2024ರಲ್ಲಿ ಭಾರತದಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಲೆಕ್ಕದಲ್ಲಿ 4 ಸಾವಿರ ಅಂತರ! MoRTH–NCRB ದತ್ತಾಂಶದಲ್ಲಿ ವ್ಯತ್ಯಾಸವೇಕೆ?

ಸಾಂದರ್ಭಿಕ ಚಿತ್ರ | Photo Credit : magnific.com
ರಸ್ತೆ ಅಪಘಾತಗಳಿಂದ ಸಂಭವಿಸುವ ಒಟ್ಟು ಸಾವುಗಳ ವಿಷಯದಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಮತ್ತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರತಿ ವರ್ಷ ರಸ್ತೆ ಅಪಘಾತಗಳು ಮತ್ತು ಸಾವುಗಳ ದತ್ತಾಂಶವನ್ನು ಬಿಡುಗಡೆ ಮಾಡುತ್ತವೆ. ಆದರೆ ಈ ಅಂಕಿಅಂಶಗಳಲ್ಲಿ ಹಲವು ವರ್ಷಗಳಿಂದ ನಿರಂತರ ಹೊಂದಾಣಿಕೆಯಿಲ್ಲ. ಎರಡು ಅಂಕಿಅಂಶಗಳಲ್ಲೂ ಸಾಕಷ್ಟು ವ್ಯತ್ಯಾಸ ಕಾಣಸಿಗುತ್ತದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿದ 2024ರ ವರದಿಯು ದೇಶಾದ್ಯಂತ ರಸ್ತೆ ಅಪಘಾತಗಳಲ್ಲಿ ಒಟ್ಟು 1.77 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳುತ್ತದೆ. ಆದರೆ ಎನ್ಸಿಆರ್ಬಿಯ ‘ಭಾರತದಲ್ಲಿ ಅಪಘಾತ ಸಾವುಗಳು ಮತ್ತು ಆತ್ಮಹತ್ಯೆ’ ವರದಿಯು ಈ ಅವಧಿಯಲ್ಲಿ 1.75 ಲಕ್ಷ ಜನರು ಸಾವಿಗೀಡಾಗಿದ್ದಾರೆ ಎಂದು ಹೇಳುತ್ತದೆ. ಬುಧವಾರ (ಮೇ 6) ರಂದು ಎನ್ಸಿಆರ್ಬಿ ವರದಿ ಬಿಡುಗಡೆ ಮಾಡಿತ್ತು. ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದಿಂದ ಉಂಟಾಗುವ ಸಾವುಗಳನ್ನು ದಾಖಲಿಸುವ ಎನ್ಸಿಆರ್ಬಿಯ ಮತ್ತೊಂದು ವರದಿ ‘Crime in India, 2024’ರಲ್ಲಿ 1.81 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತೋರಿಸಿದೆ.
ಈ ವ್ಯತ್ಯಾಸ ಅಸಾಮಾನ್ಯವೇನಲ್ಲ. 2023 ಅನ್ನು ಹೊರತುಪಡಿಸಿ ಕಳೆದ ಐದು ವರ್ಷಗಳ ದತ್ತಾಂಶಗಳನ್ನು ವಿಶ್ಲೇಷಣೆ ಮಾಡಿದಾಗ ವರದಿಗಳಲ್ಲಿ ರಸ್ತೆ ಅಪಘಾತದಲ್ಲಿನ ಸಾವುಗಳ ಸಂಖ್ಯೆಯು ಬದಲಾಗುತ್ತಿರುವುದು ಕಾಣುತ್ತದೆ. ಪೊಲೀಸರು ನಮೂದಿಸಿದ ನೈಜ-ಸಮಯದ ದತ್ತಾಂಶವನ್ನು ಸಂಗ್ರಹಿಸುವ ಉದ್ದೇಶದಿಂದ ರಸ್ತೆ ಸಾರಿಗೆ ಸಚಿವಾಲಯವು 2021-22ರಲ್ಲಿ ತನ್ನ ಮಹತ್ವಾಕಾಂಕ್ಷೆಯ ಎಲೆಕ್ಟ್ರಾನಿಕ್ ವಿವರವಾದ ಅಪಘಾತ ವರದಿ (eDAR)/ಇಂಟಿಗ್ರೇಟೆಡ್ ರಸ್ತೆ ಅಪಘಾತ ಡೇಟಾಬೇಸ್ (iRAD) ವ್ಯವಸ್ಥೆಯನ್ನು ಜಾರಿಗೆ ತಂದಾಗಲೂ ಈ ಪ್ರವೃತ್ತಿ ಮುಂದುವರೆದಿದೆ.
