ಮೊಬೈಲ್ ಟವರ್ಗಳ ವಾರ್ಷಿಕ ತೆರಿಗೆ ವಸೂಲಿ ಮಾಡದ 4,258 ಗ್ರಾಮ ಪಂಚಾಯತ್ಗಳು

PC: freepik
ಬೆಂಗಳೂರು, ಮೇ 22: ರಾಜ್ಯದ 29 ಜಿಲ್ಲೆಗಳ 4,258 ಗ್ರಾಮ ಪಂಚಾಯತ್ಗಳು ತಮ್ಮ ವ್ಯಾಪ್ತಿಯಲ್ಲಿನ ಮೊಬೈಲ್ ಟವರ್ಗಳ ವಾರ್ಷಿಕ ತೆರಿಗೆಯನ್ನೇ ವಸೂಲಿ ಮಾಡಿಲ್ಲ. ಇದರಿಂದ ಪಂಚಾಯತ್ಗಳಿಗೆ 12.61 ಕೋಟಿ ರೂ.ಗೂ ಅಧಿಕ ಮೊತ್ತದ ರಾಜಸ್ವ ನಷ್ಟವಾಗಿರುವುದನ್ನು ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಬಹಿರಂಗಪಡಿಸಿದೆ.
ಹಿಂದಿನ ಬಿಜೆಪಿ ಸರಕಾರದ ಅವಧಿಯ (2022-23) ಗ್ರಾಮ ಪಂಚಾಯತ್ಗಳಿಗೆ ಸಂಬಂಧಿಸಿದಂತೆ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಬಿಡುಗಡೆ ಮಾಡಿರುವ ಲೆಕ್ಕ ಪರಿಶೋಧನೆ ವರದಿಯಲ್ಲಿ, ಮೊಬೈಲ್ ಟವರ್ಗಳ ವಾರ್ಷಿಕ ತೆರಿಗೆ ವಸೂಲಿ ಮಾಡದೇ ಇರುವ ಪ್ರಕರಣಗಳ ವಿವರಗಳಿವೆ.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ರಾಜ್ಯದ 2,916 ಗ್ರಾಪಂಗಳು ವಾರ್ಷಿಕ ಆಯವ್ಯಯವನ್ನು ತಯಾರಿಸಿರಲಿಲ್ಲ ಮತ್ತು 1,363 ಗ್ರಾಪಂಗಳು ನಗದು ಪುಸ್ತಕವನ್ನೇ ನಿರ್ವಹಿಸಿರಲಿಲ್ಲ ಮತ್ತು ವಸೂಲಾತಿಯಲ್ಲಿ ಪಂಚಾಯತ್ಗಳ ನಿರ್ಲಕ್ಷ್ಯ, ಪಂಚಾಯತ್ಗಳ ಬೇಡಿಕೆ, ವಸೂಲಾತಿ ಮತ್ತು ಬಾಕಿ ಉಳಿಸಿಕೊಂಡಿರುವ ಮೊತ್ತ, ಶಾಸನಬದ್ಧ ತೆರಿಗೆಯಲ್ಲಿಯೇ ಕಡಿಮೆ ತೆರಿಗೆ ಕಟಾಯಿಸಿರುವ ಪ್ರಕರಣಗಳನ್ನು ಬಹಿರಂಗಗೊಳಿಸಿರುವ ಬೆನ್ನಲ್ಲೇ ಮೊಬೈಲ್ ಟವರ್ ವಾರ್ಷಿಕ ತೆರಿಗೆ ವಸೂಲು ಮಾಡದೇ ಇರುವ ಪ್ರಕರಣಗಳನ್ನು ಹೊರಗೆಳೆದಿದೆ.
ಇಲಾಖೆಯು ಸಲ್ಲಿಸಿರುವ ಲೆಕ್ಕಪರಿಶೋಧನೆ ವರದಿಯು "ಣhe-ಜಿiಟe.iಟಿ"ಗೆ ಲಭ್ಯವಾಗಿದೆ. 2019ರ ಮೇ 29ರಲ್ಲಿ ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಹೊಸ ಮೊಬೈಲ್ ಟವರ್ ಅಳವಡಿಸಲು ಪರವಾನಿಗೆ ನೀಡುವ ಸಮಯದಲ್ಲಿ ಗ್ರಾಪಂಗಳು ಪ್ರತೀ ಮೊಬೈಲ್ ಟವರ್ ಅಳವಡಿಕೆಗೆ 15,000 ರೂ. ದರ ನಿಗದಿಪಡಿಸಿದೆ. ಈ ಮೊತ್ತವನ್ನು ಮೊಬೈಲ್ ಕಂಪೆನಿಗಳಿಂದಲೇ ವಸೂಲಿ ಮಾಡಬೇಕು ಎಂದು ಸೂಚಿಸಿದೆ. ಅಲ್ಲದೇ 2016ರ ಎಪ್ರಿಲ್ 16ರಲ್ಲಿ ಕರ್ನಾಟಕ ಪಂಚಾಯತ್ರಾಜ್ ಅಧಿನಿಯಮ (2ನೇ ತಿದ್ದುಪಡಿ) 2015ರ ಅನುಸೂಚಿಯಂತೆ ಗ್ರಾಪಂಗಳು ಎಲ್ಲ ರೀತಿಯ ಮೊಬೈಲ್ ಟವರ್ಗಳ ಮೇಲೆ ವಾರ್ಷಿಕ 12,000 ರೂ. ತೆರಿಗೆ ವಿಧಿಸಲು ಆದೇಶ ಹೊರಡಿಸಿತ್ತು. ಆದರೆ 4,258 ಗ್ರಾಪಂಗಳು ಮೊಬೈಲ್ ಟವರ್ಗಳ ವಾರ್ಷಿಕ ತೆರಿಗೆಯನ್ನೇ ವಸೂಲು ಮಾಡಿಲ್ಲ. ವಾರ್ಷಿಕ ತೆರಿಗೆ ವಸೂಲು ಮಾಡದ ಕಾರಣ 12.39 ಕೋಟಿ ರೂ.ಯಷ್ಟು ರಾಜಸ್ವ ನಷ್ಟ ಉಂಟಾಗಿದೆ.
