9/11 ದಾಳಿ: ಜಗತ್ತಿನ ದಿಕ್ಕನ್ನೇ ಬದಲಿಸಿದ ಆ ಕರಾಳ ದಿನ
► ವಿಮಾನ ಟೇಕ್ ಆಫ್ ಮಾಡುದಷ್ಟೇ ಕಲಿತಿದ್ದ ದಾಳಿಕೋರರು! ► ಕೇವಲ ಸಣ್ಣ ಬ್ಲೇಡ್‌ಗಳಿಂದ 4 ಬೃಹತ್ ವಿಮಾನ ಅಪಹರಿಸಿದ್ದು ಹೇಗೆ? ► 1993ರ ಬಾಂಬ್‌ನಿಂದ 2001ರ ದಾಳಿಯವರೆಗೆ: ಅಮೆರಿಕ ಗುಪ್ತಚರ ಪಡೆ ಎಡವಿದ್ದೆಲ್ಲಿ?

ನ್ಯೂಯಾರ್ಕ್ ನಲ್ಲಿ ಅಂದು ಬೆಳಗ್ಗೆಯೂ ಎಂದಿನಂತೆಯೇ ಆರಂಭವಾಗಿತ್ತು. ಜಗತ್ತಿನ ವಾಣಿಜ್ಯ ಮತ್ತು ಆರ್ಥಿಕ ರಾಜಧಾನಿ ಎಂದೇ ಗುರುತಿಸಿಕೊಂಡಿರುವ ನಗರದಲ್ಲಿ ಜನಜೀವನ ಸಹಜವಾಗಿತ್ತು. ಆಕಾಶ ತಿಳಿನೀಲವಾಗಿತ್ತು. ಹವಾಮಾನವೂ ಯಾವುದೇ ಅಡೆತಡೆಯಿಲ್ಲದ ಸ್ಪಷ್ಟ ದಿನದ ಮುನ್ಸೂಚನೆ ನೀಡಿತ್ತು.
ಮ್ಯಾನ್‌ಹ್ಯಾಟನ್ ನ ವರ್ಲ್ಡ್ ಟ್ರೇಡ್ ಸೆಂಟರ್ ನ ಅವಳಿ ಗೋಪುರಗಳ ಒಳಗೆ ಸಾವಿರಾರು ಉದ್ಯೋಗಿಗಳು ತಮ್ಮ ಕೆಲಸದಲ್ಲಿ ತೊಡಗಿದ್ದರು. ಕಚೇರಿಗಳಲ್ಲಿ ಕಾಫಿ ಯಂತ್ರಗಳು ಚಾಲನೆಯಲ್ಲಿದ್ದವು. ಕಂಪ್ಯೂಟರ್ ಪರದೆಗಳು ಬೆಳಗುತ್ತಿದ್ದವು. ದೂರವಾಣಿಗಳು ಮೊಳಗುತ್ತಿದ್ದವು.
ಆದರೆ ಕೆಲವೇ ನಿಮಿಷಗಳಲ್ಲಿ ಇಡೀ ಜಗತ್ತಿನ ರಾಜಕೀಯ ಮತ್ತು ಭದ್ರತಾ ವ್ಯವಸ್ಥೆಯನ್ನೇ ಬದಲಿಸುವ ಘಟನೆ ನಡೆಯಿತು.
► 8.46: ಮೊದಲ ವಿಮಾನ
ಬೆಳಿಗ್ಗೆ 8 ಗಂಟೆ 46 ನಿಮಿಷಕ್ಕೆ ಅಮೆರಿಕನ್ ಏರ್‌ಲೈನ್ಸ್‌ನ ಫ್ಲೈಟ್ 11 ವರ್ಲ್ಡ್ ಟ್ರೇಡ್ ಸೆಂಟರ್‌ನ ಉತ್ತರ ಗೋಪುರಕ್ಕೆ ಅಪ್ಪಳಿಸಿತು.
ಕಟ್ಟಡದ 93ರಿಂದ 99ನೇ ಮಹಡಿಗಳ ನಡುವಿನ ಭಾಗಕ್ಕೆ ವಿಮಾನ ನುಗ್ಗುತ್ತಿದ್ದಂತೆ ಭಾರಿ ಸದ್ದು ಕೇಳಿಸಿತು. ಕಟ್ಟಡದ ಭಾಗಗಳು ಛಿದ್ರಗೊಂಡವು. ಬೆಂಕಿಯ ಜ್ವಾಲೆಗಳು ಹೊರಚಿಮ್ಮಿದವು. ಕಪ್ಪು ಹೊಗೆ ಆಕಾಶವನ್ನು ಆವರಿಸಿತು.
ರಸ್ತೆಯಲ್ಲಿದ್ದವರಿಗೆ ಏನಾಗಿದೆ ಎಂಬುದು ಆರಂಭದಲ್ಲಿ ತಿಳಿಯಲಿಲ್ಲ. ಸ್ಥಳೀಯ ಸುದ್ದಿ ವಾಹಿನಿಗಳು ನೇರ ಪ್ರಸಾರ ಆರಂಭಿಸಿದಾಗ, ವಿಮಾನವೊಂದು ದಿಕ್ಕುತಪ್ಪಿ ಕಟ್ಟಡಕ್ಕೆ ಅಪ್ಪಳಿಸಿರಬಹುದು ಎಂದು ಮೊದಲಿಗೆ ಊಹಿಸಲಾಯಿತು.
ಕಟ್ಟಡದ ಮೇಲಿನ ಮಹಡಿಗಳಿಂದ ಹಲವರು ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡರು. ನ್ಯೂಯಾರ್ಕ್ ಅಗ್ನಿಶಾಮಕ ದಳದ ವಾಹನಗಳು ಸೈರನ್ ಮೊಳಗಿಸುತ್ತಾ ಸ್ಥಳಕ್ಕೆ ಧಾವಿಸಿದವು.
ಆದರೆ ದಾಳಿಯ ಭೀಕರತೆ ಇನ್ನೂ ಅನಾವರಣಗೊಳ್ಳಬೇಕಿತ್ತು.
► 9.03: ಎರಡನೇ ವಿಮಾನ
ಬೆಳಿಗ್ಗೆ 9 ಗಂಟೆ 3 ನಿಮಿಷಕ್ಕೆ ಯುನೈಟೆಡ್ ಏರ್‌ಲೈನ್ಸ್‌ನ ಫ್ಲೈಟ್ 175 ವರ್ಲ್ಡ್ ಟ್ರೇಡ್ ಸೆಂಟರ್‌ನ ದಕ್ಷಿಣ ಗೋಪುರಕ್ಕೆ ಅಪ್ಪಳಿಸಿತು.
ಈ ಬಾರಿ ಇಡೀ ಜಗತ್ತು ಟಿವಿ ಪರದೆಗಳಲ್ಲಿ ನೇರ ದೃಶ್ಯ ನೋಡುತ್ತಿತ್ತು.
ಇದು ಅಪಘಾತವಲ್ಲ ಎಂಬುದು ಸ್ಪಷ್ಟವಾಯಿತು. ಅಮೆರಿಕದ ಮೇಲೆ ವ್ಯವಸ್ಥಿತವಾಗಿ ನಡೆಸಿದ ಪೂರ್ವಯೋಜಿತ ಭಯೋತ್ಪಾದಕ ದಾಳಿ ಎಂಬುದು ಜಗತ್ತಿಗೆ ಮನದಟ್ಟಾಯಿತು.
