ಪಶ್ಚಿಮ ಬಂಗಾಳದ ಬರುಯಿಪುರ್ ಬಾಲಕಿಯ ಅತ್ಯಾಚಾರ-ಕೊಲೆ ಪ್ರಕರಣ: ಎನ್ಕೌಂಟರ್, ರಾಜಕೀಯ ತಲ್ಲಣ ಮತ್ತು ಇಲ್ಲಿವರೆಗಿನ ಬೆಳವಣಿಗಳು...

Photo Credit : PTI
ಕಳೆದ ಶನಿವಾರ (ಜುಲೈ 4, 2026) ನಾಪತ್ತೆಯಾಗಿದ್ದ 12 ವರ್ಷದ ಬಾಲಕಿಯೊಬ್ಬಳ ಮೃತದೇಹ ರವಿವಾರ (ಜುಲೈ 5, 2026) ಪಶ್ಚಿಮ ಬಂಗಾಳದ ಬರುಯಿಪುರ್ನ ಕೆರೆಯೊಂದರಲ್ಲಿ ಪತ್ತೆಯಾಗಿದೆ. ಬಾಲಕಿ ನಾಪತ್ತೆಯಾದ ತಕ್ಷಣವೇ ಕುಟುಂಬಸ್ಥರು ಪೊಲೀಸ್ ದೂರು ದಾಖಲಿಸಿದ್ದರು. ಮೃತದೇಹ ಪತ್ತೆಯಾದ ಬೆನ್ನಲ್ಲೇ ಸ್ಥಳದಲ್ಲಿ ತೀವ್ರ ಹಿಂಸಾಚಾರ ಭುಗಿಲೆದ್ದಿದೆ. ಆಕ್ರೋಶಗೊಂಡ ಸಾರ್ವಜನಿಕರು ಪೊಲೀಸರ ಮೇಲೆ ದಾಳಿ ನಡೆಸಿ, ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ರಸ್ತೆ ಮತ್ತು ರೈಲು ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಉದ್ರಿಕ್ತ ಜನಸಮೂಹವು ಓರ್ವ ವ್ಯಕ್ತಿಯನ್ನು ಥಳಿಸಿ ಕೊಂದಿದೆ.
►ಆಡಳಿತ ಮಂಡಳಿ ಕೈಗೊಂಡ ಕ್ರಮಗಳೇನು?
ಬುಧವಾರದ ವೇಳೆಗೆ (ಜುಲೈ 8 )ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಪ್ರಭಾಸ್ ಮಂಡಲ್, ಆನಂದ್ ಸರ್ದಾರ್, ದಿಬಾಕರ್ ಸರ್ದಾರ್ ಮತ್ತು ಕಬೀರ್ ಮುಲ್ಲಾ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಭಾಸ್ ಮಂಡಲ್ ಎಂಬಾತ ಬಾಲಕಿಯನ್ನು ಅಪಹರಿಸಿದ್ದನು. ನಂತರ ಆರೋಪಿಗಳು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೆರೆಗೆ ಎಸೆದಿದ್ದಾರೆ ಎಂಬುದು ತಿಳಿದುಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಆರೋಪಿ ಪ್ರಭಾಸ್ ಮಂಡಲ್ ಬಾಲಕಿಯೊಂದಿಗೆ ಹೋಗುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ಬಾಲಕಿಯ ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯು ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಖಚಿತಪಡಿಸಿದೆ. ಅಷ್ಟೇ ಅಲ್ಲದೆ, ನೀರಿನಲ್ಲಿ ಮುಳುಗಿ ಸಾವು ಸಂಭವಿಸಿದೆ ಎಂದು ವರದಿ ಹೇಳಿದೆ. ಬಾಲಕಿಯನ್ನು ಜೀವಂತವಾಗಿದ್ದಾಗಲೇ ಕೆರೆಗೆ ಎಸೆಯಲಾಗಿತ್ತು ಎಂಬುದನ್ನು ಇದು ಸೂಚಿಸುತ್ತದೆ.
