2025ರಲ್ಲಿ 5,57,36,561 ರಷ್ಟು ಮತದಾರರು: ಎಸ್ಐಆರ್ ಕುರಿತು ಸಚಿವ ಸಂಪುಟಕ್ಕೆ ಮಾಹಿತಿ

PC: PTI
ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಚಿವ ಸಂಪುಟಕ್ಕೆ ಮಾಹಿತಿ ಒದಗಿಸಿದೆ. ಈ ಮಾಹಿತಿ ಪಡೆದಿರುವ ಸಚಿವ ಸಂಪುಟವು ಈ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ.
ಬಿಹಾರದಲ್ಲಿ ಈಗಾಗಲೇ ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿದೆಯಲ್ಲದೇ ಕರ್ನಾಟಕದಲ್ಲೂ ಎಸ್ಐಆರ್ ನಡೆಸಲು ಕೇಂದ್ರ ಸರಕಾರವು ಶೀಘ್ರದಲ್ಲಿಯೇ ಆದೇಶ ಹೊರಡಿಸಲಿದೆ. ಇದರ ಬೆನ್ನಲ್ಲೇ ಮತ್ತು ಆಡಳಿತ ಸುಧಾರಣೆ ಇಲಾಖೆಯು 2026ರ ಫೆ.5ರಂದು ನಡೆದಿದ್ದ ಸಚಿವ ಸಚಿವ ಸಂಪುಟಕ್ಕೆ ಎಸ್ಐಆರ್ ಕುರಿತಾದ ಸಮಗ್ರ ಮಾಹಿತಿಯನ್ನು ಒದಗಿಸಿದೆ. ಈ ಮಾಹಿತಿಯು "the-file.in"ಗೆ ಲಭ್ಯವಾಗಿದೆ.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯಿಂದಾಗಿ ರಾಜ್ಯದ ಜನತೆ ತೀವ್ರವಾಗಿ ಸಂಕಷ್ಟಗಳನ್ನು ಎದುರಿಸಲಿದ್ದಾರೆ ಎಂದು ಬಿಜೆಪಿಯೇತರ ಮತ್ತು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳು ತೀವ್ರವಾಗಿ ವಿರೋಧಿಸುತ್ತಿವೆ. ಈ ನಡುವೆ ಕರ್ನಾಟಕದಲ್ಲಿಯೂ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಸಚಿವ ಸಂಪುಟಕ್ಕೆ ನೀಡಿರುವ ಮಾಹಿತಿಯು ಮುನ್ನೆಲೆಗೆ ಬಂದಿದೆ.
ಸಚಿವ ಸಂಪುಟಕ್ಕೆ ಸಲ್ಲಿಸಿರುವ ಪ್ರಸ್ತಾವದಲ್ಲೇನಿದೆ?:
ಭಾರತದ ಸಂವಿಧಾನದ 324ನೇ ವಿಧಿ ಮತ್ತು ಜನತಾ ಪ್ರಾತಿನಿಧ್ಯ ಅಧಿನಿಯಮ, 1950ರ ನಿಬಂಧನೆಗಳ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಬಳಸಿಕೊಂಡು ಭಾರತ ಚುನಾವಣೆ ಆಯೋಗವು ಮತದಾರರ ಪಟ್ಟಿಯ ನಿಖರತೆ, ಒಳಗೊಳ್ಳುವಿಕೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ನಿಯತಕಾಲಿಕವಾಗಿ ಪರಿಷ್ಕರಣೆ ಕೈಗೊಳ್ಳುತ್ತದೆ ಎಂದು ವಿವರಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಮುಕ್ತ ಮತ್ತು ನಿಷ್ಪಕ್ಷ ಚುನಾವಣೆಗಳನ್ನು ನಡೆಸಲು ಮತದಾರರ ಪಟ್ಟಿಗಳ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮೂಲಭೂತ ಅವಶ್ಯಕತೆಯಾಗಿದೆ. ಹೀಗಾಗಿ ಮತದಾರ ಪಟ್ಟಿಯಲ್ಲಿ ಎಲ್ಲ ಅರ್ಹ ನಾಗರಿಕರ ಸೇರ್ಪಡೆ, ಅನರ್ಹ ವ್ಯಕ್ತಿಗಳನ್ನು ತೆಗೆದುಹಾಕುವುದು ಮತ್ತು ಚುನಾವಣೆ ಪ್ರಕ್ರಿಯೆಯ ಒಟ್ಟಾರೆ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸಲು ಭಾರತ ಚುನಾವಣೆ ಆಯೋಗವು ಉದ್ದೇಶಿಸಿದೆ. ಈ ಕುರಿತು ಮುಖ್ಯ ಚುನಾವಣಾಧಿಕಾರಿಗಳು ಇವರು ಮಾಹಿತಿಯನ್ನು ಒದಗಿಸಿದ್ದಾರೆ.
