ಎಲ್ಲವನ್ನೂ ಪಡೆದರೂ ವರ್ಚಸ್ಸು ಉಳಿಸಿ, ಬೆಳೆಸಿಕೊಳ್ಳದ ಮಾಜಿ ಸಿಎಂ
► ರಾಜ್ಯ ಬಿಜೆಪಿಗೆ ನಾಯಕ ಯಾರು ? ► ಒಂದೊಂದೇ ಹಿರಿಯರನ್ನು ಬದಿಗೆ ಸರಿಸುತ್ತಿರುವ ವರಿಷ್ಠರು

ಡಿ ವಿ ಸದಾನಂದಗೌಡರು
ಬಿಜೆಪಿ ಮತ್ತೊಬ್ಬ ಹಿರಿಯ ನಾಯಕನನ್ನು ಬದಿಗೆ ಸರಿಸಿದೆ. ಮೊನ್ನೆ ಮೊನ್ನೆಯಷ್ಟೇ ಬಿಜೆಪಿ ದೆಹಲಿ ಬಾಸ್ಗಳ ವಿರುದ್ಧ ಗರಂ ಆದವರಂತೆ ಮಾತನಾಡಿದ್ದ, ಬಂಡಾಯದ ಬಾವುಟ ಹಾರಿಸಿದ್ದ ಡಿ ವಿ ಸದಾನಂದಗೌಡರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ವರಿಷ್ಠರ ಬುಲಾವ್ ಹಿನ್ನೆಲೆಯಲ್ಲಿ ದೆಹಲಿಗೆ ಹೋಗಿ ಬಂದ ಬೆನ್ನಲ್ಲೇ ಅವರು ನಿವೃತ್ತಿ ಘೋಷಿಸಿರುವುದು ಹಾಗೆ ನೋಡಿದರೆ ಆಶ್ಚರ್ಯಕರ ವಿಚಾರವಾಗಿಯೇನೂ ಉಳಿದಿಲ್ಲ. ಯಾರಿಗೂ ಬಹುಶಃ ಅಂಥ ಕುತೂಹಲವೂ ಅದರ ಬಗ್ಗೆ ಇದ್ದಂತಿಲ್ಲ.
ಎಲ್ಲರಿಗೂ ಗೊತ್ತಿರುವ ಹಾಗೆ, ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುವುದೆಂದರೆ, ಪಕ್ಷ ಟಿಕೆಟ್ ಕೊಡುವುದಿಲ್ಲ ಎಂಬುದು ಖಾತ್ರಿಯಾಗಿರುವ ಹಿನ್ನೆಲೆಯಲ್ಲಿ, ಆಗ ಮುಜುಗರ ಅನುಭವಿಸುವ ಬದಲು ತನಗೇ ಬೇಕಿಲ್ಲ ಎಂದು ಈಗಲೇ ಹೇಳಿಕೊಂಡು ಬಿಡುವುದು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ವದಂತಿಗಳು ಈಗಾಗಲೇ ಹಬ್ಬಿದ್ದವು. ಅದರ ಬಗ್ಗೆ ಅಸಮಾಧಾನವೂ ಅವರಿಗಿತ್ತು.
ದೆಹಲಿ ನಾಯಕರನ್ನು ಭೇಟಿಯಾಗಿ ಬಂದ ಬಳಿಕವೂ ಕೆಲ ಕಾಲ ಸುಮ್ಮನಿದ್ದ ಸದಾನಂದಗೌಡರು, ಕಡೆಗೂ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆಯನ್ನು ಈ ಮೂಲಕ ಬಿಟ್ಟುಕೊಟ್ಟಂತಾಗಿದೆ. ಪಕ್ಷದಿಂದ ಗರಿಷ್ಠ ಲಾಭ ಪಡೆದಿದ್ದೇನೆ, ಹೆಚ್ಚಿನದಕ್ಕೆ ಆಸೆಪಡುವುದಿಲ್ಲ ಎಂದು ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ವೇಳೆ ಹೇಳಿದ್ದಾರೆ.