ಅವಳಿ ಗೋಪುರಗಳು ಬೆಂಕಿಯಲ್ಲಿ ಉರಿಯತೊಡಗಿದವು. ಅವುಗಳೊಳಗೆ ಸಿಲುಕಿದ್ದ ಸಾವಿರಾರು ಜನರಿಗೆ ಹೊರಬರುವ ದಾರಿ ಕಾಣದಂತಾಯಿತು.
► 9.37: ಪೆಂಟಗನ್‌ಗೂ ದಾಳಿ
ದಾಳಿ ನ್ಯೂಯಾರ್ಕ್‌ಗೆ ಮಾತ್ರ ಸೀಮಿತವಾಗಿರಲಿಲ್ಲ.
ಬೆಳಿಗ್ಗೆ 9 ಗಂಟೆ 37 ನಿಮಿಷಕ್ಕೆ ಅಮೆರಿಕನ್ ಏರ್‌ಲೈನ್ಸ್‌ನ ಫ್ಲೈಟ್ 77 ವಾಷಿಂಗ್ಟನ್ ಡಿಸಿಯಲ್ಲಿರುವ ಅಮೆರಿಕದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗನ್‌ಗೆ ಅಪ್ಪಳಿಸಿತು.
ದೇಶದ ರಕ್ಷಣಾ ಕೇಂದ್ರವೇ ದಾಳಿಗೆ ಗುರಿಯಾದ ಹಿನ್ನೆಲೆಯಲ್ಲಿ ಅಮೆರಿಕದ ಆಡಳಿತದಲ್ಲಿ ತೀವ್ರ ಆತಂಕ ಉಂಟಾಯಿತು. ಶ್ವೇತಭವನ, ಕ್ಯಾಪಿಟಲ್ ಹಿಲ್ ಸೇರಿದಂತೆ ಪ್ರಮುಖ ಸರ್ಕಾರಿ ಕಟ್ಟಡಗಳನ್ನು ತೆರವುಗೊಳಿಸಲಾಯಿತು.
ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ಅಂದು ಫ್ಲೋರಿಡಾದ ಶಾಲೆಯೊಂದರಲ್ಲಿ ಮಕ್ಕಳೊಂದಿಗೆ ಸಂವಾದದಲ್ಲಿದ್ದರು. ಅಲ್ಲಿದ್ದಾಗಲೇ ನ್ಯೂಯಾರ್ಕ್‌ನಲ್ಲಿ ವಿಮಾನವೊಂದು ಕಟ್ಟಡಕ್ಕೆ ಅಪ್ಪಳಿಸಿರುವ ಸುದ್ದಿ ಅವರಿಗೆ ತಲುಪಿತ್ತು.
ಎರಡನೇ ವಿಮಾನ ದಕ್ಷಿಣ ಗೋಪುರಕ್ಕೆ ಅಪ್ಪಳಿಸಿದ ಬಳಿಕ ದಾಳಿಯ ಸ್ವರೂಪ ಸ್ಪಷ್ಟವಾಯಿತು.
ಅಮೆರಿಕದ ವಾಯುಪ್ರದೇಶವನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ಬಹುತೇಕ ಸಂಪೂರ್ಣವಾಗಿ ಮುಚ್ಚಲಾಯಿತು.
► 10.03: ಫ್ಲೈಟ್ 93
ನಾಲ್ಕನೇ ವಿಮಾನವಾದ ಯುನೈಟೆಡ್ ಏರ್‌ಲೈನ್ಸ್‌ನ ಫ್ಲೈಟ್ 93 ಪೆನ್ಸಿಲ್ವೇನಿಯಾದ ಶ್ಯಾಂಕ್ಸ್‌ವಿಲ್ಲೆ ಸಮೀಪದ ಬಯಲು ಪ್ರದೇಶದಲ್ಲಿ ಬೆಳಿಗ್ಗೆ 10 ಗಂಟೆ 3 ನಿಮಿಷಕ್ಕೆ ಪತನಗೊಂಡಿತು.
ಈ ವಿಮಾನದ ಗುರಿ ವಾಷಿಂಗ್ಟನ್ ನ ಕ್ಯಾಪಿಟಲ್ ಕಟ್ಟಡ ಅಥವಾ ಶ್ವೇತಭವನವಾಗಿರಬಹುದು ಎಂದು ತನಿಖೆಗಳು ಸೂಚಿಸಿವೆ.
ನೆವಾರ್ಕ್ ವಿಮಾನ ನಿಲ್ದಾಣದಲ್ಲಿ ರನ್‌ವೇ ದಟ್ಟಣೆಯಿಂದಾಗಿ ವಿಮಾನದ ಟೇಕ್‌ಆಫ್ ಸುಮಾರು 40 ನಿಮಿಷ ತಡವಾಗಿತ್ತು. ಈ ವಿಳಂಬವೇ ಪ್ರಯಾಣಿಕರಿಗೆ ಹೊರಜಗತ್ತಿನ ಬೆಳವಣಿಗೆಗಳ ಮಾಹಿತಿ ತಿಳಿಯಲು ಅವಕಾಶ ಮಾಡಿಕೊಟ್ಟಿತು.
ವಿಮಾನ ಅಪಹರಣಗೊಂಡ ಬಳಿಕ ಪ್ರಯಾಣಿಕರು ಏರ್‌ಫೋನ್ ಮತ್ತು ಮೊಬೈಲ್ ಮೂಲಕ ಕುಟುಂಬದವರೊಂದಿಗೆ ಮಾತನಾಡಿದರು. ನ್ಯೂಯಾರ್ಕ್‌ನ ಅವಳಿ ಗೋಪುರಗಳು ಮತ್ತು ಪೆಂಟಗನ್‌ಗೆ ವಿಮಾನಗಳು ಅಪ್ಪಳಿಸಿರುವ ಸುದ್ದಿ ಅವರಿಗೆ ತಿಳಿಯಿತು.
ತಮ್ಮ ವಿಮಾನವನ್ನೂ ಆಯುಧವಾಗಿ ಬಳಸಲಾಗುತ್ತಿದೆ ಎಂಬುದು ಅವರಿಗೆ ಅರಿವಾಯಿತು.
ಟಾಡ್ ಬೀಮರ್ ಸೇರಿದಂತೆ ಹಲವು ಪ್ರಯಾಣಿಕರು ಅಪಹರಣಕಾರರನ್ನು ಎದುರಿಸಲು ನಿರ್ಧರಿಸಿದರು. ಪ್ರಯಾಣಿಕರು ಕಾಕ್‌ಪಿಟ್‌ಗೆ ನುಗ್ಗಲು ಯತ್ನಿಸಿದರು.
ಪ್ರತಿರೋಧ ತೀವ್ರಗೊಂಡ ಹಿನ್ನೆಲೆಯಲ್ಲಿ ಅಪಹರಣಕಾರರು ತಮ್ಮ ಗುರಿ ತಲುಪಲು ಸಾಧ್ಯವಿಲ್ಲ ಎಂದು ಅರಿತರು. ಅಂತಿಮವಾಗಿ ವಿಮಾನ ಪೆನ್ಸಿಲ್ವೇನಿಯಾದ ಬಯಲು ಪ್ರದೇಶಕ್ಕೆ ಪತನಗೊಂಡಿತು.
ಪ್ರಯಾಣಿಕರ ಈ ಸಾಹಸದಿಂದ ವಾಷಿಂಗ್ಟನ್‌ನಲ್ಲಿದ್ದ ಮತ್ತೊಂದು ಸಂಭಾವ್ಯ ಗುರಿ ಉಳಿದಿರಬಹುದು ಎಂದು ತನಿಖೆಗಳು ಸೂಚಿಸಿವೆ.