ಬುಧವಾರ ಮುಂಜಾನೆ ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ ಪ್ರಮುಖ ಆರೋಪಿ ಪ್ರಭಾಸ್ ಮಂಡಲ್ ಹತನಾಗಿದ್ದಾನೆ. ಪೊಲೀಸರ ಪ್ರಕಾರ, ಘಟನೆಯ ಸರಣಿಯನ್ನು ಮರುಸೃಷ್ಟಿಸಲು ಪ್ರಭಾಸ್ ಮಂಡಲ್ನನ್ನು ಬರುಯಿಪುರ್ನಲ್ಲಿನ ಸೂರ್ಯಪುರಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಆತ ಪೊಲೀಸರ ಬಳಿಯಿದ್ದ ಪಿಸ್ತೂಲ್ ಕಸಿದುಕೊಂಡು ಗುಂಡು ಹಾರಿಸಿದ್ದಾನೆ. ಪೊಲೀಸರು ಸ್ವಯಂ ರಕ್ಷಣೆಗಾಗಿ ನಡೆಸಿದ ಪ್ರತಿದಾಳಿಯಲ್ಲಿ ಆತನಿಗೆ ಗಂಭೀರ ಗಾಯಗಳಾಗಿದ್ದು, ಬರುಯಿಪುರ್ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಹಿಂಸಾಚಾರದಲ್ಲಿ ತೊಡಗಿದವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಬಿಎನ್ಎಸ್ (BNS) ಕಾಯ್ದೆಯ ಸೆಕ್ಷನ್ 63 (ಅತ್ಯಾಚಾರ), 70 (2) (ಸಾಮೂಹಿಕ ಅತ್ಯಾಚಾರ), 103 (1) (ಕೊಲೆ), ಮತ್ತು 238 (ಸಾಕ್ಷ್ಯ ನಾಶ) ಹಾಗೂ ಪೋಕ್ಸೋ (POCSO) ಕಾಯ್ದೆ 2012ರ ಅಗತ್ಯ ಸೆಕ್ಷನ್ಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಬರುಯಿಪುರ್, ನಾರಾಯಣಪುರ ಮತ್ತು ಸೋನಾರ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಎನ್ಎಸ್ಎಸ್ (BNSS) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಾಲಕಿಯ ಕೊಲೆ ಪ್ರಕರಣ ಸೇರಿದಂತೆ ಸಾರ್ವಜನಿಕ ಹಿಂಸಾಚಾರ, ಪೊಲೀಸರ ಮೇಲಿನ ದಾಳಿ ಹಾಗೂ ರಸ್ತೆ-ರೈಲು ತಡೆಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಎಫ್ಐಆರ್ ದಾಖಲಾಗಿವೆ.
►ಮುಖ್ಯಮಂತ್ರಿ ಹೇಳಿದ್ದೇನು?