ಪ್ರಸ್ತುತ ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿರುವ ಡಿವಿಎಸ್, 30 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. 10 ವರ್ಷಗಳ ಕಾಲ ಶಾಸಕನಾಗಿ, 20 ವರ್ಷ ಸಂಸದನಾಗಿ, ಒಂದು ವರ್ಷ ಮುಖ್ಯಮಂತ್ರಿಯಾಗಿ, 4 ವರ್ಷ ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಮತ್ತು ನರೇಂದ್ರ ಮೋದಿ ಸರ್ಕಾರದಲ್ಲಿ ಏಳು ವರ್ಷ ಸಂಪುಟ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಹೆಚ್ಚು ಆಸೆಪಟ್ಟರೆ ಜನ ನನ್ನನ್ನು ಸ್ವಾರ್ಥಿ ಎಂದು ಕರೆಯುತ್ತಾರೆ ಎಂದು ಹೇಳಿರುವುದು ವರದಿಯಾಗಿದೆ.
ವಿಫಲ ನಾಯಕನೊಬ್ಬ ಹೀಗೆ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದರೊಂದಿಗೆ, ಅಷ್ಟೇನೂ ಸದ್ದು ಮಾಡಿರದ ಅವರ ದಶಕಗಳ ರಾಜಕಾರಣ ಅಷ್ಟೇ ನೀರಸವಾಗಿ ಒಂದು ಘಟ್ಟಕ್ಕೆ ಬಂದು ನಿಂತಿದೆ. ಸುಳ್ಯ ಹಾಗೂ ಪುತ್ತೂರಿನಿಂದ ದೆಹಲಿಯವರೆಗೂ ಹೋದ ಸದಾನಂದಗೌಡರು, ಕೊನೆಗೂ ಎಲ್ಲಿಯೂ ತಮ್ಮ ಛಾಪು ಒತ್ತದೆ ಉಳಿದರು.
ಕಾನೂನು ವಿದ್ಯಾರ್ಥಿಯಾಗಿದ್ದಾಗ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದಿದ್ದರು. ಎಬಿವಿಪಿ ಜಿಲ್ಲಾ ಮುಖ್ಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. ಕೆಲ ಕಾಲ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.
ಸದಾನಂದಗೌಡ ರಾಜಕೀಯ ಬದುಕು ಶುರುವಾದದ್ದು ಅವತ್ತಿನ ಜನಸಂಘದ ಸದಸ್ಯರಾಗುವುದರೊಂದಿಗೆ. ಸುಳ್ಯ ವಿಧಾನಸಭಾ ಕ್ಷೇತ್ರದ ಪಕ್ಷಾಧ್ಯಕ್ಷ, ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷ, ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ, ರಾಜ್ಯ ಬಿಜೆಪಿ ಕಾರ್ಯದರ್ಶಿ, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕೆಲಸ. 2006ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದರು. ಚುನಾವಣಾ ರಾಜಕೀಯದಲ್ಲಿ 1994 ಮತ್ತು 1999ರಲ್ಲಿ ದಕ್ಷಿಣ ಕನ್ನಡದ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆ.
2004ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವೀರಪ್ಪ ಮೊಯ್ಲಿ ವಿರುದ್ಧ ಗೆದ್ದರು.
