ಹುಚ್ಚಾಟಕ್ಕೇ ಹೆಸರಾಗಿರುವ ಸೋಷಿಯಲ್ ಮೀಡಿಯಾ ಸ್ಟಾರ್ ಗೆ ರಾಜ ಮರ್ಯಾದೆ
ಬೀದಿ ಬದಿ ಬೆವರು ಸುರಿಸಿ ಪ್ರಾಮಾಣಿಕವಾಗಿ ದುಡಿದು ಮನೆ ನಡೆಸುವವರಿಗೆ ಅವಮಾನ

ಇಲ್ಲಿ ಬೀದಿ ಬದಿ ಏನಾದರೂ ಸಣ್ಣ ಪುಟ್ಟ ವ್ಯಾಪಾರ ಮಾಡಿ ತಮ್ಮ ಕುಟುಂಬ ಸಲಹುವ ಕಠಿಣ ಪರಿಶ್ರಮಗಳಿಗೆ ಚಿಕ್ಕಾಸಿನ ಗೌರವ ಕೊಡದೆ ಓಡಿಸೋದು...ಅವರ ಅಂಗಡಿಗಳನ್ನು, ಗಾಡಿಗಳನ್ನು ಕಿತ್ತು ಬಿಸಾಡುವುದು. ತೀರಾ ಹುಚ್ಚುಚ್ಚಾಗಿ ವರ್ತಿಸುವ, ಸೋಷಿಯಲ್ ಮೀಡಿಯಾದ ಸಮೂಹ ಸನ್ನಿಯಲ್ಲಿ ಸ್ಟಾರ್ ಆಗಿರುವವನನ್ನು ಎಲ್ಲಿಂದಲೋ ಕರೆಸಿ ಅದೇ ಬೀದಿ ಬದಿಯಲ್ಲೇ ದೊಡ್ಡ ಉತ್ಸವ ಏರ್ಪಡಿಸಿ ಖುಷಿ ಪಡುವುದು.
ಇದು ಮಂಗಳೂರಿನ ಮಹಾ ನಗರ ಪಾಲಿಕೆ ಹಾಗೂ ಬಿಜೆಪಿ ಶಾಸಕರು, ಮುಖಂಡರ ಧೋರಣೆ. ಹೀಗಂತ ಮಂಗಳೂರಿನ ಜನ ರವಿವಾರ ಸೋಷಿಯಲ್ ಮೀಡಿಯಾದಲ್ಲಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಟೈಗರ್ ಕಾರ್ಯಾಚರಣೆ ಹೆಸರಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಅಷ್ಟೂ ಜನರನ್ನು ಮಹಾನಗರ ಪಾಲಿಕೆ ಓಡಿಸಿತು. ಅವರ ಸಣ್ಣ ಪುಟ್ಟ ಅಂಗಡಿ ಅಥವಾ ಗಾಡಿಗಳನ್ನು ಕಿತ್ತು ಬಿಸಾಡಿತು. ಈಗ ಅದೇ ರೀತಿ ನಾಗ್ಪುರದ ಬೀದಿ ಬದಿಯಲ್ಲಿ ಟೀ ಮಾಡಿ ಮಾರುತ್ತಿದ್ದ, ಬಂದ ಗ್ರಾಹಕರ ಜೊತೆ ಹುಚ್ಚುಚ್ಚಾಗಿ ವರ್ತಿಸಿ ಗಮನ ಸೆಳೆಯುತ್ತಿದ್ಧ ವ್ಯಕ್ತಿಯೊಬ್ಬನನ್ನು ಮಂಗಳೂರು ದಕ್ಷಿಣದ ಶಾಸಕರು ಹಾಗೂ ಮಾಜಿ ಸಂಸದರ ನೇತೃತ್ವದಲ್ಲಿ ನಡೆಯುವ ಫುಡ್ ಫೆಸ್ಟ್ ಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ.
