ಶೀಘ್ರದಲ್ಲೆೇ ಓದುಗರ ಕೈ ಸೇರಲಿರುವ 50 ಸಾಧಕಿಯರ ಕುರಿತ ಪುಸ್ತಕ
ಸಾಹಿತ್ಯ ಅಕಾಡಮಿಯ ಮಹಿಳಾ ಮುನ್ನಡೆ ಯೋಜನೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ಕರ್ನಾಟಕ ಸಾಹಿತ್ಯ ಅಕಾಡಮಿ ರೂಪಿಸಿರುವ ‘ಮಹಿಳಾ ಮುನ್ನಡೆ’ ಯೋಜನೆಯಡಿಯಲ್ಲಿ ನಾಡಿನ 50 ಸಾಧಕಿಯರ ಕುರಿತ ಪುಸ್ತಕಗಳು ಮುದ್ರಣಕ್ಕೆ ಸಿದ್ಧವಾಗಿದ್ದು, ಶೀಘ್ರದಲ್ಲೇ ಓದುಗರ ಕೈ ಸೇರಲಿವೆ.
ಕಲೆ, ಸಾಹಿತ್ಯ, ಜನಪದ, ವೈದ್ಯಕೀಯ, ವಿಜ್ಞಾನ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಮಹಿಳೆಯರನ್ನು ನಾಡಿನ ಜನತೆಗೆ ಪರಿಚಿಯಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದ್ದು, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಹಾಗೂ ಹೋರಾಟಗಾರ್ತಿ ಡಾ.ಮೀನಾಕ್ಷಿ ಬಾಳಿ ಅವರ ಸಂಪಾದಕತ್ವದಲ್ಲಿ ಪುಸ್ತಕಗಳು ರೂಪುಗೊಳ್ಳಲಿವೆ.
ಕರ್ನಾಟಕದಲ್ಲಿ ಎಲ್ಲ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಮರಣ ಹೊಂದಿರುವ ಸಾಧಕಿಯರ ಬಗ್ಗೆ ಈಗಾಗಲೇ ಹೆಸರು ಮಾಡಿರುವ ಲೇಖಕರ ಕೈಯಲ್ಲಿ ಪುಸ್ತಕ ಬರೆಸಲಾಗಿದೆ. ಇದು ಬಹಳ ಮುಖ್ಯವಾದ ಪುಸ್ತಕ ಮಾಲಿಕೆಯಾಗಿದೆ. ಮೊದಲ ಬಾರಿಗೆ ಅಕಾಡಮಿಯಿಂದ ಮಹಿಳೆಯರ ಬಗ್ಗೆಯೇ ಬರುತ್ತಿರುವ ಪುಸ್ತಕಗಳಾಗಿವೆ ಎನ್ನುವುದು ಮಹಿಳಾ ಮುನ್ನಡೆಯ ಸಂಪಾದಕಿ ಡಾ.ಎಚ್.ಎಲ್.ಪುಷ್ಪಾಅವರ ಅಭಿಪ್ರಾಯವಾಗಿದೆ.
ಎಚ್.ಗಿರಿಜಮ್ಮ ಅವರ ಬಗ್ಗೆ ಲೇಖಕಿ ಡಾ.ವಸುಂಧರಾ ಭೂಪತಿ ಪ್ರೇಮಾ ಕಾರಂತ್ ಅವರ ಬಗ್ಗೆ ಶಶಿಧರ್ ಭಾರಿಘಾಟ್, ಪತ್ರಕರ್ತೆ ಗೌರಿ ಲಂಕೇಶ್ ಅವರ ಬಗ್ಗೆ ಹೋರಾಟಗಾರ್ತಿ ಮಲ್ಲಿಗೆ ಅವರು ಬರೆದಿದ್ದಾರೆ. ಇನ್ನುಳಿದಂತೆ ಕನ್ನಡದ ಪ್ರಮುಖ ಲೇಖಕರು, ಲೇಖಕಿಯರಿಂದ ಸಾಧಕಿಯರ ಬಗ್ಗೆ ಪುಸ್ತಕಗಳನ್ನು ಬರೆಸಲಾಗಿದೆ.
