ಕರ್ನಾಟಕ SIR | ಮುಸ್ಲಿಂ ಶಾಸಕರು ಪ್ರತಿನಿಧಿಸುವ 10 ಕ್ಷೇತ್ರಗಳಿಂದ ಶೇ.27.59ರಷ್ಟು ಮತದಾರರ ಹೆಸರುಗಳು ಡಿಲೀಟ್
ಕಾಂಗ್ರೆಸ್ ಶೇ.60 ಅಥವಾ ಅದಕ್ಕಿಂತ ಹೆಚ್ಚು ಮತಗಳನ್ನು ಪಡೆದ ಮತಗಟ್ಟೆಗಳಿಂದ 22 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳು ಮಾಯ

ಬೆಂಗಳೂರು : ರಾಜಕೀಯ ಸಂಶೋಧನಾ ಸಲಹಾ ಸಂಸ್ಥೆ ‘ಸಂಕಲ್ಪ್’ ಒದಗಿಸಿದ ದತ್ತಾಂಶ ಆಧರಿಸಿ ‘ವಾರ್ತಾಭಾರತಿ’ ನಡೆಸಿದ ವಿಶ್ಲೇಷಣೆಯ ಪ್ರಕಾರ, ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ಮುಸ್ಲಿಂ ಶಾಸಕರು ಪ್ರತಿನಿಧಿಸುವ ಹತ್ತು ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಶೇ.25ಕ್ಕೂ ಅಧಿಕ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗಳಿಂದ ಕೈಬಿಡಲಾಗಿದೆ. ಸಲಹಾ ಸಂಸ್ಥೆಯ ಸಂಶೋಧನೆಯು ಭಾರತೀಯ ಚುನಾವಣಾ ಆಯೋಗವು (ECI) ಪ್ರಕಟಿಸಿದ ಮತಗಟ್ಟೆವಾರು ಡಿಲೀಷನ್ ದತ್ತಾಂಶವನ್ನು ಆಧರಿಸಿದೆ.
ಈ 10 ಕ್ಷೇತ್ರಗಳ ಒಟ್ಟು ಮತದಾರರಲ್ಲಿ ಶೇ.27.59ರಷ್ಟು ಮಂದಿಯ ಹೆಸರುಗಳನ್ನು SIR ಅವಧಿಯಲ್ಲಿ ಅಳಿಸಲಾಗಿದ್ದು, ಇದು ಕರ್ನಾಟಕದ ಒಟ್ಟು ಶೇ.19.45ರ ಅಳಿಸುವಿಕೆ ದರಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ.
2025ರ ಮತದಾರರ ಪಟ್ಟಿಯಲ್ಲಿ ಈ ಹತ್ತು ಕ್ಷೇತ್ರಗಳು ಒಟ್ಟು 9,62,359 ಮುಸ್ಲಿಂ ಮತದಾರರನ್ನು ಹೊಂದಿದ್ದವು. ಈ ಪೈಕಿ 2,46,759 (ಶೇ.25.64) ಹೆಸರುಗಳನ್ನು ಕೈಬಿಡಲಾಗಿದೆ. ಈ ಕ್ಷೇತ್ರಗಳಲ್ಲಿ ಇತರ ಸಮುದಾಯಗಳ ಮತದಾರರ ಅಳಿಸುವಿಕೆ ದರ ಶೇ. 28.79ರಷ್ಟಿದೆ.
