ಕಣ್ಣೆದುರೇ ಇಬ್ಬರು ಸತ್ತು ಹೋದ್ರು...
ಕಾಲ್ತುಳಿತದ ಭೀಕರತೆ ತೆರೆದಿಟ್ಟ ಕ್ರಿಕೆಟ್ ಅಭಿಮಾನಿ

ಬೆಂಗಳೂರು: ಐಪಿಎಲ್ ಕಪ್ ಸಿಕ್ಕಿರುವ ಖುಷಿಯನ್ನು ರಾಜ್ಯವೇ ಸಂಭ್ರಮಿಸುತ್ತಿದ್ದಾಗ , ತನ್ನ ತಂಡಕ್ಕೆ ಶುಭ ಹಾರೈಸಲು ಬಂದಿದ್ದ ರಾಜ್ಯ, ಹೊರ ರಾಜ್ಯದ ಕೆಲ ಅಭಿಮಾನಿಗಳು ಕಾಲ್ತುಳಿತ ದುರಂತದಿಂದಾಗಿ ಸ್ಮಶಾನ ಸೇರಿದ್ದು, ರಾಜ್ಯದಲ್ಲಿ ಸೂತಕದ ಛಾಯೆ ಆವರಿಸಿದೆ. 18 ವರ್ಷಗಳ ಬಳಿಕ ಫೈನಲ್ನಲ್ಲಿ ವಿಜಯಿಶಾಲಿಯಾಗಿ ಹೊರ ಹೊಮ್ಮಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಆಗಮಿಸಿದ್ದರು.
ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಕಾಲ್ತುಳಿತಕ್ಕೆ ಒಳಗಾಗಿದ್ದು 11 ಮಂದಿ ಮೃತಪಟ್ಟಿದ್ದಾರೆ. ಹಲವು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ನನ್ನ ಭುಜಕ್ಕೆ ತುಳಿಯುತ್ತಲೇ ಹೋದರು..
‘ವಾರ್ತಾ ಭಾರತಿ’ ಗೆ ಪ್ರತಿಕ್ರಿಯಿಸಿದ ಕಾಲ್ತುಳಿತಕ್ಕೆ ಒಳಗಾದ ಮೈಸೂರಿನ ಚೇತನ್ ಅವರು, ‘ನನ್ನ ಕಣ್ಣೆದುರೇ ಇಬ್ಬರು ಮೃತಪಟ್ಟಿದ್ದರು. ಮಹಿಳೆಯರು ತುಂಬಾ ಸಂಕಷ್ಟ ಅನುಭವಿಸಬೇಕಾಯಿತು. ನನ್ನ ಭುಜವನ್ನು ತುಳಿದುಕೊಂಡು ಹೋಗಿದ್ದಾರೆ. ನನಗೆ ಸತ್ತು ಹೋದಂತಹ ಅನುಭವವಾಯಿತು. ಇಷ್ಟೆಲ್ಲಾ ಘಟನೆಯಾದರೂ ಆ ಸಂದರ್ಭದಲ್ಲಿ ಸ್ಟೇಡಿಯಮ್ ಸಿಬ್ಬಂದಿ, ಪೊಲೀಸರು ಬಂದಿರಲಿಲ್ಲ. ನನ್ನ ಜೊತೆ ಇಬ್ಬರು ಕಾಲ್ತುಳಿತಕ್ಕೆ ಒಳಗಾಗಿ ವೈದೇಹಿ ಅಸ್ಪತ್ರೆಗೆ ಬಂದಿದ್ದಾರೆ’’ ಎಂದು ಅವರು ದುಃಖಿತರಾದರು.
ನಂಜನಗೂಡಿನ ಚಿನ್ಮಯ್ ಮಾತನಾಡಿ, ಈ ಘಟನೆ ಸಂಜೆ ೩:೩೦ರ ಹೊತ್ತಲ್ಲಿ ಸ್ಟೇಡಿಯಂನಲ್ಲಿ ನಡೆದಿದ್ದು, ಕೇವಲ ನಾಲ್ಕು ಗೇಟ್ಗಳು ಮಾತ್ರ ತೆರೆದಿದ್ದು ಅಷ್ಟು ಸಾವಿರ ಮಂದಿಯನ್ನು ನಿಯಂತ್ರಿಸಲು ಸ್ಟೇಡಿಯಮ್ ಸಿಬ್ಬಂದಿ ವಿಫಲರಾಗಿದ್ದಾರೆ.
