ಬಡಗಿಯ ಮಗಳ ಬಾಹ್ಯಾಕಾಶದ ಕನಸು; ಜಾಗತಿಕ ಕ್ಯೂಬ್ ಸ್ಯಾಟ್ ಮಿಷನ್ ಉಪಗ್ರಹ ನಿರ್ಮಾಣಕ್ಕೆ ಆಯ್ಕೆಯಾಗಿರುವ 14 ವರ್ಷದ ಜೆಸ್ಸಿ

ಕಂದುಲಾ ಜೆಸ್ಸಿ | Photo Credit : India Today
10ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಕಂದುಲಾ ಜೆಸ್ಸಿ, 108 ದೇಶಗಳಿಂದ ಬಂದ ಸುಮಾರು 12,000 ಅರ್ಜಿದಾರರ ನಡುವೆ ಶಕ್ತಿಸ್ಯಾಟ್ ಮಿಷನ್ ಗೆ ಆಯ್ಕೆಯಾದ 20 ಭಾರತೀಯ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ!
ಬಹಳಷ್ಟು ಮಂದಿಗೆ ತಮ್ಮ ಮಗಳನ್ನು ಖಾಸಗಿ ಶಾಲೆಯಿಂದ ಸರಕಾರಿ ಶಾಲೆಗೆ ಕಳುಹಿಸುವುದು ಬಹಳ ಕಠಿಣ ನಿರ್ಧಾರವಾಗಿರುತ್ತದೆ. ಹೀಗಾಗಿ ಖಾಸಗಿ ಶಾಲೆಯಿಂದ ಸರಕಾರಿ ಶಾಲೆಗೆ ಬಂದು, ಅಲ್ಲಿಂದ ಇಸ್ರೋ ವಿಜ್ಞಾನಿಯಾಗುವ ಕನಸು ಬೆಳೆಸಿಕೊಂಡಿರುವ 14 ವರ್ಷದ ಕಂದುಲಾ ಜೆಸ್ಸಿಯ ಪಯಣ ಸರಳವಾಗಿರಲಿಲ್ಲ.
ಆಂಧ್ರಪ್ರದೇಶದ ಬಡಗಿ ಕಂದುಲ ರಾಂಬಾಬು ಮತ್ತು ಅವರ ಪತ್ನಿ ಅರುಣಾ ಅವರೂ ತಮ್ಮ ಮಗಳು ಅವಕಾಶಗಳಿಂದ ವಂಚಿತಳಾಗಬಹುದು ಎನ್ನುವ ಆತಂಕದಲ್ಲೇ ಕಠಿಣ ನಿರ್ಧಾರ ಕೈಗೊಂಡಿದ್ದರು. ಹಣಕಾಸಿನ ನಿರ್ಬಂಧಗಳಿಂದಾಗಿ ಅವರಿಗೆ ಖಾಸಗಿ ಶಾಲೆಯ ಶುಲ್ಕ ಭರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಜೆಸ್ಸಿ ದೌಲೇಶ್ವರಂನಲ್ಲಿರುವ ಜಿಲ್ಲಾ ಪರಿಷತ್ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಂದುವರಿಸಬೇಕಾಯಿತು.
ಆದರೆ ಇದೀಗ ಜೆಸ್ಸಿ ಅಸಾಧಾರಣ ಸಾಧನೆ ಮಾಡಿದ್ದಾರೆ. 10ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಕಂದುಲಾ ಜೆಸ್ಸಿ, 108 ದೇಶಗಳಿಂದ ಬಂದ ಸುಮಾರು 12,000 ಅರ್ಜಿದಾರರ ನಡುವೆ ಶಕ್ತಿಸ್ಯಾಟ್ ಮಿಷನ್ ಗೆ ಆಯ್ಕೆಯಾದ 20 ಭಾರತೀಯ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ.
