5 ನಿಮಿಷದ ಕಿರುಚಿತ್ರಕ್ಕೆ 4.50 ಕೋಟಿ ರೂ.:ಪ್ರಕರಣ ಮುಕ್ತಾಯ
ಬೆಂಗಳೂರು, ಜು.16: ಐದು ನಿಮಿಷದ ಕಿರು ಚಿತ್ರ ನಿರ್ಮಾಣಕ್ಕಾಗಿ ಸರಕಾರದ ಬೊಕ್ಕಸದಿಂದ ಮಾಜಿ ಸಚಿವ ಮುರುಗೇಶ್ ಆರ್ ನಿರಾಣಿ ಮತ್ತು ಅಧಿಕಾರಿಗಳು 4.50 ಕೋಟಿ ರೂ. ಖರ್ಚು ಮಾಡಿದ್ದರು ಎಂಬ ಆರೋಪಿತ ಪ್ರಕರಣವನ್ನು ಇದೀಗ ಕಾಂಗ್ರೆಸ್ ಸರಕಾರವೇ ಮುಕ್ತಾಯಗೊಳಿಸಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಗುರುತರವಾದ ಆರೋಪಕ್ಕೆ ಒಳಗಾಗಿದ್ದ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಬೇಕು ಎಂದು ಲೋಕಾಯುಕ್ತ ಸಂಸ್ಥೆಯು ಪ್ರಸ್ತಾವ ಸಲ್ಲಿಸಿತ್ತು. ಅಧಿಕಾರಿಗಳ ವಿರುದ್ಧ ವಿಚಾರಣೆ ಮುಂದುವರಿಸಲು ಯಾವುದೇ ಆಧಾರವಿಲ್ಲ ಎಂದು ಅಭಿಪ್ರಾಯಿಸಿರುವ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಈ ಪ್ರಕರಣವನ್ನು ಮುಕ್ತಾಯಗೊಳಿಸಿದೆ.
ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕೆ ಲಾಖೆಯು 2025ರ ಮೇ 28ರಂದೇ ಲೋಕಾಯುಕ್ತ ಪೊಲೀಸ್ ಮಹಾ ನಿರೀಕ್ಷಕರಿಗೆ ಪತ್ರವನ್ನೂ ಬರೆದಿದೆ. ಈ ಪತ್ರದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ 2018) ಕಲಂಕ 17 ಎ ಅಡಿಯಲ್ಲಿ ಇದುವರೆಗೂ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಲೋಕಾಯುಕ್ತ ಪೊಲೀಸರು ಪೂರ್ವಾನುಮತಿಯನ್ನು ಕೋರಿ 9 ಬಾರಿ ಸಕ್ಷಮ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಆದರೆ ಇದುವರೆಗೂ ಪೂರ್ವಾನುಮತಿ ನೀಡುವ ಸಂಬಂಧ ಯಾವುದೇ ಕ್ರಮ ವಹಿಸಿರಲಿಲ್ಲ.
ಇದೇ ಪ್ರಕರಣದಲ್ಲಿ ಮುರುಗೇಶ್ ನಿರಾಣಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡದೇ ಇರುವ ಸಂಗತಿಯನ್ನೇ ಮುಂದಿಟ್ಟುಕೊಂಡು ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಸರಕಾರವೇ ಬೀದಿಗಿಳಿದಿತ್ತು. ಅಲ್ಲದೇ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಸಚಿವರ ನಿಯೋಗವೇ ರಾಜ್ಯಪಾಲರನ್ನು ಭೇಟಿ ಮಾಡಿತ್ತು.ಆದರೀಗ ಇದೇ ಕಾಂಗ್ರೆಸ್ ಸರಕಾರವು ಮುರುಗೇಶ್ ನಿರಾಣಿ ವಿರುದ್ಧದ ಪ್ರಕರಣದಲ್ಲಿನ ಆರೋಪಿತ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಲೋಕಾಯುಕ್ತ ಪೊಲೀಸರಿಗೆ ಅನುಮತಿ ನೀಡದೆಯೇ ಪ್ರಕರಣವನ್ನು ತಮ್ಮ ಹಂತದಲ್ಲಿಯೇ ಮುಕ್ತಾಯಗೊಳಿಸಿದೆ. ಸರಕಾರದ ಈ ನಡೆಯು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.
ಲೋಕಾಯುಕ್ತಕ್ಕೆ ಬರೆದ ಪತ್ರದಲ್ಲೇನಿದೆ?
