ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ: 5 ಸಾವಿರ ಹೆಕ್ಟೇರ್ ಕಿತ್ತಳೆ ಗಿಡಗಳು ನಾಶ, ಕಮರಿದ ದ್ರಾಕ್ಷಿ ತೋಟಗಳು

ಸಾಂದರ್ಭಿಕ ಚಿತ್ರ
ರೈತರು ಮತ್ತು ಹಣ್ಣು ಬೆಳೆಗಾರರು ತಮ್ಮ ಮರಗಳು ಮತ್ತು ಬಳ್ಳಿಗಳನ್ನು ಜೀವಂತವಾಗಿ ಉಳಿಸಿಕೊಳ್ಳುವ ದೊಡ್ಡ ಸವಾಲು ಎದುರಿಸುತ್ತಿದ್ದಾರೆ. ದೀರ್ಘಕಾಲಿಕ ಬೆಳೆಗಳು ನಾಶವಾದರೆ ಹೊಸದಾಗಿ ನೆಟ್ಟ ತೋಟಗಳು ಫಲ ಪ್ರಾರಂಭಿಸುವವರೆಗೆ ರೈತರು ಹಲವು ವರ್ಷಗಳ ಹಿನ್ನಡೆ ಅನುಭವಿಸಬೇಕಾಗುತ್ತದೆ.
ಮಹಾರಾಷ್ಟ್ರದಲ್ಲಿ ಬರಗಾಲದ ಕುರಿತು ಚರ್ಚಿಸಲು ನಾಂದೇಡ್ನಲ್ಲಿ ಸಚಿವರು, ಸಂಸದರು ಮತ್ತು ಶಾಸಕರ ಸಭೆಯೊಂದು ನಡೆಯಿತು. ಈ ಚರ್ಚೆಯಲ್ಲಿ ಕುಳಿತಿದ್ದವರ ಮುಂದಿದ್ದ ತಟ್ಟೆಗಳಲ್ಲಿ ಗೋಡಂಬಿ ಮತ್ತು ಬಾದಾಮಿಗಳಿರುವುದು ವಿವಾದಕ್ಕೆ ಕಾರಣವಾಗಿದೆ. ಏಕೆಂದರೆ ಸಭೆಯ ಹೊರಗೆ ಕಾಯುತ್ತಿದ್ದ ರೈತರು ಒಣಗುತ್ತಿರುವ ಬೆಳೆಗಳು ಬತ್ತಿಹೋದ ಬಾವಿಗಳು ಮತ್ತು ಜಾನುವಾರುಗಳು ಎಷ್ಟು ದಿನ ಬದುಕಬಲ್ಲವು ಎನ್ನುವ ಚಿಂತೆಯಲ್ಲಿದ್ದರು.
ಹಣ್ಣು ಬೆಳೆಗಾರರು ಸೇರಿದಂತೆ ಮಹಾರಾಷ್ಟ್ರದ ರೈತರು ಕಳೆದ ಕೆಲವು ದಶಕಗಳಲ್ಲೇ ಕಾಣದ ಅತ್ಯಂತ ಭೀಕರ ಬರಗಾಲ ಎದುರಿಸುತ್ತಿದ್ದಾರೆ. ಸತತ ಮೂರು ವರ್ಷಗಳ ಕಾಲ ಮಳೆ ಕೈಕೊಟ್ಟಿದ್ದ 1972ರ ಬರಗಾಲಕ್ಕಿಂತಲೂ ಇಂದಿನ ಸ್ಥಿತಿ ತೀವ್ರವಾಗಿದೆ ಎಂದು ಅವರು ಹೇಳುತ್ತಾರೆ.
ಎಲ್ ನಿನೊ ಪರಿಣಾಮದಿಂದಾಗಿ ಮಳೆ ಕೊರತೆ ಮತ್ತು ಅನಿಶ್ಚಿತತೆಯು ಬರ ಪೀಡಿತ ಮಹಾರಾಷ್ಟ್ರದಲ್ಲಿ ಈಗಾಗಲೇ ಬೆಳೆಗಳನ್ನು ನಾಶಪಡಿಸಿದೆ. ಆದರೆ ರೈತರು ಮತ್ತು ಹಣ್ಣು ಬೆಳೆಗಾರರು ತಮ್ಮ ಮರಗಳು ಮತ್ತು ಬಳ್ಳಿಗಳನ್ನು ಜೀವಂತವಾಗಿ ಉಳಿಸಿಕೊಳ್ಳುವ ದೊಡ್ಡ ಸವಾಲು ಎದುರಿಸುತ್ತಿದ್ದಾರೆ. ದೀರ್ಘಕಾಲಿಕ ಬೆಳೆಗಳು ನಾಶವಾದರೆ ಹೊಸದಾಗಿ ನೆಟ್ಟ ತೋಟಗಳು ಫಲ ಪ್ರಾರಂಭಿಸುವವರೆಗೆ ರೈತರು ಹಲವು ವರ್ಷಗಳ ಹಿನ್ನಡೆ ಅನುಭವಿಸಬೇಕಾಗುತ್ತದೆ.