► ಈ ಕ್ಷೇತ್ರಗಳು ಮತ್ತು ಅಳಿಸಲ್ಪಟ್ಟ ಒಟ್ಟು ಮತದಾರರ ವಿವರ:
♦ ಚಾಮರಾಜಪೇಟೆ (ಬಿ.ಝಡ್.ಝಮೀರ್ ಅಹ್ಮದ್ ಖಾನ್): 1,07,722 ಮತದಾರರು
♦ ಶಿವಾಜಿನಗರ (ರಿಝ್ವಾನ್ ಅರ್ಷದ್): 81,230 ಮತದಾರರು
♦ ನರಸಿಂಹರಾಜ (ತನ್ವೀರ್ ಸೇಠ್): 99,367 ಮತದಾರರು
♦ ಕಲಬುರಗಿ ಉತ್ತರ (ಕನೀಝ್ ಫಾತಿಮಾ): 1,05,257 ಮತದಾರರು
♦ ರಾಮನಗರ (ಎಚ್.ಎ.ಇಕ್ಬಾಲ್ ಹುಸೇನ್): 28,088 ಮತದಾರರು
♦ ಮಂಗಳೂರು (ಯು.ಟಿ.ಖಾದರ್ ಫರೀದ್): 16,989 ಮತದಾರರು
ಶಾಂತಿನಗರ -ಎನ್.ಎ.ಹ್ಯಾರಿಸ್, ಬೀದರ್-ರಹೀಮ್ ಖಾನ್, ಬೆಳಗಾವಿ ಉತ್ತರ-ಆಸಿಫ್ (ರಾಜು) ಸೇಠ್ ಮತ್ತು ಶಿಗ್ಗಾಂವಿ- ಯಾಸಿರ್ ಅಹ್ಮದ್ ಖಾನ್ ಪಠಾಣ್ ಇವು ಮುಸ್ಲಿಂ ಶಾಸಕರು ಪ್ರತಿನಿಧಿಸುವ ಇತರ ನಾಲ್ಕು ಕ್ಷೇತ್ರಗಳಾಗಿವೆ.
ಈ ಹತ್ತು ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲಾಗಿದ್ದರೆ, ಶಿಗ್ಗಾಂವಿ ಕ್ಷೇತ್ರವನ್ನು 2024ರ ನವೆಂಬರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಗೆದ್ದುಕೊಂಡಿದ್ದರು.
► ಕಾಂಗ್ರೆಸ್ ಭದ್ರಕೋಟೆಗಳಿಂದ 22 ಲಕ್ಷಕ್ಕೂ ಅಧಿಕ ಮತದಾರರ ಕಡಿತ
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.60 ಅಥವಾ ಅದಕ್ಕಿಂತ ಹೆಚ್ಚಿನ ಮತಗಳನ್ನು ಪಡೆದಿದ್ದ ಮತಗಟ್ಟೆಗಳಿಂದ 22.35 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ವಿಶ್ಲೇಷಣೆಯು ತೋರಿಸಿದೆ.
ದತ್ತಾಂಶದ ಪ್ರಕಾರ, 22,35,155 ಅಳಿಸಲ್ಪಟ್ಟ ಹೆಸರುಗಳು ‘ಕಾಂಗ್ರೆಸ್ ಭದ್ರಕೋಟೆಗಳು’ ಎಂದು ವರ್ಗೀಕರಿಸಲಾದ ಮತಗಟ್ಟೆಗಳಿಗೆ ಸೇರಿವೆ. ಇದು ರಾಜ್ಯಾದ್ಯಂತ ಮತಗಟ್ಟೆವಾರು ವಿಶ್ಲೇಷಣೆಯಲ್ಲಿ ಒಳಗೊಂಡಿರುವ ಒಟ್ಟು 1,07,76,645 ಅಳಿಸುವಿಕೆಗಳ ಶೇ 20.74ರಷ್ಟಿದೆ.
ವಿಶ್ಲೇಷಣೆಗಾಗಿ, ಕಾಂಗ್ರೆಸ್ ಭದ್ರಕೋಟೆ ಎಂದರೆ ಪಕ್ಷವು ಶೇ.60 ಅಥವಾ ಅದಕ್ಕಿಂತ ಹೆಚ್ಚಿನ ಮತಗಳನ್ನು ಪಡೆದ ಮತಗಟ್ಟೆ ಎಂದು ವ್ಯಾಖ್ಯಾನಿಸಲಾಗಿದೆ.
ಕ್ಷೇತ್ರವಾರು ಪರಿಶೀಲನೆಯು ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 39 ಕ್ಷೇತ್ರಗಳಲ್ಲಿ ಅಳಿಸಲ್ಪಟ್ಟ ಹೆಸರುಗಳಲ್ಲಿ ಶೇ.35ಕ್ಕಿಂತ ಹೆಚ್ಚು ಹೆಸರುಗಳು ಈ ಕಾಂಗ್ರೆಸ್ ಭದ್ರಕೋಟೆಗಳಿಗೆ ಸೇರಿವೆ ಎಂದು ಬೆಟ್ಟು ಮಾಡಿದೆ.
