ಮರಣದಂಡನೆ ಶಿಕ್ಷೆಗೆ ಗುರಿಯಾದ ಜಗತ್ತಿನ 9 ಪ್ರಮುಖ ನಾಯಕರು ಯಾರೆಲ್ಲಾ? ಇಲ್ಲಿದೆ ಮಾಹಿತಿ...

ಝುಲ್ಫಿಕರ್ ಅಲಿ ಭುಟ್ಟೋ / ಬೆನಿಟೊ ಮುಸ್ಸೋಲಿನಿ / ಶೇಖ್ ಹಸೀನಾ (Photo credit: Dawn, britannica.com , PTI)
ಹೊಸದಿಲ್ಲಿ: ಆಧುನಿಕ ಇತಿಹಾಸವನ್ನು ಗಮನಿಸಿದರೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ದಂಗೆಗಳು, ಆಡಳಿತ ಬದಲಾವಣೆಗಳು ಅಥವಾ ಪ್ರಮುಖ ರಾಜಕೀಯ ಕ್ರಾಂತಿಗಳ ನಂತರ ರಾಜಕಾರಣಿಗಳನ್ನು ವಿಚಾರಣೆಗೆ ಒಳಪಡಿಸಿರುವುದು, ಶಿಕ್ಷೆ ವಿಧಿಸಿರುವುದು ಮತ್ತು ಕೆಲವೊಮ್ಮೆ ಮರಣದಂಡನೆಯನ್ನು ವಿಧಿಸಿದರುವುದು ಕಂಡು ಬರುತ್ತದೆ. ಈ ಘಟನೆಗಳು ರಾಜಕೀಯ ಪರಿಸ್ಥಿತಿ ಎಷ್ಟು ಬೇಗ ಬದಲಾಗಬಹುದು ಮತ್ತು ಅಧಿಕಾರಕ್ಕಾಗಿರುವ ಹೋರಾಟಗಳು ಇಡೀ ರಾಷ್ಟ್ರಗಳ ಭವಿಷ್ಯವನ್ನು ಹೇಗೆ ಮರುರೂಪಿಸಬಹುದು ಎಂಬುದನ್ನು ಪ್ರತಿಬಿಂಬಿಸುತ್ತವೆ.
ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ) ಸೋಮವಾರ ಮರಣದಂಡನೆ ಶಿಕ್ಷೆ ವಿಧಿಸಿದೆ. ಈವರೆಗೆ ಯಾವೆಲ್ಲಾ ದೇಶದಲ್ಲಿ ಇಂತಹ ಬೆಳವಣಿಗೆ ನಡೆದಿದೆ. ಮರಣದಂಡನೆ ಶಿಕ್ಷೆಗೆ ಗುರಿಯಾದ ಪ್ರಧಾನಿಗಳು, ಅಧ್ಯಕ್ಷರು ಯಾರ್ಯಾರು? ಇಲ್ಲಿದೆ ಮಾಹಿತಿ....
1.ಸೆಲಾಲ್ ಬಯಾರ್ – ತುರ್ಕಿಯೆ
(Photo credit: alchetron.com)
ಸೆಲಾಲ್ ಬಯಾರ್ ಅವರು 1950 ರಿಂದ 1960 ರವರೆಗೆ ತುರ್ಕಿಯೆ ರಾಷ್ಟ್ರದ ಅಧ್ಯಕ್ಷರಾಗಿದ್ದರು. ಅವರು ಈ ಹಿಂದೆ 1937 ರಿಂದ 1939ರವರೆಗೆ ತುರ್ಕಿಯೆ ಪ್ರಧಾನ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ತುರ್ಕಿಯೆ ರಾಷ್ಟ್ರದಲ್ಲಿ 1960ರ ಮಿಲಿಟರಿ ದಂಗೆಯ ನಂತರ ಸೆಲಾಲ್ ಬಯಾರ್ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು. ಅವರ ಮೇಲೆ ಸಂವಿಧಾನದ ನಿಯಮಗಳ ಉಲ್ಲಂಘನೆ ಆರೋಪ ಹೊರಿಸಲಾಗಿತ್ತು. ನಂತರ ಅವರಿಗೆ ವಿಧಿಸಿದ್ದ ಶಿಕ್ಷೆಯನ್ನು ಕಡಿತಗೊಳಿಸಲಾಯಿತು. ವಯಸ್ಸು ಮತ್ತು ಆರೋಗ್ಯದ ಕಾರಣದಿಂದ 1964ರಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು.