ಸ್ಟೇಡಿಯಮ್ನ ಒಳಗೆ ಹೋಗಲು ಸಾಧ್ಯವಿಲ್ಲದವರು ಈ ಕಾಲ್ತುಳಿತಕ್ಕೆ ಒಳಗಾಗಿದ್ದಾರೆ. ಈ ಸಂಭ್ರಮ ಹೊತ್ತಲ್ಲಿ ಸರಕಾರ ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಆ್ಯಂಬುಲೆನ್ಸ್ ಬರಲು ಎರಡು ತಾಸು ಬೇಕಾಯಿತು ಎಂದು ಹೇಳಿದ್ದಾರೆ.
ಮೊಮ್ಮಗಳು ಇನ್ನಿಲ್ಲ ಎಂದು ಫೋನ್ ಕರೆ ಬಂತು..
ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟ ೧೩ರ ಬಾಲಕಿ ದಿವ್ಯಾಂಶಿಯ ತಾತ ಪ್ರತಿಕ್ರಿಯಿಸಿ, ಮೊಮ್ಮಗಳು ಕುಟುಂಬ ಸಮೇತ ಸ್ಟೇಡಿಯಮ್ ಬಳಿ ಬಂದಿದ್ದಾಗ
ಈ ಘಟನೆ ನಡೆದಿದೆ. ಬೌರಿಂಗ್ ಅಸ್ಪತೆಗೆ ಬನ್ನಿ , ಡಿಂಪಲ್ ಇನ್ನಿಲ್ಲ ಅಂದ್ರು ಎಂದು ದುಃಖಿತರಾದರು.
ಮಹಿಳೆಯರು ಹೆಚ್ಚಾಗಿ ಗಾಯಗೊಂಡಿದ್ದರು..
ಕ್ರೀಡಾಂಗಣದ ಗೇಟ್ ನಂ. 18, 19ರಲ್ಲಿ ಹಲವು ಮಂದಿ ತುಳಿಕ್ಕೆ ಒಳಗಾದರು, ಬ್ಯಾರಿಕೇಡ್ ಗಳನ್ನು ತುಳಿಯುತ್ತಾ ಹೋದರು, ಓರ್ವ ಯುವತಿಯ ಮೂಗಿನಿಂದ ರಕ್ತ ಸೋರುತ್ತಿತ್ತು. ಆ ಯುವತಿ ಕಾಪಾಡಿ, ಕಾಪಾಡಿ.. ಕೂಗುತ್ತಿದ್ದಳು ಎಂದು ಕ್ರೀಡಾಂಗಣದ ಬಳಿಯಿದ್ದ ಅಭಿಮಾನಿಯೊಬ್ಬರು ಹೇಳಿದ್ದಾರೆ.
ಮೃತರಲ್ಲಿ ಎಲ್ಲರೂ ಬಡ ಯುವ ಸಮೂಹ
ಜೋಶ್ನಲ್ಲಿದ್ದ ಆರ್ಸಿಬಿ ಅಭಿಮಾನಿಗಳಿಗೆ ಈಗ ಸೂತಕದ ಛಾಯೆ ಆವರಿಸಿದೆ. ಮೃತಪಟ್ಟವರೆಲ್ಲರೂ ಯುವ ಜನರು. ಕೆಲವು ಮೃತಪಟ್ಟವರ ಹಾಗೂ ಗಂಭೀರ ಗಾಯಗೊಂಡವರನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಮೃತ ಪಟ್ಟವರ ಕುಟುಂಬಕ್ಕೆ ಸರಕಾರ ಉದ್ಯೋಗ ನೀಡಬೇಕು. ಗಾಯಾಳುಗಳಿಗೆ ಸರಕಾರವೇ ಚಿಕಿತ್ಸೆ ವೆಚ್ಚ ಭರಿಸಬೇಕೆಂದು ಅಭಿಮಾನಿಗಳ ಆಗ್ರಹವಾಗಿದೆ.