ಈ 39 ಕ್ಷೇತ್ರಗಳಲ್ಲಿ ಒಟ್ಟು 19,85,732 ಮತದಾರರ ಹೆಸರುಗಳನ್ನು ಅಳಿಸಲಾಗಿದ್ದು, ಇದು ಮತಗಟ್ಟೆವಾರು ವಿಶ್ಲೇಷಣೆಯಲ್ಲಿ ಒಳಗೊಂಡಿರುವ ಎಲ್ಲ ಅಳಿಸುವಿಕೆಗಳ ಶೇ.18.4 ರಷ್ಟನ್ನು ಪ್ರತಿನಿಧಿಸುತ್ತದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಈ 39 ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳನ್ನು ಕಾಂಗ್ರೆಸ್, 11 ಕ್ಷೇತ್ರಗಳನ್ನು ಬಿಜೆಪಿ ಮತ್ತು ಎರಡನ್ನು ಜೆಡಿಎಸ್ ಗೆದ್ದಿದ್ದವು.
ಕರ್ನಾಟಕದ ಎಲ್ಲ 224 ಕ್ಷೇತ್ರಗಳಲ್ಲಿ ಒಟ್ಟು ಮತದಾರರ ಪೈಕಿ ಸರಾಸರಿ ಶೇ.12.9ರಷ್ಟು ಮುಸ್ಲಿಮರಿದ್ದರೆ, ಈ 39 ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಮುಸ್ಲಿಮರ ಪಾಲು ಸರಾಸರಿ ಶೇ.22 ರಷ್ಟಿದೆ ಎಂದು ವಿಶ್ಲೇಷಣೆಯು ತೋರಿಸಿದೆ.
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ (CEO) ಪ್ರಕಟಿಸಿದ ಅಳಿಸಲ್ಪಟ್ಟ ಮತದಾರರ ಮತಗಟ್ಟೆವಾರು ಪಟ್ಟಿಗಳು ಮತ್ತು ಅವುಗಳನ್ನು ತೆಗೆದುಹಾಕಲು ಕಾರಣಗಳನ್ನು ಈ ಅಂಕಿಅಂಶಗಳು ಆಧರಿಸಿವೆ. ಪರಿಶೀಲಿಸಲಾದ ದತ್ತಾಂಶವು ಪ್ರಕಟಿತ ಮತಗಟ್ಟೆವಾರು ದಾಖಲೆಗಳಲ್ಲಿನ ಒಟ್ಟು ಅಳಿಸುವಿಕೆಗಳ ಶೇ.99.67ರಷ್ಟನ್ನು ಒಳಗೊಂಡಿದೆ. ಚುನಾವಣಾ ಆಯೋಗದ ಒಟ್ಟು ಅಂಕಿಅಂಶಗಳಿಂದ ಅಳಿಸಲ್ಪಟ್ಟ 19,846 ಹೆಸರುಗಳನ್ನು ಕ್ಷೇತ್ರವಾರು ವಿಶ್ಲೇಷಣೆಯಲ್ಲಿ ಸೇರಿಸಲು ಸಾಧ್ಯವಾಗಿಲ್ಲ.
ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಸಮಯದಲ್ಲಿ ಅಳಿಸಲ್ಪಟ್ಟ ಮತದಾರರ ಒಟ್ಟು ಸಂಖ್ಯೆ 1,07,96,339 ಎಂದು ಚುನಾವಣಾ ಆಯೋಗದ ಪ್ರಕಟಿತ ಅಂಕಿಅಂಶಗಳು ತಿಳಿಸಿವೆ.
