ಹಳೆಯ ‘ 3 Idiots’ ಜೊತೆಗೆ ರಾಜ್ಕುಮಾರ್ ಹಿರಾನಿ ಹೊಸ ಮ್ಯಾಜಿಕ್; ಸೀಕ್ವೆಲ್ ಗೆ ಕತೆ ಬರೆಯುತ್ತಿರುವುದಾಗಿ ತಿಳಿಸಿದ ನಿರ್ದೇಶಕ!

ರಾಜ್ಕುಮಾರ್ ಹಿರಾನಿ | Photo Credit : PTI
‘3 ಈಡಿಯಟ್ಸ್’ ಕತೆ ಇನ್ನೂ ಅಭಿವೃದ್ಧಿಯಾಗುತ್ತಿದೆ ಮತ್ತು ಸ್ಕ್ರಿಪ್ಟ್ ಅಂತಿಮವಾಗಿ ಸರಿಯಾಗಿದ್ದರೆ ಮಾತ್ರವೇ ಯೋಜನೆ ಮುಂದುವರಿಯಲಿದೆ ಎಂದು ರಾಜ್ಕುಮಾರ್ ಹಿರಾನಿ ಬಹಿರಂಗಪಡಿಸಿದ್ದಾರೆ.
2009ರ ಬ್ಲಾಕ್ಬಸ್ಟರ್ ‘3 ಈಡಿಯಟ್ಸ್’ ಚಿತ್ರದ ಸೀಕ್ವೆಲ್ ಬಗ್ಗೆ ನಿರ್ದೇಶಕರಾದ ರಾಜ್ಕುಮಾರ್ ಹಿರಾನಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಕತೆ ಇನ್ನೂ ಅಭಿವೃದ್ಧಿಯಾಗುತ್ತಿದೆ ಮತ್ತು ಸ್ಕ್ರಿಪ್ಟ್ ಅಂತಿಮವಾಗಿ ಸರಿಯಾಗಿದ್ದರೆ ಮಾತ್ರವೇ ಯೋಜನೆ ಮುಂದುವರಿಯಲಿದೆ ಎಂದು ಚಿತ್ರ ನಿರ್ದೇಶಕರು ಬಹಿರಂಗಪಡಿಸಿದ್ದಾರೆ.
ಕತೆಯನ್ನು ಪ್ರಸ್ತುತ ಬರೆಯಲಾಗುತ್ತಿದ್ದು, ಅದು ಸರಿಯಾದ ಹಂತ ತಲುಪುವವರೆಗೆ ಸೀಕ್ವೆಲ್ ಬಗ್ಗೆ ಚರ್ಚಿಸಲು ಬಯಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಂಭಾವ್ಯ ಕತೆಯನ್ನು ಸೀಕ್ವೆಲ್ಗಾಗಿ ಸಿದ್ಧಪಡಿಸಿರಲಿಲ್ಲ. ಬದಲಾಗಿ, ಬೇರೊಂದು ಕತೆಯನ್ನು ಅಭಿವೃದ್ಧಿಪಡಿಸುತ್ತಿದ್ದ ಸಂದರ್ಭದಲ್ಲಿ ಆ ಕತೆಯು ‘3 ಈಡಿಯಟ್ಸ್’ ಸೀಕ್ವೆಲ್ಗೆ ಹೊಂದಿಕೆಯಾಗುತ್ತದೆ ಎಂದು ಕಂಡುಕೊಂಡಿದ್ದೆವು. ಸೀಕ್ವೆಲ್ ನ ಕತೆಗಳಲ್ಲಿ ಅದೇ ಪಾತ್ರಗಳು ಇರಲಿವೆ ಎಂದು ಅವರು ವಿವರಿಸಿದ್ದಾರೆ.
ಸಂಭಾವ್ಯ ಸೀಕ್ವೆಲ್ ನ ಮೂವರು ಮುಖ್ಯಪಾತ್ರಗಳು ವಿದ್ಯಾರ್ಥಿಗಳಂತೆ ಭೇಟಿ ಮಾಡುವುದಿಲ್ಲ ಬದಲಾಗಿ ಎರಡು ದಶಕಗಳ ನಂತರ ಅವರ ಜೀವನದಲ್ಲಿ ಏನಾಯಿತು ಎಂಬುದನ್ನು ಕತೆ ಅನ್ವೇಷಿಸಲಿದೆ. ಆದರೆ, ಕತೆ ಇನ್ನೂ ಅಂತಿಮ ಹಂತ ತಲುಪಿಲ್ಲ. ತಂಡ ಇನ್ನೂ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದೆ. ಕತೆ ಸರಿಯಾಗಿದೆ ಎಂದು ಮನವರಿಕೆಯಾದಲ್ಲಿ ಮಾತ್ರ ಅದನ್ನು ಸಿನಿಮಾವಾಗಿ ಪರಿವರ್ತಿಸಲಾಗುತ್ತದೆ ಎಂದು ಅವಸರು ಹೇಳಿದರು.
ಅವರು ತಮ್ಮ ‘ಮುನ್ನಾಬಾಯಿ ಎಂಬಿಬಿಎಸ್’ ಸಿನಿಮಾದ ಸೀಕ್ವೆಲ್ ಮಾಡಿರುವುದನ್ನೂ ನೆನಪಿಸಿಕೊಂಡರು. “ನಾನು ಮುನ್ನಾಭಾಯಿ ಚಿತ್ರದ ಸೀಕ್ವೆಲ್ ನಿರ್ಮಿಸಿದ ಆರಂಭದಲ್ಲಿ ಅದನ್ನು ಮಾಡುವ ಉದ್ದೇಶವಿರಲಿಲ್ಲ. ಏಕೆಂದರೆ ಸೀಕ್ವೆಲ್ಗಳು ಯಶಸ್ಸು ಸಾಧಿಸುವುದಿಲ್ಲ ಎನ್ನುವ ನಂಬಿಕೆ ಇತ್ತು. ಹಿಂದೆ ಮಾಡಿದ ಸೀಕ್ವೆಲ್ಗಳು ಯಶಸ್ವಿಯಾಗುತ್ತಿರಲಿಲ್ಲ. ‘ಲಗೇ ರಹೋ ಮುನ್ನಾ ಭಾಯಿ’ ಕಲ್ಪನೆಯೂ ಕೂಡ ಇನ್ನೊಂದು ಚಿತ್ರಕತೆ ಬರೆಯುತ್ತಿದ್ದಾಗ ಹೊಳೆದಿತ್ತು ಎನ್ನುವುದನ್ನೂ ಅವರು ಬಹಿರಂಗಪಡಿಸಿದರು.
ಮೂಲ ಸಿನಿಮಾದ ವರ್ಷಗಳ ನಂತರ ಸೀಕ್ವೆಲ್ ಮಾಡುತ್ತಿರುವ ಬಗ್ಗೆ ಜನರು ಪ್ರಶ್ನಿಸಿದಾಗ ಅವರು ನೀಡಿದ ಉತ್ತರ, “ಕೇವಲ ಸೀಕ್ವೆಲ್ ಎಂಬ ಕಾರಣಕ್ಕೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಮರಳುತ್ತಾರೆ ಎಂಬ ಖಚಿತತೆ ಇಲ್ಲ” ಎನ್ನುವುದಾಗಿತ್ತು.
‘3 ಈಡಿಯಟ್ಸ್’ನಲ್ಲಿ ಆಮಿರ್ ಖಾನ್, ಶರ್ಮನ್ ಜೋಶಿ, ಆರ್ ಮಾಧವನ್, ಕರೀನಾ ಕಪೂರ್ ಮತ್ತು ಬೋಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.






