ಸರಕಾರಕ್ಕೆ ಜಮೆಯಾಗದ ಗ್ರಾ.ಪಂ. ಗಳ 834.11 ಕೋಟಿ ರೂ. ತೆರಿಗೆ
ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ವರದಿ

ಬೆಂಗಳೂರು : ಭಿಕ್ಷುಕರ ತೆರಿಗೆ, ಗ್ರಂಥಾಲಯ ತೆರಿಗೆ, ಆರೋಗ್ಯ ತೆರಿಗೆ ಮತ್ತು ಶಿಕ್ಷಣ ತೆರಿಗೆಯ ಲೆಕ್ಕ ಶೀರ್ಷಿಕೆಗಳಲ್ಲಿ ಗ್ರಾಮ ಪಂಚಾಯತ್‌ಗಳು ವಸೂಲು ಮಾಡಿದ್ದ ಒಟ್ಟು ಹಣದ ಪೈಕಿ 834.11 ಕೋಟಿ ರೂ. ಸರಕಾರಕ್ಕೆ ಜಮೆ ಮಾಡಿಲ್ಲ. ಅಲ್ಲದೇ ಶಿಕ್ಷಣ ಉಪ ಕರ ವಿಧಿಸುವುದು ಮತ್ತು ವಸೂಲು ಮಾಡಲು ಅವಕಾಶವೇ ಇರದಿದ್ದರೂ ಗ್ರಾಮ ಪಂಚಾಯತ್‌ಗಳು 168.85 ಕೋಟಿ ರೂ. ವಸೂಲು ಮಾಡಿದ್ದವು. ಈ ಮೊತ್ತದಲ್ಲಿಯೂ 167.27 ಕೋಟಿ ರೂ. ಸರಕಾರಕ್ಕೆ ಜಮೆ ಮಾಡಿಲ್ಲ.
ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಅವಧಿ ಅಂದರೇ 2023-24ನೇ ಸಾಲಿಗೆ (2024ರ ಮಾರ್ಚ್ ಅಂತ್ಯ) ಸಂಬಂಧಿಸಿ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯು ವರದಿ ನೀಡಿದೆ. ಹಲವು ತೆರಿಗೆಗಳನ್ನು ವಸೂಲು ಮಾಡಿರುವ ಪಂಚಾಯತ್‌ಗಳು ಸರಕಾರಕ್ಕೆ ಜಮೆ ಮಾಡದೇ ಇರುವುದು ಪಂಚಾಯತ್‌ಗಳಲ್ಲಿ ಬಹುದೊಡ್ಡ ಅಕ್ರಮ ನಡೆದಿದೆ ಎಂಬುದಕ್ಕೆ ಪುರಾವೆ ಒದಗಿಸಿದಂತಿದೆ.
ರಾಜ್ಯದ ಗ್ರಾಮ ಪಂಚಾಯತ್‌ಗಳಲ್ಲಿ 834.11 ಕೋಟಿ ರೂ. ಸರಕಾರಕ್ಕೆ ಜಮೆಯಾಗಿಲ್ಲ ಎಂದು ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ನೀಡಿರುವ ವರದಿಯು ಮುನ್ನೆಲೆಗೆ ಬಂದಿದ್ದು, ಈ ವರದಿಯ ಪ್ರತಿಯು "the-file.in"ಗೆ ಲಭ್ಯವಾಗಿದೆ.
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕಾರ ಗ್ರಾಮ ಪಂಚಾಯತ್‌ಗಳು ಭೂಮಿ, ಕಟ್ಟಡಗಳ ಮೇಲೆ ವಿಧಿಸುವ ತೆರಿಗೆ ಮೇಲೆ ಆರೋಗ್ಯ ಉಪಕರ ಶೇ. 15, ಗ್ರಂಥಾಲಯ ಉಪ ಕರ ಶೇ. 0.6 ಮತ್ತು ಭಿಕ್ಷುಕರ ಉಪ ಕರ ಶೇ. 0.3ರಷ್ಟು ವಸೂಲು ಮಾಡಿ ಸಂಬಂಧಿಸಿದ ಲೆಕ್ಕ ಶೀರ್ಷಿಕೆಗಳಿಗೆ ವಿಳಂಬ ಮಾಡದೇ ಪಾವತಿಸಬೇಕು.
