ಹಿಮದ ಲೋಕದಲ್ಲಿ ಹಿಮಸಾರಂಗಗಳನ್ನು ನೋಡಬೇಕೆ? ಇಲ್ಲಿವೆ ಐದು ಆಕರ್ಷಕ ತಾಣಗಳು

Photo Credit : Magnific
ಆರ್ಕ್ಟಿಕ್ ಮತ್ತು ಸಬ್-ಆರ್ಕ್ಟಿಕ್ ಪ್ರದೇಶಗಳಲ್ಲಿ ಕಂಡುಬರುವ ಹಿಮಸಾರಂಗಗಳ ಬಗ್ಗೆ ನಿಮಗೆಷ್ಟು ಗೊತ್ತು? ಆರ್ಕ್ಟಿಕ್ ಮಹಾಸಾಗರದ ಸುತ್ತಲಿನ ಗ್ರೀನ್ ಲ್ಯಾಂಡ್, ಕೆನಡಾ, ಅಮೆರಿಕದ ಅಲಾಸ್ಕಾ, ರಷ್ಯಾ, ನಾರ್ವೆ, ಸ್ವೀಡನ್ ಮತ್ತು ಫಿನ್ ಲ್ಯಾಂಡ್ಗಳಲ್ಲಿ ಈ ಪ್ರಾಣಿಗಳು ಕಂಡುಬರುತ್ತವೆ. ಹಿಮದಿಂದ ಆವೃತವಾದ ಪ್ರದೇಶಗಳಲ್ಲಿ ಬದುಕಲು ಹೊಂದಿಕೊಂಡಿರುವ ಹಿಮಸಾರಂಗಗಳು ತಮ್ಮ ವಿಶಿಷ್ಟ ದೈಹಿಕ ಲಕ್ಷಣಗಳು ಮತ್ತು ಕಾಲೋಚಿತ ವಲಸೆಗಳಿಗೆ ಹೆಸರುವಾಸಿಯಾಗಿವೆ.
ಭೂಮಿಯ ಅತ್ಯಂತ ಶೀತಲ ಪ್ರದೇಶಗಳಾದ ಆರ್ಕ್ಟಿಕ್ ಮತ್ತು ಸಬ್-ಆರ್ಕ್ಟಿಕ್ ಪ್ರದೇಶಗಳಲ್ಲಿ ಕಂಡುಬರುವ ಹಿಮಸಾರಂಗಗಳು ಜಿಂಕೆ ಕುಟುಂಬಕ್ಕೆ ಸೇರಿದ ಸಸ್ತನಿಗಳು. ಇವುಗಳ ವೈಜ್ಞಾನಿಕ ಹೆಸರು Rangifer tarandus. ಅಗಲವಾದ ಗೊರಸುಗಳು, ದಪ್ಪವಾದ ತುಪ್ಪಳ ಮತ್ತು ಶೀತ ವಾತಾವರಣವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಇವುಗಳ ಪ್ರಮುಖ ಲಕ್ಷಣಗಳು. ಗಂಡು ಮತ್ತು ಹೆಣ್ಣು ಹಿಮಸಾರಂಗಗಳೆರಡೂ ಕೊಂಬುಗಳನ್ನು ಬೆಳೆಸಿಕೊಳ್ಳುವುದು ಈ ಪ್ರಾಣಿಗಳ ವಿಶೇಷತೆ.
ಆರ್ಕ್ಟಿಕ್ ಪ್ರದೇಶದಲ್ಲಿ ಆರ್ಕ್ಟಿಕ್ ಮಹಾಸಾಗರ, ಗ್ರೀನ್ ಲ್ಯಾಂಡ್, ಕೆನಡಾ, ಅಲಾಸ್ಕಾ (ಅಮೆರಿಕ), ರಷ್ಯಾ, ನಾರ್ವೆ, ಸ್ವೀಡನ್, ಫಿನ್ ಲ್ಯಾಂಡ್ ಮತ್ತು ಐಸ್ಲ್ಯಾಂಡ್ ನ ಉತ್ತರ ಭಾಗಗಳು ಸೇರಿವೆ. ಸಬ್-ಆರ್ಕ್ಟಿಕ್ ಪ್ರದೇಶದಲ್ಲಿ ಕೆನಡಾದ ಬಹುಪಾಲು ಭಾಗ, ಅಲಾಸ್ಕಾ, ಸೈಬೀರಿಯಾ ಮತ್ತು ಸ್ಕ್ಯಾಂಡಿನೇವಿಯನ್ ದೇಶಗಳ ಒಳನಾಡುಗಳು ಸೇರಿವೆ.