ಘಟನೆಗೆ ಕೋಮು ಬಣ್ಣ ಬಳಿಯಲು ಯತ್ನಿಸಲಾಗಿದೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ. ಈ ಪ್ರತಿಭಟನೆಗಳು ಈ ಹಿಂದೆ ತೃಣಮೂಲ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯ (CAA) ವಿರುದ್ಧ ನಡೆದಿದ್ದ ಹಿಂಸಾಚಾರದಂತಹ ಘಟನೆಗಳನ್ನು ನೆನಪಿಸುತ್ತವೆ ಎಂದು ಸುವೇಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಉದ್ರಿಕ್ತ ಜನಸಮೂಹದಿಂದ ಹತ್ಯೆಯಾದ ವ್ಯಕ್ತಿ ನಿರಪರಾಧಿಯಾಗಿದ್ದ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಬರುಯಿಪುರ್ಗೆ ಭೇಟಿ ನೀಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದರು. ಪೊಲೀಸರ ತನಿಖೆಯ ಪ್ರಗತಿಯ ಬಗ್ಗೆ ಕುಟುಂಬಸ್ಥರು ತೃಪ್ತಿ ಹೊಂದಿದ್ದಾರೆ ಎಂದು ಅವರು ಒತ್ತಿ ಹೇಳಿದರು. "ಅವರೊಂದಿಗೆ ಮಾತನಾಡಿದ ನಂತರ ನನಗೆ ತೃಪ್ತಿಯಾಗಿದೆ, ಅವರೂ ತೃಪ್ತರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ, ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂಬ ಶಂಕೆಯ ಮೇಲೆ ಉದ್ರಿಕ್ತ ಜನಸಮೂಹದಿಂದ ಹತ್ಯೆಯಾದ ವ್ಯಕ್ತಿ ನಿರಪರಾಧಿಯಾಗಿದ್ದ ಎಂದು ಅವರು ಹೇಳಿದ್ದಾರೆ. "ಗುಂಪು ಹತ್ಯೆಯಲ್ಲಿ ಸಾವನ್ನಪ್ಪಿದ ಯುವಕ ಇಂದ್ರಜಿತ್ ಮಂಡಲ್ ಕೂಡ ನಿರಪರಾಧಿಯಾಗಿದ್ದ. ಇದನ್ನು ಪೊಲೀಸರು ನನಗೆ ತಿಳಿಸಿದ್ದಾರೆ, ಇವು ನನ್ನ ಮಾತುಗಳಲ್ಲ. ಆತನಿಗೂ (ಮಂಡಲ್) ನ್ಯಾಯ ಸಿಗಲಿದೆ. ನಾನು ಆತನ ಕುಟುಂಬದ ಸದಸ್ಯರನ್ನೂ ಭೇಟಿ ಮಾಡಿದ್ದೇನೆ.
ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಸುಮಾರು 200 ಆರೋಪಿಗಳನ್ನು ಗುರುತಿಸಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅವರೆಲ್ಲರನ್ನೂ ಬಂಧಿಸಲಾಗುವುದು. ಒಬ್ಬನೇ ಒಬ್ಬ ವ್ಯಕ್ತಿಗೂ ವಿನಾಯಿತಿ ಸಿಗುವುದಿಲ್ಲ. ಇತ್ತೀಚಿನ (ವಿಧಾನಸಭಾ) ಚುನಾವಣೆಯಲ್ಲಿ ಜನರಿಂದ ತಿರಸ್ಕೃತರಾದವರು, ಶೂನ್ಯದಿಂದ ಒಂದು ಸ್ಥಾನವನ್ನು ಗಳಿಸಿದವರು ಮತ್ತು ಕೆಲವು ಉಗ್ರಗಾಮಿ ಹಾಗೂ ದೇಶವಿರೋಧಿ ಶಕ್ತಿಗಳು ಸೇರಿದಂತೆ ತೆರೆಮರೆಯಿಂದ ಇವರನ್ನು ಪ್ರಚೋದಿಸಿದವರನ್ನು ಗುರುತಿಸಲಾಗಿದೆ. ಸರ್ಕಾರ ಅವರಿಗೆ ತಕ್ಕ ಪಾಠ ಕಲಿಸಲಿದೆ," ಎಂದು ಬಂಗಾಳದ ಸಿಎಂ ಹೇಳಿದ್ದಾರೆ.
ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 20 ಜನರನ್ನು ಬಂಧಿಸಿದ್ದಾರೆ. ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಮತ್ತು ಪಕ್ಷದ ಯುವ ನಾಯಕ ಲಾಯಕ್ ಅಲಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
"ನಾವು ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಬರುಯಿಪುರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದೆವು. ಪೊಲೀಸರು ಆಗಲೇ ಹುಡುಕಾಟ ಆರಂಭಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರೆ ನನ್ನ ಮಗಳು ಜೀವಂತವಾಗಿ ಸಿಗುತ್ತಿದ್ದಳು," ಎಂದು ಅಪ್ರಾಪ್ತೆಯ ತಾಯಿ ಹೇಳಿರುವುದಾಗಿ 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಉಲ್ಲೇಖಿಸಿತ್ತು.