ಅದೇ ರೀತಿ ಗ್ರಾಮ ಪಂಚಾಯತ್‌ಗಳು ಭೂಮಿ ಮತ್ತು ಕಟ್ಟಡಗಳ ಮೇಲೆ ವಿಧಿಸುವ ತೆರಿಗೆ ಮೇಲೆ ಪ್ರತಿ ಒಂದು ರೂ.ಗೆ 10 ಪೈಸೆವರೆಗೆ ಶಿಕ್ಷಣ ಉಪಕರ ವನ್ನು ವಸೂಲು ಮಾಡಲು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಪ್ರಕಾರ ಅವಕಾಶವಿಲ್ಲ. ಅಲ್ಲದೇ 2019ರ ಮಾರ್ಚ್ 19ರಂದು ಹೊರಡಿಸಿರುವ ಸುತ್ತೋಲೆ ಶಿಕ್ಷಣ ಉಪ ಕರ ವಿಧಿಸುವುದನ್ನು ಸ್ಥಗಿತಗೊಳಿಸಿದೆ.
ಆದರೂ 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿಯೂ ಗ್ರಾಮ ಪಂಚಾಯತ್‌ಗಳು ಶಿಕ್ಷಣ ಕರ ವಸೂಲು ಮಾಡಿವೆ ಎಂದು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.
ಹಾಗೆಯೇ ಗ್ರಾಮ ಪಂಚಾಯತ್‌ಗಳು ವಸೂಲು ಮಾಡಿರುವ ಉಪ ಕರಗಳನ್ನು ಸರಕಾರದ ಸಂಬಂಧಿಸಿದ ಲೆಕ್ಕ ಶೀರ್ಷಿಕೆಗಳಿಗೆ ಜಮೆ ಮಾಡದೇ ಹಿಂದಿನಿಂದಲೂ ಗ್ರಾಮ ಪಂಚಾಯತ್ ನಿಧಿಯಲ್ಲಿಯೇ ಉಳಿಸಿಕೊಂಡಿದೆ. ಅಲ್ಲದೇ ಬ್ಯಾಂಕ್ ಖಾತೆಯಿಂದ ಡ್ರಾ ಮಾಡಿ ಸರಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡದಿರುವ ಹಲವು ಪ್ರಕರಣಗಳು ಲೆಕ್ಕ ಪರಿಶೋಧನೆ ವೇಳೆ ಕಂಡುಬಂದಿದೆ.
ರಾಜ್ಯದ 30 ಜಿಲ್ಲೆಗಳ 5,364 ಪಂಚಾಯತ್‌ಗಳು ವಸೂಲು ಮಾಡಿದ್ದ ತೆರಿಗೆ ಮೊತ್ತ ಒಟ್ಟು 81.61 ಕೋಟಿ ರೂ.ಗಳನ್ನು ಸರಕಾರದ ವಿವಿಧ ಇಲಾಖೆಗಳ ಲೆಕ್ಕ ಶೀರ್ಷಿಕೆಗಳಿಗೆ ಜಮೆ ಮಾಡಿಲ್ಲ. ಬದಲಿಗೆ ಇಷ್ಟೂ ಮೊತ್ತ ಪಂಚಾಯತ್‌ಗಳ ನಿಧಿಯಲ್ಲಿಯೇ ಉಳಿಸಿಕೊಂಡಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.