ಆತ ಬಂದು ಇಲ್ಲೂ ತನ್ನ ಅದೇ ಹುಚ್ಚಾಟವನ್ನು ಮಾಡಿ ಅದಕ್ಕೆ ಶಾಸಕರು, ಮಾಜಿ ಸಂಸದರು ನಕ್ಕು ಮಂಗಳೂರಿನ ಜನರಿಗೆ ವಿಚಿತ್ರ ಎಂಟರ್ ಟೈನ್ ಮೆಂಟ್ ಕೊಟ್ಟಿದ್ದಾರೆ. ಡಾಲಿ ಚಾಯ್ ವಾಲಾ ಮಂಗಳೂರು ನಗರದ ಒಂದು ದೊಡ್ಡ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರಲು ಆತನ ಅರ್ಹತೆ ಏನು?
ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಇದೆ ಎಂಬುದನ್ನು ಬಿಟ್ಟರೆ ಡಾಲಿ ಚಾಯ್ ವಾಲಾ ನ ಸಾಧನೆ ಏನು? ಆ ಸೋಷಿಯಲ್ ಮೀಡಿಯಾ ಪಾಪ್ಯುಲಾರಿಟಿ ಕೂಡ ಆತ ಹೇಗೆ ಸಂಪಾದಿಸಿದ್ದಾನೆ? ಬೀದಿ ಬದಿ ವ್ಯಾಪಾರಿ ಯಾಗಿ ಆತನ ಶ್ರಮವನ್ನು ಮೆಚ್ಚಬಹುದೇ ಹೊರತು ಅದನ್ನು ಬಿಟ್ಟು ಆತ ಮಾಡಿರುವ ಸಾಧನೆ ಅಥವಾ ಸೇವೆಯಾದರೂ ಏನು? ಬಂದ ಗ್ರಾಹಕರಿಗೆ ನೆಟ್ಟಗೆ ಚಾ ಮಾಡಿ ಕೊಡದೆ ಏನೇನೋ ಹುಚ್ಚಾಟ ಮಾಡಿ ಅದರಿಂದ ರೀಲ್ಸ್ ಗಳಲ್ಲಿ ಫೆಮಸ್ ಆಗೋದು ಸಾಧನೆಯೇ?
ಇದೇ ಡಾಲಿ ಚಾಯ್ ವಾಲಾನಿಂದಾಗಿ ಈಗ ಅಲ್ಲಲ್ಲಿ ಬೀದಿ ಬದಿ ವ್ಯಾಪಾರಿಗಳು, ಆಹಾರ ಪಾನೀಯಗಳ ಮಾರಾಟಗಾರರು ಸರಿಯಾಗಿ ಗ್ರಾಹಕರಿಗೆ ಸೇವೆ ಕೊಡೋದನ್ನು ಬಿಟ್ಟು ತೀರಾ ಚಿತ್ರ ವಿಚಿತ್ರವಾಗಿ ವರ್ತಿಸಿ ಗಮನ ಸೆಳೆಯಲು ಹೆಣಗಾಡುತ್ತಿದ್ದಾರೆ. ಕೊಡುವ ಆಹಾರ ಪಾನೀಯಗಳ ಗುಣಮಟ್ಟ ಹಾಗೂ ಸೇವೆಯ ಕಡೆ ಗಮನ ಕೊಡದೆ ತಮ್ಮ ಮೇಲೆಯೇ ಇತರರ ಗಮನ ಇರುವಂತೆ ಮಾಡುವುದರಲ್ಲೇ ಈ ಬೀದಿ ಬದಿ ವ್ಯಾಪಾರಿಗಳು ಸುಸ್ತಾಗುತ್ತಿದ್ದಾರೆ. ತಮಾಶೆಗೆ, ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ.
ಆದರೆ ಒಬ್ಬ ಡಾಲಿ ಚಾಯ್ ವಾಲಾಗೆ ಸಿಕ್ಕ ಸೆಲೆಬ್ರಿಟಿ ಅವಕಾಶ ಅದೇನೆ ಕಸರತ್ತು ಮಾಡಿದರೂ ದೇಶದ ಲಕ್ಷಗಟ್ಟಲೆ ಬೀದಿ ಬದಿ ವ್ಯಾಪಾರಿಗಳಿಗೆ ಸಿಗುತ್ತಾ... ಖಂಡಿತಾ ಇಲ್ಲ. ಹೋಗಲಿ, ದೊಡ್ಡ ಪರಂಪರೆ, ಇತಿಹಾಸ ಇರುವ ಮಂಗಳೂರಿನ ಜನರಿಗೆ, ಯುವಜನರಿಗೆ, ಮಕ್ಕಳಿಗೆ ಡಾಲಿ ಚಾಯ್ ವಾಲಾ ಬಂದು ರವಾನಿಸುವ ಸಂದೇಶವೇನು?