ಒಂದು ಪುಸ್ತಕ ಅಂದಾಜು 100 ಪುಟಗಳಲ್ಲಿ ಇರಲಿದ್ದು, ಕೆಲವು ಪುಸ್ತಕಗಳಿಗೆ 100ಕ್ಕಿಂತ ಹೆಚ್ಚು ಪುಟ ಕೂಡ ಆಗಬಹುದು. ಎಲ್ಲ 50 ಪುಸ್ತಕಗಳು ಮುದ್ರಣವಾದ ನಂತರ ಒಂದೇ ಸಲ ಬಿಡುಗಡೆ ಮಾಡುವ ಯೋಜನೆಯನ್ನು ಕರ್ನಾಟಕ ಸಾಹಿತ್ಯ ಅಕಾಡಮಿ ಹಾಕಿಕೊಂಡಿದೆ.
ಯಾವ್ಯಾವ ಸಾಧಕಿಯರ ಪುಸ್ತಕ :
ರಾಜಕೀಯದಲ್ಲಿ ಸಾಧನೆ ಮಾಡಿರುವ ದಮಯಂತಿ ಬೋರೇಗೌಡ, ನಾಗಮ್ಮ ಕೇಶವಮೂರ್ತಿ, ಪತ್ರಕರ್ತೆ ಗೌರಿ ಲಂಕೇಶ್, ಜನಪದ ಕ್ಷೇತ್ರದ ಮಾದಮ್ಮ, ಜನಪದ ಗಾಯಕಿ ಸಿರಿಯಜ್ಜಿ, ಮಾನವ ಗಣಕಯಂತ್ರ ಎಂದು ಕರೆಸಿಕೊಂಡ ಶಕುಂತಲಾದೇವಿ, ರಂಗಭೂಮಿ ಪ್ರೇಮಾ ಕಾರಂತ್, ಮಕ್ಕಳ ಕೂಟ ಸ್ಥಾಪಿಸಿದ ಕಲ್ಯಾಣಮ್ಮ, ಎಚ್.ವಿ.ಸಾವಿತ್ರಮ್ಮ, ಯಶೋಧರ ದಾಸಪ್ಪ, ಡಾ.ಲೀಲಾವತಿ ದೇವದಾಸ್, ಸೇರಿದಂತೆ ಇನ್ನಿತರ ಕ್ಷೇತ್ರಗಳ ಸಾಧಕಿಯರ ಕುರಿತಾದ ಪುಸ್ತಕಗಳು ಹೊರಬರಲಿವೆ.
ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷವಾದ ಹಿನ್ನೆಲೆಯಲ್ಲಿ ಸರಕಾರ ಒಂದು ಯೋಜನೆಯನ್ನು ರೂಪಿಸಿದ್ದು, ಅದನ್ನು ನಾವು ಮಹಿಳಾ ಮುನ್ನಡೆ ಎನ್ನುವ ಪುಸ್ತಕ ಮಾಲಿಕೆಯನ್ನಾಗಿ ಮಾಡಿದ್ದೇವೆ. ಚಾರಿತ್ರಿಕ ಕಾಲಘಟ್ಟದಿಂದ ಸಾಹಿತ್ಯ, ಸಂಸ್ಕೃತಿ, ರಾಜಕೀಯ, ಹೋರಾಟ, ಕೃಷಿ, ಮಾಧ್ಯಮ ಸೇರಿ ಎಲ್ಲ ಕ್ಷೇತ್ರಗಳ ಸಾಧಕಿಯರನ್ನು ಕುರಿತು ಪುಸ್ತಕ ಬರೆಸಲಾಗಿದೆ.
-ಪ್ರೊ.ಎಲ್.ಎನ್.ಮುಕುಂದ್ರಾಜ್, ಸಾಹಿತ್ಯ ಅಕಾಡಮಿ ಅಧ್ಯಕ್ಷ
ಜನಪದರು, ತತ್ವಪದಕಾರ್ತಿಯರು ಸಹಿತ ಯಾವ ಕ್ಷೇತ್ರವನ್ನೂ ಬಿಡದೇ ಎಲ್ಲ ಕ್ಷೇತ್ರದ, ಎಲ್ಲ ವರ್ಗದ ಮಹಿಳೆಯರ ಬಗ್ಗೆ ಪುಸ್ತಕ ಬರಲಿವೆ. ಸಾಮಾಜಿಕ ನ್ಯಾಯವನ್ನು ಇಟ್ಟುಕೊಳ್ಳಲಾಗಿದೆ.
-ಡಾ.ಎಚ್.ಎಲ್.ಪುಷ್ಪಾ, ಲೇಖಕಿಯರ ಸಂಘದ ಅಧ್ಯಕ್ಷೆ