ರಾಜಸ್ವ ನಷ್ಟ: ಜಿಲ್ಲಾವಾರು ಪಟ್ಟಿ
ಬಾಗಲಕೋಟೆಯ 159 ಪಂಚಾಯತ್ಗಳಲ್ಲಿ 45,36,000 ರೂ., ಬೆಂಗಳೂರು ಜಿಲ್ಲೆಯ 160 ಪಂಚಾಯತ್ಗಳಲ್ಲಿ 85,30,000 ರೂ., ಬೆಳಗಾವಿಯ 383 ಪಂಚಾಯತ್ಗಳಲ್ಲಿ 98,16,430 ರೂ., ಬಳ್ಳಾರಿಯ 86 ಪಂಚಾಯತ್ಗಳಲ್ಲಿ 24,48,000 ರೂ., ಬೀದರ್ನ 179 ಪಂಚಾಯತ್ಗಳಲ್ಲಿ 59,64,000 ರೂ., ಚಾಮರಾಜನಗರದ 118 ಪಂಚಾಯತ್ಗಳಲ್ಲಿ 42,35,000 ರೂ., ಚಿಕ್ಕಬಳ್ಳಾಪುರದ 125 ಪಂಚಾಯತ್ಗಳಲ್ಲಿ 37,83,900 ರೂ., ಚಿಕ್ಕಮಗಳೂರಿನ 161 ಪಂಚಾಯತ್ಗಳಲ್ಲಿ 33,60,000 ರೂ., ಚಿತ್ರದುರ್ಗದ 137 ಪಂಚಾಯತ್ಗಳಲ್ಲಿ 32,94,978 ರೂ., ದಕ್ಷಿಣ ಕನ್ನಡದ 98 ಪಂಚಾಯತ್ಗಳಲ್ಲಿ 28,94,000 ರೂ., ದಾವಣಗೆರೆಯ 152 ಪಂಚಾಯತ್ಗಳಲ್ಲಿ 38,85,468 ರೂ., ಧಾರವಾಡದ 112 ಪಂಚಾಯತ್ಗಳಲ್ಲಿ 35,05,460 ರೂ., ಗದಗ್ನ 92 ಪಂಚಾಯತ್ಗಳಲ್ಲಿ 22,14,000 ರೂ., ಹಾಸನ ಜಿಲ್ಲೆಯ 148 ಪಂಚಾಯತ್ಗಳಲ್ಲಿ 41,11,470 ರೂ., ವಾರ್ಷಿಕ ತೆರಿಗೆಯನ್ನು ವಸೂಲು ಮಾಡಿಲ್ಲ.
ಹಾವೇರಿಯ 164 ಪಂಚಾಯತ್ಗಳಲ್ಲಿ 35,49,270 ರೂ., ಕಲಬುರಗಿಯ 243 ಪಂಚಾಯತ್ಗಳಲ್ಲಿ 77,62,180 ರೂ., ಕೊಡಗಿನ 72 ಪಂಚಾಯತ್ಗಳಲ್ಲಿ 16,48,236 ರೂ., ಕೋಲಾರದ 132 ಪಂಚಾಯತ್ಗಳಲ್ಲಿ 50,61, 617 ರೂ., ಕೊಪ್ಪಳದ 73 ಪಂಚಾಯತ್ಗಳಲ್ಲಿ 22,69, 416 ರೂ., ಮಂಡ್ಯದ 150 ಪಂಚಾಯತ್ಗಳಲ್ಲಿ 41,55,175 ರೂ., ಮೈಸೂರಿನ 237 ಪಂಚಾಯತ್ಗಳಲ್ಲಿ 63,66,857 ರೂ., ರಾಯಚೂರಿನ 174 ಪಂಚಾಯತ್ಗಳಲ್ಲಿ 66,36,000 ರೂ., ಶಿವಮೊಗ್ಗದ 201 ಪಂಚಾಯತ್ಗಳಲ್ಲಿ 40,71,046 ರೂ., ತುಮಕೂರಿನ 146 ಪಂಚಾಯತ್ಗಳಲ್ಲಿ 43,94,902 ರೂ., ಉತ್ತರ ಕನ್ನಡದ 99 ಪಂಚಾಯತ್ಗಳಲ್ಲಿ 26,22,000 ರೂ. ತೆರಿಗೆಯನ್ನು ವಸೂಲಿ ಮಾಡಿಲ್ಲ.
ವಿಜಯನಗರದ 123 ಪಂಚಾಯತ್ಗಳಲ್ಲಿ 42,24,000 ರೂ., ವಿಜಯಪುರದ 205 ಪಂಚಾಯತ್ಗಳಲ್ಲಿ 73,32,000 ರೂ., ಯಾದಗಿರಿಯ 119 ಪಂಚಾಯತ್ಗಳಲ್ಲಿ 34,68,00 ರೂ. ವಾರ್ಷಿಕ ತೆರಿಗೆಯನ್ನು ವಸೂಲು ಮಾಡಿಲ್ಲ ಎಂದು ಲೆಕ್ಕ ಪರಿಶೋಧಕರು ಪಟ್ಟಿಯನ್ನು ಒದಗಿಸಿರುವುದು ತಿಳಿದು ಬಂದಿದೆ.