2009ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾದರು. 2014 ಮತ್ತು 2019ರಲ್ಲಿ ಬೆಂಗಳೂರು ಉತ್ತರದಿಂದ ಸಂಸದರಾದರು. 2011ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಮುಖ್ಯಮಂತ್ರಿಯಾಗುವ ಅವಕಾಶವೂ ಒದಗಿಬಂತು. ಒಂದು ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದರು. ಕೇಂದ್ರದಲ್ಲಿ ರೈಲ್ವೆ ಸಚಿವರಾಗಿ, ಕಾನೂನು ಮಂತ್ರಿಯಾಗಿ, ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವರಾಗಿ, ಅಲ್ಲದೆ ರಸಗೊಬ್ಬರ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಸದಾನಂದಗೌಡರಿಗೆ ರಾಷ್ಟ್ರ ರಾಜಕಾರಣದವರೆಗೆ ಹೋಗುವ ಅವಕಾಶ ತಾನಾಗಿಯೇ ಒಲಿದುಬಂದದ್ದಾಗಿತ್ತು. ಹಾಗೆಯೆ, ಕೆಎಂಎಫ್ ಅಧ್ಯಕ್ಷತೆ ಕೇಳುತ್ತಿದ್ದವರಿಗೆ ಮುಖ್ಯಮಂತ್ರಿ ಹುದ್ದೆಯೇ ಸಿಕ್ಕಿತ್ತು. ಆದರೆ, ಸಿಕ್ಕಿದ ಅವಕಾಶಗಳಲ್ಲಿ ಮಿಂಚಲು, ವರ್ಚಸ್ಸು ಬೆಳೆಸಿಕೊಳ್ಳಲು, ಇದ್ದ ಹೆಸರನ್ನು ಉಳಿಸಿಕೊಳ್ಳಲೂ ವಿಫಲರಾದರು. ಎಲ್ಲವನ್ನೂ ಪಡೆದ ಡಿವಿಎಸ್, ಸಿಕ್ಕ ಅವಕಾಶ, ಹುದ್ದೆಗಳನ್ನು ಸಮರ್ಥವಾಗಿ ಬಳಸಿಕೊಳ್ಳದೆ ಹೆಸರು, ವರ್ಚಸ್ಸು ಎರಡನ್ನೂ ಕಳೆದುಕೊಂಡರು. ಅವರ ಕ್ಷೇತ್ರದಲ್ಲಿಯೇ ಜನರಿಂದ ತಿರಸ್ಕೃತರಾದರು.
ಇತ್ತೀಚೆಗೆ ಅವರು ಸುದ್ದಿಯಾದದ್ದು ಪಕ್ಷದ ದೆಹಲಿ ನಾಯಕರ ವಿರುದ್ಧವೇ ಅವರು ಮುನಿಸಿಕೊಂಡದ್ದರಿಂದ. ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಕಾಂಗ್ರೆಸ್ ಸೇರುತ್ತಾರೆ ಎಂಬ ಗುಸುಗುಸು ಕೂಡ ಕೇಳಿಬಂದಿತ್ತು. ಈಗ ಚುನಾವಣಾ ರಾಜಕೀಯಕ್ಕೇ ನಿವೃತ್ತಿ ಘೋಷಿಸುವುದರೊಂದಿಗೆ ಹಿನ್ನೆಲೆಗೆ ಸರಿದಿರುವ ಸದಾನಂದಗೌಡ, ಈಗಾಗಲೇ ಪಕ್ಷದಲ್ಲಿ ಮೂಲೆಗುಂಪಾದವರ ಸಾಲಿಗೆ ಸೇರಿದಂತಾಗಿದೆ.
ಬಿ ಎಸ್ ವೈ, ಶೆಟ್ಟರ್ ರೀತಿಯಲ್ಲಿಯೇ ಇನ್ನೊಬ್ಬ ಮಾಜಿ ಸಿಎಂ ಅನ್ನು, ಬಿಜೆಪಿ ಬದಿಗೆ ಸರಿಸಿದೆ. ಬಿಜೆಪಿಯೊಳಗೆ ಏನು ನಡೆಯುತ್ತಿದೆ?. ಯಾವ ಹಿರಿಯರೂ ಬೇಕಿಲ್ಲವೆಂಬ ಅದರ ಧೋರಣೆ ಹಿಂದಿನ ಚುನಾವಣೆಯಲ್ಲಿಯೂ ಕೈಕೊಟ್ಟಿದೆ. ಇಷ್ಟಾಗಿಯೂ ಹೊಸ ನಾಯಕತ್ವ ರೂಪಿಸಲು ಏನೇನೋ ಕಸರತ್ತಿನಲ್ಲಿ ಅದು ತೊಡಗಿದೆ.