ಕೆಲವೇ ಗಂಟೆಗಳಲ್ಲಿ ನ್ಯೂಯಾರ್ಕ್‌ನ ಅವಳಿ ಗೋಪುರಗಳು ಧರೆಗುರುಳಿದವು. ಪೆಂಟಗನ್ ಮೇಲೂ ದಾಳಿ ನಡೆಯಿತು. ಸುಮಾರು 3,000 ಮಂದಿ ಸಾವಿಗೀಡಾದರು.
ಆಧುನಿಕ ಇತಿಹಾಸವನ್ನು ‘ಸೆಪ್ಟೆಂಬರ್ 11ರ ಮುಂಚೆ’ ಮತ್ತು ‘ಸೆಪ್ಟೆಂಬರ್ 11ರ ಬಳಿಕ’ ಎಂದು ವಿಭಜಿಸುವಷ್ಟು ಆಳವಾದ ಪರಿಣಾಮ ಬೀರಿದ ದಿನವದು.
► ದಾಳಿಯ ಮೂಲ ಎಲ್ಲಿದ್ದವು?
9/11ರ ದಾಳಿ 2001ರ ಸೆಪ್ಟೆಂಬರ್ 11ರಂದು ಇದ್ದಕ್ಕಿದ್ದಂತೆ ರೂಪುಗೊಂಡದ್ದಲ್ಲ. ಅದರ ಹಿನ್ನೆಲೆ ಹಲವು ವರ್ಷಗಳ ಹಿಂದಿನ ಭಯೋತ್ಪಾದಕ ಸಂಚುಗಳಲ್ಲಿ ಇತ್ತು.
ಈ ಕಥೆಯ ಪ್ರಮುಖ ಅಧ್ಯಾಯ ಆರಂಭವಾಗಿದ್ದು 1993ರ ಫೆಬ್ರುವರಿ 26ರಂದು.
ಅಂದು ವರ್ಲ್ಡ್ ಟ್ರೇಡ್ ಸೆಂಟರ್‌ನ ಉತ್ತರ ಗೋಪುರದ ಭೂಗತ ಪಾರ್ಕಿಂಗ್ ಪ್ರದೇಶದಲ್ಲಿ ಬಾಂಬ್ ತುಂಬಿದ್ದ ವ್ಯಾನ್ ಸ್ಫೋಟಿಸಿತು. ರಮ್ಜಿ ಯೂಸೆಫ್ ಈ ದಾಳಿಯ ಪ್ರಮುಖ ಸಂಚುಕೋರನಾಗಿದ್ದ.
ಉತ್ತರ ಗೋಪುರದ ಅಡಿಪಾಯವನ್ನು ದುರ್ಬಲಗೊಳಿಸಿ, ಅದು ದಕ್ಷಿಣ ಗೋಪುರದ ಮೇಲೆ ಬೀಳುವಂತೆ ಮಾಡಿ ಎರಡೂ ಕಟ್ಟಡಗಳನ್ನು ಉರುಳಿಸುವುದು ಸಂಚುಕೋರರ ಉದ್ದೇಶವಾಗಿತ್ತು.
ಆದರೆ ಕಟ್ಟಡದ ಬಲಿಷ್ಠ ರಚನೆ ಆ ಆಘಾತವನ್ನು ತಡೆದುಕೊಂಡಿತು. ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟರು. ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡರು.
ರಮ್ಜಿ ಯೂಸೆಫ್ ಅಮೆರಿಕದಿಂದ ಪಲಾಯನ ಮಾಡಿ ಫಿಲಿಪ್ಪೀನ್ಸ್‌ನ ಮನಿಲಾಗೆ ತೆರಳಿದ. ಅಲ್ಲಿ ‘ಆಪರೇಷನ್ ಬೊಜಿಂಕಾ’ ಎಂಬ ಮತ್ತೊಂದು ಭೀಕರ ಸಂಚಿಗೆ ಯೋಜನೆ ರೂಪಿಸಿದ.
ಏಷ್ಯಾದಿಂದ ಅಮೆರಿಕಕ್ಕೆ ತೆರಳುವ ಹಲವು ವಾಣಿಜ್ಯ ವಿಮಾನಗಳಲ್ಲಿ ಬಾಂಬ್ ಇಟ್ಟು ಅವುಗಳನ್ನು ಮಧ್ಯಾಕಾಶದಲ್ಲೇ ಸ್ಫೋಟಿಸುವುದು ಮತ್ತು ಮತ್ತೊಂದು ವಿಮಾನವನ್ನು ಸಿಐಎ ಪ್ರಧಾನ ಕಚೇರಿಗೆ ಅಪ್ಪಳಿಸುವುದು ಈ ಯೋಜನೆಯ ಭಾಗವಾಗಿತ್ತು.
ಮನಿಲಾದ ಅಪಾರ್ಟ್‌ಮೆಂಟ್‌ನಲ್ಲಿ ಬಾಂಬ್ ತಯಾರಿಸುವಾಗ ಸಂಭವಿಸಿದ ಬೆಂಕಿ ಅವಘಡದಿಂದ ಯೋಜನೆಯ ಸುಳಿವು ಪೊಲೀಸರಿಗೆ ಸಿಕ್ಕಿತು. ರಮ್ಜಿ ಯೂಸೆಫ್ ತಪ್ಪಿಸಿಕೊಂಡರೂ ಬಳಿಕ ಪಾಕಿಸ್ತಾನದಲ್ಲಿ ಬಂಧಿಸಲ್ಪಟ್ಟ.
ಆದರೆ ವಿಮಾನವನ್ನೇ ಆಯುಧವಾಗಿ ಬಳಸುವ ಕಲ್ಪನೆ ಅಲ್ಲಿಗೆ ನಿಲ್ಲಲಿಲ್ಲ.
ರಮ್ಜಿ ಯೂಸೆಫ್‌ನ ಸೋದರಮಾವ ಖಾಲಿದ್ ಶೇಖ್ ಮೊಹಮ್ಮದ್ (ಕೆಎಸ್‌ಎಂ) ಈ ಕಲ್ಪನೆಯನ್ನು ಮುಂದುವರಿಸಿದ. 9/11 ದಾಳಿಯ ಪ್ರಮುಖ ಯೋಜನಾಕಾರನಾಗಿ ಆತನನ್ನು ಗುರುತಿಸಲಾಗಿದೆ.
ಅಮೆರಿಕದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದ ಕೆಎಸ್‌ಎಂ, ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾದೆನ್‌ನನ್ನು ಅಫ್ಘಾನಿಸ್ತಾನದಲ್ಲಿ ಭೇಟಿಯಾದ. ವಿಮಾನಗಳನ್ನು ಅಮೆರಿಕದ ಪ್ರಮುಖ ಕಟ್ಟಡಗಳಿಗೆ ಅಪ್ಪಳಿಸುವ ಆಯುಧಗಳಾಗಿ ಬಳಸುವ ಯೋಜನೆಯನ್ನು ಬಿನ್ ಲಾದೆನ್ ಮುಂದೆ ಮಂಡಿಸಿದ.
ಬಿನ್ ಲಾದೆನ್ ಯೋಜನೆಗೆ ಆರ್ಥಿಕ ಮತ್ತು ಸಂಘಟನಾ ಬೆಂಬಲ ನೀಡಿದ.
ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದ ಮೊಹಮ್ಮದ್ ಅತ್ತಾ ಸೇರಿದಂತೆ ಹಲವು ಯುವಕರನ್ನು ಕಾರ್ಯಾಚರಣೆಗೆ ಆಯ್ಕೆ ಮಾಡಲಾಯಿತು. ಅವರು ಅಮೆರಿಕದ ಫ್ಲೋರಿಡಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಫ್ಲೈಟ್ ಶಾಲೆಗಳಲ್ಲಿ ವಿಮಾನ ಹಾರಿಸುವ ತರಬೇತಿ ಪಡೆದರು.
