ಕಂಡವರ ಹೆಣ್ಣು ಮಕ್ಕಳ ಬಗ್ಗೆ ಫರ್ಮಾನು ಹೊರಡಿಸುವವರ ಎದುರು ಶರಣಾಗಿ ಮಗಳನ್ನೇ ಬಲಿ ಪಡೆದ ತಂದೆ!
ಹರಿಯಾಣದಲ್ಲಿ ತಂದೆಯಿಂದಲೇ ಹತ್ಯೆಯಾದ ರಾಷ್ಟ್ರೀಯ ಮಟ್ಟದ ಟೆನಿಸ್ ಆಟಗಾರ್ತಿ

ರಾಧಿಕಾ ಯಾದವ್ (Photo: PTI)
ರಾಷ್ಟ್ರ ರಾಜಧಾನಿಯ ಪಕ್ಕದಲ್ಲೇ ಇರುವ ಅತ್ಯಾಧುನಿಕ ನಗರ ಎಂದೇ ಪ್ರಸಿದ್ಧಿ ಪಡೆದಿರುವ ಗುರುಗ್ರಾಮ್ ನ ಕರಾಳ ಪವೊಂದು ಬಯಲಾಗಿದೆ. ಈ ಇಪ್ಪತ್ತೊಂದನೇ ಶತಮಾನದಲ್ಲೂ ಜನರು ಹೆಣ್ಣು ಮಕ್ಕಳ ಬಗ್ಗೆ ಎಂತಹ ಧೋರಣೆ ಹೊಂದಿದ್ದಾರೆ, ಮತ್ತು ಅದಕ್ಕೆ ಕುಟುಂಬಗಳ ಯಜಮಾನರು ಹೇಗೆ ಶರಣಾಗುತ್ತಾರೆ ಎಂಬುದು ಅಲ್ಲಿ ಎಲ್ಲರೂ ಬೆಚ್ಚಿ ಬೀಳುವಂತೆ ಎದ್ದು ಕಂಡಿದೆ.
ತನ್ನ ಮಗಳ ಶ್ರಮವನ್ನು ಪ್ರೋತ್ಸಾಹಿಸಬೇಕಿದ್ದ, ಆಕೆಯ ಸಾಧನೆಯಿಂದ ಖುಷಿಯಾಗಬೇಕಿದ್ದ ತಂದೆಯೊಬ್ಬ ಆ ಸಾಧನೆಯಿಂದ ನನಗೆ ಅವಮಾನವಾಗುತ್ತಿದೆ ಎಂದು ಭಾವಿಸಿಕೊಂಡು ಸ್ವಂತ ಮಗಳನ್ನೇ ಕೊಂದು ಹಾಕಿಬಿಟ್ಟಿದ್ದಾನೆ. ಕಂಡವರ ಹೆಣ್ಣು ಮಕ್ಕಳ ಬಗ್ಗೆ ಫರ್ಮಾನು ಹೊರಡಿಸುವವರ ಎದುರು ಶರಣಾಗಿ ತನ್ನ ಮಗಳನ್ನೇ ಬಲಿ ಪಡೆದಿದ್ದಾನೆ ಈ ಧೂರ್ತ ತಂದೆ.
ತಂದೆಯಿಂದಲೇ ಹತ್ಯೆಯಾದ ರಾಷ್ಟ್ರೀಯ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅಂತ್ಯಕ್ರಿಯೆ ಶುಕ್ರವಾರ ನಡೆದಿದೆ.
ತನ್ನ ಮಗಳ ಆದಾಯದಿಂದ ಬದುಕುತ್ತಿರುವುದಾಗಿ ಗ್ರಾಮಸ್ಥರು ನಿಂದಿಸುತ್ತಿದ್ದರೆಂದು ನೊಂದಿದ್ದ ದೀಪಕ್ ಯಾದವ್ ಗುರುವಾರ ಹರಿಯಾಣದ ಗುರುಗ್ರಾಮ್ನಲ್ಲಿರುವ ಮನೆಯಲ್ಲಿ ಮಗಳನ್ನು ಗುಂಡಿಕ್ಕಿ ಕೊಂದಿದ್ದ. ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಗಳ ಆದಾಯದಿಂದ ಬದುಕುತ್ತಿದ್ದಕ್ಕಾಗಿ ತನ್ನನ್ನು ಅಪಹಾಸ್ಯ ಮಾಡಲಾಗುತ್ತಿತ್ತು ಎಂಬ ಕಾರಣಕ್ಕಾಗಿಯೇ ಆಕೆಯನ್ನು ಗುಂಡು ಹಾರಿಸಿ ಕೊಂದಿದ್ದಾಗಿ ದೀಪಕ್ ಒಪ್ಪಿಕೊಂಡಿದ್ದಾನೆ.