ಬಾಲಕಿ ನಾಪತ್ತೆಯಾದ ನಂತರ ಪೊಲೀಸರು ಆಕೆಯನ್ನು ಹುಡುಕಲು ವಿಳಂಬ ಮಾಡಿದರು ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿಎಂ, 72 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿರುವುದಾಗಿ ತಿಳಿಸಿದರು. ದೂರು ದಾಖಲಾದ ನಂತರ ತೆಗೆದುಕೊಂಡ ಸಮಯದ ವಿಷಯದಲ್ಲಿ ಶೇಕಡಾ ಒಂದರಷ್ಟು ನಿರ್ಲಕ್ಷ್ಯ ಕಂಡುಬಂದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಬಾಲಕಿ ನಾಪತ್ತೆಯಾದ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ ಮತ್ತು ವಿಚಾರಣೆಗೆಂದು ಕರೆತಂದಿದ್ದ ಆರೋಪಿಗಳಲ್ಲಿ ಒಬ್ಬನಾದ ಆನಂದ್ ಸರ್ದಾರ್ ಪೊಲೀಸ್ ಚೌಕಿಯಿಂದಲೇ ಪರಾರಿಯಾಗಿದ್ದ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ. ತೃಣಮೂಲ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೊ ಕ್ಲಿಪ್ ಒಂದರಲ್ಲಿ, ಆರೋಪಿ ಮತ್ತು ಪೊಲೀಸರ ನಡುವಿನ ಸಂಭಾಷಣೆ ಇದ್ದು, ಅದರಲ್ಲಿ ಆರೋಪಿಯು 'ರಾಜಾ' ಎಂಬ ಮೂರನೇ ವ್ಯಕ್ತಿಯ ಹೆಸರನ್ನು ಪ್ರಸ್ತಾಪಿಸಿ ಆತನನ್ನು 'ಪಕ್ಷದ ಕಾರ್ಯಕರ್ತ' ಎಂದು ವಿವರಿಸುತ್ತಿರುವುದು ಕಂಡುಬಂದಿದೆ.
►ಸಂತ್ರಸ್ತೆಯ ಕುಟುಂಬದ ಪ್ರತಿಕ್ರಿಯೆ
ಮಂಗಳವಾರ ಸಂತ್ರಸ್ತೆಯ ಕುಟುಂಬದವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಿದರು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿರುವ ಕುಟುಂಬಸ್ಥರು, ಪೊಲೀಸರ ಕಾರ್ಯವೈಖರಿಯ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಅಹವಾಲನ್ನು ತಾಳ್ಮೆಯಿಂದ ಆಲಿಸಿದ್ದು, ಪ್ರಕರಣದ ಸಂಪೂರ್ಣ ಮಾಹಿತಿ ಹೊಂದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸೂರ್ಯಪುರದಲ್ಲಿರುವ ತಮ್ಮ ನಿವಾಸದ ಬಳಿ ಪೊಲೀಸ್ ಚೌಕಿ ಸ್ಥಾಪಿಸಬೇಕೆಂದು ಕುಟುಂಬಸ್ಥರು ವಿನಂತಿಸಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಇದರೊಂದಿಗೆ, 12 ವರ್ಷದ ಸಂತ್ರಸ್ತ ಬಾಲಕಿಯ ಕುಟುಂಬ ಹಾಗೂ ಉದ್ರಿಕ್ತ ಜನಸಮೂಹದಿಂದ ಹತ್ಯೆಯಾದ ಯುವಕನ ಕುಟುಂಬ ಇಬ್ಬರಿಗೂ ಶ್ರೀ ಅಧಿಕಾರಿ ಅವರು ಪರಿಹಾರ ಘೋಷಿಸಿದ್ದಾರೆ.
