ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಬೆಳೆಯಿತು ಭ್ರೂಣ ಹತ್ಯೆಯ ಬೃಹತ್ ಜಾಲ!

ಬೆಂಗಳೂರು, ನ.30 : ಮಂಡ್ಯದಲ್ಲಿ ಬಯಲಾಗಿರುವ ಹೆಣ್ಣು ಭ್ರೂಣ ಹತ್ಯೆಗಳ ಜಾಲ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಅ.15ರಂದು ಬೆಂಗಳೂರಿನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಆರೋಪಿಗಳು ಕಾರು ನಿಲ್ಲಿಸದೇ ಹೋಗಿದ್ದಾರೆ. ಅವರನ್ನು ಹಿಂಬಾಲಿಸಿ ವಿಚಾರಣೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಅವರ ವಿಚಾರಣೆ ನಡೆಸಿದಾಗ ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆಗಳ ದೊಡ್ಡ ಜಾಲವೇ ಕಾರ್ಯಾಚರಿಸುತ್ತಿರುವುದು ಬಯಲಾಗಿದೆ.
ಬಂಧಿತ ಆರೋಪಿಗಳು ನೀಡಿದ ಮಾಹಿತಿಯಂತೆ ಎರಡು ವರ್ಷಗಳಿಂದ ಭ್ರೂಣ ಹತ್ಯೆ ಮಾಡಲಾಗುತ್ತಿದ್ದು, ವರ್ಷಕ್ಕೆ ಕನಿಷ್ಠ 1,000 ಭ್ರೂಣ ಹತ್ಯೆ ಮಾಡಿರುವ ಶಂಕೆ ಇದೆ. ಪೊಲೀಸರ ತನಿಖೆಯಲ್ಲಿ ಮೂರು ವರ್ಷಗಳಿಂದ ಈ ದುಷ್ಟ ಕೆಲಸ ನಡೆಯುತ್ತಿರುವುದು ಗೊತ್ತಾಗಿದೆ. ಅಲ್ಲಿಗೆ 3,000 ದಷ್ಟು ಭ್ರೂಣ ಹತ್ಯೆ ಮಾಡಿರುವ
ಸಾಧ್ಯತೆ ಇದೆ ಎಂದು ಬಹಿರಂಗವಾಗಿದೆ. ಪೋಷಕರ ಬೆಂಬಲದಿಂದಲೇ ಕಾನೂನು ಬಾಹಿರವಾಗಿ ಭ್ರೂಣ ಲಿಂಗ ಪತ್ತೆ ಮಾಡಿಸುತ್ತಿದ್ದು, ಭ್ರೂಣ ಹೆಣ್ಣು ಎಂದು ಗೊತ್ತಾದರೆ ತಕ್ಷಣ ಹತ್ಯೆ ಮಾಡುತ್ತಿರುವ ಮಾಹಿತಿ ಈ ಜಾಲದಿಂದ ಹೊರಬಿದ್ದಿದೆ.
ಈಗಾಗಲೇ 9 ಜನರನ್ನು ಬಂಧಿಸಿದ್ದು, ಇಬ್ಬರು ಡಾಕ್ಟರ್‌ಗಳು, ಮೂವರು ಲ್ಯಾಬ್ ಟೆಕ್ನಿಷಿಯನ್ ಮತ್ತು ಮಧ್ಯವರ್ತಿಗಳು ಸಿಕ್ಕಿದ್ದಾರೆ. ಇವರೆಲ್ಲರೂ ಕೂಡಾ ಮೈಸೂರು ಮತ್ತು ಮಂಡ್ಯ ಮೂಲದವರಾಗಿದ್ದಾರೆ ಎಂದು ಪೊಲೀಸ್ ಇಲಾಖೆ ಹೇಳಿದೆ.
