ಧರ್ಮಸ್ಥಳದಲ್ಲಿ 2013-2020ರ ಮಧ್ಯೆ 98 ಅಸಹಜ ಸಾವುಗಳು
ಉಜಿರೆ, ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ದಾಖಲು

ಬೆಂಗಳೂರು, ಜು.21: ಉಜಿರೆ ಮತ್ತು ಧರ್ಮಸ್ಥಳದಲ್ಲಿ 2013ರ ಸೆ.10ರಿಂದ 2020ರ ಡಿಸೆಂಬರ್ ವರೆಗೆ 98 ಮಂದಿ ಅಸಹಜವಾಗಿ ಸಾವನ್ನಪ್ಪಿದ್ದರು. ಈ ಸಂಬಂಧ ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ಉಜಿರೆ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಜೀವನದಲ್ಲಿ ಜಿಗುಪ್ಸೆ, ಅನಾರೋಗ್ಯದಿಂದ ಬೇಸತ್ತು, ಕೊಲೆ, ಕುಡಿತದ ಅಮಲಿನಲ್ಲಿ ಕೆಳಗೆ ಬಿದ್ದು, ಗಾಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿರುವುದು, ಆಕಸ್ಮಿಕವಾಗಿ ಎದೆನೋವಿನಿಂದ ಹೃದಯಾಘಾತಗೊಂಡು ಮೃತಪಟ್ಟಿರುವುದು, ಕೆರೆಯಲ್ಲಿ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಈಜು ಬಾರದೇ ಸಾವನ್ನಪ್ಪಿರುವ ಪ್ರಕರಣಗಳು ಸಹ ಈ ಪಟ್ಟಿಯಲ್ಲಿವೆ.
ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡು ನೇಣು ಬಿಗಿದು ಆತ್ಮಹತ್ಯೆ, ಪಾಲಿಟೆಕ್ನಿಕ್ ವಿದ್ಯಾರ್ಥಿ ಜೀವನದಲ್ಲಿ ಜಿಗುಪ್ಸೆಗೊಂಡು ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ದೂರನ್ನಾಧರಿಸಿ ಅಸಹಜ ಸಾವುಗಳೆಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
ಸಿಡಿಲು ಬಡಿದು ಸಾವು, ಧರ್ಮಸ್ಥಳ ದೇವರ ದರ್ಶನಕ್ಕೆ ಕುಟುಂಬಿಕರೊಂದಿಗೆ ಬಂದವರು ಪಂಚಮಿ ಲಾಡ್ಜ್‌ನ ಬಾತ್‌ರೂಮ್‌ಲ್ಲಿ ಕುಸಿದು ಸಾವನ್ನಪ್ಪಿರುವುದು, ಯಾತ್ರಾರ್ಥಿಗಳು ಮರಣ ಹೊಂದಿರುವುದು, ಅಪರಿಚಿತ ಗಂಡು, ಅಪರಿಚಿತ ಹೆಣ್ಣು ಮಕ್ಕಳು ಸಾವನ್ನಪ್ಪಿರುವುದು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರು ಆತ್ಮಹತ್ಯೆ ಮಾಡಿಕೊಂಡಿರುವುದು, ಅಮಲು ಪದಾರ್ಥ ಸೇವನೆ ಮಾಡಿ ಸಾವನ್ನಪ್ಪಿರುವುದು, ಮತ್ತಿತರ ಕಾರಣಗಳಿಂದ ಅಸಹಜವಾಗಿ ಒಟ್ಟು 98 ಮಂದಿ ಸಾವನ್ನಪ್ಪಿದ್ದರು.
ಈ ಎಲ್ಲ ಮಾಹಿತಿಗಳನ್ನು ನಾಗರಿಕ ಸೇವಾ ಟ್ರಸ್ಟ್, ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದುಕೊಂಡಿರುವುದು ಗೊತ್ತಾಗಿದೆ. ಅಸಹಜವಾಗಿ ಸಾವನ್ನಪ್ಪಿರುವವರ ಹೆಸರು ಮತ್ತು ಮೊಕದ್ದಮೆ ಸಂಖ್ಯೆಗಳನ್ನೊಳಗೊಂಡ ಪಟ್ಟಿಯು "the-file.in"ಗೆ ಲಭ್ಯವಾಗಿವೆ. ಆ ಪೈಕಿ ಆಯ್ದ ಕೆಲವು ಅಸಹಜ ಸಾವುಗಳ ವಿವರಗಳು ಇಲ್ಲಿವೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಬಿಲ್ಲರೋಡಿ ಎಂಬಲ್ಲಿ ಸುಮಾರು 14 ಎಕರೆ ಜಾಗದಲ್ಲಿ ಮರ ಕಡಿಯುತ್ತಿರುವ ಸಮಯ ವ್ಯಕ್ತಿಯೋರ್ವರ ಮೃತದೇಹ ದೊರೆತಿತ್ತು. ಹಿಟಾಚಿ ಬಳಸಿ ಅಳವಾದ ಗುಂಡಿ ತೋಡಿ ಮಣ್ಣು ಮುಚ್ಚಿ ಸಂಶಯ ಬಾರದಂತೆ ಮರದ ದಿಮ್ಮಿಗಳಿಂದ ಮುಚ್ಚಿರುತ್ತಾರೆಂದು ಪರಿಸರದ ಜನ ಮಾತನಾಡಿಕೊಳ್ಳುತ್ತಿದ್ದರು.