ವಿಮಾನ ಹಾರಿಸುವುದಕ್ಕೆ ಒತ್ತು ನೀಡಲಾಗಿತ್ತು; ಲ್ಯಾಂಡಿಂಗ್ ತರಬೇತಿಗೆ ಅಷ್ಟೊಂದು ಗಮನ ನೀಡಿರಲಿಲ್ಲ.
ಅಮೆರಿಕದ ತನಿಖಾ ಮತ್ತು ಗುಪ್ತಚರ ಸಂಸ್ಥೆಗಳು ಹಲವು ಅನುಮಾನಾಸ್ಪದ ಬೆಳವಣಿಗೆಗಳನ್ನು ಗಮನಿಸಿದ್ದರೂ, ಅವುಗಳನ್ನು ಒಟ್ಟಾಗಿ ವಿಶ್ಲೇಷಿಸಿ ದಾಳಿಯನ್ನು ತಡೆಯುವಲ್ಲಿ ವಿಫಲವಾದವು.
► ನಾಲ್ಕು ತಂಡಗಳು, 19 ಅಪಹರಣಕಾರರು
ಒಟ್ಟು 19 ಮಂದಿ ಅಪಹರಣಕಾರರು ನಾಲ್ಕು ತಂಡಗಳಾಗಿ ಹಂಚಿಕೊಂಡಿದ್ದರು. ಮೂರು ತಂಡಗಳಲ್ಲಿ ತಲಾ ಐದು ಮಂದಿ ಇದ್ದರೆ, ನಾಲ್ಕನೇ ತಂಡದಲ್ಲಿ ನಾಲ್ಕು ಮಂದಿ ಇದ್ದರು.
ಪ್ರತಿ ತಂಡದಲ್ಲೂ ವಿಮಾನ ಹಾರಿಸುವ ತರಬೇತಿ ಪಡೆದ ಒಬ್ಬ ಪ್ರಮುಖ ಸದಸ್ಯನಿದ್ದ. ಉಳಿದವರು ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿಯನ್ನು ನಿಯಂತ್ರಿಸುವ ಜವಾಬ್ದಾರಿ ಹೊಂದಿದ್ದರು.
ಬೋಸ್ಟನ್, ನೆವಾರ್ಕ್ ಮತ್ತು ವಾಷಿಂಗ್ಟನ್‌ನಿಂದ ಅಮೆರಿಕದ ಪಶ್ಚಿಮ ಕರಾವಳಿಯ ಲಾಸ್ ಏಂಜಲೀಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊ ಕಡೆಗೆ ತೆರಳುತ್ತಿದ್ದ ನಾಲ್ಕು ದೂರ ಪ್ರಯಾಣದ ವಿಮಾನಗಳನ್ನು ಆಯ್ಕೆ ಮಾಡಲಾಗಿತ್ತು.
ಈ ವಿಮಾನಗಳಲ್ಲಿ ದೀರ್ಘ ಪ್ರಯಾಣಕ್ಕೆ ಸಾಕಾಗುವಷ್ಟು ಅಪಾರ ಪ್ರಮಾಣದ ಜೆಟ್ ಇಂಧನವಿತ್ತು. ಅಪಹರಣಕಾರರ ಲೆಕ್ಕಾಚಾರದಲ್ಲಿ ವಿಮಾನಗಳು ಕೇವಲ ಅಪಹರಣದ ಸಾಧನಗಳಾಗಿರಲಿಲ್ಲ; ಅವುಗಳೇ ಬೃಹತ್ ಆಯುಧಗಳಾಗಿದ್ದವು.
ಅವರು ವಿಮಾನದ ಮುಂಭಾಗದ ಆಸನಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಇದರಿಂದ ಕಾಕ್‌ಪಿಟ್‌ಗೆ ಸಮೀಪದಲ್ಲಿರುವ ಅನುಕೂಲ ದೊರೆಯಿತು.
ಆ ಕಾಲದ ವಿಮಾನ ನಿಲ್ದಾಣ ಭದ್ರತೆಯಲ್ಲಿದ್ದ ಲೋಪಗಳನ್ನೂ ಅವರು ಬಳಸಿಕೊಂಡರು. ಸಣ್ಣ ಚಾಕುಗಳು, ಬ್ಲೇಡ್‌ಗಳು ಮತ್ತು ಇತರ ವಸ್ತುಗಳನ್ನು ಅಡಗಿಸಿಕೊಂಡು ವಿಮಾನಗಳನ್ನು ಹತ್ತಿದರು. ಆಗಿನ ನಿಯಮಗಳು ಇಂದಿನಷ್ಟು ಕಟ್ಟುನಿಟ್ಟಾಗಿರಲಿಲ್ಲ.
ವಿಮಾನಗಳು ಟೇಕ್‌ಆಫ್ ಆದ ಬಳಿಕ ಕೆಲವೇ ನಿಮಿಷಗಳಲ್ಲಿ ಕಾರ್ಯಾಚರಣೆ ಆರಂಭವಾಯಿತು.
ಆಗಿನ ವಿಮಾನಯಾನ ಭದ್ರತಾ ಸಂಸ್ಕೃತಿಯಲ್ಲಿ ಅಪಹರಣಕಾರರೊಂದಿಗೆ ನೇರ ಸಂಘರ್ಷಕ್ಕಿಳಿಯದೆ, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನವನ್ನು ಇಳಿಸಲು ಪ್ರಯತ್ನಿಸುವ ಕ್ರಮವಿತ್ತು. ಅಪಹರಣಕಾರರು ಈ ಮನಸ್ಥಿತಿಯನ್ನೇ ದುರ್ಬಳಕೆ ಮಾಡಿಕೊಂಡರು.
ಕಾಕ್‌ಪಿಟ್‌ನ ನಿಯಂತ್ರಣ ಪಡೆದ ಬಳಿಕ ಅವರು ವಿಮಾನದ ಟ್ರಾನ್ಸ್‌ಪಾಂಡರ್‌ಗಳನ್ನು ನಿಷ್ಕ್ರಿಯಗೊಳಿಸಿದರು. ಇದರಿಂದ ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯಲ್ಲಿ ವಿಮಾನಗಳ ಗುರುತು ಮತ್ತು ಮಾಹಿತಿಯನ್ನು ಪತ್ತೆಹಚ್ಚುವುದು ಕಷ್ಟವಾಯಿತು.
ಫ್ಲೈಟ್ 11ರಲ್ಲಿದ್ದ ಮೊಹಮ್ಮದ್ ಅತ್ತಾ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡುವ ಬದಲು ತಪ್ಪಾಗಿ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಸಂದೇಶ ರವಾನಿಸಿದ್ದ. ಇದರಿಂದ ನೆಲದ ಮೇಲಿನ ನಿಯಂತ್ರಕರಿಗೆ ವಿಮಾನ ಅಪಹರಣಗೊಂಡಿರುವ ಸುಳಿವು ಸಿಕ್ಕಿತು.
► 9/11 ಬಳಿಕ ಬದಲಾದ ಜಗತ್ತು
9/11ರ ದಾಳಿ ವಿಮಾನ ನಿಲ್ದಾಣಗಳ ಭದ್ರತೆಯನ್ನು ಮಾತ್ರ ಬದಲಿಸಲಿಲ್ಲ. ಜಾಗತಿಕ ಭದ್ರತಾ ವ್ಯವಸ್ಥೆ, ಗುಪ್ತಚರ ಕಾರ್ಯವಿಧಾನ, ನಾಗರಿಕ ಸ್ವಾತಂತ್ರ್ಯ ಮತ್ತು ವಿದೇಶಾಂಗ ನೀತಿಯ ಮೇಲೂ ಅದರ ಪರಿಣಾಮ ಬೀರಿತು.