ವ್ಯತ್ಯಾಸವು ದೊಡ್ಡದಾಗಿ ಕಾಣಿಸದಿದ್ದರೂ, ವಿಶ್ಲೇಷಣೆಯಲ್ಲಿರುವ ಅವಧಿಯಲ್ಲಿ ಸುಮಾರು 4,000 ಸಾವುಗಳ ಅಂತರವನ್ನು ತೋರಿಸುತ್ತದೆ. ಇದು ಮಾನವ ಜೀವಗಳನ್ನು ಒಳಗೊಂಡಿರುವುದರಿಂದ, ಪ್ರತಿಯೊಂದು ಅಸಮಾನತೆಯನ್ನು ಗಂಭೀರವಾಗಿ ಮತ್ತು ಕಾಳಜಿಯಿಂದ ಪರಿಗಣಿಸಬೇಕು ಎಂದು ಸಂಖ್ಯೆಗಳನ್ನು ಟ್ರ್ಯಾಕ್ ಮಾಡುವ ವಿಶ್ಲೇಷಕರು ಹೇಳುತ್ತಾರೆ.
►ದತ್ತಾಂಶ ಮೂಲಗಳು ಯಾವುವು?
ಅಪಘಾತದಲ್ಲಿ ಸಾಮಾನ್ಯವಾಗಿ ಮೊದಲ ಪ್ರತಿಕ್ರಿಯೆ ನೀಡುವ ಪೊಲೀಸರನ್ನು ಪ್ರಾಥಮಿಕ ದತ್ತಾಂಶದ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಇದು ಆಸ್ಪತ್ರೆಗಳು ಮತ್ತು ರಾಜ್ಯ ಸಾರಿಗೆ ಇಲಾಖೆಗಳ ದತ್ತಾಂಶವನ್ನೂ ಅವಲಂಬಿಸಬಹುದು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಒಂದು ವಿಭಾಗವಾದ ಸಾರಿಗೆ ಸಂಶೋಧನಾ ವಿಭಾಗ (TRW), ಏಷ್ಯಾ-ಪೆಸಿಫಿಕ್ ರಸ್ತೆ ಅಪಘಾತ ದತ್ತಾಂಶ (APRAD) ಮೂಲ ಯೋಜನೆಯಡಿಯಲ್ಲಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (UNESCAP) ಒದಗಿಸಿದ ಸ್ವರೂಪಗಳಲ್ಲಿ ರಾಜ್ಯ ಪೊಲೀಸ್ ಇಲಾಖೆಗಳಿಂದ ಅಪಘಾತ ದತ್ತಾಂಶವನ್ನು ಸಂಗ್ರಹಿಸುತ್ತದೆ. ಇದು ಅಪಘಾತ ಗುರುತಿಸುವಿಕೆ, ರಸ್ತೆಯ ವಿವರಗಳು, ವಾಹನ ಮತ್ತು ಅದರ ಚಾಲಕ ಸೇರಿದಂತೆ ಪೊಲೀಸರಿಂದ 21 ರೀತಿಯ ದತ್ತಾಂಶವನ್ನು ಸಂಗ್ರಹಿಸುತ್ತದೆ. ಈ ದತ್ತಾಂಶವನ್ನು ‘ಭಾರತದಲ್ಲಿನ ರಸ್ತೆ ಅಪಘಾತ’ ವರದಿ ಸೇರಿದಂತೆ ಅದರ ನಾಲ್ಕು ಪ್ರಮುಖ ಪ್ರಕಟಣೆಗಳಲ್ಲಿ ಬಳಸಲಾಗುತ್ತದೆ.
ರಾಜ್ಯಗಳಿಂದ ದತ್ತಾಂಶ ಹಂಚಿಕೆಯಲ್ಲಿ ವಿಳಂಬವಾಗುವುದರಿಂದ ವರದಿಯು ಆಗಾಗ್ಗೆ ತಡವಾಗಿ ಪ್ರಕಟವಾಗುತ್ತದೆ. 2023ರ ವರದಿಯೇ ಇತ್ತೀಚಿನ ಲಭ್ಯವಿರುವ ವರದಿಯಾಗಿದೆ. ಹೀಗಾಗಿ ಸಚಿವಾಲಯವು ತನ್ನ ನಿರ್ಧಾರಗಳಿಗಾಗಿ eDAR/iRAD ದತ್ತಾಂಶವನ್ನು ಬಳಸುತ್ತದೆ.