ಇದೇ ಸಮಯ ತಿಮರೋಡಿ ಪರಿಸರದ ಸೋಂಪ ಬಾಲಕೃಷ್ಣ ಗೌಡ ಎಂಬವರು ನಾಪತ್ತೆಯಾಗಿದ್ದರು. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಈ ಕೃತ್ಯದ ಹಿಂದೆ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಹೂತು ಹಾಕಲಾದ ಶವದ ಬಗ್ಗೆ ಸಂಶಯವಿದೆ ಎಂದು ಭಾಸ್ಕರ ಬಡಕೊಟ್ಟು ಎಂಬವರು ದೂರು ನೀಡಿದ್ದರು.
ವಿಶ್ವೇಶ್, ಕ್ಷಿತಿಜ್ ಜೈನ್ ಮತ್ತು ಸುಶಾಂತ್ ಎಂಬವರು ಕಾರಿನಲ್ಲಿ ಉಜಿರೆಗೆ ಬರುತ್ತಿದ್ದ ಸಂದರ್ಭದಲ್ಲಿ ಸಿದ್ಧವನ ಎಂಬಲ್ಲಿ ದೊಡ್ಡ ಮರ ಬುಡ ಸಮೇತ ಕಾರಿನ ಮೇಲೆ (04-05-2019) ಬಿದ್ದಿತ್ತು. ಕಾರು ಪೂರ್ತಿ ಜಖಂಗೊಂಡಿತ್ತು. ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವಿಶ್ವೇಶ್ (20) ಹಾಗೂ ಕ್ಷಿತಿಜ್ ಜೈನ್ (24) ರವರ ತಲೆಗೆ ಗಂಭೀರ ರೀತಿಯ ರಕ್ತ ಗಾಯಗೊಂಡು ಮೃತಪಟ್ಟಿದ್ದರು. ಉಜಿರೆ ಗ್ರಾಮದ ನೀರ ಚಿಲುಮೆ ಎಂಬಲ್ಲಿ ಅಪರಿಚಿತ ಪುರುಷನ ಮೃತದೇಹ (22-11-2020) ಪತ್ತೆಯಾಗಿತ್ತು.
ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಉಜಿರೆ ರಾಜ್‌ಲೀಲಾ ರೆಸಿಡೆನ್ಸಿ ವಸತಿ ಗೃಹದಲ್ಲಿ (01-03-2014) ಬಾಲು, ಬಿ.ಎಂ.ರೋಡ್, ಚಿಕ್ಕಮಗಳೂರು (ದೂರವಾಣಿ ಸಂಖ್ಯೆ 9480964718 )ಎಂಬ ವಿಳಾಸ ನೀಡಿ ಓರ್ವ ಪುರುಷ ಮತ್ತು ಮಹಿಳೆ ಕೊಠಡಿ (ಸಂಖ್ಯೆ 104) ಉಳಿದುಕೊಂಡಿದ್ದರು. ಕೊಠಡಿಯಲ್ಲಿ ಮಹಿಳೆಯು ಬಾತ್ ರೂಂನಲ್ಲಿ ಅರೆ ನಗ್ನಳಾಗಿ ಮೃತಪಟ್ಟಿದ್ದರು. ಆಕೆಯ ಜೊತೆಯಲ್ಲಿದ್ದ ವ್ಯಕ್ತಿಯ ಯಾವುದೋ ಉದ್ದೇಶದಿಂದ ಕೊಲೆ ಮಾಡಿ ಕೊಠಡಿಯ ಬಾಗಿಲಿನ ಚಿಲಕ ಹೊರಗಡೆಯಿಂದ ಹಾಕಿ ಪರಾರಿಯಾಗಿದ್ದ ಎಂಬುದು ತಿಳಿದು ಬಂದಿದೆ.
ಅಣ್ಣಿಗೌಡ (57) ಎಂಬವರು ನಿರ್ಜನ ಕಾಡುಪ್ರದೇಶಕ್ಕೆ ಹೋಗಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಅಡಂಗೆ ಸರಕಾರಿ ಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ (23-10-2016) ಮೃತದೇಹ ಪತ್ತೆಯಾಗಿತ್ತು.