ವಿಧಾನಸಭೆ ಚುನಾವಣೆ ನಡೆದು ಇಷ್ಟು ತಿಂಗಳುಗಳ ಬಳಿಕವೂ ವಿರೋಧಪಕ್ಷದ ನಾಯಕನ ಆಯ್ಕೆ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಸ್ವತಃ ಡಿವಿಎಸ್ ಥರದವರೇ ಇದು ಮುಜುಗರದ ವಿಷಯ ಎನ್ನುತ್ತಿರುವಾಗಲೂ, ಬಿಜೆಪಿ ಹೈಕಮಾಂಡ್ ಮಾತ್ರ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ, ಅದನ್ನು ಮುಂದಕ್ಕೆ ತಳ್ಳುತ್ತಲೇ ಬಂದಿದೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಹೊಸ ನಾಯಕನನ್ನು ತರುವುದು ಈವರೆಗೂ ಆಗಿಲ್ಲ.
ಕೆಲವು ಹೆಸರುಗಳನ್ನು ಮುಂದೆ ಬಿಟ್ಟಂತೆ ಮಾಡುವುದು ಕೂಡ, ಅದರ ಕುರಿತು ರಾಜಕೀಯ ವಲಯದ ಪ್ರತಿಕ್ರಿಯೆಗಳನ್ನು ತಿಳಿದುಕೊಳ್ಳುವ ಕುತೂಹಲ ಅಥವಾ ಕಸರತ್ತು ಮಾತ್ರವಾಗಿದೆಯೆ ಎಂಬ ಅನುಮಾನ ಬರುವಂತೆ ಬಿಜೆಪಿ ಹೈಕಮಾಂಡ್ ನಡೆ ಕಾಣಿಸುತ್ತಿದೆ. ನಿಜವಾಗಿಯೂ ರಾಜ್ಯ ಬಿಜೆಪಿಯಲ್ಲಿ ನಾಯಕರು ಇಲ್ಲವೆಂದು ದೆಹಲಿ ನಾಯಕರಿಗೆ ಅನ್ನಿಸತೊಡಗಿದೆಯೆ?..
ಅದರ ಈ ನಿಲುವು ಕಡೆಗೆ ಮತ್ತಾರನ್ನೋ ತಂದು ಇಲ್ಲಿನ ನಾಯಕರ ಮೇಲೆ ಹೇರುವ ಹಂತಕ್ಕೆ ಹೋದೀತೆ?. ರಾಜ್ಯದಲ್ಲಿ ಪಕ್ಷವನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳುವ ತಂತ್ರದ ಭಾಗವಾಗಿ, ರಾಜ್ಯದಲ್ಲಿ ನಾಯಕರಿಲ್ಲವೆಂಬ ಭಾವನೆ ಬರುವಂತೆ ಮಾಡಲಾಗುತ್ತಿದೆಯೆ?. ಲೋಕಸಭೆ ಚುನಾವಣೆ ಬಂದೇ ಬಿಡುತ್ತಿರುವ ಹಂತದಲ್ಲಿಯೂ ಬಿಕ್ಕಟ್ಟಾಗಿಯೇ ಉಳಿದಿರುವ ನಾಯಕತ್ವದ ಪ್ರಶ್ನೆ ಬಿಜೆಪಿಯೊಳಗೆ ಎಂಥ ಪರಿಸ್ಥಿತಿಯನ್ನು ತಂದಿಡಲಿದೆ ಎಂಬುದು ಪಕ್ಷದೊಳಗಿನವರಿಗೆ ಆತಂಕಕ್ಕೂ ವಿರೋಧಿಗಳಿಗೆ ಆಡಿಕೊಳ್ಳುವುದಕ್ಕೂ ಕಾರಣವಾಗಿರುವುದು ನಿಜ.