► ‘ಗೈರು’ ಮತ್ತು ‘ಈಗಾಗಲೇ ನೋಂದಾಯಿತ’ ಎಂದು ಗುರುತಿಸಿ ಕೈಬಿಡಲಾಗಿರುವವರಲ್ಲಿ ಮುಸ್ಲಿಂ ಮತದಾರರ ಹೆಚ್ಚಿನ ಪಾಲು
SIR ಸಮಯದಲ್ಲಿ ಮತದಾರರ ಅಳಿಸುವಿಕೆಗೆ ತೋರಿಸಲಾದ ಕಾರಣಗಳ ವಿಶ್ಲೇಷಣೆಯು, ಎಣಿಕೆದಾರರ ಮೌಲ್ಯಮಾಪನವನ್ನು ಅವಲಂಬಿಸಿರುವ ‘ಗೈರು’ ಮತ್ತು ‘ಈಗಾಗಲೇ ನೋಂದಾಯಿತ’ ನಮೂನೆಗಳಲ್ಲಿ ಮುಸ್ಲಿಂ ಮತದಾರರು ಅತಿ ಹೆಚ್ಚು ಪ್ರಾತಿನಿಧ್ಯವನ್ನು ಹೊಂದಿದ್ದಾರೆ ಎನ್ನುವುದನ್ನು ತೋರಿಸಿದೆ.
2025ರ ಮತದಾರರ ಪಟ್ಟಿಯಲ್ಲಿ ಮುಸ್ಲಿಮರು ರಾಜ್ಯದ ಮತದಾರರ ಶೇ.12.9ರಷ್ಟಿದ್ದರು, ಆದರೆ ‘ಗೈರು’ ವರ್ಗದಡಿ ಕಡಿತಗೊಂಡವರಲ್ಲಿ ಶೇ.17.1ರಷ್ಟು ಮತ್ತು ‘ಈಗಾಗಲೇ ನೋಂದಾಯಿತ’ ಎಂದು ತೆಗೆದುಹಾಕಲ್ಪಟ್ಟವರಲ್ಲಿ ಶೇ.20.3ರಷ್ಟು ಮುಸ್ಲಿಮರಾಗಿದ್ದಾರೆ. ‘ಗೈರು’ ಎಂದು ಅಳಿಸಲಾಗಿರುವ 15,15,088 ಮತದಾರರಲ್ಲಿ 2,58,770 ಮಂದಿ ಮುಸ್ಲಿಮರಾಗಿದ್ದಾರೆ. ಅದೇ ರೀತಿ, ‘ಈಗಾಗಲೇ ನೋಂದಾಯಿತ’ ವರ್ಗದಡಿ ತೆಗೆದುಹಾಕಲಾದ 7,08,666 ಮತದಾರರಲ್ಲಿ 1,43,940 ಮಂದಿ ಮುಸ್ಲಿಮರಾಗಿದ್ದಾರೆ. ಬೇರೆಡೆ ಈಗಾಗಲೇ ನೋಂದಾಯಿಸಲಾಗಿದೆ ಎಂದು ಕಡಿತಗೊಳಿಸಲಾದ ಪ್ರತಿ ಐದು ಮತದಾರರಲ್ಲಿ ಒಬ್ಬರು ಮುಸ್ಲಿಮರಾಗಿದ್ದಾರೆ, ಆದರೆ ಮೂಲ ಪಟ್ಟಿಯಲ್ಲಿ ಮುಸ್ಲಿಮರು ಎಂಟು ಮತದಾರರಲ್ಲಿ ಕೇವಲ ಒಬ್ಬರಷ್ಟಿದ್ದರು.