►ಆರೋಪಿಯ ಮೃತದೇಹ ಪಡೆಯಲು ನಿರಾಕರಿಸಿದ ತಾಯಿ
"ಆತ ಮಾಡಿದ ತಪ್ಪಿಗೆ ಆತನಿಗೆ ಶಿಕ್ಷೆಯಾಗಿದೆ. ನಾನು ಆತನ ಮೃತದೇಹವನ್ನು ಪಡೆಯಲು ಹೋಗುವುದಿಲ್ಲ." ಈ ಮಾತುಗಳನ್ನು ಹೇಳಿದ್ದು ಬೇರಾರೂ ಅಲ್ಲ, ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರ್ನಲ್ಲಿ ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ ಹತನಾದ ಪ್ರಭಾಸ್ ಮಂಡಲ್ನ ತಾಯಿ ಸಂಧ್ಯಾ ಮಂಡಲ್. ಕೋಲ್ಕತಾದಿಂದ ಕೇವಲ 35 ಕಿ.ಮೀ ದೂರದಲ್ಲಿರುವ ಬರುಯಿಪುರ್ನಲ್ಲಿ ನಡೆದ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮೂವರು ಆರೋಪಿಗಳಲ್ಲಿ ಪ್ರಭಾಸ್ ಕೂಡ ಒಬ್ಬ.
ಪೊಲೀಸರು ನನ್ನ ಮನೆಗೆ ಬಂದು, 'ನಿಮ್ಮ ಮಗನ ಹೆಸರು ಪ್ರಭಾಸ್ ಮಂಡಲ್ ಹೌದೇ?' ಎಂದು ಕೇಳಿದರು. ನಾನು 'ಹೌದು' ಎಂದೆ. ಆಗ ಅವರು, ನಿಮ್ಮ ಮಗ ಮೃತಪಟ್ಟಿದ್ದಾನೆ. ನೀವು ಆತನನ್ನು ನೋಡಲು ಬಯಸುತ್ತೀರಾ? ಎಂದು ಕೇಳಿದರು.
ಪೊಲೀಸರು ನನ್ನ ಮಗನ ಗುರುತಿನ ಚೀಟಿಯನ್ನು ಕೇಳಿದರು. ಆದರೆ ನಾನು ಆತನ ಮೃತದೇಹವನ್ನು ತರಲು ಹೋಗುವುದಿಲ್ಲ ಎಂದು ಅವರಿಗೆ ಹೇಳಿದೆ. ನನಗೆ ಆತನನ್ನು ನೋಡಲು ಇಷ್ಟವಿಲ್ಲ. ಕುಟುಂಬದ ಯಾರೊಬ್ಬರೂ ಆತನ ಮೃತದೇಹವನ್ನು ಪಡೆಯಲು ಹೋಗುವುದಿಲ್ಲ. ಪೊಲೀಸರು ತಮಗೆ ಇಷ್ಟಬಂದದ್ದನ್ನು ಮಾಡಿಕೊಳ್ಳಬಹುದು. ಆತ ಎಂದಿಗೂ ತನ್ನ ತಾಯಿಯ ಮಾತನ್ನು ಕೇಳುತ್ತಿರಲಿಲ್ಲ. ಆತ ಮಾದಕ ವ್ಯಸನಿಯಾಗಿದ್ದನು ಎಂದು ಸಂಧ್ಯಾ ಮಂಡಲ್ ಹೇಳಿರುವುದಾಗಿ ʼದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ʼ ವರದಿ ಮಾಡಿದೆ.
►ಘಟನೆಯಿಂದಾಗಿ ಉಂಟಾದ ರಾಜಕೀಯ ಪರಿಣಾಮಗಳೇನು?