► ವಿಮಾನ ನಿಲ್ದಾಣಗಳಲ್ಲಿ ಕಠಿಣ ತಪಾಸಣೆ
9/11ಕ್ಕೂ ಮುನ್ನ ವಿಮಾನ ನಿಲ್ದಾಣಗಳ ಭದ್ರತೆ ಇಂದಿನಷ್ಟು ಬಿಗಿಯಾಗಿರಲಿಲ್ಲ. ಕೆಲವು ಸಂದರ್ಭಗಳಲ್ಲಿ ಪ್ರಯಾಣಿಕರ ಬಂಧುಗಳು ಬೋರ್ಡಿಂಗ್ ಗೇಟ್‌ವರೆಗೆ ತೆರಳಿ ಬೀಳ್ಕೊಡಬಹುದಾಗಿತ್ತು. ಸಣ್ಣ ಚಾಕುಗಳು ಮತ್ತು ಬ್ಲೇಡ್‌ಗಳಿಗೆ ಸಂಬಂಧಿಸಿದ ನಿಯಮಗಳೂ ಇಂದಿನಷ್ಟು ಕಟ್ಟುನಿಟ್ಟಾಗಿರಲಿಲ್ಲ.
ದಾಳಿಯ ಬಳಿಕ ಅಮೆರಿಕದಲ್ಲಿ ಸಾರಿಗೆ ಭದ್ರತಾ ಆಡಳಿತ (TSA) ಸ್ಥಾಪಿಸಲಾಯಿತು. ದೇಹ ತಪಾಸಣೆ, ಸಾಮಾನುಗಳ ಕಟ್ಟುನಿಟ್ಟಿನ ಪರಿಶೀಲನೆ, ದ್ರವ ಪದಾರ್ಥಗಳ ಮೇಲಿನ ನಿರ್ಬಂಧ ಸೇರಿದಂತೆ ಹಲವು ಹೊಸ ನಿಯಮಗಳು ಜಾರಿಗೆ ಬಂದವು.
ವಿಮಾನಗಳ ಕಾಕ್‌ಪಿಟ್ ಬಾಗಿಲುಗಳನ್ನು ಬಲಪಡಿಸಿ, ಹಾರಾಟದ ವೇಳೆ ಅವುಗಳನ್ನು ಒಳಗಿನಿಂದ ಸುರಕ್ಷಿತವಾಗಿ ಲಾಕ್ ಮಾಡುವ ವ್ಯವಸ್ಥೆ ಜಾರಿಗೆ ತರಲಾಯಿತು.
► ಗುಪ್ತಚರ ವ್ಯವಸ್ಥೆಯಲ್ಲಿ ಬದಲಾವಣೆ
ಅಮೆರಿಕದಲ್ಲಿ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಸ್ಥಾಪನೆಯಾಯಿತು. ಗುಪ್ತಚರ ಸಂಸ್ಥೆಗಳ ನಡುವಿನ ಸಮನ್ವಯ ಹೆಚ್ಚಿಸುವ ಕ್ರಮ ಕೈಗೊಳ್ಳಲಾಯಿತು. ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ (DNI) ಸ್ಥಾಪನೆಯಾಯಿತು.
ಇದೇ ಅವಧಿಯಲ್ಲಿ ಯುಎಸ್ ಪೇಟ್ರಿಯಾಟ್ ಕಾಯ್ದೆ ಜಾರಿಗೆ ಬಂತು. ಭಯೋತ್ಪಾದನೆ ವಿರೋಧಿ ತನಿಖೆ ಮತ್ತು ನಿಗಾ ಕಾರ್ಯಗಳಿಗೆ ಸರ್ಕಾರದ ಅಧಿಕಾರಗಳನ್ನು ವಿಸ್ತರಿಸಲಾಯಿತು.
ಇದರಿಂದ ನಾಗರಿಕರ ಗೌಪ್ಯತೆ ಮತ್ತು ರಾಷ್ಟ್ರೀಯ ಭದ್ರತೆಯ ನಡುವಿನ ಸಮತೋಲನದ ಕುರಿತು ತೀವ್ರ ಚರ್ಚೆ ಆರಂಭವಾಯಿತು.
ಭಾರತ, ಬ್ರಿಟನ್ ಸೇರಿದಂತೆ ಹಲವು ದೇಶಗಳೂ ತಮ್ಮ ಭಯೋತ್ಪಾದನೆ ವಿರೋಧಿ ಕಾನೂನು ಮತ್ತು ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಿದವು.
►‘ಭಯೋ ತ್ಪಾದನೆ ವಿರುದ್ಧದ ಜಾಗತಿಕ ಸಮರ’
9/11 ಬಳಿಕ ಭಯೋತ್ಪಾದನೆ ಜಾಗತಿಕ ರಾಜಕೀಯದ ಕೇಂದ್ರ ವಿಷಯವಾಯಿತು.
ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ‘ಭಯೋತ್ಪಾದನೆ ವಿರುದ್ಧದ ಜಾಗತಿಕ ಸಮರ’ ಘೋಷಿಸಿದರು.
ಅಲ್‌ಖೈದಾಗೆ ಆಶ್ರಯ ನೀಡಿದ್ದ ತಾಲಿಬಾನ್ ಆಡಳಿತದ ವಿರುದ್ಧ ಅಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಸೇನಾ ಕಾರ್ಯಾಚರಣೆ ಆರಂಭವಾಯಿತು.
ಬಳಿಕ ಇರಾಕ್ ಬಳಿ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳಿವೆ ಎಂಬ ಆರೋಪದ ಆಧಾರದಲ್ಲಿ 2003ರಲ್ಲಿ ಅಮೆರಿಕ ನೇತೃತ್ವದ ಪಡೆಗಳು ಇರಾಕ್ ಮೇಲೆ ದಾಳಿ ನಡೆಸಿದವು. ಆದರೆ ಇರಾಕ್‌ನಲ್ಲಿ ಅಂತಹ ಶಸ್ತ್ರಾಸ್ತ್ರಗಳು ಪತ್ತೆಯಾಗಲಿಲ್ಲ.
ಈ ಯುದ್ಧಗಳು ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದ ಅಸ್ಥಿರತೆ ಮತ್ತು ಹಿಂಸಾಚಾರಕ್ಕೆ ಕಾರಣವಾದವು. ಅಪಾರ ಸಂಖ್ಯೆಯ ನಾಗರಿಕರು ಸಾವಿಗೀಡಾದರು. ಕೋಟ್ಯಂತರ ಜನರು ನಿರಾಶ್ರಿತರಾದರು.
ಈ ಅಸ್ಥಿರತೆಯ ಹಿನ್ನೆಲೆಯಲ್ಲಿ ಐಸಿಸ್‌ನಂತಹ ಉಗ್ರ ಸಂಘಟನೆಗಳು ಬೆಳೆಯಲು ಅನುಕೂಲಕರ ವಾತಾವರಣ ನಿರ್ಮಾಣವಾಯಿತು.
ಭಯೋತ್ಪಾದನೆ ವಿರುದ್ಧದ ಯುದ್ಧಕ್ಕೆ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಖರ್ಚು ಮಾಡಿದ ಅಪಾರ ಹಣ ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರಿತು.
ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಆರಂಭವಾದ ಯುದ್ಧಗಳು ಹಲವು ಪ್ರದೇಶಗಳಲ್ಲಿ ಮತ್ತಷ್ಟು ಹಿಂಸಾಚಾರ ಮತ್ತು ಅಸ್ಥಿರತೆಗೆ ಕಾರಣವಾದವು ಎಂಬ ಟೀಕೆಯೂ ಬಲವಾಯಿತು.
► ಇಸ್ಲಾಮೋಫೋಬಿಯಾದ ನೆರಳು
9/11ರ ಮತ್ತೊಂದು ಕರಾಳ ಪರಿಣಾಮವೆಂದರೆ ಮುಸ್ಲಿಮರು ಮತ್ತು ಅರಬ್ ಮೂಲದವರ ಬಗ್ಗೆ ಹೆಚ್ಚಿದ ಅನುಮಾನ ಮತ್ತು ದ್ವೇಷ.
ದಾಳಿಯ ಬಳಿಕ ಪಾಶ್ಚಿಮಾತ್ಯ ದೇಶಗಳಲ್ಲಿ ಮುಸ್ಲಿಮರು, ಅರಬ್ ಮೂಲದವರು ಹಾಗೂ ನಿರ್ದಿಷ್ಟ ಉಡುಪು ಅಥವಾ ದೈಹಿಕ ಲಕ್ಷಣ ಹೊಂದಿದವರನ್ನು ಅನುಮಾನದಿಂದ ನೋಡುವ ಪ್ರವೃತ್ತಿ ಹೆಚ್ಚಾಯಿತು.
ಅಮೆರಿಕದಲ್ಲಿ ಸಿಖ್ ಸಮುದಾಯದವರನ್ನು ಮುಸ್ಲಿಮರೆಂದು ತಪ್ಪಾಗಿ ಭಾವಿಸಿ ದ್ವೇಷದ ದಾಳಿಗಳು ನಡೆದವು. ಕೆಲವರು ಪ್ರಾಣವನ್ನೂ ಕಳೆದುಕೊಂಡರು.
ಮಾಧ್ಯಮ ಮತ್ತು ರಾಜಕೀಯ ನಿರೂಪಣೆಗಳಲ್ಲಿ ಭಯೋತ್ಪಾದನೆಯನ್ನು ಇಸ್ಲಾಂನೊಂದಿಗೆ ನೇರವಾಗಿ ತಳುಕು ಹಾಕುವ ಪ್ರಯತ್ನಗಳೂ ನಡೆದವು.
ಇದರಿಂದ ನಾಗರಿಕ ಸಮಾಜದಲ್ಲಿ ಪರಸ್ಪರ ನಂಬಿಕೆ ಕುಸಿಯಿತು. ಕೋಮು ಧ್ರುವೀಕರಣ ಹೆಚ್ಚಾಯಿತು. ದಶಕಗಳ ಬಳಿಕವೂ ಈ ಸಾಮಾಜಿಕ ಬಿರುಕುಗಳು ಸಂಪೂರ್ಣವಾಗಿ ಮಾಸಿಲ್ಲ.
► ಸಂಚಿನ ಸಿದ್ಧಾಂತಗಳ ಸುತ್ತ
9/11ರ ಸುತ್ತ ಅನೇಕ ಸಂಚಿನ ಸಿದ್ಧಾಂತಗಳೂ ಹುಟ್ಟಿಕೊಂಡವು.
ಬೃಹತ್ ದುರಂತದ ಹಿಂದೆ ಸರಳವಾದ ಅಧಿಕೃತ ವಿವರಣೆ ಇರಲು ಸಾಧ್ಯವಿಲ್ಲ; ಅದರ ಹಿಂದೆ ಇನ್ನೂ ದೊಡ್ಡ ರಹಸ್ಯವಿರಬೇಕು ಎಂಬ ಮನೋಭಾವ ಇಂತಹ ಸಿದ್ಧಾಂತಗಳಿಗೆ ಬಲ ನೀಡಿತು.
► ‘ಇನ್‌ಸೈಡ್ ಜಾಬ್’ ವಾದ
ಅಮೆರಿಕ ಸರ್ಕಾರಕ್ಕೆ ದಾಳಿಯ ಬಗ್ಗೆ ಮೊದಲೇ ಸಂಪೂರ್ಣ ಮಾಹಿತಿ ಇತ್ತು. ಆದರೂ ಮಧ್ಯಪ್ರಾಚ್ಯದ ತೈಲ ಸಂಪತ್ತು ಮತ್ತು ಯುದ್ಧದ ಉದ್ದೇಶಕ್ಕಾಗಿ ದಾಳಿಯನ್ನು ತಡೆಯದೆ ಸುಮ್ಮನಿತ್ತು ಎಂಬುದು ‘ಇನ್‌ಸೈಡ್ ಜಾಬ್’ ಸಿದ್ಧಾಂತದ ಪ್ರಮುಖ ವಾದ.
ಸಿಐಎ ಮತ್ತು ಎಫ್‌ಬಿಐ ನಡುವೆ ಮಾಹಿತಿ ಹಂಚಿಕೆ ಹಾಗೂ ಸಮನ್ವಯದ ಕೊರತೆ ಇತ್ತು ಎಂಬುದು ತನಿಖೆಗಳಲ್ಲಿ ಬೆಳಕಿಗೆ ಬಂದಿದ್ದರೂ, ಅದನ್ನೇ ಸರ್ಕಾರದ ನೇರ ಶಾಮೀಲಾತಿಯ ಸಾಕ್ಷ್ಯವೆಂದು ಸಂಚಿನ ಸಿದ್ಧಾಂತ ಪ್ರತಿಪಾದಕರು ವ್ಯಾಖ್ಯಾನಿಸಿದರು.
► ‘ಕಂಟ್ರೋಲ್ಡ್ ಡಿಮಾಲಿಷನ್’ ವಾದ
ಅವಳಿ ಗೋಪುರಗಳನ್ನು ವಿಮಾನ ಮತ್ತು ಬೆಂಕಿಯಿಂದ ಮಾತ್ರ ಕುಸಿಯಲು ಸಾಧ್ಯವಿಲ್ಲ; ಕಟ್ಟಡಗಳಲ್ಲಿ ಮೊದಲೇ ಸ್ಫೋಟಕಗಳನ್ನು ಅಳವಡಿಸಿ ನಿಯಂತ್ರಿತವಾಗಿ ಕೆಡವಲಾಗಿದೆ ಎಂಬುದು ಮತ್ತೊಂದು ಜನಪ್ರಿಯ ಸಿದ್ಧಾಂತ.
ಜೆಟ್ ಇಂಧನ ಉರಿಯುವ ಉಷ್ಣತೆ ಉಕ್ಕನ್ನು ಕರಗಿಸುವಷ್ಟು ಹೆಚ್ಚಿಲ್ಲ. ಆದ್ದರಿಂದ ಬೆಂಕಿಯಿಂದ ಉಕ್ಕಿನ ರಚನೆ ಕುಸಿಯಲು ಸಾಧ್ಯವಿಲ್ಲ ಎಂಬ ವಾದವನ್ನು ಪ್ರತಿಪಾದಕರು ಮುಂದಿಟ್ಟರು.
ಆದರೆ NIST ಸೇರಿದಂತೆ ತಜ್ಞರು ಈ ವಾದವನ್ನು ತಳ್ಳಿಹಾಕಿದ್ದಾರೆ. ಕಟ್ಟಡದ ಉಕ್ಕು ಕರಗಬೇಕಾದ ಅಗತ್ಯವಿಲ್ಲ; ಹೆಚ್ಚಿನ ಉಷ್ಣತೆಯಲ್ಲಿ ಅದರ ಬಲ ಗಮನಾರ್ಹವಾಗಿ ಕುಸಿಯುತ್ತದೆ.