‘ಮೃತಪಟ್ಟವರ’ ವರ್ಗದಲ್ಲಿ ಇದು ಭಿನ್ನವಾಗಿದೆ. ಈ ಆಧಾರದಲ್ಲಿ ಒಟ್ಟು 2,00,277 ಮುಸ್ಲಿಂ ಮತದಾರರ ಹೆಸರುಗಳನ್ನು ಅಳಿಸಲಾಗಿದೆ, ಇದು ಎಲ್ಲ ಅಳಿಸುವಿಕೆಗಳ ಶೇ. 12.2ರಷ್ಟಿದೆ. ಪರಿಶೀಲನೆಯ ಸಮಯದಲ್ಲಿ ಎಣಿಕೆದಾರರ ಮೌಲ್ಯಮಾಪನದ ಮೂಲಕ ನಿರ್ಧರಿಸಲ್ಪಡುವ ‘ಗೈರು’ ಮತ್ತು ‘ಈಗಾಗಲೇ ನೋಂದಾಯಿತ’ ವರ್ಗಗಳಂತಲ್ಲದೆ, ಮರಣವನ್ನು ಡೆತ್ ರಿಜಿಸ್ಟರ್ ನಂತಹ ಅಧಿಕೃತ ದಾಖಲೆಗಳೊಂದಿಗೆ ಪರಿಶೀಲಿಸಬಹುದು. ಮುಸ್ಲಿಂ ಮತದಾರರು ಮೊದಲ ಎರಡು ವರ್ಗಗಳಲ್ಲಿ ಅತಿ ಹೆಚ್ಚು ಪ್ರಾತಿನಿಧ್ಯವನ್ನು ಹೊಂದಿದ್ದು, ಮರಣದ ವರ್ಗದಲ್ಲಿ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿರುವುದು ಪರಿಶೀಲನಾ ಪ್ರಕ್ರಿಯೆಯ ಆಧಾರ ಮತ್ತು ಸ್ಥಿರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಮತದಾರರನ್ನು ಯಾವ ಆಧಾರದ ಮೇಲೆ ಗೈರು ಎಂದು ಗುರುತಿಸಲಾಗಿದೆ ಮತ್ತು ಅವರ ಹೆಸರುಗಳನ್ನು ತೆಗೆದುಹಾಕುವ ಮೊದಲು ಎಷ್ಟು ಬಾರಿ ಭೇಟಿ ನೀಡಲಾಗಿದೆ ಎಂಬ ಬಗ್ಗೆ ಇವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಒಬ್ಬ ಮತದಾರನು ಬೇರೆಡೆ ಈಗಾಗಲೇ ನೋಂದಾಯಿಸಿಕೊಂಡಿದ್ದಾನೆ ಎನ್ನುವುದನ್ನು ಸಾಬೀತುಗೊಳಿಸಲು ಯಾವ ದಾಖಲೆ ಸಾಕ್ಷ್ಯವನ್ನು ಬಳಸಲಾಗಿದೆ ಮತ್ತು ನಕಲು ನಮೂದನ್ನು ಹಾಜರು ಪಡಿಸಲಾಗಿದೆಯೇ ಎಂಬ ಬಗ್ಗೆಯೂ ಇದು ಪ್ರಶ್ನೆಗಳನ್ನು ಎತ್ತುತ್ತದೆ. ಅಳಿಸುವಿಕೆಗಳ ಕಾರಣಗಳ ವಿತರಣೆಯಲ್ಲಿನ ವ್ಯತ್ಯಾಸವು ಎಣಿಕೆದಾರರ ಮೌಲ್ಯಮಾಪನವನ್ನು ಒಳಗೊಂಡಿರುವ ವರ್ಗಗಳಲ್ಲಿ ಮುಸ್ಲಿಂ ಮತದಾರರು ಏಕೆ ಹೆಚ್ಚು ಪ್ರತಿನಿಧಿಸಲ್ಪಟ್ಟಿದ್ದಾರೆ, ಆದರೆ ಮೃತಪಟ್ಟಿದ್ದಾರೆ ಎಂದು ದಾಖಲಾದ ಅಳಿಸುವಿಕೆಗಳಲ್ಲಿ ಅವರ ಪಾಲು ಏಕೆ ಕಡಿಮೆಯಿದೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
► ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಿಂದ ಶೇ.22.67ರಷ್ಟು ಮುಸ್ಲಿಂ ಮತದಾರರ ಕಡಿತ
2026ರ ಅಂತಿಮ SIR ಪ್ರಕಾರ, ಮುಸ್ಲಿಂ ಮತದಾರರು ಒಟ್ಟು ಮತದಾರರ ಶೇ.15 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವ 64 ವಿಧಾನಸಭಾ ಕ್ಷೇತ್ರಗಳಲ್ಲಿ, SIR ಸಮಯದಲ್ಲಿ ಶೇ.22.67ರಷ್ಟು ಮುಸ್ಲಿಂ ಮತದಾರರನ್ನು ಮತದಾರರ ಪಟ್ಟಿಗಳಿಂದ ಕೈಬಿಡಲಾಗಿದೆ. ಇತರೆ ಮತದಾರರ ಕಡಿತ ಪ್ರಮಾಣ ಶೇ.20.19ರಷ್ಟಿದೆ. ಇದು ಶೇ. 2.48ರಷ್ಟು ವ್ಯತ್ಯಾಸವನ್ನು ಸೂಚಿಸುತ್ತದೆ. ಈ ಕ್ಷೇತ್ರಗಳಲ್ಲಿ 2025ರ ಮತದಾರರ ಪಟ್ಟಿಯಲ್ಲಿ 38,82,598 ಮುಸ್ಲಿಂ ಮತದಾರರಿದ್ದರು, ಇವರಲ್ಲಿ 8,80,543 ಮತದಾರರನ್ನು ಕೈಬಿಡಲಾಗಿದೆ. ಉಳಿದ 160 ಕ್ಷೇತ್ರಗಳಲ್ಲಿ ಅಳಿಸಲಾದ ಮುಸ್ಲಿಂ ಮತದಾರರ ಪ್ರಮಾಣ ಶೇ. 20.27ರಷ್ಟಿದ್ದರೆ ಇತರೆ ಮತದಾರರಲ್ಲಿ ಇದು ಶೇ. 18.79ರಷ್ಟಿದೆ.