ಉತ್ತರ ಯುರೋಪ್, ಏಷ್ಯಾ ಮತ್ತು ಉತ್ತರ ಅಮೆರಿಕಾದಲ್ಲಿ ಹಿಮಸಾರಂಗಗಳು ಕಂಡುಬರುತ್ತವೆ. ಉತ್ತರ ಅಮೆರಿಕಾದಲ್ಲಿ ಇವುಗಳನ್ನು ಕ್ಯಾರಿಬೌ ಎಂದು ಕರೆಯಲಾಗುತ್ತದೆ. ಕೆಲವು ಹಿಮಸಾರಂಗಗಳು ಕಾಡು ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ, ಇನ್ನು ಕೆಲವು ಸ್ಥಳೀಯ ಸಮುದಾಯಗಳ ಸಾಂಪ್ರದಾಯಿಕ ಪಶುಪಾಲನಾ ಪದ್ಧತಿಯ ಭಾಗವಾಗಿವೆ. ಈ ಪ್ರಾಣಿಗಳನ್ನು ವೀಕ್ಷಿಸಲು ಪ್ರಸಿದ್ಧವಾಗಿರುವ ಐದು ತಾಣಗಳು ಇಲ್ಲಿವೆ.
► ಟ್ರೊಮ್ಸೋ, ನಾರ್ವೆ
ನಾರ್ವೆಯ ಉತ್ತರ ಭಾಗದಲ್ಲಿರುವ ಟ್ರೊಮ್ಸೋ ನಗರವು ಹಿಮಸಾರಂಗ ಮತ್ತು ಮೂಲನಿವಾಸಿಗಳಾದ ಸಾಮಿ ಸಮುದಾಯದ ಸಂಸ್ಕೃತಿಯ ಅನುಭವಕ್ಕೆ ಪ್ರಸಿದ್ಧವಾಗಿದೆ. ಆರ್ಕ್ಟಿಕ್ ವೃತ್ತದೊಳಗೆ ಬರುವ ಈ ಪ್ರದೇಶದಲ್ಲಿ ಹಿಮಸಾರಂಗಗಳು ಜನಜೀವನದ ಅವಿಭಾಜ್ಯ ಅಂಗವಾಗಿವೆ.
ಹಿಂದಿನ ಕಾಲದಲ್ಲಿ ಸಾಮಿ ಜನರು ಹಿಮದ ಮೇಲೆ ಪ್ರಯಾಣಿಸಲು ಹಿಮಸಾರಂಗಗಳು ಎಳೆಯುವ ಮರದ ಬಂಡಿಗಳನ್ನು ಬಳಸುತ್ತಿದ್ದರು. ಇಂದಿಗೂ ಪ್ರವಾಸಿಗರು ಹಿಮದಿಂದ ಆವೃತವಾದ ಕಣಿವೆಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಇಂತಹ ಸಾಂಪ್ರದಾಯಿಕ ಸವಾರಿಯನ್ನು ಆನಂದಿಸಬಹುದು. ಟ್ರೊಮ್ಸೋ ಸುತ್ತಮುತ್ತಲಿನ ಶಿಬಿರಗಳಲ್ಲಿ ಹಿಮಸಾರಂಗಗಳ ಹಿಂಡುಗಳನ್ನು ನೋಡಬಹುದು. ಪ್ರವಾಸಿಗರು ಅವುಗಳಿಗೆ ಆಹಾರ ನೀಡುವ ಅನುಭವವನ್ನೂ ಪಡೆಯಬಹುದು.
ನಾರ್ವೆಯಲ್ಲಿ ಹಿಮಸಾರಂಗ ಸಾಕಣೆ ಸಾಮಿ ಸಮುದಾಯದ ಸಾಂಪ್ರದಾಯಿಕ ಜೀವನೋಪಾಯವಾಗಿದೆ. ಈ ಸಾಕಣೆ ಪದ್ಧತಿಯು ನಿರ್ದಿಷ್ಟ ಕಾನೂನುಬದ್ಧ ಪ್ರದೇಶಗಳು ಮತ್ತು ಹಕ್ಕುಗಳಿಗೆ ಒಳಪಟ್ಟಿದೆ. ಹೀಗಾಗಿ ಪ್ರದೇಶದ ಸುತ್ತಮುತ್ತಲಿನ ತೆರೆದ ಪ್ರದೇಶಗಳಲ್ಲಿ ಹಿಮಸಾರಂಗ ಮೇಯುವುದನ್ನೂ ಕಾಣಬಹುದು.
►ಫಿನ್ ಲ್ಯಾಂಡ್ ನ ಫಿನ್ನಿಷ್ ಲ್ಯಾಪ್ ಲ್ಯಾಂಡ್
ಹಿಮಸಾರಂಗಗಳು ಮತ್ತು ಸಾಂಟಾ ಕ್ಲಾಸ್ ಸಂಸ್ಕೃತಿಗೆ ಫಿನ್ ಲ್ಯಾಂಡ್ ನ ಉತ್ತರ ಭಾಗದಲ್ಲಿರುವ ಫಿನ್ನಿಷ್ ಲ್ಯಾಪ್ ಲ್ಯಾಂಡ್ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ಇಲ್ಲಿ ಸಾಕಣೆ ಹಿಮಸಾರಂಗಗಳು ಕಾಡು ಪ್ರದೇಶಗಳಲ್ಲಿ ಸ್ವತಂತ್ರವಾಗಿ ಸಂಚರಿಸುತ್ತವೆ. ಅವು ನಿರ್ದಿಷ್ಟ ಮಾಲೀಕರಿಗೆ ಸೇರಿದ್ದು, ಮಾಲೀಕರು ತಮ್ಮ ಪ್ರಾಣಿಗಳನ್ನು ಗುರುತಿಸಲು ಕಿವಿಗಳ ಮೇಲೆ ವಿಶಿಷ್ಟ ಗುರುತುಗಳನ್ನು ಮಾಡುತ್ತಾರೆ.
ಫಿನ್ ಲ್ಯಾಂಡ್ ನಲ್ಲಿ ಸಾಮಿ ಜನರ ಜೊತೆಗೆ ಹಿಮಸಾರಂಗ ಸಾಕಣೆ ಪ್ರದೇಶಗಳಲ್ಲಿ ವಾಸಿಸುವ ಅರ್ಹ ನಾಗರಿಕರಿಗೂ ಕಾನೂನಿನ ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ಹಿಮಸಾರಂಗ ಸಾಕುವ ಹಕ್ಕಿದೆ. ಹೀಗಾಗಿ ಈ ಪದ್ಧತಿಯು ಸಾಮಿ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ.
ಇದೇ ವೇಳೆ, ಫಿನ್ ಲ್ಯಾಂಡ್ ನಲ್ಲಿ ಕಾಡು ಹಿಮಸಾರಂಗಗಳೂ ಇವೆ ಎಂಬುದು ಗಮನಾರ್ಹ. ಇವುಗಳನ್ನು Finnish Forest Reindeer ಎಂದು ಕರೆಯಲಾಗುತ್ತದೆ. ಇವು ಸಾಕಣೆ ಹಿಮಸಾರಂಗಗಳಿಗಿಂತ ಭಿನ್ನವಾದ ಉಪಪ್ರಭೇದವಾಗಿದ್ದು, ದೇಶದ ಕಾಡು ಪ್ರದೇಶಗಳಲ್ಲಿ ವಾಸಿಸುತ್ತವೆ.
ರೊವಾನಿಮಿ ಮತ್ತು ಇನಾರಿಯಂತಹ ತಾಣಗಳ ಸುತ್ತಮುತ್ತ ಪ್ರವಾಸಿಗರು ಹಿಮಸಾರಂಗ ಸಾಕಣೆ ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳಬಹುದು. ನೈಸರ್ಗಿಕ ಪರಿಸರದಲ್ಲಿ ಅವುಗಳನ್ನು ವೀಕ್ಷಿಸಬಹುದು.
► ಸ್ವೀಡನ್ ನ ಸ್ವೀಡಿಷ್ ಲ್ಯಾಪ್ ಲ್ಯಾಂಡ್
ಸ್ವೀಡನ್ ನ ಅತ್ಯಂತ ಉತ್ತರ ಭಾಗದಲ್ಲಿರುವ ಸ್ವೀಡಿಷ್ ಲ್ಯಾಪ್ ಲ್ಯಾಂಡ್ ಪ್ರದೇಶವು ಸಾಮಿ ಮೂಲನಿವಾಸಿಗಳ ಸಾಂಪ್ರದಾಯಿಕ ಹಿಮಸಾರಂಗ ಸಾಕಣೆ ಮತ್ತು ಆರ್ಕ್ಟಿಕ್ ಜೀವನಶೈಲಿಗೆ ಹೆಸರುವಾಸಿಯಾಗಿದೆ.