ವಿಮಾನ ಅಪ್ಪಳಿಸಿದಾಗ ಅಗ್ನಿನಿರೋಧಕ ಹೊದಿಕೆಗಳು ಹಾನಿಗೊಳಗಾದವು. ವಿಮಾನದ ಇಂಧನ ಹಾಗೂ ಕಚೇರಿಗಳಲ್ಲಿದ್ದ ವಸ್ತುಗಳು ಉರಿದ ಪರಿಣಾಮ ತೀವ್ರ ಶಾಖ ಉಂಟಾಯಿತು.
ಇದರಿಂದ ಉಕ್ಕಿನ ರಚನೆ ದುರ್ಬಲಗೊಂಡು ಮೇಲಿನ ಮಹಡಿಗಳ ಭಾರವನ್ನು ಕೆಳಗಿನ ರಚನೆಗಳು ತಡೆಯಲಾಗದೆ ಕುಸಿತ ಆರಂಭವಾಯಿತು. ಒಂದು ಮಹಡಿ ಮತ್ತೊಂದರ ಮೇಲೆ ಬೀಳುತ್ತಾ ಕುಸಿತ ವೇಗವಾಗಿ ಕೆಳಕ್ಕೆ ಸಾಗಿತು.
ಇದನ್ನು ‘ಪ್ಯಾನ್‌ಕೇಕ್ ಎಫೆಕ್ಟ್’ ಎಂದು ವಿವರಿಸಲಾಗುತ್ತದೆ.
NISTನ ತನಿಖೆಯ ಪ್ರಕಾರ ಕಟ್ಟಡಗಳ ಕುಸಿತಕ್ಕೆ ವಿಮಾನಗಳ ಅಪ್ಪಳಿಸುವಿಕೆ ಮತ್ತು ಬಳಿಕ ಉಂಟಾದ ಬೆಂಕಿಯಿಂದಾದ ರಚನಾತ್ಮಕ ವೈಫಲ್ಯವೇ ಕಾರಣ. ಮೊದಲೇ ಅಳವಡಿಸಿದ್ದ ಸ್ಫೋಟಕಗಳ ಸಾಕ್ಷ್ಯ ಪತ್ತೆಯಾಗಿಲ್ಲ.
► ಡಬ್ಲ್ಯುಟಿಸಿ 7
ಮತ್ತೊಂದು ಪ್ರಮುಖ ಸಂಚಿನ ಸಿದ್ಧಾಂತ ವರ್ಲ್ಡ್ ಟ್ರೇಡ್ ಸೆಂಟರ್‌ನ 7ನೇ ಕಟ್ಟಡ—ಡಬ್ಲ್ಯುಟಿಸಿ 7ಕ್ಕೆ ಸಂಬಂಧಿಸಿದೆ.
47 ಮಹಡಿಗಳ ಈ ಕಟ್ಟಡಕ್ಕೆ ಯಾವುದೇ ವಿಮಾನ ಅಪ್ಪಳಿಸಿರಲಿಲ್ಲ. ಆದರೂ ಸೆಪ್ಟೆಂಬರ್ 11ರ ಸಂಜೆ 5 ಗಂಟೆ 20 ನಿಮಿಷಕ್ಕೆ ಅದು ಕುಸಿಯಿತು.
ವಿಮಾನ ಅಪ್ಪಳಿಸದ ಕಟ್ಟಡ ಕುಸಿದಿರುವುದನ್ನು ಸಂಚಿನ ಸಿದ್ಧಾಂತ ಪ್ರತಿಪಾದಕರು ಪ್ರಶ್ನಿಸಿದರು. ಕಟ್ಟಡದಲ್ಲಿದ್ದ ಸರ್ಕಾರಿ ಕಚೇರಿಗಳ ಕಾರಣ ಸಾಕ್ಷ್ಯ ನಾಶಪಡಿಸಲು ಸರ್ಕಾರವೇ ಅದನ್ನು ಕೆಡವಿತು ಎಂಬ ವಾದವೂ ಹರಡಿತು.
ಆದರೆ NISTನ ತನಿಖೆಯ ಪ್ರಕಾರ ಉತ್ತರ ಗೋಪುರ ಕುಸಿದಾಗ ಅದರ ಅವಶೇಷಗಳು ಡಬ್ಲ್ಯುಟಿಸಿ 7ಕ್ಕೆ ಬಿದ್ದು ಕಟ್ಟಡದ ಒಂದು ಭಾಗಕ್ಕೆ ಹಾನಿ ಮಾಡಿದ್ದವು.
ಕಟ್ಟಡದೊಳಗೆ ಹಲವು ಗಂಟೆಗಳ ಕಾಲ ಬೆಂಕಿ ಹೊತ್ತಿ ಉರಿಯಿತು. ನೀರಿನ ಪೈಪ್‌ಗಳಿಗೆ ಹಾನಿಯಾಗಿದ್ದರಿಂದ ಸ್ಪ್ರಿಂಕ್ಲರ್ ವ್ಯವಸ್ಥೆಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿಲ್ಲ.
ತೀವ್ರ ಶಾಖದಿಂದ ಪ್ರಮುಖ ಉಕ್ಕಿನ ರಚನೆಗಳು ವಿಸ್ತರಿಸಿ ಸ್ಥಳಾಂತರಗೊಂಡವು. ಇದರಿಂದ ಒಳಭಾಗದ ರಚನೆ ವಿಫಲವಾಗಿ ಅಂತಿಮವಾಗಿ ಕಟ್ಟಡ ಕುಸಿಯಿತು ಎಂದು NIST ಹೇಳಿದೆ.
► ಪೆಂಟಗನ್ ದಾಳಿಯ ಸುತ್ತ
ಪೆಂಟಗನ್ ಮೇಲಿನ ದಾಳಿಯ ಬಗ್ಗೆಯೂ ಸಂಚಿನ ಸಿದ್ಧಾಂತಗಳು ಹರಡಿದವು. ಬೋಯಿಂಗ್ 757 ಅಪ್ಪಳಿಸಿಲ್ಲ; ಅಮೆರಿಕ ಸೇನೆಯೇ ಪರೀಕ್ಷಾರ್ಥವಾಗಿ ಹಾರಿಸಿದ ಕ್ಷಿಪಣಿ ಕಟ್ಟಡಕ್ಕೆ ಬಡಿದಿದೆ ಎಂಬ ವಾದವೂ ಕೇಳಿಬಂತು.
ವಿಮಾನದ ಗಾತ್ರಕ್ಕೆ ಹೋಲಿಸಿದರೆ ಕಟ್ಟಡದಲ್ಲಿದ್ದ ರಂಧ್ರ ಚಿಕ್ಕದಾಗಿತ್ತು ಮತ್ತು ವಿಮಾನದ ಕೆಲವು ಅವಶೇಷಗಳು ಛಾಯಾಚಿತ್ರಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲ ಎಂಬುದನ್ನೂ ಪ್ರತಿಪಾದಕರು ಉಲ್ಲೇಖಿಸಿದರು.
