Keralam | “ನನ್ನ ಎದೆಗೆ ಚೂರಿ ಇರಿದಂತಾಗಿದೆ’: ಅಪಘಾತ ಆರೋಪಿ ನ್ಯಾಯಾಧೀಶರಿಗೆ ಜಾಮೀನು ನೀಡಿದ ಕುರಿತು ಮೃತ ವ್ಯಕ್ತಿಯ ಪುತ್ರಿಯ ಅಸಮಾಧಾನ

Photo Credit : NDTV
ಕೊಚ್ಚಿ: 17 ವರ್ಷದ ಬಾಲಕ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಝ್ ಕಾರು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ, ಅಪ್ರಾಪ್ತ ಬಾಲಕನ ತಂದೆ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ತೀರ್ಪಿನಿಂದ ತೀವ್ರ ಆಘಾತಕ್ಕೊಳಗಾಗಿರುವ ಮೃತ ಜಯಬಾಲಕೃಷ್ಣನ್ ಅವರ ಪುತ್ರಿ ಭದ್ರ ಕೀರ್ತಿ, ‘ಈ ತೀರ್ಪು ನನ್ನ ಎದೆಗೆ ಚೂರಿ ಇರಿದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕೊಚ್ಚಿಯ ಚೆರನಲ್ಲೂರಿನಲ್ಲಿ 17 ವರ್ಷದ ಬಾಲಕ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಝ್ ಕಾರು ಡಿಕ್ಕಿ ಹೊಡೆದ ಪರಿಣಾಮ ಜಯಬಾಲಕೃಷ್ಣನ್ ಸ್ಥಳದಲ್ಲೇ ಮೃತಪಟ್ಟಿದ್ದರು.
ತಂದೆಯ ಅಂತ್ಯಕ್ರಿಯೆಯ ಸಂಪ್ರದಾಯಗಳು ಪೂರ್ಣಗೊಳ್ಳುವ ಮೊದಲೇ ಹೈಕೋರ್ಟ್ ನ ಜಾಮೀನು ತೀರ್ಪು ಹೊರಬಿದ್ದಿರುವುದು ಕುಟುಂಬದ ನೋವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಭದ್ರ ಕೀರ್ತಿ ತಿಳಿಸಿದ್ದಾರೆ.
‘ನನ್ನ ತಂದೆಯ ಅಂತ್ಯಕ್ರಿಯೆಯ ಸಂಪ್ರದಾಯಗಳು ಪೂರ್ಣಗೊಳ್ಳಲು ಇನ್ನು ಒಂದು ದಿನ ಬಾಕಿ ಇರುವಾಗಲೇ ಈ ತೀರ್ಪು ಬಂದಿದೆ. ನಮ್ಮ ಕುಟುಂಬಕ್ಕೆ ಒಂದಿಷ್ಟಾದರೂ ನ್ಯಾಯ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದೆವು’ ಎಂದು ಅವರು NDTVಗೆ ತಿಳಿಸಿದ್ದಾರೆ.
‘ನಾಳೆ ನನ್ನ ತಂದೆಯ ಅಂತ್ಯಕ್ರಿಯೆಯ ಸಂಪ್ರದಾಯಗಳು ಮುಕ್ತಾಯಗೊಳ್ಳಲಿವೆ. ನಮ್ಮ ಕುಟುಂಬಕ್ಕೆ ನ್ಯಾಯ ಸಿಗಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ, ದುರದೃಷ್ಟವಶಾತ್ ಹಾಗಾಗಲಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ನ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮೃತ ಜಯಬಾಲಕೃಷ್ಣನ್ ಅವರ ಕುಟುಂಬ ನಿರ್ಧರಿಸಿದೆ.