ಮತ್ತೊಂದೆಡೆ, ಎನ್ಸಿಆರ್ಬಿ ರಾಜ್ಯ ಅಪರಾಧ ದಾಖಲೆ ಬ್ಯೂರೋಗಳಿಂದ (SCRBs) ದತ್ತಾಂಶವನ್ನು ಸಂಗ್ರಹಿಸುತ್ತದೆ. ಅಪರಾಧ ದಾಖಲೆ ಬ್ಯೂರೋಗಳು ಜಿಲ್ಲಾ ಅಪರಾಧ ದಾಖಲೆ ಬ್ಯೂರೋಗಳಿಂದ (DCRBs) ದತ್ತಾಂಶವನ್ನು ಸಂಗ್ರಹಿಸುತ್ತವೆ. ಅವು ಪೊಲೀಸ್ ಠಾಣೆಗಳಿಂದ ದತ್ತಾಂಶವನ್ನು ಪಡೆಯುತ್ತವೆ. ಎರಡೂ ಇಲಾಖೆಗಳ ದತ್ತಾಂಶದ ಮೂಲ ಒಂದೇ ಆಗಿರುತ್ತದೆ.
ಅಪಘಾತದಲ್ಲಿ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದಲ್ಲಿ ಅಪರಾಧವನ್ನು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 304-A ಅಡಿಯಲ್ಲಿ ಪೊಲೀಸರು ದಾಖಲಿಸುತ್ತಿದ್ದರು. ಈಗ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 106ರ ಅಡಿಯಲ್ಲಿ ದಾಖಲಿಸಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸ್ಥಿತಿ ವರದಿಯ ಪ್ರಕಾರ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ವರದಿ ಮಾಡುವ ದೇಶಗಳಲ್ಲಿ ಸುಮಾರು 50% ಪೊಲೀಸ್ ದತ್ತಾಂಶವನ್ನೇ ಅವಲಂಬಿಸಿವೆ. ಅದೇ ವೇಳೆ 7% ದೇಶಗಳು ಆರೋಗ್ಯ ಇಲಾಖೆಗಳನ್ನು ಹಾಗೂ 11% ದೇಶಗಳು ಸಾರಿಗೆ ಇಲಾಖೆಗಳನ್ನು ಅವಲಂಬಿಸಿವೆ.
►ದತ್ತಾಂಶದಲ್ಲಿನ ವ್ಯತ್ಯಾಸಕ್ಕೆ ಕಾರಣವೇನು?
ರಸ್ತೆ ಅಪಘಾತ ದತ್ತಾಂಶದ ಮೂಲ ಪೊಲೀಸರಾಗಿದ್ದರೂ, ದತ್ತಾಂಶವನ್ನು ಪೂರೈಸುವಲ್ಲಿ ವ್ಯತ್ಯಾಸವಿದೆ. ಪೊಲೀಸರು ಗೃಹ ಸಚಿವಾಲಯದ ಅಡಿಯಲ್ಲಿ ಇರುವುದರಿಂದ ಯಾವುದೇ ಸಂದರ್ಭದಲ್ಲೂ ಅವರು ಎನ್ಸಿಆರ್ಬಿಗೆ ದತ್ತಾಂಶವನ್ನು ನೀಡಬೇಕಾಗುತ್ತದೆ. ಆದರೆ ನಾವು ಬೇರೆ ಪ್ರಾಧಿಕಾರವಾಗಿದ್ದು, ವಿವಿಧ ಮಾರ್ಗಗಳ ಮೂಲಕ ಅವರನ್ನು ತಲುಪಬೇಕಾಗುತ್ತದೆ. ಅಲ್ಲದೆ, ಪೊಲೀಸರು ವರದಿ ಮಾಡುವ ದತ್ತಾಂಶವು ಹೆಚ್ಚಾಗಿ ಸಾರಿಗೆ ಸಂಶೋಧನಾ ವಿಭಾಗ ಕೇಳುವ ಪ್ರಶ್ನೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ಈ ಸಮಸ್ಯೆಗಳನ್ನು ಪರಿಹರಿಸಲು iRAD/eDAR ವ್ಯವಸ್ಥೆಯನ್ನು ರಚಿಸಲಾಗಿದೆ. ಆದರೆ ಕೆಲವು ರಾಜ್ಯಗಳು ಸರಿಯಾಗಿ ವರದಿ ಮಾಡುತ್ತಿಲ್ಲ. ಪ್ರತಿಯೊಂದು ವ್ಯವಸ್ಥೆಯಲ್ಲೂ ಕೆಲವು ವ್ಯತ್ಯಾಸಗಳು ಇರುತ್ತವೆ. ವ್ಯತ್ಯಾಸವು 5%ಕ್ಕಿಂತ ಕಡಿಮೆಯಾಗಿದೆ. eDARನಲ್ಲಿ ಅಪರಾಧ ಮತ್ತು ಅಪರಾಧಿ ಟ್ರ್ಯಾಕಿಂಗ್ ಜಾಲ ಹಾಗೂ ವ್ಯವಸ್ಥೆಗಳ ಜೊತೆಗೆ ಆಸ್ಪತ್ರೆಗಳೂ ಸಂಪರ್ಕ ಹೊಂದಿವೆ, ಆದರೆ ಎಲ್ಲವೂ ಅಲ್ಲ. ಶೀಘ್ರದಲ್ಲೇ ನಾವು ಆಸ್ಪತ್ರೆ ಮತ್ತು ಪೊಲೀಸ್ ದತ್ತಾಂಶ ಎರಡನ್ನೂ ಹೊಂದಿಸಲು ಸಾಧ್ಯವಾಗುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
eDAR ವ್ಯವಸ್ಥೆಯಲ್ಲಿ ಪೊಲೀಸ್ ಸಿಬ್ಬಂದಿ ಅಪಘಾತದ ಬಗ್ಗೆ ವಿವರಗಳನ್ನು ನಮೂದಿಸಿ, ಆ್ಯಪ್ನಲ್ಲಿ ಫೋಟೋಗಳು ಮತ್ತು ವಿಡಿಯೊಗಳೊಂದಿಗೆ ಜಿಯೋಟ್ಯಾಗ್ ಮಾಡುತ್ತಾರೆ. ಸಾವುಗಳು 30 ದಿನಗಳ ನಂತರ ಸಂಭವಿಸಿ ವರದಿಯಾಗದಿದ್ದರೆ ಪೊಲೀಸರು ಸಾವುನೋವುಗಳನ್ನು ಕಡಿಮೆ ವರದಿ ಮಾಡುವ ಸಾಧ್ಯತೆಯಿದೆ. ಇದಲ್ಲದೆ, ಪೊಲೀಸ್ ಅಧಿಕಾರಿಗಳ ಪಕ್ಷಪಾತ ಮತ್ತು ತೀರ್ಪುಗಳು ಅವರು ನಮೂದಿಸುವ ದತ್ತಾಂಶವನ್ನು ಮರೆಮಾಡುವ ಅಪಾಯವೂ ಇದೆ.
ಅಂತರರಾಷ್ಟ್ರೀಯ ರಸ್ತೆ ಒಕ್ಕೂಟದ ವಿಶ್ವ ರಸ್ತೆ ಅಂಕಿಅಂಶಗಳ ಪ್ರಕಾರ, ರಸ್ತೆ ಅಪಘಾತಗಳಿಂದ ಸಾವಿಗೀಡಾಗುವ ಒಟ್ಟು ಜನರಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಚೀನಾ ಮತ್ತು ಅಮೆರಿಕ ಇವೆ. ಪ್ರತಿ ಲಕ್ಷ ಜನಸಂಖ್ಯೆಗೆ ಇರಾನ್ ಅತಿ ಹೆಚ್ಚು ಸಾವಿನ ಪ್ರಮಾಣವನ್ನು ಹೊಂದಿದೆ. ಪಾಕಿಸ್ತಾನ, ನೈಜೀರಿಯಾ, ಇಥಿಯೋಪಿಯಾ ಮತ್ತು ಚೀನಾದಂತಹ ಹಲವಾರು ದೇಶಗಳಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಭಾರತಕ್ಕಿಂತ ಕಡಿಮೆ ಸಾವಿನ ಪ್ರಮಾಣವಿದೆ.






