಷದೊಳಗಿರಬೇಕು. ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. 12 ತಿಂಗಳಲ್ಲಿ ಕನಿಷ್ಠ 90 ದಿನಗಳ ಕಾಲ ಕಟ್ಟಡ/ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡಿರುವ ಬಗ್ಗೆ ಮಾಲಕರು ಅಥವಾ ಗುತ್ತಿಗೆದಾರರಿಂದ ಪಡೆದ ಪ್ರಮಾಣಪತ್ರ ಪಡೆದಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಮೂರು ವರ್ಷಗಳಲ್ಲಿ ವಿವಿಧ ಯೋಜನೆಗಳಡಿ ಸಲ್ಲಿಕೆಯಾಗಿರುವ ಅರ್ಜಿಗಳ ವಿವರ
2023ರಿಂದ 2026ರವರೆಗೆ ಮದುವೆ ಸಹಾಯಧನಕ್ಕೆ 89,575 ಅರ್ಜಿಗಳು ಸಲ್ಲಿಕೆಯಾಗಿದ್ದು, 55,094 ಇತ್ಯರ್ಥವಾಗಿವೆ, 29,324 ತಿರಸ್ಕೃತವಾಗಿವೆ, 5,157 ಬಾಕಿ ಉಳಿದಿವೆ. ವೈದ್ಯಕೀಯ ಸಹಾಯಧನಕ್ಕೆ 3,329 ಅರ್ಜಿಗಳು ಸಲ್ಲಿಕೆಯಾಗಿದ್ದು, 1,009 ಇತ್ಯರ್ಥವಾಗಿವೆ, 2,190 ತಿರಸ್ಕೃತವಾಗಿವೆ, 130 ಬಾಕಿ ಉಳಿದಿವೆ. ಕಾರ್ಮಿಕ ಚಿಕಿತ್ಸಾ ಭಾಗ್ಯಕ್ಕೆ 9,398 ಅರ್ಜಿಗಳು ಸಲ್ಲಿಕೆಯಾಗಿದ್ದು, 5,730 ಇತ್ಯರ್ಥವಾಗಿವೆ, 2,891 ತಿರಸ್ಕೃತವಾಗಿವೆ, 777 ಬಾಕಿ ಉಳಿದಿವೆ. ಹೆರಿಗೆ ಸೌಲಭ್ಯಕ್ಕೆ (ತಾಯಿ ಲಕ್ಷ್ಮೀ ಬಾಂಡ್) 12,485 ಅರ್ಜಿಗಳು ಸಲ್ಲಿಕೆಯಾಗಿದ್ದು, 4,130 ಇತ್ಯರ್ಥವಾಗಿವೆ, 8,003 ತಿರಸ್ಕೃತವಾಗಿವೆ, 352 ಬಾಕಿ ಉಳಿದಿವೆ. ತಾಯಿ ಮಗು ಸಹಾಯ ಹಸ್ತ ಯೋಜನೆಗೆ 4,648 ಅರ್ಜಿಗಳು ಸಲ್ಲಿಕೆಯಾಗಿದ್ದು, 1,801 ಇತ್ಯರ್ಥವಾಗಿವೆ, 2,628 ತಿರಸ್ಕೃತವಾಗಿವೆ, 219 ಬಾಕಿ ಉಳಿದಿವೆ. ಅಪಘಾತ ಸಹಾಯಧನಕ್ಕೆ 1,036 ಅರ್ಜಿಗಳು ಸಲ್ಲಿಕೆಯಾಗಿದ್ದು, 641 ಇತ್ಯರ್ಥವಾಗಿವೆ, 298 ತಿರಸ್ಕೃತವಾಗಿವೆ, 97 ಬಾಕಿ ಉಳಿದಿವೆ. ಅಂತ್ಯಕ್ರಿಯೆಗೆ 16,745 ಅರ್ಜಿಗಳು ಸಲ್ಲಿಕೆಯಾಗಿದ್ದು, 12,267 ಇತ್ಯರ್ಥವಾಗಿವೆ, 3,798 ತಿರಸ್ಕೃತವಾಗಿವೆ, 680 ಬಾಕಿ ಉಳಿದಿವೆ. ವಿವಿಧ ಪಿಂಚಣಿ ಯೋಜನೆಗಳಡಿ 36,039 ಅರ್ಜಿಗಳು ಸಲ್ಲಿಕೆಯಾಗಿದ್ದು, 30,924 ಇತ್ಯಾರ್ಥವಾಗಿವೆ, 4,165 ತಿರಸ್ಕೃತವಾಗಿವೆ, 950 ಬಾಕಿ ಉಳಿದಿವೆ.
ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು
1ನೇ ತರಗತಿಯಿಂದ 5ನೇ ತರಗತಿವರೆಗೆ 1,800 ರೂ., 6ನೇ ತರಗತಿಯಿಂದ 8ನೇ ತರಗತಿವರೆಗೆ 2,400 ರೂ., 9 ಮತ್ತು 10ನೇ ತರಗತಿಗೆ 3,000 ರೂ., ಪಿಯುಸಿ, 11 ಹಾಗೂ 12ನೇ ತರಗತಿ ಅಥವಾ ತತ್ಸಮಾನ ಕೋರ್ಸ್ಗೆ 6,000 ರೂ. ಐಟಿಐಗೆ 10,000 ರೂ. ಡಿಪ್ಲೊಮೊಗೆ 12,000 ರೂ. ವಾರ್ಷಿಕ ಸಹಾಯಧನವನ್ನು ನೀಡಲಾಗುತ್ತದೆ. ಸಾಮಾನ್ಯ ಪದವಿಗೆ 15,000 ರೂ., ಸಾಮಾನ್ಯ ಸ್ನಾತಕೋತ್ತರ ಪದವಿಗೆ 20,000 ರೂ., ಕಾನೂನು ಪದವಿಗೆ 20,000 ರೂ. ಸ್ನಾತಕೋತ್ತರ ಕಾನೂನು ಪದವಿಗೆ 25,000 ರೂ., ಪ್ಯಾರಾ ಮೆಡಿಕಲ್ ಕೋರ್ಸ್
ಗಳಿಗೆ (ಕೋರ್ಸ್ಗಳ ಅವಧಿಯನ್ನಾಧರಿಸಿ) 20,000 ರೂ.ಗಳಿಂದ 35,000 ರೂ., ರಾಷ್ಟ್ರೀಯ ಕಾನೂನು ಶಾಲೆಗಳಿಗೆ ಸಮನಾದ ಕಾನೂನು ವಿದ್ಯಾ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವವರಿಗೆ 40,000 ರೂ., ಪಿಎಚ್ಡಿ ಮಾಡುವವರಿಗೆ 40,000 ರೂ., ಐಐಟಿ, ಐಐಐಟಿ, ಎಐಎಂಎಸ್, ಐಐಎಸ್ಸಿ, ಐಐಎಸ್ಇಆರ್ಸಿಯಂತಹ ಪ್ರತಿಷ್ಠಿತ ರಾಷ್ಟ್ರೀಯ ವಿದ್ಯಾಸಂಸ್ಥೆಗಳಲ್ಲಿ ಅಧ್ಯಯನ ಮಾಡುವವರಿಗೆ 50,000 ರೂ. ವಾರ್ಷಿಕ ಸಹಾಯಧನವನ್ನು ನೀಡಲಾಗುತ್ತದೆ.