► ಕರ್ನಾಟಕದ ಪ್ರಮುಖ ನಾಯಕರ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರ ಅಳಿಸುವಿಕೆ
25 ಪ್ರಮುಖ ಕ್ಷೇತ್ರಗಳ ವಿಶ್ಲೇಷಣೆಯು ಮುಸ್ಲಿಂ ಮತದಾರರ ಅಳಿಸುವಿಕೆಯಲ್ಲಿ ವಿವಿಧ ಪ್ರಮಾಣಗಳನ್ನು ತೋರಿಸಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿನಿಧಿಸುವ ಕನಕಪುರದಲ್ಲಿ ಹಿಂದಿನ ಮತದಾರರ ಪಟ್ಟಿಯಿಂದ ಶೇ.22ರಷ್ಟು ಮುಸ್ಲಿಂ ಮತದಾರರ ಹೆಸರುಗಳನ್ನು ಅಳಿಸಲಾಗಿದೆ. ಬಿ.ವೈ.ವಿಜಯೇಂದ್ರ ಪ್ರತಿನಿಧಿಸುತ್ತಿರುವ ಶಿಕಾರಿಪುರದಲ್ಲಿ ಇದು ಶೇ.16.5ರಷ್ಟಿದೆ. ಇದೇ ವೇಳೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರದಲ್ಲಿ ಹಿಂದಿನ ಪಟ್ಟಿಯಿಂದ ಶೇ. 25.7ರಷ್ಟು ಮುಸ್ಲಿಂ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ.
ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರದಲ್ಲಿ ಶೇ.32.5ರಷ್ಟು ಮುಸ್ಲಿಂ ಮತದಾರರನ್ನು ಅಂದರೆ 11,278 ಹೆಸರುಗಳನ್ನು ಅಳಿಸಲಾಗಿದೆ. ರಿಝ್ವಾನ್ ಅರ್ಷದ್ ಪ್ರತಿನಿಧಿಸುವ ಶಿವಾಜಿನಗರದಲ್ಲಿ ಶೇ.32.1ರಷ್ಟು ಅಳಿಸುವಿಕೆ (25,673 ಮತದಾರರು) ದಾಖಲಾಗಿದೆ. ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಗಾಂಧಿನಗರದಲ್ಲಿ ಶೇ.37.8ರಷ್ಟು ಮುಸ್ಲಿಂ ಮತದಾರರನ್ನು ಅಂದರೆ 6,327 ಹೆಸರುಗಳನ್ನು ಅಳಿಸಲಾಗಿದೆ.
► 7.85 ಲಕ್ಷ ಫಾರ್ಮ್ 9 ಅರ್ಜಿಗಳಿಗೆ 10.08 ಲಕ್ಷ ಸೇರ್ಪಡೆಗಳನ್ನು ದಾಖಲಿಸಿದ ಚುನಾವಣಾ ಆಯೋಗ
SIR ಸಮಯದಲ್ಲಿ ಕರ್ನಾಟಕದ ಮತದಾರರ ಪಟ್ಟಿಗೆ ಹೊಸ ಮತದಾರರ ಸೇರ್ಪಡೆಯು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ವಿಶ್ಲೇಷಣೆಯ ಭಾಗವಾಗಿ ಪರಿಶೀಲಿಸಿದ ದತ್ತಾಂಶದ ಪ್ರಕಾರ, ಚುನಾವಣಾ ಆಯೋಗವು ದಾಖಲಿಸಿದ ಸೇರ್ಪಡೆಗಳ ಸಂಖ್ಯೆಯು ಸೇರ್ಪಡೆಗಾಗಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆಗಿಂತಲೂ ಹೆಚ್ಚಿದೆ.