ಮಗಳು ನಡೆಸುತ್ತಿದ್ದ ಟೆನಿಸ್ ಅಕಾಡೆಮಿಯಿಂದ ಬರುವ ಆದಾಯದಿಂದ ಬದುಕುತ್ತಿದ್ದುದಕ್ಕಾಗಿ ಊರಿನವರು ತನ್ನನ್ನು ನಿಂದಿಸುತ್ತಿದ್ದರು ಎಂದು ಪೊಲೀಸ್ ವಿಚಾರಣೆಯಲ್ಲಿ ಹೇಳಿದ್ದಾನೆ. ಗ್ರಾಮಸ್ಥರ ನಿಂದನೆಯಿಂದ ನೊಂದಿದ್ದ ತನ್ನ ತಂದೆಗೆ ಕೌನ್ಸೆಲಿಂಗ್ ಮಾಡಲು ರಾಧಿಕಾ ಪ್ರಯತ್ನಿಸಿದ್ದರು ಎಂಬ ವಿಚಾರ ಕೂಡ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ಕಳೆದ 15 ದಿನಗಳಿಂದ ತಾನು ನಿದ್ದೆ ಮಾಡಿರಲಿಲ್ಲ. ಜನರ ನಿಂದನೆಯಿಂದ ರೋಸಿಹೋಗಿದ್ದೆ ಎಂದು ಪೊಲೀಸರಿಗೆ ಆತ ಹೇಳಿರುವುದಾಗಿ ತಿಳಿದುಬಂದಿದೆ. ಆತ ಕುಟುಂಬದವರಿಂದ ದೂರವಾಗುತ್ತಿದ್ದ ಮತ್ತು ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಿರಲಿಲ್ಲ ಎಂಬುದು ಗೊತ್ತಾಗಿದೆ. ರಾಧಿಕಾ ಅವರ ಬಾಲ್ಯದಿಂದಲೂ ಟೆನಿಸ್ ತರಬೇತಿಗಾಗಿ ದೀಪಕ್ 2.5 ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡಿದ್ದ ವಿಚಾರವೂ ತಿಳಿದುಬಂದಿದೆ.
ಆದರೆ, ಎರಡು ವರ್ಷಗಳ ಹಿಂದೆ ಆದ ಗಾಯ ಆಕೆ ಟೆನಿಸ್ನಲ್ಲಿ ವೃತ್ತಿಜೀವನ ಮುಂದುವರಿಸದಂತೆ ಮಾಡಿತ್ತು. ನಂತರ ರಾಧಿಕಾ ವಿವಿಧ ಸ್ಥಳಗಳಲ್ಲಿ ತರಬೇತಿ ಆಕಾಂಕ್ಷಿಗಳಿಗೆ ತರಬೇತಿ ನೀಡತೊಡಗಿದರು. ಸೋಷಿಯಲ್ ಮಿಡಿಯಾ ಇನ್ಫ್ಲೂಯೆನ್ಸರ್ ಆಗಲು ಬಯಸಿದ್ದರು. ಅವರು ಕಾಣಿಸಿಕೊಂಡಿದ್ದ ಮ್ಯೂಸಿಕ್ ವೀಡಿಯೊ ವರ್ಷದ ಹಿಂದೆ ಬಿಡುಗಡೆಯಾಗಿತ್ತು. ಅದು ಕೂಡ ದೀಪಕ್ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಆಗಾಗ ರೀಲ್ಗಳನ್ನು ಕೂಡ ರಾಧಿಕಾ ಅಪ್ಲೋಡ್ ಮಾಡುತ್ತಿದ್ದರು. ಆದರೆ ಮಗಳು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಕಾಣಿಸುತ್ತಿರುವುದರ ಬಗ್ಗೆ ದೀಪಕ್ ಗೆ ಅಸಮಾಧಾನವಿತ್ತು ಎನ್ನಲಾಗಿದೆ. ತಂದೆ ಪದೇ ಪದೇ ಒತ್ತಡ ಹೇರಿದ್ದರಿಂದ, ರಾಧಿಕಾ ಕೆಲ ಸಮಯದ ಹಿಂದೆ ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಡಿಲಿಟ್ ಮಾಡಿದ್ದರು ಎಂದು ಕೂಡ ಹೇಳಲಾಗಿದೆ.
ಮಗಳ ಆದಾಯದಿಂದ ಬದುಕುತ್ತಿರುವುದಾಗಿ ಕೇಳಿಬಂದ ನಿಂದನೆಗಳ ಪರಿಣಾಮವಾಗಿ, ಟೆನಿಸ್ ತರಬೇತಿ ನೀಡುವುದನ್ನು ನಿಲ್ಲಿಸುವಂತೆಯೂ ದೀಪಕ್ ಒತ್ತಡ ಹೇರಿದ್ದ ವಿಚಾರ ಬಯಲಾಗಿದೆ. ಬ್ರೋಕರ್ ವ್ಯವಹಾರದಿಂದ ವರ್ಷಕ್ಕೆ ಸುಮಾರು 15 ಲಕ್ಷ ರೂ ಗಳಿಸುತ್ತಿದ್ದ ದೀಪಕ್, ಟೆನಿಸ್ ಅಕಾಡೆಮಿ ಮುಚ್ಚುವಂತೆ ಮಗಳಿಗೆ ಹೇಳಿದ್ದನೆನ್ನಲಾಗಿದೆ.