ಇದು ವಿಶ್ವದ ಮೊದಲ ಜಾಗತಿಕ ಬಾಲಕಿಯರ ಚಂದ್ರನಿಗೆ ಸಂಬಂಧಿಸಿದ ಕ್ಯೂಬ್ ಸ್ಯಾಟ್ ಮಿಷನ್ ಆಗಿದೆ. ಶಕ್ತಿಸ್ಯಾಟ್ ಎಂಬುದು ಸ್ಪೇಸ್ ಕಿಡ್ಸ್ ಇಂಡಿಯಾದ ಜಾಗತಿಕ ಬಾಹ್ಯಾಕಾಶ ಉಪಕ್ರಮವಾಗಿದೆ. ಇದು ಸ್ಪೇಸ್ ಕಿಡ್ಸ್ ಇಂಡಿಯಾದ ಸಂಸ್ಥಾಪಕಿ ಮತ್ತು ಸಿಇಒ ಡಾ. ಶ್ರೀಮತಿ ಕೇಸನ್ ನೇತೃತ್ವದಲ್ಲಿರುವ ಜಾಗತಿಕ ಬಾಹ್ಯಾಕಾಶ ಯೋಜನೆಯಾಗಿದೆ. ಕೇಸನ್ ಅವರು ಇಸ್ರೋ ಮತ್ತು ನಾಸಾ ಎರಡರ ರಾಯಭಾರಿಯೂ ಆಗಿದ್ದಾರೆ. ಭಾರತೀಯ ತಂಡಕ್ಕೆ ಆಯ್ಕೆಯಾದ ಆಂಧ್ರಪ್ರದೇಶದ ಏಕೈಕ ವಿದ್ಯಾರ್ಥಿನಿ ಜೆಸ್ಸಿಯಾಗಿದ್ದಾರೆ. ಅವರ ಹಿನ್ನೆಲೆಯನ್ನು ಗಮನಿಸಿದರೆ ಈ ಸಾಧನೆ ಗಮನಾರ್ಹವಾಗಿದೆ.
ಜೆಸ್ಸಿ ದುಬಾರಿ ತರಬೇತಿ ಅಥವಾ ಗಣ್ಯ ಪ್ರಯೋಗಾಲಯಗಳಲ್ಲಿ ಕಲಿಯಲಿಲ್ಲ. ಅವರ ಕಲಿಕೆ ಜಿಲ್ಲಾ ಪರಿಷತ್ ಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್ ನಲ್ಲಿ ಪ್ರಾರಂಭವಾಯಿತು. ಶಾಲೆಯಲ್ಲಿ ಜೆಸ್ಸಿಯ ವಿಜ್ಞಾನದ ಮೇಲಿನ ಕುತೂಹಲವನ್ನು ಗಮನಿಸಿದ ಭೌತವಿಜ್ಞಾನ ಶಿಕ್ಷಕಿ ಹಾಗೂ ಅಟಲ್ ಟಿಂಕರಿಂಗ್ ಲ್ಯಾಬ್ನ ಉಸ್ತುವಾರಿ ಮಣಿಮಾಲ ಅವರು ಶಕ್ತಿಸ್ಯಾಟ್ ಗೆ ಅರ್ಜಿ ಸಲ್ಲಿಸುವಂತೆ ಪ್ರೋತ್ಸಾಹಿಸಿದರು. ಜೆಸ್ಸಿ ಈ ಅವಕಾಶದಿಂದ ಪ್ರೇರಿತರಾಗಿ ತಮ್ಮ ಎಂಟು ಮಂದಿ ಸಹಪಾಠಿಗಳನ್ನೂ ನೋಂದಾಯಿಸಲು ಮನವೊಲಿಸಿದರು. ಆನ್ಲೈನ್ ಕೋರ್ಸ್ವರ್ಕ್ ಆಗಲೇ ಪ್ರಾರಂಭವಾಗಿತ್ತು. ಆದರೆ ಮಣಿಮಾಲ ಅವರು ವೈಯಕ್ತಿಕವಾಗಿ ಕಾರ್ಯಕ್ರಮದ ಸಂಯೋಜಕರನ್ನು ಸಂಪರ್ಕಿಸಿ, ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ದೊರಕುವಂತೆ ಮಾಡುವಲ್ಲಿ ಯಶಸ್ವಿಯಾದರು.
ಒಮ್ಮೆ ಕಾರ್ಯಕ್ರಮಕ್ಕೆ ಸೇರಲು ಅವಕಾಶ ಪಡೆದ ನಂತರ, ಜೆಸ್ಸಿ ಉಪಗ್ರಹ ವ್ಯವಸ್ಥೆಗಳು, ಪ್ರೊಪಲ್ಷನ್, ಥರ್ಮೋಡೈನಾಮಿಕ್ಸ್ ಮತ್ತು ಮಿಷನ್ ಆಪರೇಷನ್ಗಳಿಗೆ ಸಂಬಂಧಿಸಿದ 21 ಮಾಡ್ಯೂಲ್ಗಳಲ್ಲಿ ಹರಡಿರುವ ಸುಮಾರು 550 ಆನ್ಲೈನ್ ಸೆಷನ್ ಗಳನ್ನು ಕಲಿಯಲು ಆರಂಭಿಸಿದರು.
"ಎಲ್ಲಾ ವಿಷಯಗಳು ಹೊಸದಾಗಿದ್ದವು. ಆರಂಭದಲ್ಲಿ ಪ್ರತಿ ತರಗತಿಗೆ ನಿಯಮಿತವಾಗಿ ಹಾಜರಾಗುತ್ತಿದ್ದೆ. ಕ್ರಮೇಣ ಅರ್ಥವಾಗಲಾರಂಭಿಸಿತು. ಪ್ರತಿದಿನ ಕಲಿಯುತ್ತಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದು ಅರಿವಾಯಿತು," ಎನ್ನುತ್ತಾರೆ ಜೆಸ್ಸಿ.
ಆಯ್ಕೆ ಪ್ರಕ್ರಿಯೆಯಲ್ಲಿ ಆನ್ಲೈನ್ ಮೌಲ್ಯಮಾಪನಗಳು, ವಿಜ್ಞಾನಿಗಳೊಂದಿಗೆ ಸಂದರ್ಶನ ಹಾಗೂ ಸ್ಟೆಮ್ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಶಿಕ್ಷಣ ಮತ್ತು ಚಂದ್ರನ ಮಿಷನ್ನ ಮಹತ್ವವನ್ನು ವಿವರಿಸುವ ಒಂದು ನಿಮಿಷದ ವೀಡಿಯೊ ಕೂಡ ಒಳಗೊಂಡಿತ್ತು.
ಅಂತಾರಾಷ್ಟ್ರೀಯ ತಜ್ಞರೊಂದಿಗೆ ಆತ್ಮವಿಶ್ವಾಸದಿಂದ ಇಂಗ್ಲಿಷ್ ನಲ್ಲಿ ಮಾತನಾಡುವುದು ಮೊದಲ ಸವಾಲಾಗಿತ್ತು. ಇದಕ್ಕಾಗಿ ಜೆಸ್ಸಿ ಪ್ರತಿದಿನ ಶಿಕ್ಷಕರ ಬೆಂಬಲದೊಂದಿಗೆ ಇಂಗ್ಲಿಷ್ ಅಭ್ಯಾಸ ಮಾಡಿದರು.
"ಸ್ವತಃ ನನಗೇ ನಂಬಿಕೆ ಇಲ್ಲದಿದ್ದಾಗಲೂ ಶಿಕ್ಷಕರು ನನ್ನ ಮೇಲೆ ನಂಬಿಕೆ ಇಟ್ಟು ಶ್ರಮಿಸಿದರು. ಆರ್ಥಿಕ ಸಮಸ್ಯೆಗಳ ಹೊರತಾಗಿಯೂ ಹೆತ್ತವರು ನನಗೆ ಶಿಕ್ಷಣ ನೀಡಲು ಶ್ರಮಪಟ್ಟರು," ಎಂದು ಜೆಸ್ಸಿ ಹೇಳಿದ್ದಾರೆ.
"ಅಂತಾರಾಷ್ಟ್ರೀಯ ವಿಜ್ಞಾನಿಗಳೊಂದಿಗೆ ಜೆಸ್ಸಿ ಆತ್ಮವಿಶ್ವಾಸದಿಂದ ಮಾತನಾಡಿದ್ದು ಹೆಮ್ಮೆಯ ವಿಷಯವಾಗಿತ್ತು," ಎಂದು ತಾಯಿ ಅರುಣಾ ಅಭಿಪ್ರಾಯಪಟ್ಟಿದ್ದಾರೆ.
ಮಿಷನ್ ಶಕ್ತಿಸ್ಯಾಟ್ ನ ಮುಂದಿನ ಹಂತ ಆಗಸ್ಟ್ 23ರಂದು ಗ್ರೇಟರ್ ನೋಯ್ಡಾದ ಗೌತಮ್ ಬುದ್ಧ ವಿಶ್ವವಿದ್ಯಾಲಯದಲ್ಲಿ ಪ್ರಾರಂಭವಾಗಲಿದೆ. ಆಯ್ಕೆಯಾದ ವಿದ್ಯಾರ್ಥಿಗಳು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಸಂದರ್ಭದಲ್ಲಿ 108ಕ್ಕೂ ಅಧಿಕ ದೇಶಗಳ ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಚಂದ್ರನ ಕ್ಯೂಬ್ ಸ್ಯಾಟ್ ವಿನ್ಯಾಸಗೊಳಿಸಲು ಸಹಾಯ ಮಾಡಲಿದ್ದಾರೆ. ತಯಾರಾದ ಉಪಗ್ರಹವು ಅಕ್ಟೋಬರ್ 11ರಂದು ಶ್ರೀಹರಿಕೋಟಾದಿಂದ ಉಡಾವಣೆಯಾಗಲಿದೆ.
ಜೆಸ್ಸಿಯ ಪಯಣ ಅಲ್ಲಿಗೆ ನಿಲ್ಲುವುದಿಲ್ಲ. ಅವರು ಮುಂದೆ ಇಸ್ರೋ ವಿಜ್ಞಾನಿಯಾಗಬೇಕು ಎಂಬ ಕನಸು ಕಾಣುತ್ತಿದ್ದಾರೆ.