‘ವಾರ್ತಾಭಾರತಿ’ ತಂಡ ಮಂಡ್ಯದ ಹಾಡ್ಯದ ಆಲೆಮನೆಗೆ ಗುರುವಾರ ಭೇಟಿ ನೀಡಿ ಅಲ್ಲಿನ ಸ್ಥಳೀಯರು, ಸಾಮಾಜಿಕ ಕಾರ್ಯಕರ್ತರು, ಅರೋಗ್ಯ ಇಲಾಖೆಯ ಯೋಜನಾ ಅಧಿಕಾರಿಗಳ ಜೊತೆ ಮಾತನಾಡಿಸಿದಾಗ ಇನ್ನಷ್ಟು ಆಘಾತಕಾರಿ ಮಾಹಿತಿಗಳು ಸಿಕ್ಕಿವೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ
ಸಾವಿರಾರು ಜೀವ ಬಲಿ: ಪೂರ್ಣಿಮಾ
ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಹಿಂದಿನಿಂದಲೂ ನಡೆಯುತ್ತಿದೆ. ಕಳೆದ ಎರಡು ಮೂರು ವರ್ಷಗಳಿಂದ ಹೆಣ್ಣು ಭ್ರೂಣ ಹತ್ಯೆಯ ಜಾಲವೊಂದು ಹುಟ್ಟಿಕೊಂಡಿದೆ. ಇದು ಕೇವಲ ಹಾಡ್ಯದಲ್ಲಿ ಮಾತ್ರವಲ್ಲ, ಬೇರೆ ಬೇರೆ ಹಳ್ಳಿಗಳಿಗೂ ಹೋಗಿ ವಾಹನದ ಒಳಗಡೆಯೇ ಸ್ಕ್ಯಾನಿಂಗ್ ಮೆಷಿನ್ ಇಟ್ಟುಕೊಂಡು, ಗರ್ಭಿಣಿ ಮಹಿಳೆಯರನ್ನು ಸಂಪರ್ಕ ಮಾಡಿ, ಅಲ್ಲಿ ವಾಹನದಲ್ಲೇ ಭ್ರೂಣ ಲಿಂಗ ಪತ್ತೆ ಮಾಡಿ ಕೊನೆಗೆ ಒಂದು ನಿರ್ದಿಷ್ಟ ಜಾಗಕ್ಕೆ ಬರಲು ಹೇಳಿ, ಅಲ್ಲಿ ಭ್ರೂಣ ಹತ್ಯೆ ಮಾಡುವಂತಹ ಜಾಲ ಕಳೆದ ಎರಡು-ಮೂರು ವರ್ಷಗಳ ಹಿಂದೆಯೇ ಪತ್ತೆಯಾಗಿತ್ತು.
ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಈ ಜಾಲ ಇನ್ನಷ್ಟು ಬೆಳೆದಿದೆ ಎಂದು ದೂರಿದ್ದಾರೆ ಕರ್ನಾಟಕ ಜನಶಕ್ತಿ ಮತ್ತು ಮಹಿಳಾ ಮುನ್ನಡೆ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ.
ಮೊದಲು ಈ ಜಾಲವನ್ನು ಪತ್ತೆ ಹಚ್ಚಿದ್ದು ಬೆಂಗಳೂರು ಪೊಲೀಸರು. ಆ ಪ್ರಕರಣ ಬಯಲಾದ ಮರುದಿನವೇ ಇಲ್ಲಿ ವಿಮೋಚನ, ಮಹಿಳಾ ಸಂಘಟನೆ, ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ ಮತ್ತು ಅತ್ಯಾಚಾರ ವಿರೋಧಿ ಆಂದೋಲನ ಈ ನಾಲ್ಕು ಸಂಘಟನೆಗಳು ಜೊತೆಯಾಗಿ ಹೋಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಮಂಡ್ಯದಲ್ಲಿ 900 ಹೆಣ್ಣುಮಕ್ಕಳ ಮಾರಣಹೋಮ ಆಗಿದೆ, ಇದು ತಲೆತಗ್ಗಿಸುವ ವಿಚಾರ, ಇದು ಜಿಲ್ಲಾಧಿಕಾರಿಗಳ ಮರ್ಯಾದೆ ಪ್ರಶ್ನೆ ಕೂಡಾ ಹೌದು. ಈಗಲಾದರೂ ಎಚ್ಚೆತ್ತುಕೊಳ್ಳಿ, ಕ್ರಮ ಕೈಗೊಳ್ಳಿ, ತಕ್ಷಣ ಸಭೆ ಕರೆಯಬೇಕು. ಹಾಡ್ಯ ಗ್ರಾಮದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ತನಿಖೆ ನಡೆಸಬೇಕು. ವಸ್ತುಗಳನ್ನು ವಶಪಡಿಸಿ ಆಲೆಮನೆಯನ್ನು ಸೀಜ್ ಮಾಡಬೇಕು ಅಂತ ನಾವು ಮನವಿ ಮಾಡಿದ್ದೆವು. ಸಭೆ ಕರೀತೀವಿ ಅಂತ ಹೇಳಿ ಮತ್ತೆ ಆ ಬಗ್ಗೆ ಸುದ್ದಿ ಇಲ್ಲ ಎಂದು ಹೇಳಿದ್ದಾರೆ ಪೂರ್ಣಿಮಾ.