ಸ್ವೀಡನ್ ನಲ್ಲಿ ಹಿಮಸಾರಂಗ ಸಾಕಣೆಯ ಹಕ್ಕು ಕಾನೂನು ಮಾನ್ಯತೆ ಪಡೆದ ಸಾಮಿ ಹಿಮಸಾರಂಗ ಸಾಕಣೆ ಸಮುದಾಯಗಳಿಗೆ ಸಂಬಂಧಿಸಿದೆ. ಈ ಪ್ರದೇಶದಲ್ಲಿ ಸುಮಾರು ಎರಡೂವರೆ ಲಕ್ಷ ಹಿಮಸಾರಂಗಗಳಿವೆ ಎಂದು ಅಂದಾಜಿಸಲಾಗಿದೆ.
ಇವು ಬೇಸಿಗೆಯಲ್ಲಿ ಪಶ್ಚಿಮದ ಪರ್ವತ ಪ್ರದೇಶಗಳಲ್ಲಿ ಮತ್ತು ಚಳಿಗಾಲದಲ್ಲಿ ಪೂರ್ವದ ದಟ್ಟ ಕಾಡುಗಳಲ್ಲಿ ಮೇಯುತ್ತಾ ವಲಸೆ ಹೋಗುತ್ತವೆ. ಕಿರುನಾ ಮತ್ತು ಜೋಕ್ಮೊಕ್ ಸುತ್ತಮುತ್ತಲಿನ ಪ್ರದೇಶಗಳು ಸಾಮಿ ಸಂಸ್ಕೃತಿ ಮತ್ತು ಹಿಮಸಾರಂಗ ಸಾಕಣೆ ಪದ್ಧತಿಯೊಂದಿಗೆ ನಿಕಟ ಸಂಬಂಧ ಹೊಂದಿವೆ. ಮಾರ್ಗದರ್ಶಕರೊಂದಿಗೆ ಪ್ರವಾಸ ಕೈಗೊಂಡರೆ ಸ್ಥಳೀಯ ಸಮುದಾಯಗಳು ಮತ್ತು ಹಿಮಸಾರಂಗಗಳ ಬಗ್ಗೆ ಆಳವಾದ ತಿಳುವಳಿಕೆ ಪಡೆಯಬಹುದು.
► ಅಲಾಸ್ಕಾದ ಡೆನಾಲಿ ರಾಷ್ಟ್ರೀಯ ಉದ್ಯಾನವನ
ಅಮೆರಿಕದ ಅಲಾಸ್ಕಾದಲ್ಲಿರುವ ಡೆನಾಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಹಿಮಸಾರಂಗಗಳ ಕಾಡು ಸಂಬಂಧಿಯಾದ ಕ್ಯಾರಿಬೌಗಳು ಕಂಡುಬರುತ್ತವೆ. ಯುರೋಪ್ನ ಲ್ಯಾಪ್ ಲ್ಯಾಂಡ್ ನಲ್ಲಿರುವಂತೆ ಇಲ್ಲಿ ಸಾಕಣೆ ಹಿಮಸಾರಂಗಗಳಿಲ್ಲ. ಬದಲಾಗಿ, ಇವು ಸಂಪೂರ್ಣ ಕಾಡುಪ್ರಾಣಿಗಳಾಗಿದ್ದು, ವಿಶಾಲವಾದ ಟಂಡ್ರಾ ಪ್ರದೇಶಗಳಲ್ಲಿ ಸ್ವತಂತ್ರವಾಗಿ ಬದುಕುತ್ತವೆ.
ವೈಜ್ಞಾನಿಕವಾಗಿ ಹಿಮಸಾರಂಗ ಮತ್ತು ಕ್ಯಾರಿಬೌ ಎರಡೂ Rangifer tarandus ಎಂಬ ಒಂದೇ ಪ್ರಭೇದಕ್ಕೆ ಸೇರಿವೆ. ಉತ್ತರ ಅಮೆರಿಕಾದ ಕ್ಯಾರಿಬೌಗಳು ಸಾಮಾನ್ಯವಾಗಿ ಉದ್ದವಾದ ಕಾಲುಗಳನ್ನು ಹೊಂದಿರುತ್ತವೆ. ಮನುಷ್ಯರನ್ನು ಕಂಡಾಗ ದೂರ ಸರಿಯುತ್ತವೆ.