ಕಮರಿದ ದ್ರಾಕ್ಷಿ ಬಳ್ಳಿಗಳು
ಭಾರತದ ವೈನ್ ಉದ್ಯಮದ ಕೇಂದ್ರವಾಗಿರುವ ಮಹಾರಾಷ್ಟ್ರದ ನಾಸಿಕ್ ಪ್ರದೇಶದಲ್ಲಿ ದ್ರಾಕ್ಷಿ ಬಳ್ಳಿಗಳು ಒಣಗಲು ಪ್ರಾರಂಭಿಸಿವೆ ಎಂದು ಬೆಳೆಗಾರರು ಚಿಂತೆಯಲ್ಲಿದ್ದಾರೆ. ಬಾವಿಗಳು ಮತ್ತು ಇತರ ನೀರಿನ ಮೂಲಗಳು ಬತ್ತಿ ಹೋಗಿರುವುದರಿಂದ ದಾಳಿಂಬೆ, ಬಾಳೆಹಣ್ಣು ಮತ್ತು ಮಾವು ಬೆಳೆಯುವ ರೈತರು ನೀರಿಗಾಗಿ ಪರದಾಡುತ್ತಿದ್ದಾರೆ. ಈ ಋತುವಿನ ಬಹುಪಾಲು ಇಳುವರಿ ಈಗಾಗಲೇ ನಷ್ಟವಾಗಿರುವ ಆತಂಕವಿದೆ. ಹೀಗಾಗಿ ಮರಗಳು ಮತ್ತು ಬಳ್ಳಿಗಳಂತಹ ಅಮೂಲ್ಯ ಆಸ್ತಿ ಉಳಿಸಿಕೊಳ್ಳುವುದೇ ಆದ್ಯತೆಯಾಗಿದೆ. ಅವು ನಾಶವಾದರೆ ಪರಿಸ್ಥಿತಿ ಸುಧಾರಿಸಲು ವರ್ಷಗಳೇ ಹಿಡಿಯಬಹುದು.
265 ತಾಲೂಕುಗಳು ಬರಪೀಡಿತ
ಮಹಾರಾಷ್ಟ್ರವು ತನ್ನ 358 ತಾಲೂಕುಗಳ ಪೈಕಿ 265 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇದು ರಾಜ್ಯದ ಸುಮಾರು ನಾಲ್ಕನೇ ಮೂರರಷ್ಟು ಭಾಗ ಒಳಗೊಂಡಿದೆ. ಶೇ 18.8ರಷ್ಟು ಮಳೆಯ ಕೊರತೆಯಿಂದ ಮರಾಠವಾಡ ಮತ್ತು ವಿದರ್ಭ ಪ್ರದೇಶಗಳು ಬಾಧಿತವಾಗಿವೆ. ಕೇಂದ್ರ ಕೃಷಿ ಸಚಿವಾಲಯದ ಪ್ರಕಾರ 2024-25ರಲ್ಲಿ ಭಾರತದ ಒಟ್ಟು ದ್ರಾಕ್ಷಿ ಉತ್ಪಾದನೆಯಲ್ಲಿ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಏಕೆಂದರೆ ಈ ರಾಜ್ಯವು ತೋಟಗಾರಿಕಾ ಬೆಳೆಗಳ ಉತ್ಪಾದನೆಯಲ್ಲಿ ಪ್ರಮುಖ ಶಕ್ತಿಯಾಗಿದೆ. ಇದು ಭಾರತದ ದ್ರಾಕ್ಷಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ ಮತ್ತು ದೇಶಾದ್ಯಂತ ಹಾಗೂ ವಿದೇಶೀ ಮಾರುಕಟ್ಟೆಗಳಿಗೆ ಅಪಾರ ಪ್ರಮಾಣದ ದಾಳಿಂಬೆ ಮತ್ತು ಬಾಳೆ ಹಣ್ಣುಗಳನ್ನು ಕಳುಹಿಸುತ್ತದೆ. 2024-25ರಲ್ಲಿ ಭಾರತದ ಒಟ್ಟು ದ್ರಾಕ್ಷಿ ಉತ್ಪಾದನೆಯಲ್ಲಿ ಮಹರಾಷ್ಟ್ರವೊಂದೇ ಶೇ 69ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.