ರಾಧಿಕಾ ಅವರ ಟೆನಿಸ್ ಅಕಾಡೆಮಿಯಿಂದ ಕುಟುಂಬಕ್ಕೆ ಸಾಕಷ್ಟು ಸಂಪಾದನೆ ಬರುತ್ತಿತ್ತು. ತಂದೆಯ ಒತ್ತಡದ ಹೊರತಾಗಿಯೂ, ರಾಧಿಕಾ ತನ್ನ ಕನಸುಗಳನ್ನು ಬಿಟ್ಟುಕೊಡಲು ತಯಾರಿರಿಲಿಲ್ಲ. ತನ್ನ ಮೇಲೆ ನಂಬಿಕೆ ಇಡುವಂತೆ ತಂದೆಗೆ ಆಕೆ ಹೇಳಿದ್ದರು ಎನ್ನಲಾಗಿದೆ.
ನೀವು ನನ್ನ ಮೇಲೆ ಖರ್ಚು ಮಾಡಿರುವ 2.5 ಕೋಟಿ ವ್ಯರ್ಥವಾಗಲು ನಾನು ಬಿಡುವುದಿಲ್ಲ. ನನ್ನ ಪ್ರತಿಭೆ ಮತ್ತು ಟೆನಿಸ್ನಲ್ಲಿನ ಅನುಭವ ಬಳಸಿಕೊಂಡು ನಾನು ತರಬೇತಿ ನೀಡುತ್ತೇನೆ ಎಂದು ರಾಧಿಕಾ ತನ್ನ ತಂದೆಗೆ ಹೇಳಿದ್ದರು ಎಂಬ ವಿಚಾರ ಬಹಿರಂಗವಾಗಿದೆ.
ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ (ಎಐಟಿಎ) ವೆಬ್ಸೈಟ್ ಪ್ರಕಾರ, ರಾಧಿಕಾ ಈ ವರ್ಷದ ಆರಂಭದಲ್ಲಿ ಇಂದೋರ್ ಮತ್ತು ಕೌಲಾಲಂಪುರದಲ್ಲಿ ನಡೆದ ಪಂದ್ಯಾವಳಿಗಳನ್ನು ಆಡಿದ್ದರು. ಆದರೆ ಅವು ಅರ್ಹತಾ ಪಂದ್ಯಗಳಾಗಿದ್ದವು. ಅವರು ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ ನ 18 ವರ್ಷದೊಳಗಿನವರ ಶ್ರೇಯಾಂಕದಲ್ಲಿ ಅತ್ಯುನ್ನತ 75 ನೇ ಸ್ಥಾನ ಮತ್ತು ಮಹಿಳಾ ಸಿಂಗಲ್ಸ್ ಶ್ರೇಯಾಂಕದಲ್ಲಿ 35 ನೇ ಸ್ಥಾನ ಗಳಿಸಿದ್ದರು.
ಅಸೋಸಿಯೇಷನ್ ಅಧಿಕಾರಿ ಅನಿಲ್ ಧೂಪರ್ ಈ ದುರ್ಘಟನೆ ಬಗ್ಗೆ ದುಃಖ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ. ಇದು ನಿಜವಾಗಿಯೂ ದುಃಖಕರ ಮತ್ತು ದುರದೃಷ್ಟಕರ. ಅವರು ಈ ವರ್ಷ W35 ಆಡಲು ಇಂದೋರ್ಗೆ ಬಂದರು. ತುಂಬಾ ಭರವಸೆ ಮೂಡಿಸಿದ್ದ ಆಟಗಾರ್ತಿಯಾಗಿದ್ದರು. ಹೀಗಾಗಿರುವುದು ನಿಜಕ್ಕೂ ಆಘಾತಕಾರಿ ಎಂದಿದ್ದಾರೆ.
2023 ರ ರಾಷ್ಟ್ರೀಯ ಕ್ರೀಡಾಕೂಟದ ಸಮಯದಲ್ಲಿ ರಾಧಿಕಾ ಹರಿಯಾಣ ತಂಡದಲ್ಲಿದ್ದರು. ನಂತರ ಅವರು ರಾಜ್ಯ ತಂಡದಲ್ಲಿ ಸ್ಥಾನ ಪಡೆಯುವುದು ಸಾಧ್ಯವಾಗಿರಲಿಲ್ಲ.