ಜೂನ್ 16, 2026ರಿಂದ ಅಂಕಿಅಂಶಗಳನ್ನು ಟ್ರ್ಯಾಕ್ ಮಾಡಿರುವ ‘ಸಂಕಲ್ಪ್’ ಒದಗಿಸಿದ ದತ್ತಾಂಶದ ಪ್ರಕಾರ, ಚುನಾವಣಾ ಆಯೋಗವು 7,85,716 ಫಾರ್ಮ್ 9 ಅರ್ಜಿಗಳಿಗೆ 10,08,038 ಸೇರ್ಪಡೆಗಳನ್ನು ದಾಖಲಿಸಿದೆ, ಇದು 2,22,322ರಷ್ಟು ವ್ಯತ್ಯಾಸವನ್ನು ಹೊಂದಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ದಾಖಲಾದ ಅರ್ಜಿಗಳ ಸಂಖ್ಯೆಗಿಂತ ಸೇರ್ಪಡೆಗಳ ಸಂಖ್ಯೆ ಸುಮಾರು 1.3 ಪಟ್ಟು ಹೆಚ್ಚಾಗಿದೆ.
ಹಕ್ಕುಗಳು ಮತ್ತು ಆಕ್ಷೇಪಣೆಗಳ ಮೂಲಕ 1,88,324 ಮತದಾರರನ್ನು ಕೈಬಿಡಲಾಗಿದೆ ಮತ್ತು 8,96,519 ನಮೂನೆಗಳನ್ನು ಮಾರ್ಪಡಿಸಲಾಗಿದೆ ಎಂದು ದತ್ತಾಂಶವು ತೋರಿಸುತ್ತದೆ. ಸೇರ್ಪಡೆ, ಕಡಿತ, ತಿದ್ದುಪಡಿ ಮತ್ತು ಸ್ಥಳಾಂತರಕ್ಕಾಗಿನ ಅರ್ಜಿಗಳನ್ನು ಒಳಗೊಂಡಂತೆ ಸಂಕಲ್ಪ್ ಟ್ರ್ಯಾಕ್ ಮಾಡಿದ ಐದು ನಮೂನೆಗಳು 19,26,935 ಅರ್ಜಿಗಳನ್ನು ಹೊಂದಿವೆ.
ಆದರೂ, 7.85 ಲಕ್ಷ ಫಾರ್ಮ್ 9 ಅರ್ಜಿಗಳ ವಿರುದ್ಧ 10.08 ಲಕ್ಷ ಸೇರ್ಪಡೆಗಳನ್ನು ಹೇಗೆ ಲೆಕ್ಕಹಾಕಲಾಗಿದೆ ಎಂಬುದನ್ನು ವಿವರಿಸುವ ಯಾವುದೇ ಸಾರ್ವಜನಿಕವಾಗಿ ಲಭ್ಯವಿರುವ ಸಮನ್ವಯತೆಯನ್ನು ಚುನಾವಣಾ ಆಯೋಗವು ಒದಗಿಸಿಲ್ಲ. ಸಂಕಲ್ಪ್ ಪರಿಶೀಲಿಸಿದ ದತ್ತಾಂಶದಲ್ಲಿ ಅರ್ಜಿಗಳ ವಿಲೇವಾರಿ ಸ್ಥಿತಿಯನ್ನು ಸಹ ಪ್ರಕಟಿಸಲಾಗಿಲ್ಲ.
