ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದಕ್ಕಾಗಿ ಅಮೆಝಾನ್ನ 46 ಲಕ್ಷ ರೂ. ವೇತನ ತ್ಯಜಿಸಿದ 27ರ ಯುವಕ

Photo Credit : indiatoday.in
ಅಮೆಜಾನ್ನಲ್ಲಿ ವಾರ್ಷಿಕ 46 ಲಕ್ಷ ರೂ.ಗಳ ಪ್ಯಾಕೇಜ್ ಮತ್ತು ಏರ್ಬಸ್ನಲ್ಲೂ ಅವಕಾಶ ಪಡೆದಿದ್ದ 27ನೇ ವಯಸ್ಸಿನ ಶಾರದೇಂದು ತಿವಾರಿ ಬಾಲ್ಯದಿಂದ ಹೊತ್ತಿದ್ದ ಕನಸಿಗಾಗಿ ಎರಡೂ ಅವಕಾಶಗಳನ್ನು ತಿರಸ್ಕರಿಸಿದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದು ಅವರಿಗೆ ಯಾವುದೇ ಪ್ಯಾಕೇಜ್ಗಿಂತ ಮೌಲ್ಯಯುತವಾಗಿತ್ತು.
ಲಕ್ನೋ ಮೂಲದ ತಿವಾರಿ ಅವರ ಸಶಸ್ತ್ರ ಪಡೆಗಳಿಗೆ ಸೇರುವ ಮಹತ್ವಾಕಾಂಕ್ಷೆಗೆ ಅವರ ಕುಟುಂಬವೇ ಪ್ರೇರಣೆ. ತಂದೆ ಗೌರವ ಕ್ಯಾಪ್ಟನ್ ರಾಜ್ ಕುಮಾರ್ ತಿವಾರಿ ನಿವೃತ್ತರಾಗುವ ಮೊದಲು ಭಾರತೀಯ ಸೇನೆಯ ಆರ್ಮಿ ಸರ್ವಿಸ್ ಕಾರ್ಪ್ಸ್ನಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಹೀಗಾಗಿ ಸಮವಸ್ತ್ರದಲ್ಲಿ ತಂದೆಯನ್ನು ಕಾಣುತ್ತಾ ಬೆಳೆದ ತಿವಾರಿ ಅವರಿಗೆ ಸೇನೆಯಲ್ಲಿ ಕೆಲಸ ಮಾಡುವ ಆಸಕ್ತಿ ಸಹಜವಾಗಿ ಬೆಳೆದಿತ್ತು.
ಇದೀಗ ತಿವಾರಿ ಗಯಾದ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ (OTA) ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಈ ನೇಮಕಾತಿಗೆ ಮೊದಲು ಅವರು ಅಮೆಝಾನ್ನಲ್ಲಿ ಕ್ಲೌಡ್ ಎಂಜಿನಿಯರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ನಂತರ ಜಾಗತಿಕ ಏರೋಸ್ಪೇಸ್ ಸಂಸ್ಥೆಯಾಗಿರುವ ಏರ್ಬಸ್ಗೂ ಆಯ್ಕೆಯಾಗಿದ್ದರು.
ತಂತ್ರಜ್ಞಾನ ವಲಯದಲ್ಲಿ ವೃತ್ತಿ ಜೀವನ ನಿರ್ಮಿಸುವ ಮೊದಲು ಚಂಡೀಗಢದ ಪಿಇಸಿಯಲ್ಲಿ ಪದವಿ ಪಡೆದಿದ್ದರು. ಅದಕ್ಕೆ ಮೊದಲು ಕೇಂದ್ರೀಯ ವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದರು.
46 ಲಕ್ಷ ರೂ.ಗಳ ಪ್ಯಾಕೇಜ್ ಬಿಡುವುದು ಪ್ರಮುಖ ನಿರ್ಧಾರವಾಗಿತ್ತು. ತಿವಾರಿ ಅವರು ಲಾಭದಾಯಕ ಕಾರ್ಪೋರೇಟ್ ವೃತ್ತಿಜೀವನಕ್ಕಿಂತ ಸಮವಸ್ತ್ರ ಧರಿಸುವುದಕ್ಕೆ ಹೆಚ್ಚು ಮಹತ್ವ ನೀಡಿದರು. ಸೈನ್ಯಕ್ಕೆ ಪ್ರಯಾಣ ಸುಲಭವಾಗಿರಲಿಲ್ಲ. ಕಮಿಷನ್ ಪಡೆಯುವ ಗುರಿಯಲ್ಲಿ ಪದೇಪದೆ ನಿರಾಶೆ ಎದುರಿಸಿದ್ದರು. ಆದರೆ ಬಿಡದೆ ಪ್ರಯತ್ನಿಸುತ್ತಲೇ ಇದ್ದರು. ಅಂತಿಮವಾಗಿ ಅವರ ನಾಯಕತ್ವ ಗುಣಗಳಿಂದಾಗಿ ಇದೀಗ OTA ಗಯಾದಲ್ಲಿ ಸೀನಿಯರ್ ಅಂಡರ್ ಆಫೀಸರ್ ಎಂಬ ಪ್ರತಿಷ್ಠಿತ ನೇಮಕಾತಿ ದೊರೆತಿದೆ.
ಕೃಪೆ: indiatoday.in