ಪ್ರವಾಸಿಗರು ವನ್ಯಜೀವಿ ವೀಕ್ಷಣೆಯ ಪ್ರವಾಸಗಳ ವೇಳೆ ಕ್ಯಾರಿಬೌಗಳನ್ನು ಕಾಣಬಹುದು. ಆದರೆ ಅವುಗಳ ದರ್ಶನವು ಋತುಮಾನ ಮತ್ತು ಪ್ರಾಣಿಗಳ ಚಲನವಲನವನ್ನು ಅವಲಂಬಿಸಿರುತ್ತದೆ.
► ಕೆನಡಾದ ಯುಕಾನ್
ಕೆನಡಾದ ವಾಯವ್ಯ ಭಾಗದಲ್ಲಿರುವ ಯುಕಾನ್ ಪ್ರದೇಶವು ಬೃಹತ್ ಕಾಡು ಹಿಮಸಾರಂಗಗಳ ಹಿಂಡುಗಳು ಮತ್ತು ಅವುಗಳ ದೀರ್ಘ ವಲಸೆಗೆ ಪ್ರಸಿದ್ಧವಾಗಿದೆ. ಅಲಾಸ್ಕಾದಂತೆ ಇಲ್ಲಿಯೂ ಹಿಮಸಾರಂಗಗಳನ್ನು ಕ್ಯಾರಿಬೌ ಎಂದು ಕರೆಯಲಾಗುತ್ತದೆ.
ಯುಕಾನ್ ನ ಅತ್ಯಂತ ಪ್ರಸಿದ್ಧ ಹಿಂಡು ಎಂದರೆ ‘ಪೋರ್ಕ್ಯುಪೈನ್ ಕ್ಯಾರಿಬೌ ಹಿಂಡು’. ಈ ಹಿಂಡು ಕೆನಡಾದ ಯುಕಾನ್ ಮತ್ತು ಅಲಾಸ್ಕಾ ನಡುವಿನ ವಿಶಾಲ ಪ್ರದೇಶದಲ್ಲಿ ಸಂಚರಿಸುತ್ತದೆ. ಇದರ ವಲಸೆ ಮಾರ್ಗವು ಸುಮಾರು 2,400 ಕಿ.ಮೀ.ಗಳಷ್ಟು ದೂರವನ್ನು ಒಳಗೊಂಡಿದೆ.
ಈ ಹಿಂಡಿನ ಜನಸಂಖ್ಯೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಳಿಕೆ ಕಂಡುಬಂದಿದೆ. 2017ರಲ್ಲಿ ಸುಮಾರು 2,18,000 ಇದ್ದ ಕ್ಯಾರಿಬೌಗಳ ಸಂಖ್ಯೆ, 2025ರ ಜುಲೈನಲ್ಲಿ ನಡೆಸಿದ ಗಣತಿಯ ಪ್ರಕಾರ ಸುಮಾರು 1,43,000ಕ್ಕೆ ಇಳಿದಿದೆ.
ಯುಕಾನ್ ನ ಮೂಲನಿವಾಸಿಗಳಾದ ಗ್ವಿಚಿನ್ ಮತ್ತು ಇನುವಿಯಾಲುಯಿಟ್ ಸಮುದಾಯಗಳ ಜೀವನಶೈಲಿ, ಆಹಾರ ಮತ್ತು ಸಂಸ್ಕೃತಿಯು ಸಾವಿರಾರು ವರ್ಷಗಳಿಂದ ಕ್ಯಾರಿಬೌಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಇಂದಿಗೂ ಈ ಹಿಂಡಿನ ನಿರ್ವಹಣೆ ಮತ್ತು ಸಂರಕ್ಷಣೆಗಾಗಿ ಕೆನಡಾ ಮತ್ತು ಅಮೆರಿಕದ ಸಂಬಂಧಿತ ಸಂಸ್ಥೆಗಳು ಸ್ಥಳೀಯ ಮೂಲನಿವಾಸಿ ಸಮುದಾಯಗಳೊಂದಿಗೆ ಸಹಕರಿಸುತ್ತಿವೆ.