ಈಗಿನ ಬರಗಾಲ 1972ಗಿಂತ ಭೀಕರವಾಗಿರಬಹುದು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವೀಸ್ ಸ್ವತಃ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ, ಸಾಲ ಮರುಹೊಂದಿಕೆ, ಭೂ ಕಂದಾಯದಲ್ಲಿ ರಿಯಾಯಿತಿ, ಕೃಷಿ ಸಾಲದ ವಸೂಲಾತಿಗೆ ತಡೆ ಮತ್ತು ವಿದ್ಯುತ್ಗೆ ಸಂಬಂಧಿಸಿದ ಪರಿಹಾರ ಕ್ರಮಗಳನ್ನು ಘೋಷಿಸಿದೆ. ಆದರೆ ಬೆಳೆಗಾರರು ತಕ್ಷಣಕ್ಕೆ ತಮ್ಮ ಮರಗಳು ಮತ್ತು ಬಳ್ಳಿಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮತ್ತು ರೈಲುಗಳ ಮೂಲಕ ನೀರಿನ ವ್ಯವಸ್ಥೆ ಕೇಳುತ್ತಿದ್ದಾರೆ.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನೆರವನ್ನು ಮಹಾರಾಷ್ಟ್ರ ಕೇಳಿದ್ದು, ಬೆಳೆ ನಷ್ಟ ಮತ್ತು ಪರಿಹಾರ ಅಗತ್ಯಗಳನ್ನು ಅಂದಾಜಿಸಲು ಅಕ್ಟೋಬರ್ 8 ಮತ್ತು 11ರ ನಡುವೆ ಮಹಾರಾಷ್ಟ್ರಕ್ಕೆ ಅಂತರ ಸಚಿವಾಲಯದ ತಂಡ ಕಳುಹಿಸಲಾಗಿದೆ.
ರೈಲು ಟ್ಯಾಂಕರ್ ಮೂಲಕ ನೀರು ವ್ಯವಸ್ಥೆಗೆ ಆಗ್ರಹ
ಮಹರಾಷ್ಟ್ರದ ದ್ರಾಕ್ಷಿ ತೋಟಗಳಿಗೆ ಅಕ್ಟೋಬರ್ನಲ್ಲಿ ‘ಫ್ರೂಟ್ ಪ್ರೂನಿಂಗ್’ (ಹಣ್ಣು ಬಿಡುವಂತೆ ಮಾಡುವ ಕತ್ತರಿಸುವಿಕೆ) ಮಾಡಲಾಗುತ್ತದೆ. ಇದು ಮುಂದಿನ ಮಾರ್ಚ್ ಮತ್ತು ಏಪ್ರಿಲ್ ವರೆಗೆ ನಡೆಯುವ ದ್ರಾಕ್ಷಿ ಕೊಯ್ಲಿನ ಚಕ್ರಕ್ಕೆ ಚಾಲನೆಯಾಗರುತ್ತದೆ. ಇದರಲ್ಲಿ ವ್ಯತ್ಯಾಸವು ಕೃಷಿ ಸೇರಿದಂತೆ ಕೈಗಾರಿಕಾ ಉತ್ಪಾದನೆ ಮತ್ತು ವಿಶಾಲ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಮಳೆಯಾಗದೆ, ಜಲಾಶಯದ ನೀರಿನ ಬಳಕೆಯ ಮೇಲೂ ನಿರ್ಬಂಧವಿರುವುದರಿಂದ ಕನಿಷ್ಠ ದ್ರಾಕ್ಷಿ ಬಳ್ಳಿಗಳನ್ನು ಜೀವಂತವಾಗಿಸಲು ರೈಲು ಟ್ಯಾಂಕರ್ ಮೂಲಕ ನೀರು ವ್ಯವಸ್ಥೆಗೆ ರೈತರು ಆಗ್ರಹಿಸಿದ್ದಾರೆ. ದ್ರಾಕ್ಷಿ ಬೆಳೆ ಕಳೆದುಕೊಂಡರೆ ಒಂದು ಬಾರಿಯ ಕೊಯ್ಲು ಹೋಗುತ್ತದೆ. ಆದರೆ ಬಳ್ಳಿ ಹೋದರೆ ಹೊಸ ನಾಟಿ ಮಾಡಬೇಕಾಗುತ್ತದೆ. ಕನಿಷ್ಠ ನಾಲ್ಕು ವರ್ಷ ಕಾಯಬೇಕಾಗುತ್ತದೆ. ಮಹಾರಾಷ್ಟ್ರದ ನಾಸಿಕ್, ಸಾಂಗ್ಲಿ, ಸೋಲಾಪುರ ಮತ್ತು ಪುಣೆ ಪ್ರಮುಖ ದ್ರಾಕ್ಷಿ ಬೆಳೆಯುವ ಜಿಲ್ಲೆಗಳು. 2025-26ರಲ್ಲಿ ಭಾರತವು ಸುಮಾರು 368 ಮಿಲಿಯನ್ ಡಾಲರ್ ಮೌಲ್ಯದ 2.24 ಲಕ್ಷ ಟನ್ ದ್ರಾಕ್ಷಿಯನ್ನು ರಫ್ತು ಮಾಡಿದ್ದು, ನೆದರ್ಲ್ಯಾಂಡ್, ರಷ್ಯಾ, ಯುನೈಟೆಡ್ ಕಿಂಗ್ಡಂ, ಯುಎಇ ಮತ್ತು ಬಾಂಗ್ಲಾದೇಶ ಪ್ರಮುಖ ಮಾರುಕಟ್ಟೆಗಳಾಗಿವೆ.
ಈ ಬಾರಿಯ ಮಳೆಗೆ ಕೊರತೆಗೆ ಮೊದಲೇ ಉದ್ಯಮ ಒತ್ತಡದಲ್ಲಿತ್ತು. ದೀರ್ಘಕಾಲದ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ದ್ರಾಕ್ಷಿ ತೋಟಗಳಿಗೆ ಹಾನಿಯಾಗಿ ರಫ್ರು ಗುಣಮಟ್ಟದ ಇಳುವರಿ ಪ್ರಮಾಣ ಕಡಿಮೆಯಾಗಿತ್ತು. ಹೀಗಾಗಿ ವರದಿಗಳ ಪ್ರಕಾರ 2025-26ರಲ್ಲಿ ನಾಸಿಕ್ನ ದ್ರಾಕ್ಷಿ ರಫ್ತು ಪ್ರಮಾಣವು ಸುಮಾರು 1.6 ಲಕ್ಷ ಟನ್ಗಳಿಂದ 1.4 ಲಕ್ಷ ಟನ್ಗಳಿಗೆ, ಅಂದರೆ ಶೇ. 9.6ರಷ್ಟು ಕುಸಿತ ಕಂಡಿದೆ.
5000 ಹೆಕ್ಟೇರ್ ಕಿತ್ತಳೆ ಗಿಡಗಳ ನಾಶ
ಮಾವು, ದಾಳಿಂಬೆ ಮತ್ತು ಬಾಳೆ ಗಿಡಗಳಿಗೂ ಅಪಾಯವಿದೆ. ಮಹಾರಾಷ್ಟ್ರದ ರೈತರು ಮಾವು, ದಾಳಿಂಬೆ ಮತ್ತು ಬಾಳೆ ತೋಟಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ವರ್ಷಗಳ ಕಾಲ ಹೂಡಿಕೆ ಮಾಡಿದ ಗಿಡಗಳನ್ನು ಮರುಸ್ಥಾಪಿಸಲು ಹಲವು ವರ್ಷಗಳು ಬೇಕಾಗುತ್ತವೆ.