ಈ ಹಿಂದೆ ಮಳವಳ್ಳಿಯಲ್ಲಿ ಸ್ಕ್ಯಾನಿಂಗ್ ಕೇಂದ್ರವೊಂದರ ಮೇಲೆ ದಾಳಿ ನಡೆದಿತ್ತು. ಆ ಪ್ರಕರಣ ಕೂಡಾ ಇವತ್ತು ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿ ನಿಂತಿದೆ. ಇಂತಹ ಹಲವು ಪ್ರಕರಣಗಳು ತನಿಖೆಯಾಗದೆ ಉಳಿದದ್ದಿದೆ. ಯಾವುದೇ ಅಪರಾಧಿಗಳಿಗೂ ಕಠಿಣ ಶಿಕ್ಷೆಯಾಗದ ಕಾರಣ ಮತ್ತೆ ದಂಧೆ ಮುಂದುವರಿಸುತ್ತ್ತಾರೆ. ಈ ಜಾಲದಲ್ಲಿ ಮೈಸೂರಿನ ಮಾತಾ ಆಸ್ಪತ್ರೆಯ ಚಂದನ್ ಬಲ್ಲಾಳ್, ಅವರ ಪತ್ನಿ ವೀಣಾ ಶಾಮೀಲಾಗಿದ್ದಾರೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು
ಸುಮ್ಮನಿದ್ದಾರಾ ಎಂಬ ಅನುಮಾನವು ಬರುತ್ತಿದೆ. ಇಂತಹ ಅಮಾನುಷ ಕೆಲಸಕ್ಕೆ ಪ್ರೋತ್ಸಾಹ ಕೊಡುವ ಕುಟುಂಬದವರಿಗೂ ಶಿಕ್ಷೆಯಾಗಬೇಕು ಎಂದು ಪೂರ್ಣಿಮಾ ಆಗ್ರಹಿಸಿದ್ದಾರೆ.
ಜಾಲದ ಬಗೆ್ಗ ಮಾಹಿತಿ ಕಲೆ ಹಾಕಬೇಕಿದೆ
ಮೊದಲು ಈ ಜಾಲ ನಡೆಸುತ್ತಿದ್ದವರ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆಯಬೇಕಿದೆ. ಅವರು ಬಳಸಿರುವ ಮೆಷಿನ್ ಗಳನ್ನು ಎಲ್ಲಿಂದ ತಂದಿದ್ದರು ಎಂಬುದು ಗೊತ್ತಾಗಬೇಕು. ಈ ಜಾಲದಲ್ಲಿ ತೊಡಗಿಕೊಂಡವರು ಯಾರೂ ವೈದ್ಯರಲ್ಲ. ಅವರು ಎಲ್ಲಿಂದ ಈ ಕೆಲಸ ಕಲಿತರು? ಎಲ್ಲಿಂದೆಲ್ಲಾ ಮಹಿಳೆಯರನ್ನು ಕರೆದುಕೊಂಡು ಬಂದಿದ್ದಾರೆ? ಎರಡು ತಿಂಗಳ ಹಿಂದೆ ಇವರು ಬಳಸುತ್ತಿದ್ದ ಬ್ರೆಝ ಕಾರು ಸಿಗ್ನಲ್ ಜಂಪ್ ಆಗಿ ಹೋದಾಗಲೇ ನಾವು ಗುರುತಿಸಿದ್ದೆವು. ಆ ಬಗ್ಗೆ ಪ್ರಕರಣವೂ ದಾಖಲಾಗಿತ್ತು. ಇನ್ನು ಎಲ್ಲೆಲ್ಲಾ ಅವರ ಜಾಲ ಕಾರ್ಯಾಚರಿಸುತ್ತಿದೆ ಎಂಬುದನ್ನು ಪತ್ತೆ ಹಚ್ಚಬೇಕಿದೆ ಎಂದು ಹಾಡ್ಯಕ್ಕೆ ಗುರುವಾರ ಭೇಟಿ ನೀಡಿದ್ದ ರಾಜ್ಯ ಆರೋಗ್ಯ ಯೋಜನಾ ನಿರ್ದೇಶಕ ಡಾ. ಜಿ.ಎನ್. ಶ್ರೀನಿವಾಸ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಅವತ್ತೇ ಪರಿಶೀಲಿಸಿದ್ದರೆ ಸಾಕ್ಷ್ಯ ಸಿಗುತ್ತಿತ್ತು