ಈ ಅತ್ಯಾಚಾರ, ಕೊಲೆ ಮತ್ತು ಅದರ ಬೆನ್ನಲ್ಲೇ ನಡೆದ ಸಾರ್ವಜನಿಕ ಹಿಂಸಾಚಾರವು ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರಕ್ಕೆ ದೊಡ್ಡ ಸವಾಲನ್ನೊಡ್ಡಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ, ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರ ಮೇಲೆ ಪದೇ ಪದೇ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯದ ಘಟನೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿತ್ತು. ಅಲ್ಲದೆ, ತಾನು ಅಧಿಕಾರಕ್ಕೆ ಬಂದರೆ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದಾಗಿ ಭರವಸೆ ನೀಡಿತ್ತು. ಈಗ ತಾನೂ ಅಂತಹದೇ ಪರಿಸ್ಥಿತಿಯನ್ನು ಎದುರಿಸುತ್ತಿರುವುದರಿಂದ, ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಯುವಲ್ಲಿ ತಾನು ಗಂಭೀರವಾಗಿದೆ ಎಂಬ ಸಂದೇಶವನ್ನು ರವಾನಿಸಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿಗಳು ಸಂತ್ರಸ್ತೆ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿರುವುದು ಮತ್ತು ಪೊಲೀಸರ ತ್ವರಿತ ಕ್ರಮಗಳು, ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಹಿಂದಿನ ಆಡಳಿತಕ್ಕಿಂತ ಭಿನ್ನವಾದ ಧೋರಣೆ ಹೊಂದಿರುವ "ಬಲಿಷ್ಠ ಸರ್ಕಾರ" ಎಂದು ತನ್ನನ್ನು ತಾನು ಬಿಂಬಿಸಿಕೊಳ್ಳಲು ಬಯಸುತ್ತಿರುವುದರ ಸ್ಪಷ್ಟ ಸಂಕೇತವಾಗಿದೆ.
ಪಶ್ಚಿಮ ಬಂಗಾಳದ ಪೊಲೀಸ್ ವ್ಯವಸ್ಥೆಯಲ್ಲಿ ಸಂಪೂರ್ಣ ಸುಧಾರಣೆಯ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಸುವೇಂದು ಅಧಿಕಾರಿ ಸರ್ಕಾರವು ಇತ್ತೀಚೆಗಷ್ಟೇ ಎರಡು ಪ್ರಮುಖ ವಿಧೇಯಕಗಳನ್ನು ಅಂಗೀಕರಿಸಿದೆ. ಅವುಗಳೆಂದರೆ, ಮುನ್ನೆಚ್ಚರಿಕಾ ಬಂಧನಕ್ಕೆ ಸಂಬಂಧಿಸಿದ 'ಪಶ್ಚಿಮ ಬಂಗಾಳ ಸಾರ್ವಜನಿಕ ಸುರಕ್ಷತೆ ಮತ್ತು ಸಮಾಜವಿರೋಧಿ ಚಟುವಟಿಕೆಗಳ ನಿಯಂತ್ರಣ ವಿಧೇಯಕ, 2026' ಹಾಗೂ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿ ಮಾಡುವ ಆರೋಪಿಗಳಿಂದಲೇ ಪರಿಹಾರ ವಸೂಲಿ ಮಾಡುವುದಕ್ಕೆ ಸಂಬಂಧಿಸಿದ 'ಪಶ್ಚಿಮ ಬಂಗಾಳ ಸಾರ್ವಜನಿಕ ಸುವ್ಯವಸ್ಥೆ ಪಾಲನೆ (ತಿದ್ದುಪಡಿ) ವಿಧೇಯಕ 2026'. ಈ ಕಠಿಣ ಕಾನೂನುಗಳ ಮಧ್ಯೆಯೂ, 12 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ, ಕೊಲೆ ಮತ್ತು ನಿರಪರಾಧಿಯೊಬ್ಬನ ಹತ್ಯೆಗೆ ಕಾರಣವಾದ ಸಾರ್ವಜನಿಕ ಹಿಂಸಾಚಾರದ ಘಟನೆಗಳು ನಡೆದಿರುವುದು, ತಳಮಟ್ಟದಲ್ಲಿ ಪರಿಸ್ಥಿತಿ ಏನಾದರೂ ಬದಲಾಗಲಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.