ಈ ಪ್ರಸ್ತಾವವನ್ನು ಸಚಿವ ಸಂಪುಟಕ್ಕೆ ಮಾಹಿತಿಗಾಗಿ ಮಾತ್ರ ಮಂಡಿಸಲಾಗಿದೆ. ಈ ಪ್ರಸ್ತಾವ ಕುರಿತು ಇತರ ಇಲಾಖೆಗಳೊಂದಿಗೆ ಸಮಾಲೋಚನೆ ಅಗತ್ಯವಿರುವುದಿಲ್ಲ. ಅಗತ್ಯವಿರುವ ಮಾಹಿತಿಯನ್ನು ಮುಖ್ಯ ಚುನಾವಣಾಧಿಕಾರಿಗಳಿಂದ ಪಡೆಯಲಾಗಿದೆ ಎಂದು ಸಚಿವ ಸಂಪುಟ ಟಿಪ್ಪಣಿಯಲ್ಲಿ ಹೇಳಿರುವುದು ಗೊತ್ತಾಗಿದೆ.
ಸಚಿವ ಸಂಪುಟಕ್ಕೆ ಮಂಡಿಸಿರುವ ಮಾಹಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ.
ಚುನಾವಣಾಧಿಕಾರಿಗಳು ಒದಗಿಸಿರುವ ಮಾಹಿತಿಯಲ್ಲೇನಿದೆ?:
ಮುಖ್ಯ ಚುನಾವಣಾಧಿಕಾರಿಗಳು ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ರಾಜ್ಯ ಸರಕಾರಕ್ಕೆ ಸಮಗ್ರ ಮಾಹಿತಿ ಒದಗಿಸಿದ್ದಾರೆ. 1950-51ರಲ್ಲಿ ದೇಶದಲ್ಲಿ ಮೊದಲ ಮತದಾರರ ಪಟ್ಟಿಯನ್ನು 1951ರ ನವೆಂಬರ್ 15ರಂದು ಸಿದ್ಧಪಡಿಸಲಾಗಿತ್ತು. 1952-56ರ ಅವಧಿಯಲ್ಲಿ ಪ್ರತೀ ವರ್ಷ ಸುಮಾರು ಶೇ.20ರಷ್ಟು ರಾಜ್ಯಗಳಲ್ಲಿ ಎಸ್ಐಆರ್ ನಡೆಸಲಾಗಿದೆ. 1961ರಲ್ಲಿ ನಗರ ಪ್ರದೇಶಗಳಿಗಾಗಿ ಎಸ್ಐಆರ್ ನಡೆಸಲಾಗಿದೆ. 1965-66ರಲ್ಲಿ ಶೇ. 40ರಷ್ಟು ರಾಜ್ಯಗಳಲ್ಲಿ ಮತ್ತು 1966ರಲ್ಲಿ ಶೇ.60ರಷ್ಟು ರಾಜ್ಯಗಳಲ್ಲಿ ಎಸ್ಐಆರ್ ನಡೆಸಲಾಗಿದೆ.
1983-84 ಮತ್ತು 1987-89ರಲ್ಲಿಯೂ ಅವಧಿಯಲ್ಲಿ ಇಡೀ ಭಾರತದಾದ್ಯಂತ ಎಸ್ಐಆರ್ ನಡೆಸಲಾಗಿದೆ. 1993ರಲ್ಲಿ ಜಮ್ಮು ಕಾಶ್ಮೀರ ಹೊರತುಪಡಿಸಿ ಭಾರತದಾದ್ಯಂತ ಎಸ್ಐಆರ್ ನಡೆಸಲಾಗಿದೆ. 1995ರಲ್ಲಿ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಐಆರ್ ನಡೆಸಲಾಗಿದೆ. 2002ರಲ್ಲಿ ಕರ್ನಾಟಕ ಸಹಿತ 29 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಐಆರ್ ನಡೆಸಲಾಗಿದೆ ಎಂಬ ಮಾಹಿತಿಯನ್ನು ನೀಡಿದೆ. ಕರ್ನಾಟಕದಲ್ಲಿ 2002ರಲ್ಲಿ ನಡೆಸಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಯೇ ಕೊನೆಯದಾಗಿದೆ. ಅಲ್ಲದೇ ಇದನ್ನೆ ಮೂಲ ಪಟ್ಟಿ ಎಂದು ಪರಿಗಣಿಸಲಾಗಿದೆ.