ಈಆಲೆಮನೆ ಒಳಗಡೆ ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದರು. ಇಲ್ಲೇ ಇರುವ ಕೋಣೆಯಲ್ಲಿ ಗರ್ಭಿಣಿ ಮಹಿಳೆಯರ ಸ್ಕ್ಯಾನಿಂಗ್ ನಡೆಯುತ್ತಿತ್ತು. ಆದರೆ, ಈ ಜಾಲದ ಬಗ್ಗೆ ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದಂತೆಯೇ, ಇಲ್ಲಿಂದ ಅದರ ಸಾಕ್ಷ್ಯ ಸಿಗಬಾರದೆಂಬ ಉದ್ದೇಶದಿಂದ ಎಲ್ಲವನ್ನೂ ಬೇರೆ ಕಡೆಗೆ ಸ್ಥಳಾಂತರ ಮಾಡಿದ್ದಾರೆ. ಹಾಗಾಗಿ ಡಿಎಚ್‌ಒ ನಿನ್ನೆ ಇಲ್ಲಿಗೆ ಬಂದು ಭೇಟಿ ಕೊಟ್ಟಾಗ ಯಾವುದೇ ಕುರುಹುಗಳು ಸಿಗಲಿಲ್ಲ ಎಂದು ಹೇಳಿದ್ದಾರೆ ಸಾಮಾಜಿಕ ಕಾರ್ಯಕರ್ತ ಜನಾರ್ದನ್ ಹೂತಗೆರೆ. ಕಳೆದ 26 ತಾರೀಕಿನಂದೇ ನಾವು ಈ ಬಗ್ಗೆ ಡಿಎಚ್‌ಒ ಮತ್ತು ಡಿಸಿ ಅವರ ಗಮನಕ್ಕೆ ತಂದಿದ್ದೆವು. ಅವತ್ತೇ ಬಂದು ಪರಿಶೀಲನೆ ಮಾಡಿದ್ರೆ, ಎಲ್ಲಾ ಕುರುಹುಗಳು ಸಿಗುತ್ತಿದ್ದವು.
ಆದರೆ ಡಿಸಿ ಮತ್ತು ಇತರ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ, ಇಲ್ಲಿಗೆ ಬರಲು ತಡವಾದ ಕಾರಣ ಇಲ್ಲಿ ಯಾವುದೇ ಸಾಕ್ಷ್ಯಗಳು ಸಿಗದಂತೆ ಮಾಡಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಇಲ್ಲಿ ವಾರದಲ್ಲಿ ಎರಡು ಬಾರಿ ಭ್ರೂಣ ಲಿಂಗ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿತ್ತು. ಸಂಜೆಯಾಗುತ್ತಿದ್ದಂತೆ ಮೂರರಿಂದ ನಾಲ್ಕು ವಾಹನಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಗರ್ಭಿಣಿ ಮಹಿಳೆಯರನ್ನು ಮಂಡ್ಯಕ್ಕೆ ಕರೆ ತಂದು, ಅಲ್ಲಿಂದ ಈ ಜಾಗಕ್ಕೆ ಮತ್ತೆ ಕರೆತಂದು ಈ ಜಾಗ ಯಾವುದು ಎನ್ನುವುದು ಅವರಿಗೂ ಪತ್ತೆ ಹಚ್ಚಲಾಗದ ರೀತಿಯಲ್ಲಿ ರಾತ್ರೋರಾತ್ರಿ ಕರೆದು ಕೊಂಡು ಬಂದು, ಅವರ ಮೊಬೈಲ್‌ಗಳನ್ನೆಲ್ಲಾ ತಮ್ಮ ವಶದಲ್ಲಿರಿಸಿ, ಕೆಲಸ ಮುಗಿದ ಬಳಿಕ ಮತ್ತೆ ಅವರದೇ ವಾಹನಗಳ ಮೂಲಕ ಅವರವರ ಜಾಗಕ್ಕೆ ಕರೆದುಕೊಂಡು ಹೋಗಿ ಬಿಡುತ್ತಾರೆ ಎಂದು ಮಾಹಿತಿ ನೀಡಿದ್ದಾರೆ ಜನಾರ್ದನ್ .