ಲೇಡಿಹಿಲ್ ಸುತ್ತಲು ಸಂಜೆ ಹೊತ್ತು ಟೀ, ಕಾಫಿ, ಚರುಮುರಿ, ಆಮ್ಲೆಟ್, ಫ್ರುಟ್ ಸಲಾಡ್ ವ್ಯಾಪಾರ ಮಾಡುತ್ತಿದ್ದ ಬೀದಿಬದಿ ವ್ಯಾಪಾರಸ್ಥರನ್ನು ಬಿಜೆಪಿ ಆಡಳಿತದ ಮಂಗಳೂರು ನಗರ ಪಾಲಿಕೆ ಟೈಗರ್ ಕಾರ್ಯಾಚರಣೆ ಅಂತ ಹೆಸರಿಟ್ಟು ಬುಲ್ಡೋಜರ್ ಬಳಸಿ ಕಿತ್ತು ಬಿಸಾಕಿತ್ತು. ಟ್ರಾಫಿಕ್ ಕಿರಿಕಿರಿ, ಪಾರ್ಕಿಂಗ್ ಸಮಸ್ಯೆ, ಫುಟ್ ಪಾತ್ ಅತಿಕ್ರಮಣ ತೆರವು ಅಂತ ಕುಂಟು ನೆಪಗಳನ್ನು ಬಿಜೆಪಿ ಮೇಯರ್, ಶಾಸಕರು ನೀಡಿದ್ದರು. ಮಂಗಳೂರಿನ ನಾಗರಿಕರು ಆಗ ಮೌನಕ್ಕೆ ಶರಣಾಗಿದ್ದರು.
ಈಗ ಅದೇ ಲೇಡಿಹಿಲ್ ಸುತ್ತಲು ಬಿಜೆಪಿ ಶಾಸಕರ ನೇತೃತ್ವದಲ್ಲಿ ಐದು ದಿನಗಳ ಅದ್ದೂರಿ ಫುಡ್ ಫೆಸ್ಟಿವಲ್ ನಡೆಯುತ್ತಿದೆ. ಬೀದಿ ಬದಿ ವ್ಯಾಪಾರಸ್ಥರನ್ನು ಬುಲ್ಡೋಜರ್ ಬಳಸಿ ಓಡಿಸಿದ ಅದೇ ಸ್ಥಳಗಳಲ್ಲಿ ನೂರಾರು ಸ್ಟಾಲ್ ಗಳನ್ನು ಹಾಕಲಾಗಿದೆ. ಒಂದೊಂದು ಸ್ಟಾಲ್ ಗಳಿಗೆ ಹತ್ತಾರು ಸಾವಿರ ಬಾಡಿಗೆಯನ್ನು ಶಾಸಕರ ನೇತೃತ್ವದ ಟ್ರಸ್ಟ್ ನಿಗದಿ ಪಡಿಸಿದೆ. ನಗರ ಪಾಲಿಕೆಯ ರಸ್ತೆಗೆ ಖಾಸಗಿಯವರು ಈ ರೀತಿ ಬಾಡಿಗೆ ಪಡೆಯಲು ಯಾವ ನಿಯಮದಡಿ ಅವಕಾಶ ನೀಡಲಾಗಿದೆ ತಿಳಿಯದು. ಸಂಚಾರ ಪೂರ್ತಿ ಅಸ್ತವ್ಯಸ್ತಗೊಂಡಿದೆ. ಉದ್ಘಾಟನೆಗೆ ಅದ್ಯಾರೋ, ಉತ್ತರ ಭಾರತದ ಚಾ ವಾಲನನ್ನು ಕರೆಸಿ ದೊಡ್ಡ ಹಂಗಾಮ ಎಬ್ಬಿಸಲಾಗಿದೆ. "ಡೀಸೆಂಟ್" ಎಂದು ಬೆನ್ನುತಟ್ಟಿಕೊಳ್ಳುವ ಮಂಗಳೂರು ನಾಗರಿಕರೂ ಹೋ... ಎಂದು ಫುಡ್ ಫೆಸ್ಟಿವಲ್ ನಲ್ಲಿ ಸೇರಿದ್ದಾರೆ. ಈಗ ಅವರ್ಯಾರಿಗೂ ಇದೇ ರಸ್ತೆಯಿಂದ ಬಡ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಿದ್ದು, ಅವರ ಬದುಕಿನ ಮೇಲೆ ಬುಲ್ಡೋಜರ್ ಹರಿದಿದ್ದು ನೆನಪಾಗಲೆ ಇಲ್ಲ. ಜನ ಮರುಳೋ, ಜಾತ್ರೆ ಮರುಳೋ.... ಎಂದು ಎಲ್ಲರೂ ನೆರೆದಿದ್ದಾರೆ. ಮಂಗಳೂರಿನಲ್ಲಿ ಇದನ್ನೆಲ್ಲ ಪ್ರಶ್ನಿಸುವವರೇ ಹುಚ್ಚರು ಎಂಬಂತೆ ಕಾಣಲಾಗುತ್ತಿದೆ ಎಂದು ಸಿಪಿಎಂ ಮುಖಂಡ ಮುನೀರ್ ಕಾಟಿಪಳ್ಳ ಟೀಕಿಸಿದ್ದಾರೆ.
ಇಲ್ಲಿ, ಶಾಸಕರು, ಬಲಾಢ್ಯ ಹಿಂಬಾಲಕರು ನಿಯಮ ಉಲ್ಲಂಘಿಸಿ, ರಸ್ತೆ ಸಂಚಾರ ಅಸ್ತವ್ಯಸ್ತಗೊಳಿಸಿ ಆಯೋಜಿಸಿರುವ ಫೆಸ್ಟಿವಲ್ ಅನ್ನು ಪ್ರಶ್ನಿಸದೆ, ಮಿಂದೆದ್ದು ಸಂಭ್ರಮಿಸುವ ಇದೇ ಜನ, ಬಂಟ್ವಾಳದ ಟೋಲ್ ಗೇಟ್ ನಲ್ಲಿ , ಟೋಲ್ ಲೂಟಿ ಪ್ರಶ್ನಿಸಿದ ಲಾರಿ ಚಾಲಕನೋರ್ವನ ಮೇಲೆ ಟೋಲ್ ಸಿಬ್ಬಂದಿ ಗೂಂಡಾಗಿರಿ ಮಾಡಿದ ವೀಡಿಯೋ ಹಂಚಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘರ್ಜಿಸುತ್ತಿದ್ದಾರೆ. ಹಿಪಾಕ್ರಸಿ ಅಂದರೆ ಇದೇ ಅಲ್ಲವೆ ಎಂದು ಕೇಳಿದ್ದಾರೆ ಮುನೀರ್ ಕಾಟಿಪಳ್ಳ.
ಈ ಫುಡ್ ಫೆಸ್ಟಿವಲ್ ರಸ್ತೆ ಮೇಲೆ ನಡೆಯಲು ಪೊಲೀಸ್ ಕಮೀಷನರ್ ಅಗ್ರವಾಲ್ ಅನುಮತಿ ಕೊಟ್ರಾ ಅಂತ ಕೇಳ್ಬೇಡಿ. ಅವರು ಫುಡ್ ಫೆಸ್ಟಿವಲ್ ನಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡಲು, ಜಾತ್ರೆಯಂತೆ ಸೇರಿರುವ ಜನರನ್ನು ನಿಭಾಯಿಸಲು ಪೊಲೀಸರನ್ನು ನಿಯೋಜಿಸಿ ಆರಾಮಾವಾಗಿದ್ದಾರೆ ಎಂದೂ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಲೇಖಕ ಸ್ಟಾನಿ ಬೇಳ ಕೂಡ ಮಂಗಳೂರು ಮಹಾನಗರ ಪಾಲಿಕೆಯ ಧೋರಣೆಯನ್ನು ತೀವ್ರವಾಗಿ ಟೀಕಿಸಿ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.