ಈಗಿನ ಬಿಕ್ಕಟ್ಟು ಮಹಾರಾಷ್ಟ್ರದ ಕಿತ್ತಳೆ ಬೆಳೆಯುವ ಪ್ರದೇಶಕ್ಕೂ ಹಬ್ಬಿದೆ. ಅಮರಾವತಿಯ ಕಿತ್ತಳೆ ತೋಟಗಳಿಗೆ ಹಾನಿಯಾಗಿದೆ. ಅಂದಾಜು 5000 ಹೆಕ್ಟೇರ್ ಪ್ರದೇಶಗಳಲ್ಲಿ ಮರಗಳನ್ನು ಕಡಿಯಲಾಗಿದೆ. ಉಳಿದಿರುವ ತೋಟಗಳಲ್ಲಿ ಹೂ ಬಿಡುವಿಕೆ, ಹಣ್ಣಿನ ಬೆಳವಣಿಗೆ ಮತ್ತು ಹಣ್ಣಿನ ಗಾತ್ರಕ್ಕೆ ಸಮಸ್ಯೆಯಾಗಿದೆ. ಪ್ರಸ್ತುತ ಒತ್ತಡದಲ್ಲಿ ರೈತರು ಶೇ 30ರಷ್ಟು ಹಣ್ಣಿನ ಉತ್ಪಾದನೆ ಮಾತ್ರ ಉಳಿಸಿಕೊಳ್ಳಲು ಸಾಧ್ಯವಿದೆ. ಇದಕ್ಕೂ ತುರ್ತು ಕ್ರಮಗಳ ಅಗತ್ಯವಿದೆ. ಮರಗಳು ಮತ್ತು ಮಣ್ಣಿನ ಮೇಲೆ ನೇರ ಸೂರ್ಯನ ಬೆಳಕು ಬೀಳುವುದನ್ನು ತಡೆಯಲು ‘ಶೇಡ್ ನೆಟ್’ಗಳನ್ನು ಅಳವಡಿಸುವುದು ಮತ್ತು ಅದಕ್ಕಾಗಿ ಹೆಚ್ಚಿನ ಸರ್ಕಾರಿ ಸಬ್ಸಿಡಿ ಅಗತ್ಯ ಎನ್ನುತ್ತಾರೆ ತಜ್ಞರು.
ಮಾವು, ದಾಳಿಂಬೆ ಬೆಳೆಗಳ ಮೇಲೂ ಪರಿಣಾಮ
ಮಾವು ಬೆಳೆಗಾರರು 2026ರ ಆರಂಭದಲ್ಲಿ ಉಂಟಾದ ವಿಪರೀತ ಹವಾಮಾನ ವೈಪರೀತ್ಯದಿಂದ ತೀವ್ರ ಪರಿಣಾಮ ಎದುರಿಸಿದ್ದಾರೆ. ಮಹಾರಾಷ್ಟ್ರದ ಪ್ರಮುಖ ಅಲ್ಫೋನ್ಸೋ ಮಾವಿನ ಬೆಳೆಯ ಮೇಲೆ ತೀವ್ರ ಪರಿಣಾಮವಾಗಿದೆ. ಸರ್ಕಾರಿ ಸಮೀಕ್ಷೆಯ ಪ್ರಕಾರ ದೇವಗಢ ಪ್ರದೇಶದಲ್ಲಿ ಶೇ 85 ರಿಂದ 90 ರಷ್ಟು ಬೆಳೆ ನಷ್ಟವಾಗಿದೆ.
ದಾಳಿಂಬೆ ಇಳುವರಿಯೂ ಕಳವಳ ಎದುರಿಸಿದೆ. ಸೋಲಾಪುರ, ಅಹಲ್ಯಾ ನಗರ ಮತ್ತು ಪುಣೆ ಸುತ್ತಮುತ್ತಲ ಪ್ರದೇಶದಲ್ಲಿ ಸಮಸ್ಯೆ ಎದುರಾಗಿದೆ. ಹಣ್ಣಿನ ತೋಟ ವರ್ಷಗಳ ಹೂಡಿಕೆ ಮತ್ತು ತಾಳ್ಮೆಯ ಫಲವಾಗಿರುತ್ತದೆ. ಹೀಗಾಗಿ ಬರಗಾಲದ ಸಮಯದಲ್ಲಿ ಗಿಡಗಳನ್ನು ಉಳಿಸುವುದು ರೈತರಿಗೆ ಮುಖ್ಯವಾಗಿದೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಬಾಳೆಹಣ್ಣು ಉತ್ಪಾದಿಸುವ ಜಿಲ್ಲೆಯಾದ ಜಲಗಾಂವ್ನಲ್ಲೂ ಬರಗಾಲದಿಂದ ಬಾಳೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯು ಗುಣಮಟ್ಟದ ಮೇಲೂ ಪರಿಣಾಮ ಬೀರಿದ್ದು, ಸಗಟು ಬೆಲೆಗಳು ಕುಸಿದಿವೆ. ಪ್ರತಿ ಕೆಜಿಗೆ ಕೇವಲ 3 ರೂಪಾಯಿ ನೀಡಲು ಮುಂದಾದಾಗ ರೈತರೊಬ್ಬರು ತಮ್ಮ ನಾಲ್ಕು ಎಕರೆ ತೋಟ ನಾಶಪಡಿಸಿದ್ದಾರೆ ಎಂದು ವರದಿಯಾಗಿದೆ.
ಕೃಪೆ: India Today