2. ಝುಲ್ಫಿಕರ್ ಅಲಿ ಭುಟ್ಟೋ - ಪಾಕಿಸ್ತಾನ
ಝುಲ್ಫಿಕರ್ ಅಲಿ ಭುಟ್ಟೋ ಅವರು ಅಧ್ಯಕ್ಷ 1971 ರಿಂದ 1973ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು ಮತ್ತು 1973 ರಿಂದ 1977ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿದ್ದರು.
ಜನರಲ್ ಝಿಯಾ ಉಲ್ ಹಕ್ ನೇತೃತ್ವದ ಮಿಲಿಟರಿ ದಂಗೆಯ ಬಳಿಕ ಝುಲ್ಫಿಕರ್ ಅಲಿ ಭುಟ್ಟೋ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ರಾಜಕೀಯ ಪ್ರೇರಿತ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿವಾದಾತ್ಮಕ ವಿಚಾರಣೆಯಲ್ಲಿ ಅವರನ್ನು ದೋಷಿ ಎಂದು ಘೋಷಿಸಲಾಯಿತು. ಎಪ್ರಿಲ್ 4, 1979ರಂದು ಭುಟ್ಟೋ ಅವರನ್ನು ಗಲ್ಲಿಗೇರಿಸಲಾಯಿತು. ಈ ಬೆಳವಣಿಗೆ ಪಾಕಿಸ್ತಾನದಲ್ಲಿ ರಾಜಕೀಯ ವಿಭಜನೆಗೆ ಕಾರಣವಾಗಿತ್ತು.
3. ಅದ್ನಾನ್ ಮೆಂಡೆರೆಸ್ - ತುರ್ಕಿಯೆ
ಅದ್ನಾನ್ ಮೆಂಡೆರೆಸ್ ಅವರು1950 ರಿಂದ 1960ರವರೆಗೆ ತುರ್ಕಿಯೆ ಪ್ರಧಾನಿಯಾಗಿದ್ದರು. 1960ರ ದಂಗೆಯ ಬಳಿಕ ಸಂವಿಧಾನದ ಉಲ್ಲಂಘನೆ ಮತ್ತು ಅಧಿಕಾರದ ದುರುಪಯೋಗದ ಆರೋಪದ ಮೇಲೆ ಮೆಂಡೆರೆಸ್ ಅವರನ್ನು ಪದಚ್ಯುತಿಗೊಳಿಸಲಾಯಿತು.
ಅವರನ್ನು 1961ರ ಸೆಪ್ಟೆಂಬರ್ 17ರಂದು ಗಲ್ಲಿಗೇರಿಸಲಾಯಿತು. ಈ ಘಟನೆಯು ತುರ್ಕಿಯೆ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾಗಿ ಗುರಿತಿಸಲ್ಪಟ್ಟಿದೆ.
4. ಬೆನಿಟೊ ಮುಸ್ಸೋಲಿನಿ – ಇಟಲಿ
ಬೆನಿಟೊ ಮುಸ್ಸೋಲಿನಿ 1922 ರಿಂದ 1943ರವರೆಗೆ ಇಟಲಿಯ ಪ್ರಧಾನ ಮಂತ್ರಿಯಾಗಿದ್ದರು.
ಎರಡನೇ ಮಹಾಯುದ್ಧದ ಬಳಿಕ ಇಟಲಿಯ ಜನರು ಬೆನಿಟೊ ಮುಸ್ಸೋಲಿನಿ ವಿರುದ್ಧ ತಿರುಗಿ ಬಿದ್ದರು. ಅವರನ್ನು ಇಟಲಿಯನ್ ಪಾರ್ಟಿಸನ್ಗಳು ಸೆರೆಹಿಡಿದು 1945ರ ಎಪ್ರಿಲ್ 28ರಂದು ಹತ್ಯೆ ಮಾಡಿದ್ದರು. ಅವರ ಹತ್ಯೆ ಇಟಲಿಯಲ್ಲಿ ಫ್ಯಾಸಿಸಂನ ಪತನಕ್ಕೆ ಕಾರಣವಾಯಿತು.
5. ಇಮ್ರೆ ನಾಗಿ - ಹಂಗೇರಿ
ಇಮ್ರೆ ನಾಗಿ ಅವರು 1953 ರಿಂದ 1955ರವರೆಗೆ ಮತ್ತು ಬಳಿಕ 1956ರಲ್ಲಿ ಹಂಗೇರಿಯ ಪ್ರಧಾನ ಮಂತ್ರಿಯಾಗಿದ್ದರು.