ಆದರೆ ಪೆಂಟಗನ್ ಬಲವರ್ಧಿತ ಕಾಂಕ್ರೀಟ್ ಮತ್ತು ಉಕ್ಕಿನಿಂದ ನಿರ್ಮಿಸಲಾದ ಅತ್ಯಂತ ಗಟ್ಟಿಯಾದ ಸೇನಾ ಕಟ್ಟಡವಾಗಿದೆ. ಫ್ಲೈಟ್ 77 ಅತ್ಯಂತ ಹೆಚ್ಚಿನ ವೇಗದಲ್ಲಿ ಕಟ್ಟಡಕ್ಕೆ ಅಪ್ಪಳಿಸಿದಾಗ ವಿಮಾನದ ಹಗುರವಾದ ಭಾಗಗಳು ಬಲಿಷ್ಠ ರಚನೆಗೆ ಬಡಿದು ಚೂರುಚೂರಾದವು. ಎಂಜಿನ್‌ಗಳು ಮತ್ತು ಇತರ ಭಾರವಾದ ಭಾಗಗಳು ಕಟ್ಟಡದೊಳಗೆ ನುಗ್ಗಿದವು.
ವಿಮಾನದ ಅವಶೇಷಗಳು ಪತ್ತೆಯಾಗಿದ್ದವು. ಪ್ರಯಾಣಿಕರ ದೇಹದ ಅವಶೇಷಗಳನ್ನು ಡಿಎನ್‌ಎ ಪರೀಕ್ಷೆಯ ಮೂಲಕ ಗುರುತಿಸಲಾಯಿತು. ಹಲವು ಪ್ರತ್ಯಕ್ಷದರ್ಶಿಗಳು ವಿಮಾನವು ಪೆಂಟಗನ್‌ಗೆ ಅಪ್ಪಳಿಸುವುದನ್ನು ಕಂಡಿದ್ದರು.
ಹೀಗಾಗಿ ಅಧಿಕೃತ ತನಿಖೆಗಳು ಪೆಂಟಗನ್ ಮೇಲೆ ಫ್ಲೈಟ್ 77 ಅಪ್ಪಳಿಸಿತು ಎಂಬ ನಿರ್ಣಯಕ್ಕೆ ಬಂದಿವೆ.
► ವದಂತಿಗಳಿಗೆ ಏಕೆ ರೆಕ್ಕೆಪುಕ್ಕ ಬಂತು?
ಮನುಷ್ಯ ದೊಡ್ಡ ಆಘಾತಕಾರಿ ಘಟನೆಗೆ ಅಷ್ಟೇ ದೊಡ್ಡ ಮತ್ತು ಸಂಕೀರ್ಣ ಕಾರಣವನ್ನು ಹುಡುಕುವ ಪ್ರವೃತ್ತಿ ಹೊಂದಿರುತ್ತಾನೆ.
ವಿಶ್ವದ ಅತ್ಯಂತ ಬಲಿಷ್ಠ ಸೇನೆ ಮತ್ತು ಗುಪ್ತಚರ ವ್ಯವಸ್ಥೆ ಹೊಂದಿದ್ದ ಅಮೆರಿಕವನ್ನು ಕೇವಲ 19 ಮಂದಿ ಅಪಹರಣಕಾರರು ಹೇಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಚ್ಚರಿಗೊಳಿಸಿದರು ಎಂಬುದನ್ನು ಅರ್ಥಮಾಡಿಕೊಳ್ಳುವುದು ಅನೇಕರಿಗೆ ಕಷ್ಟವಾಯಿತು.
ವ್ಯವಸ್ಥೆಯ ವೈಫಲ್ಯಕ್ಕಿಂತ ಸರ್ಕಾರದ ರಹಸ್ಯ ಸಂಚಿನ ಕಥೆ ಕೆಲವರಿಗೆ ಹೆಚ್ಚು ಆಕರ್ಷಕವಾಗಿ ಕಂಡಿತು.
ಇಂಟರ್ನೆಟ್ ಜಾಗತಿಕವಾಗಿ ವೇಗವಾಗಿ ವಿಸ್ತರಿಸುತ್ತಿದ್ದ ಆರಂಭಿಕ ದಿನಗಳಲ್ಲೇ ಪರಿಶೀಲಿಸದ ಮಾಹಿತಿ, ವದಂತಿ ಮತ್ತು ವಿಡಿಯೊಗಳು ವ್ಯಾಪಕವಾಗಿ ಹರಡಿದವು. ಬಳಿಕ ಸಾಮಾಜಿಕ ಮಾಧ್ಯಮಗಳ ಬೆಳವಣಿಗೆಯೊಂದಿಗೆ ಈ ಚರ್ಚೆಗಳು ಮತ್ತಷ್ಟು ವಿಸ್ತರಿಸಿದವು.
► ಆ ದಿನದ ನೆರಳು ಇನ್ನೂ ಇದೆ
ಸೆಪ್ಟೆಂಬರ್ 11 ಕೇವಲ ಅಮೆರಿಕದ ನೆಲದಲ್ಲಿ ನಡೆದ ಒಂದು ದಿನದ ದುರಂತವಲ್ಲ. ಅದು ಜಗತ್ತಿನ ರಾಜಕೀಯ, ಭದ್ರತೆ ಮತ್ತು ಸಮಾಜವನ್ನು ಬದಲಿಸಿದ ಹೊಸ ಯುಗದ ಆರಂಭ.
ಇಂದು ವಿಮಾನ ನಿಲ್ದಾಣಗಳಲ್ಲಿ ಎದುರಿಸುವ ಕಠಿಣ ಭದ್ರತಾ ತಪಾಸಣೆಗಳು, ಸರ್ಕಾರಗಳ ಹೆಚ್ಚಿದ ಗುಪ್ತಚರ ಕಣ್ಗಾವಲು, ಭಯೋತ್ಪಾದನೆ ವಿರೋಧಿ ಕಾನೂನುಗಳು, ಮಧ್ಯಪ್ರಾಚ್ಯದಲ್ಲಿ ದಶಕಗಳಿಂದ ಮುಂದುವರಿದ ಸಂಘರ್ಷಗಳು ಮತ್ತು ಧರ್ಮಗಳ ನಡುವೆ ಬೆಳೆದಿರುವ ಅನುಮಾನ—ಇವೆಲ್ಲದರ ಮೇಲೂ 9/11ರ ನೆರಳು ಇದೆ.
ಆ ದಿನ ನ್ಯೂಯಾರ್ಕ್‌ನಲ್ಲಿ ನೆಲಸಮವಾಗಿದ್ದು ಕೇವಲ ಎರಡು ಬೃಹತ್ ಕಟ್ಟಡಗಳು ಮಾತ್ರವಲ್ಲ.
ಆಧುನಿಕ ಜಗತ್ತು ತನ್ನ ಭದ್ರತೆ, ತಂತ್ರಜ್ಞಾನ ಮತ್ತು ಶಕ್ತಿಯ ಬಗ್ಗೆ ಕಟ್ಟಿಕೊಂಡಿದ್ದ ಹಲವು ಭ್ರಮೆಗಳೂ ಅವುಗಳೊಂದಿಗೆ ಧೂಳೀಪಟವಾದವು.
ಸುಮಾರು 3,000 ಜೀವಗಳನ್ನು ಕಸಿದುಕೊಂಡ ಸೆಪ್ಟೆಂಬರ್ 11, 2001ರ ಆ ದಿನಕ್ಕೆ 25 ವರ್ಷಗಳು ಕಳೆದಿವೆ. ಆದರೆ ಆ ದಿನದ ಪರಿಣಾಮ ಮಾತ್ರ ಇತಿಹಾಸದ ಪುಟಗಳಲ್ಲಿ ಉಳಿದಿಲ್ಲ. ಜಗತ್ತಿನ ರಾಜಕೀಯ, ಭದ್ರತೆ ಮತ್ತು ಸಮಾಜದ ಮೇಲೂ ಅದರ ನೆರಳು ಇನ್ನೂ ಇದೆ.