ಆರೋಗ್ಯ ಉಪ ಕರ ಲೆಕ್ಕಶೀರ್ಷಿಕೆಯ ಆರಂಭಿಕ ಶಿಲ್ಕು ರೂಪದಲ್ಲಿ 375.53 ಕೋಟಿ ರೂ. ಇತ್ತು. ಈ ಪೈಕಿ 62.56 ಕೋಟಿ ರೂ. ವಸೂಲು ಆಗಿತ್ತು. ಒಟ್ಟು 438.09 ಕೋಟಿ ರೂ.ಯಷ್ಟಿತ್ತು. ಈ ಪೈಕಿ ಸರಕಾರಕ್ಕೆ ಜಮೆ ಮಾಡಿದ್ದು ಕೇವಲ 10.92 ಕೋಟಿ ರೂ. ಮಾತ್ರ. ಸರಕಾರಕ್ಕೆ 427.17 ಕೋಟಿ ರೂ. ಜಮೆಯೇ ಆಗಿಲ್ಲ ಎಂದು ಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ.
ಅದೇ ರೀತಿ ಗ್ರಂಥಾಲಯ ಕರ ಆರಂಭಿಕ ಶಿಲ್ಕುವಿನಲ್ಲಿ 157.51 ಕೋಟಿ ರೂ. ಇತ್ತು. 30.43.81 ಕೋಟಿ ರೂ. ವಸೂಲಾಗಿತ್ತು. ಒಟ್ಟಾರೆ 187.94 ಕೋಟಿ ರೂ. ವಸೂಲಾಗಿತ್ತು. ಈ ಪೈಕ ಸರಕಾರಕ್ಕೆ ಜಮೆ ಮಾಡಿದ್ದು ಕೇವಲ 7.09 ಕೋಟಿ ರೂ. ಮಾತ್ರ. ಸರಕಾರಕ್ಕೆ 180.85 ಕೋಟಿ ರೂ. ಜಮೆಯನ್ನೇ ಮಾಡಿಲ್ಲ. ಅದೇ ರೀತಿ ಭಿಕ್ಷುಕರ ಕರ ಲೆಕ್ಕ ಶೀರ್ಷಿಕೆ ಆರಂಭಿಕ ಶಿಲ್ಕುವಿನಲ್ಲಿ 53.39 ಕೋಟಿ ರೂ. ಇತ್ತು. 15.09 ಕೋಟಿ ರೂ. ವಸೂಲಾಗಿತ್ತು. ಒಟ್ಟಾರೆ 68.48 ಕೋಟಿ ರೂ. ಇತ್ತು. ಈ ಪೈಕಿ ಸರಕಾರಕ್ಕೆ ಜಮೆ ಮಾಡಿದ್ದು 9.72 ಕೋಟಿ ರೂ. ಮಾತ್ರ. 58.76 ಕೋಟಿ ರೂ. ಸರಕಾರಕ್ಕೆ ಜಮೆಯನ್ನೇ ಮಾಡಿಲ್ಲ. ಹೀಗೆ ಆರೋಗ್ಯ ಉಪಕರ, ಗ್ರಂಥಾಲಯ ಉಪ ಕರ, ಭಿಕ್ಷುಕರ ಉಪ ಕರ ವಸೂಲು ಮಾಡಿದ್ದ ಪಂಚಾಯತ್‌ಗಳು ಒಟ್ಟು 660.78 ಕೋಟಿ ಸರಕಾರಕ್ಕೆ ಜಮೆ ಮಾಡಿಲ್ಲ. ಅದೇ ರೀತಿ ನಿಯಮಗಳಲ್ಲಿ ಅವಕಾಶವಿರದಿದ್ದರೂ 2023-24ರಲ್ಲೂ ಗ್ರಾಮ ಪಂಚಾಯತ್‌ಗಳು 168.85 ಕೋಟಿ ರೂ. ವಸೂಲು ಮಾಡಿದ್ದವು. ಈ ಪೈಕಿ ಸರಕಾರಕ್ಕೆ ಜಮೆ ಮಾಡಿದ್ದು ಕೇವಲ 1.58 ಕೋಟಿ ರೂ. ಮಾತ್ರ. ನಿಯಮಬಾಹಿರವಾಗಿ ಶಿಕ್ಷಣ ಉಪ ಕರ ವಸೂಲು ಮಾಡಿದ್ದಲ್ಲದೇ 167.27 ಕೋಟಿ ರೂ.ಗಳನ್ನು ಸರಕಾರಕ್ಕೂ ಜಮೆ ಮಾಡಿಲ್ಲ. ಒಟ್ಟಾರೆಯಾಗಿ ಈ ಎಲ್ಲ ಲೆಕ್ಕ ಶೀರ್ಷಿಕೆಗಳಲ್ಲಿನ ವಸೂಲು ಮಾಡಿದ್ದ ಒಟ್ಟು ಹಣದ ಪೈಕಿ 834.11 ಕೋಟಿ ರೂ. ಸರಕಾರಕ್ಕೆ ಜಮೆಯಾಗಿಲ್ಲ.