1956ರ ಸೋವಿಯತ್ ನಿಯಂತ್ರಣದ ವಿರುದ್ಧದ ದಂಗೆಯ ಸಮಯದಲ್ಲಿ ದೇಶವನ್ನು ಇಮ್ರೆ ನಾಗಿ ಮುನ್ನಡೆಸಿದ್ದರು. ಬಳಿಕ ಅವರನ್ನು ಬಂಧಿಸಿ ರಹಸ್ಯವಾಗಿ ವಿಚಾರಣೆಗೆ ಒಳಪಡಿಸಲಾಯಿತು ಮತ್ತು 1958ರ ಜೂನ್ 16ರಂದು ಅವರನ್ನು ಗಲ್ಲಿಗೇರಿಸಲಾಯಿತು.
6. ಸದ್ದಾಂ ಹುಸೇನ್ - ಇರಾಕ್
(Photo credit: AP)
ಸದ್ದಾಂ ಹುಸೇನ್ ಅವರು 1979 ರಿಂದ 2003ರವರೆಗೆ ಇರಾಕ್ನ ಅಧ್ಯಕ್ಷರಾಗಿದ್ದರು. 2003ರಲ್ಲಿ ಅಮೆರಿಕ ಪಡೆಗಳು ಸದ್ದಾಂ ಹುಸೇನ್ ಅವರನ್ನು ಸೆರೆಹಿಡಿದಿತ್ತು. ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಇರಾಕ್ ನ್ಯಾಯಮಂಡಳಿಯು ಅವರನ್ನು ವಿಚಾರಣೆಗೆ ಒಳಪಡಿಸಿತು. ಅವರನ್ನು ತಪ್ಪಿತಸ್ಥರೆಂದು ಘೋಷಿಸಿ 2006ರ ಡಿಸೆಂಬರ್ 30ರಂದು ಗಲ್ಲಿಗೇರಿಸಲಾಯಿತು.
7. ಹಿಡೆಕಿ ಟೋಜೊ – ಜಪಾನ್
ಹಿಡೆಕಿ ಟೋಜೊ 1941 ರಿಂದ 1944ರವೆರೆಗೆ ಜಪಾನ್ ನ ಪ್ರಧಾನಿಯಾಗಿದ್ದರು. ಎರಡನೇ ಮಹಾಯುದ್ಧದ ಅವಧಿಯಲ್ಲಿ ಟೋಜೊ ಜಪಾನ್ ಅನ್ನು ಮುನ್ನಡೆಸಿದ್ದರು. ಜಪಾನ್ ಸೋಲಿನ ನಂತರ ಅಂತರರಾಷ್ಟ್ರೀಯ ಮಿಲಿಟರಿ ನ್ಯಾಯಮಂಡಳಿಯು ಅವರ ಮೇಲೆ ಯುದ್ಧ ಅಪರಾಧಗಳ ಆರೋಪ ಹೊರಿಸಿತು. 1948ರ ಡಿಸೆಂಬರ್ 23ರಂದು ಅವರನ್ನು ಗಲ್ಲಿಗೇರಿಸಲಾಯಿತು.
8. ಪರ್ವೇಝ್ ಮುಷರಫ್ - ಪಾಕಿಸ್ತಾನ
(Photo credit: AP)
ಪರ್ವೇಝ್ ಮುಷರಫ್ ಅವರು 2001ರಿಂದ 2008ರವೆರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು.
2019ರಲ್ಲಿ ಅವರಿಗೆ ದೇಶದ್ರೋಹ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆ ಘೋಷಿಸಲಾಯಿತು. ಆ ಬಳಿಕ ಉನ್ನತ ನ್ಯಾಯಾಲಯ ಶಿಕ್ಷೆಯನ್ನು ಕಡಿತಗೊಳಿಸಿತು. ಮುಷರಫ್ 2023ರಲ್ಲಿ ನಿಧನರಾದರು.
9. ಶೇಖ್ ಹಸೀನಾ - ಬಾಂಗ್ಲಾದೇಶ
ಶೇಖ್ ಹಸೀನಾ ಅವರು 1996 ರಿಂದ 2001ರವೆರೆಗೆ ಮತ್ತು 2009 ರಿಂದ 2024ರವರೆಗೆ ಬಾಂಗ್ಲಾದೇಶದ ಪ್ರಧಾನಿಯಾಗಿದ್ದರು.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ದಂಗೆ ವೇಳೆ ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಎಸಗಿದ ಆರೋಪದಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ) ಸೋಮವಾರ ಮರಣದಂಡನೆ ಶಿಕ್ಷೆ ವಿಧಿಸಿದೆ. ದೇಶದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಈ ತೀರ್ಪು ಬಾಂಗ್ಲಾದೇಶದ ಇತ್ತೀಚಿನ ಇತಿಹಾಸದಲ್ಲೇ ಪ್ರಮುಖ ಬೆಳವಣಿಗೆಯಾಗಿದೆ.