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕ ಬಿ.ಕೆ.ಶಿವಕುಮಾರ್, ಜಂಟಿ ನಿರ್ದೇಶಕ ಸಿದ್ದಲಿಂಗಪ್ಪ ಪೂಜಾರಿ ಇವರ ವಿರುದ್ಧ ಪ್ರಾಥಮಿಕ ವಿಚಾರಣೆ ಕೈಗೊಳ್ಳಲು ಪೂರ್ವಾನುಮತಿ ನೀಡುವಂತೆ ಕೋರಲಾಗಿದೆ. ಪ್ರಕರಣವನ್ನು ಪರಿಶೀಲಿಸಲಾಗಿ ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈವೈಟ್ ಲಿಮಿಟೆಡ್ ಕಂಪೆನಿಯು ಇನ್ವೆಸ್ಟ್ ಕರ್ನಾಟಕ 2022ರ ಕಾರ್ಯಕ್ರಮಕ್ಕಾಗಿ 3ಡಿ ಚಲನಚಿತ್ರವನ್ನು ತಯಾರಿಸಲು ತೆಗೆದುಕೊಂಡಿದ್ದ 1,08,35,151 ರೂ.ಮೊತ್ತವನ್ನು ಮರು ಪಾವತಿಸಿರುವುದಾಗಿ ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಷನ್ಸ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ ಸಂಸ್ಥೆಯು 2025ರ ಮಾರ್ಚ್ 21ರಂದು ತಿಳಿಸಿದೆ.
ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈವೈಟ್ ಲಿಮಿಟೆಡ್ ಕಂಪೆನಿಯು ಇನ್ವೆಸ್ಟ್ ಕರ್ನಾಟಕ 2025ರ ಕಾರ್ಯಕ್ರಮದ ಸಮಯದಲ್ಲಿ 3ಡಿ ಚಲನಚಿತ್ರವನ್ನು ಉಚಿತವಾಗಿ ಪ್ರದರ್ಶಿಸಲು ಅನುಮತಿ ನೀಡಿದೆ ಎಂದು 2025ರ ಫೆ.10ರಂದು ಇ-ಮೇಲ್‌ನಲ್ಲಿ ತಿಳಿಸಿದೆ. ಅಲ್ಲದೇ ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈವೈಟ್ ಲಿಮಿಟೆಡ್ ಕಂಪೆನಿಯು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ವಿರುದ್ಧ ಹೈಕೋರ್ಟ್‌ನಲ್ಲಿ ದಾಖಲಿಸಿದ್ದ ಪ್ರಕರಣವು 2024ರ ಜೂನ್ 14ರಂದು ಹೊರಡಿಸಿದ ಆದೇಶದಲ್ಲಿ ಇತ್ಯರ್ಥಗೊಂಡಿದೆ.ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈವೈಟ್ ಲಿಮಿಟೆಡ್ ಕಂಪೆನಿಯು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ವಿರುದ್ಧ
ಹೈಕೋರ್ಟ್‌ನಲ್ಲಿ ಹೂಡಿದ್ದ ಪ್ರಕರಣದಲ್ಲಿ ಸೋತಿದೆ. ಚಿತ್ರ ನಿರ್ಮಾಣಕ್ಕಾಗಿ ಪಡೆದ ಮುಂಗಡ ಹಣವನ್ನೂ ಮರು ಪಾವತಿಸಿರುವ ಹಿನ್ನೆಲೆಯಲ್ಲಿ ಮೇಲ್ಕಂಡ ಅಧಿಕಾರಿಗಳ ವಿರುದ್ಧ ವಿಚಾರಣೆ ಮುಂದುವರಿಸಲು ಯಾವುದೇ ಆಧಾರವಿಲ್ಲವೆಂದು ಅಭಿಪ್ರಾಯಿಸಿದೆ. ಹೀಗಾಗಿ ಈ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಯು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ. ಈ ಪತ್ರಕ್ಕೆ ಸಚಿವ ಎಂ.ಬಿ.ಪಾಟೀಲ್ ಅವರು ಅನುಮೋದಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಬಂಡವಾಳ ಆಕರ್ಷಿಸುವ ನೆಪದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಉನ್ನತ ಅಧಿಕಾರಿಗಳು ಹಲವಾರು ಬಾರಿ ವಿದೇಶ ಪ್ರವಾಸ ನಡೆಸಿರುವ ಬೆನ್ನಲ್ಲೇ ಸಮಾವೇಶಕ್ಕೆ ಸಂಬಂಧಿಸಿದಂತೆ ಕೇವಲ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಐದೇ ಐದು ನಿಮಿಷದ ಕಿರು ಚಿತ್ರ ನಿರ್ಮಾಣಕ್ಕಾಗಿ 4.50 ಕೋಟಿ ರೂ. ಖರ್ಚು ಮಾಡಿತ್ತು.