ಈ ಸಮಸ್ಯೆಯು ಈಗ ಧುತ್ತೆಂದು ಉದ್ಭವಿಸಿದ್ದಲ್ಲ. ಉತ್ತರ ಪ್ರದೇಶದಲ್ಲಿ ಇದೇ ರೀತಿಯ ವ್ಯತ್ಯಾಸವು ತನಿಖೆಗೆ ಒಳಪಟ್ಟಿತ್ತು. ಅಕ್ಟೋಬರ್ 6, 2026ರಂದು ಪ್ರಕಟವಾದ ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ನ ತನಿಖೆಯು, ಸಾರ್ವಜನಿಕವಾಗಿ ಬಹಿರಂಗಪಡಿಸಿದ 71.38 ಲಕ್ಷ ಫಾರ್ಮ್ 9 ಅರ್ಜಿಗಳ ವಿರುದ್ಧ ಚುನಾವಣಾ ಆಯೋಗವು ಅಂತಿಮ ಮತದಾರರ ಪಟ್ಟಿಗೆ 84.3 ಲಕ್ಷ ಮತದಾರರನ್ನು ಸೇರಿಸಿದೆ ಎಂದು ಕಂಡುಹಿಡಿದಿದೆ. ಇದು 12.92 ಲಕ್ಷದಷ್ಟು ವ್ಯತ್ಯಾಸವನ್ನು ತೋರಿಸಿದೆ. ಕರಡು ಪಟ್ಟಿ ಪ್ರಕಟವಾಗುವ ಮೊದಲು ಸ್ವೀಕರಿಸಲಾಗಿದೆ ಎಂದು ವರದಿಯಾದ ಮತ್ತೊಂದು 16.18 ಲಕ್ಷ ಅರ್ಜಿಗಳು ಸಾರ್ವಜನಿಕವಾಗಿ ಲಭ್ಯವಿರುವ ಅರ್ಜಿ ದಾಖಲೆಗಳಿಂದ ಕಾಣೆಯಾಗಿವೆ ಎಂದೂ ತನಿಖೆಯು ಕಂಡುಕೊಂಡಿದೆ.
ನಂತರ ಆರೋಪಗಳನ್ನು ತಳ್ಳಿಹಾಕಿದ್ದ ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ, ಕರಡು ಪಟ್ಟಿ ಪ್ರಕಟವಾಗುವ ಮೊದಲು ಸ್ವೀಕರಿಸಿದ ಅರ್ಜಿಗಳನ್ನು ಫಾರ್ಮ್ 9ರಲ್ಲಿ ಪ್ರಕಟಿಸುವ ಅಗತ್ಯವಿಲ್ಲ ಮತ್ತು ಎಣಿಕೆ ಅಭಿಯಾನದ ಸಮಯದಲ್ಲಿ 16.18 ಲಕ್ಷ ಅರ್ಜಿಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದ್ದರು. ಈ ಪ್ರಕ್ರಿಯೆಯು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಅನುಸರಿಸಿದೆ ಎಂದು ಅವರು ಸಮರ್ಥಿಸಿಕೊಂಡಿದ್ದರು.
ಆದರೂ, ಕರ್ನಾಟಕದಲ್ಲಿ ದಾಖಲಾದ ಸೇರ್ಪಡೆಗಳು ಮತ್ತು ಫಾರ್ಮ್ 9 ಅರ್ಜಿಗಳ ನಡುವಿನ ವ್ಯತ್ಯಾಸವು ಪರಿಶೀಲಿಸಲಾದ ದಾಖಲೆಗಳಲ್ಲಿ ವಿವರಣೆಗೆ ನಿಲುಕದೆ ಉಳಿದುಕೊಂಡಿದೆ. ಚುನಾವಣಾ ಆಯೋಗವು ಪರಿಷ್ಕರಣೆ ವೇಳೆ ಟ್ರ್ಯಾಕ್ ಮಾಡಲಾದ ಫಾರ್ಮ್ 9 ಅರ್ಜಿಗಳಿಗಿಂತ 2.22 ಲಕ್ಷ ಹೆಚ್ಚುವರಿ ಸೇರ್ಪಡೆಗಳನ್ನು ದಾಖಲಿಸಿದ್ದರೆ, ಈ ಹೆಚ್ಚುವರಿ ನಮೂದುಗಳ ಮೂಲ ಯಾವುದು ಮತ್ತು ಅನುಗುಣವಾದ ಅರ್ಜಿ ಹಾಗೂ ಪರಿಶೀಲನಾ ದಾಖಲೆಗಳು ಎಲ್ಲಿವೆ?