ಇದಷ್ಟೇ ಅಲ್ಲ ಕಟ್ಟಡ ನಿರ್ಮಾಣ ಪರವಾನಿಗೆ ಪ್ರಕರಣಗಳಲ್ಲಿಯೂ ಕಾರ್ಮಿಕ ಕಲ್ಯಾಣ ಉಪ ಕರವನ್ನು ವಸೂಲು ಮಾಡಿಲ್ಲ. ಇದರಿಂದ ಸರಕಾರಕ್ಕೆ ಮತ್ತು ಪಂಚಾಯತ್‌ಗೆ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವುದು ತಿಳಿದು ಬಂದಿದೆ.
ಸರಕಾರದ ಬೊಕ್ಕಸಕ್ಕೆ ನಷ್ಟ
ರಾಜ್ಯದ 9 ಜಿಲ್ಲೆಗಳಲ್ಲಿನ 83 ಪಂಚಾಯತ್‌ಗಳು ಒಟ್ಟು 35.99 ಲಕ್ಷ ರೂ. ವಸೂಲು ಮಾಡಿಲ್ಲ. ಹೀಗಾಗಿ ಸರಕಾರ ಮತ್ತು ಪಂಚಾಯತ್‌ಗಳ ಬೊಕ್ಕಸಕ್ಕೆ ಇದು ನಷ್ಟವುಂಟಾಗಿದೆ ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ. ಹಾಸನ ಜಿಲ್ಲೆಯ ಹಾಸನ ತಾಲೂಕಿನ ತೇಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಸತಿ ಕಟ್ಟಡಗಳ ನಿರ್ಮಾಣಕ್ಕೆ 12 ಲೈಸೆನ್ಸ್ ನೀಡಿತ್ತು. ಈ ಸಂಬಂಧ 2.50 ಲಕ್ಷ ರೂ. ಕಾರ್ಮಿಕ ಉಪ ಕರ ವಸೂಲು ಮಾಡಬೇಕಿತ್ತು. ಆದರೆ 0.92 ಲಕ್ಷ ರೂ. ವಸೂಲು ಮಾಡಿದೆ. ಬಾಕಿ 1.58 ಲಕ್ಷ ರೂ. ವಸೂಲು ಮಾಡಿರಲಿಲ್ಲ. ಅದೇ ರೀತಿ ತುಮಕೂರು ತಾಲೂಕಿನ ಸ್ವಾಂದೇನಹಳ್ಳಿಯಲ್ಲಿ 2023-24ನೇ ಸಾಲಿನಲ್ಲಿ 10 ಲಕ್ಷ ರೂ. ಮೇಲ್ಪಟ್ಟ ಪ್ರಕರಣಗಳಲ್ಲಿ ಒಟ್ಟು 12 ಕಟ್ಟಡಗಳಿಗೆ ಪರವಾನಿಗೆ ನೀಡಿತ್ತು. ಕಾರ್ಮಿಕ ಉಪ ಕರವೆಂದು 2.54 ಕೋಟಿ ರೂ. ವಸೂಲು ಮಾಡಬೇಕಿತ್ತು. ಆದರೆ ಶೇ. 1ರಷ್ಟು ಅಂದರೇ ಕೇವಲ 2.54 ಲಕ್ಷ ರೂ. ಮಾತ್ರ ವಸೂಲು ಮಾಡಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.