2025ರ ಎಸ್ಐಆರ್ ಸಂದರ್ಭದಲ್ಲಿ 2002ರರ ಮತದಾರರ ಪಟ್ಟಿ ಪ್ರಮುಖ ಉಲ್ಲೇಖದ ದಾಖಲೆಯಾಗಿದೆ. 2002ರಲ್ಲಿ ರಾಜ್ಯದಲ್ಲಿ ಒಟ್ಟು 28 ಜಿಲ್ಲೆಗಳು ಹಾಗೂ 224 ವಿಧಾನಸಭೆ ಕ್ಷೇತ್ರಗಳಿದ್ದವು ಎಂದು ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.
ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಅಗತ್ಯವೇ?:
ಮತದಾರರ ಪಟ್ಟಿಯು ಪ್ರಜಾಪ್ರಭುತ್ವದ ಮೂಲ ಆಧಾರವಾಗಿದೆ. ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರು ತಪ್ಪದೇ ಮತದಾರರ ಪಟ್ಟಿಯಲ್ಲಿ ಸೇರಬೇಕು. ಅನರ್ಹ (ಪುನರಾವರ್ತಿತ, ಸ್ಥಳಾಂತರಗೊಂಡ, ಮೃತ ಹೊಂದಿದ) ಮತದಾರರು ಮತದಾರರ ಪಟ್ಟಿಯಿಂದ ವಜಾಗೊಳ್ಳಬೇಕು. ಈ ಕಾರಣಕ್ಕೆ ವಿಶೇಷ ಸಮಗ್ರ ಪರಿಷ್ಕರಣೆ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ಸರಕಾರಕ್ಕೆ ಮಾಹಿತಿ ಒದಗಿಸಿದ್ದಾರೆ.
ಭಾರತ ಚುನಾವಣೆ ಆಯೋಗವು ಸಹ ಕರ್ನಾಟಕದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಸುವ ವೇಳಾಪಟ್ಟಿಯನ್ನು ಶೀಘ್ರದಲ್ಲಿ ಹೊರಡಿಸುವ ನಿರೀಕ್ಷೆಯಿದೆ. ಆದರೆ ಭಾರತ ಚುನಾವಣೆ ಆಯೋಗದ ನಿರ್ದೇಶನದ ಪ್ರಕಾರ ಪೂರ್ವಭಾವಿಯಾಗಿ 2025ರ ಮತದಾರರ ಪಟ್ಟಿಯಲ್ಲಿನ ಮತದಾರರನ್ನು 2002ರ ಮತದಾರರ ಪಟ್ಟಿಯಿಂದ ಮ್ಯಾಪಿಂಗ್ ಮಾಡುವ ಪೂರ್ವಭಾವಿ ಕಾರ್ಯವು ಪ್ರಗತಿಯಲ್ಲಿದೆ. ಭಾರತ ಚುನಾವಣೆ ಆಯೋಗವು ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಪ್ರಕಟಣೆ ಹೊರಡಿಸಿದ ನಂತರ ವೇಳಾಪಟ್ಟಿಯಂತೆ ಪರಿಷ್ಕರಣೆ ಕಾರ್ಯವನ್ನು ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳಲಾಗುವುದು ಎಂದು ವಿವರಿಸಿರುವುದು ತಿಳಿದು ಬಂದಿದೆ.
ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ರಾಜ್ಯದಲ್ಲಿ ಈಆಗಲೇ ರಾಜ್ಯಮಟ್ಟದಿಂದ ಡಿಇಒ, ಇಆರ್ಒ, ಎಇಆರ್ಒ, ಬಿಎಲ್ಒ ಸೂಪರ್ವೈಸರ್ಗಳು, ಬಿಎಲ್ಒಗಳಿಗೆ ತರಬೇತಿ ನೀಡಲಾಗಿದೆ. ತರಬೇತಿಯಲ್ಲಿ ಅವರ ಪಾತ್ರ ಹಾಗೂ ಜವಾಬ್ದಾರಿ, ಮ್ಯಾಪಿಂಗ್ ಮಾಡುವ ವಿಧಾನಗಳನ್ನು ವಿವರಿಸಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.







